ಮನೆಯ ಮಾಳಿಗೆಯ ಮೇಲೆ-
ತೋಟ ಗದ್ದೆಗಳಲಿ-
ಎತ್ತರೆತ್ತರ ಕಟ್ಟಡಗಳ ಸಂದುಗೊಂದುಗಳೊಳಗಿಂದ
ಮರಳ ಮೇಲೆ ಓಡಾಡುವ
ಸಮುದ್ರ ಹಡಗಿನ ಡೆಕ್ ಮೇಲೆ
ಗಕ್ಕನೆ ನಿಂತು ಮಕ್ಕಳಿಂದ ಮುದುಕರೂ
ನನ್ನ ಪಯಣದ ವಿಮಾನ ನೋಡಿ
ಕೈ ಬೀಸುತ್ತಿರಲೇಬೇಕು
ನಾನೂ ಒಂದೊಮ್ಮೆ ಬೀಸುತ್ತಿದ್ದಂತೆ
ಬೆರಗುಪಟ್ಟು ಕಣ್ಣು ಕಿವಿಚಿ
ಭಾರಿ ಶಬ್ದಕೆ ಕಿವಿಮುಚ್ಚಿ
ಹೋದಕಡೆಯೇ ನೆಟ್ಟ ದೃಷ್ಟಿಬೀರಿ
ನಾನೊಂದು ಬಾರಿಯಾದರೂ ಹೋಗಬಹುದೇ-
ಕನಸು ಕಾಣುತ ಕಣ್ಣರಳಿಸಿ
ಹಂಬಲಿಸಿ ಹಸಿವೆಪಟ್ಟಿದ್ದೆ.
ಯಾಕೋ ಧಡಕ್ಕನೆ ಎದೆಬಡಿತ
ಮೋಡಗಳು ವಿಮಾನದ ಹೊಯ್ದಾಟ
ಕೈ ಬೀಸುತ್ತಲೇ ಇರಬೇಕು ಅವರೆಲ್ಲಾ
ನನಗದೇಕೋ ಗುಡ್ ಬೈ ಗುಡ್ ಬೈ
ಎಂದೆನಿಸಿ ಬೆನ್ನು ಕಾವಲಿಗೆ
ಬೆವರು ನೀರು ಹರಿದು ಕಂಗಾಲಾದೆ.
*****