ಮೈಯೊಳಗಿನ ಮಣ್ಣು ಆಡಿಸುವುದು ನನ್ನ
ಮೈಯೊಳಗಿನ ಗಾಳಿ ಹಾಡಿಸುವುದು ನನ್ನ
ಜಲ ಆಗಸ ಬೆಂಕಿ, ಸಂಚು ಹೂಡಿ ಮಿಂಚಿ
ಕೂರಿಸುವುದು ಏಳಿಸುವುದು ಓಡಿಸುವುದು ನನ್ನ!
ಪೃಥ್ವಿ ಅಪ್ ತೇಜ ವಾಯು ಆಕಾಶವೆ, ತಾಳಿ
ಹದ ಮೀರದೆ ಕುದಿಕಾರದೆ ಪ್ರೀತಿಯಿಟ್ಟು ಆಳಿ;
ನೀವು ಕೊಟ್ಟ ಪಂಚರಂಗಿಯಲ್ಲಿ ನಿಂತ ನಾನು
ಬೇಡಿಕೊಳುವೆ ನಿಮ್ಮ ಹೀಗೆ ಕೇಳಲಿ ನೆಲ ಬಾನು
ನನ್ನೊಳಗಿನ ಜಲವೆಲ್ಲವು ಸೆಳವು ಕಳೆದು ಹರಿಯಲಿ
ತೇಜವೆಲ್ಲ ಉರಿಯನುಳಿದು ಬರೀ ಬೆಳಕ ಸುರಿಯಲಿ;
ಮಣ್ಣು ಬಣ್ಣ ನೀಗಲಿ, ಗಾಳಿ ದಾಳಿ ನಿಲಿಸಲಿ
ಆಕಾಶದ ತುಂಬ ಶಾಂತ ಬೆಳಕೊಂದೇ ಹರಡಲಿ
ನಾನೆನುವುದು ನೀನಾಗಲಿ, ನೀನೆನುವುದು ಅವನು
ತನ್ನೊಳಗೇ ವಿಶ್ವ ಅರಳಿ ಬೆಳಗಲಲ್ಲಿ ಭಾನು;
ತತ್ವಮಸಿ ತತ್ವಮಸಿ ಎಂಬ ಮಹಾವಾಕ್ಯ
ಅರಿವ ನುಂಗಿ ಮೂಡಲಿ ಅಲೌಕಿಕದ ಸೌಖ್ಯ
*****