ಹಿಂದೆ
ನಮ್ಮ ಮುತ್ತಾತನವರ ಕಾಲಕ್ಕೆ
ಈ ರಸ್ತೆಗಳು
ಕಾಡಿನಲ್ಲಿ ಕಳೆದು ಹೋಗುತ್ತಿದ್ದವು
ಬೆಟ್ಟಗಳಲ್ಲಿ ಮರೆಯಾಗುತ್ತಿದ್ದವು
ನಕ್ಷತ್ರಗಳಿಗೂ ಕೈ ಚಾಚುತ್ತಿದ್ದವು
ನಡೆವವರ ಎಡ ಬಲಕು
ಹಸಿರು, ಹೂವು
ಗರಿಕೆ ಹುಲ್ಲು ಮಾತನಾಡುತ್ತಿದ್ದವು
ದಣಿವು ನೀಗುತ್ತಿದ್ದವು
ಮೊನ್ನೆ
ನಮ್ಮ ಅಪ್ಪನ ಕಾಲಕ್ಕೆ
ಈ ರಸ್ತೆಗಳು
ಊರಿಂದ ಊರಿಗೆ
ಪೇಟೆಯಿಂದ ಪೇಟೆಗೆ
ಮನೆಯಿಂದ ಮನೆಗೆ
ಬೀದಿಗಳಿಗೆ
ಹಾಗೆ ಹೊಲಗಳಿಗೆ
ಗೆರೆ ಎಳೆಯುತ್ತಿದ್ದವು
ಮುಳ್ಳು ಚುಚ್ಚಿ
ರಕ್ತ ಸೋರಿದರೆ
ಹೆಜ್ಜೆಗಳು
ಸಿಂಗರಿಸಿಕೊಂಡು ನಗುತ್ತಿದ್ದವು
ಈಗ
ಈ ರಸ್ತೆಗಳು ಬಂಡಾಯವೆದ್ದಿವೆ
ಹೊದಿಸಿದ್ದ ಬಟ್ಟೆ ಕಳಚಿ
ಬೆತ್ತಲಾಗಿವೆ
ಹಗಲನ್ನು ಕುಡಿದು
ಹೊಸ ಹೆಸರುಗಳ ತಡಕುತ್ತಿವೆ
ಹಳೆಯ ದಾರಿಗಳು ಎದುರಾದರೆ
ಗಬಕ್ಕನೆ ಹಿಡಿದು
ನುಂಗಿ
ಬಾಯಿ ಚಪ್ಪರಿಸುತ್ತಿವೆ
‘ರಸ್ತೆಗಳು ಹೀಗೇಕೆ
ಕರಿ ನಾಗರಗಳಂತೆ ತಳುಕು ಹಾಕಿಕೊಂಡಿವೆ?’
ಎಂದು ಪಶ್ನಿಸಿದರೆ
ನಾಲ್ಕು ದಿಕ್ಕಿಗೆ ಮೈ
ಚಾಚಿಕೊಂಡ ಕೈ ಮರಗಳು
ಮುಖ ಮೇಲೆ ಮಾಡಿ
ಗೋಳೋ ಎಂದು ಅಳುತ್ತವೆ
ಸೂರ್ಯ ಹೆದರಿ
ಮೋಡಗಳಲ್ಲಿ ಅವಿತುಕೊಳ್ಳುತ್ತಾನೆ
ಕಾರಿರುಳ ಸ್ಮಶಾನದಲಿ
ಉರಿಯುವ ಹೆಣವೊಂದು
ಕುರುಡನಿಗೆ ದಾರಿ ತೋರಿಸಲು
ಕಂದೀಲು ಹಿಡಿದು ನಿಂತಿದೆ
*****