ಸಾವು ಬೇಡುವ ಭೂಮಿ
ಸುಡುಗಾಡು ಇದು
ಕೊಟ್ಟದ್ದನ್ನು ಪಡೆದು ಲೆಕ್ಕವಿಡುತ್ತಿದೆ
ಬೆಳ್ಳಂಬೆಳಿಗ್ಗೆ
ಮೂರು ವರ್ಷದ ಕೆಂಚ
ಈರಿಯ ಮಗ
ಹೊಲೆಗೇರಿಯಲ್ಲಿ ಊಟವಿಲ್ಲದೆ
ಸತ್ತ
ಸಮಾಧಿ ಮೇಲೆ ಹೂಗಳು ಬಾಡಿಲ್ಲ
ಮಟ ಮಟ ಮಧ್ಯಾಹ್ನ
ಇಪತ್ತರ ಹರೆಯದ ಕರಿಯ
ಮಾರನ ಮಗ
ಕುರುಬಗೇರಿಯಲಿ ಖಾಯಿಲೆ ಬಿದ್ದು
ಸತ್ತ
ಸಮಾಧಿ ಮೇಲೆ ಹೂಗಳು ಬಾಡಿಲ್ಲ
ಗುದ್ದಲಿ ಹೆಗಲೇರಿಸಿ
ಗುದ್ದು ತೋಡಲು ಹೋದ
ಆ ನಾಲ್ಕು ಜನ
ತಿರುಗಿ ಬಂದಿಲ್ಲ
ಅವರ ಹಸಿವಿಗೆ ಬುತ್ತಿ ಹೊರಬೇಕು
ಹೊತ್ತು ಮುಳುಗುವುದರೊಳಗೆ
ಇನ್ನಾರ ಸಾವೋ?
ಉರಿವ ಸೂರ್ಯನದ್ದೋ
ಚಿಮಣಿ ದೀಪದ್ದೋ
ಒಲೆಯ ಬೆಂಕಿಯದ್ದೋ;
ಯಾವ ಗುಡಿಸಲ ಮುಂದೆ
ಅಲಾಯಿ ಕುಣಿತವೋ?
ದೊಡ್ಡ ಮನೆಯ ತೋರಣ
ನಗುತ್ತಲೇ ಇದೆ
ಮುಚ್ಚಿದ ಬಾಗಿಲ ಮುಂದೆ
*****