ಶುಭ್ರ ಮುಂಜಾವು. ಪುಟ್ಟ ಹುಡುಗಿಯೊಬ್ಬಳು ಆ ಗುಡಿಸಲಿನಿಂದ ಹೊರಬಂದಳು. ಅವಳ ತಲೆಯ ಮೇಲೆ ಮಾಸಿದ ಕೆಂಪು ರುಮಾಲಿತ್ತು. ಹಣೆಯ ಮೇಲೆ ಒರಟೊರಟು ಕೂದಲುಗಳ ರಾಶಿ. ನಿದ್ದೆ ಗಣ್ಣಿನಲ್ಲೇ ಆಕಳಿಸುತ್ತ, ತನ್ನ ಉಡುಪಿನ ಗುಂಡಿಗಳನ್ನು ಹಾಕುತ್ತ ಹೊರಬಂದವಳು ಕಣ್ಣುಗಳನ್ನು ಅಗಲಿಸಿ ಶೂನ್ಯದತ್ತ ದಿಟ್ಟಿಸುತ್ತ ನಿಂತಳು.
ದೂರದಲ್ಲಿ ಕೆಂಪಾಗಿ ಉರಿಯುತ್ತಿದ್ದ ಸೂರ್ಯ ಮರಗಳ ಹಸಿರಿನೊಂದಿಗೆ ವಿಚಿತ್ರವಾಗಿ ಹೆಣೆದುಕೊಂಡಿದ್ದ ಸುಂದರದೃಶ್ಶ ಕಣ್ಣುಹಾಯಿಸಿದಷ್ಟೂ ಕಾಣಿಸುತ್ತಿತ್ತು. ಹಾಗೆಯೇ, ದೂರದೂರ ದಿಟ್ಟಿಸುತ್ತ ಹೋದಂತೆ ಮರೆಯಾಗಿಬಿಡುತ್ತಿತ್ತು. ಅರಿಶಿಣ ಬಣ್ಣದ ಮೋಡಗಳ ತುಂಡುಗಳು ಆಕಾಶದ ತುಂಬೆಲ್ಲ ಚೆದುರಿಕೊಂಡಿದ್ದವು.
ಹುಡುಗಿ ಎತ್ತಲೋ ಗಮನಿಸುತ್ತ ನಡಕೊಂಡು ಹೋಗುತ್ತಿದ್ದಳು. ಬಲಗಡೆಯ ಪುಟ್ಟ ಬೆಟ್ಟ ಅವಳ ದೃಷ್ಟಿಗೆ ದಕ್ಕದೆ, ಎದುರಿಗೆ ಭೋರ್ಗರೆಯುತ್ತಿದ್ದ ಕಡಲು ಕ್ರಮೇಣ ಅವಳ ಕಣ್ಣುಗಳಲ್ಲಿ ತುಂಬಿಕೊಂಡಿತು. ಸಣ್ಣಗೆ ಕಲಕಿಹೋದ ಹುಡುಗಿ, ಈ ಸುಂದರ ದೃಶ್ಶಕ್ಕೆ ಮಾರುಹೋದಳು. ಮತ್ತು, ಆ ಹಳದಿ ಅಲೆಗಳ ಮೇಲೆ ಸಣ್ಣಗೆ ತೇಲುತ್ತಿರುವ ಪುಟ್ಟ ಹಡಗುಗಳನ್ನು ನೋಡುತ್ತ ಅಲ್ಲಿಯೇ ನಿಂತುಬಿಟ್ಟಳು.
ಸುತ್ತ ಮೌನ ಕವಿದಿತ್ತು. ರಾತ್ರಿಯ ಕಡಲರಾಶಿ ತಂಪಾಗಿ, ಸದ್ದಿಲ್ಲದೆ ಇನ್ನೂ ಬೀಸುತ್ತ ಸಣ್ಣಸಣ್ಣ ಅಲೆಗಳನ್ನೆಬ್ಬಿಸುತ್ತ ಇರುವಾಗಲೇ ಹಿತವಾದ ಮಣ್ಣಿನ ವಾಸನೆ ಸುತ್ತ ಆವರಿಸಿಕೊಂಡಿತು. ಆ ತಂಪು ಮುಂಜಾವಿನಲ್ಲಿ ಅಲೆದಾಡುತ್ತ, ಸ್ವಲ್ಪ ಹೊತ್ತಿನಲ್ಲೇ ಆ ಪುಟ್ಟ ಹುಡುಗಿ ದಡದಲ್ಲಿದ್ದ ಬಂಡೆರಾಶಿಯ ತುದಿ ತಲುಪಿ ಅಲ್ಲಿಯೇ ಕೂತಳು. ಕೆಳಗೆ, ತನ್ನತ್ತ ನೋಡಿ ಮುಗುಳ್ನಗುವ ಆ ಹಸಿರು ಕಣಿವೆಯನ್ನು ಅನ್ಯ ಮನಸ್ಕಳಾಗಿ ನೋಡಿದವಳು, ನಂತರ ರಮಣೀಯವಾದ ಯಾವುದೋ ಪುಟ್ಟ ಪದ್ಯವನ್ನು ತನ್ನಲ್ಲೇ ಗುನುಗುನಿಸತೊಡಗಿದಳು.
ಆದರೆ, ಇದ್ದಕ್ಕಿದ್ದಂತೆ ಒಮ್ಮೆಲೆ ಏನೋ ಹೊಳೆದಂತೆನಿಸಿ, ಹಾಡುವುದನ್ನು ನಿಲ್ಲಿಸಿ, ಸಾಧ್ಯವಾದಷ್ಟು ಗಟ್ಟಿಯಾಗಿ ಕಿರಿಚಿದಳು: “ಅಂಕಲ್ ಜೆಲಿ…. ಹೋಯ್….. ಅಂಕಲ್ ಜೆಲಿ.” ಕಣಿವೆಗಳಿಂದ ಒರಟುಸ್ವರದಲ್ಲಿ, “ಏನು?” ಎಂಬ ಪ್ರಶ್ನೆ ಬಂತು.
“ಹತ್ತು…. ಮೇಲೆ…. ಯಜಮಾನರು ನಿನ್ನನ್ನು ಕಾಣಬೇಕಂತೆ!”
ಅಷ್ಟರಲ್ಲಿ, ಹುಡುಗಿ ಹಿಂದಿರುಗಿ ಗುಡಿಸಲಿನತ್ತ ವಾಪಸು ಹೊರಟಳು. ತಲೆಬಗ್ಗಿಸಿ ನೋಡಿದಳು. ಎಡಭುಜದ ಮೇಲೆ ತನ್ನ ಜಾಕೆಟ್ಟು, ತುಟಿಗಳಲ್ಲಿ ಪೈಪು ಸಿಕ್ಕಿಸಿಕೊಂಡು ಇನ್ನೂ ನಿದ್ದೆಯ ಮಂಪರಿನಲ್ಲಿ ಜೆಲಿ ಗುಡ್ಡ ಹತ್ತುತ್ತಿದ್ದ.
ಆತ ಒಳಬಂದವನೇ, ಪಾಪಾ ಕ್ಯಾಮಿಲ್ಲೋನನನ್ನು ಸ್ವಾಗತಿಸಿದ. ಆದರೆ ಸ್ಟೀವರ್ಡನ ಹಿರಿಮಗಳು ಮಾಲಿಯಾ ಮಾತ್ರ ಅವನನ್ನು ಕಣ್ಣುಗಳಿಂದಲೇ ಇರಿಯುವಂತೆ ನೋಡಿದಳು.
ಜೆಲಿಯೂ ಅವಳತ್ತ ನೋಡಿದ.
ಪಾಪಾ ಕ್ಯಾಮಿಲ್ಲೋ ಮದ್ಯದ ಪೀಪಾಯಿಯಂತೆ ದಪ್ಪಗೆ ಕುಳ್ಳಗಿದ್ದ. ಅತ್ತ ಮಾಲಿಯಾಳ ಮುಖದಲ್ಲಿ ಊರಿನ ಗೌರವಸ್ಥ ಹೆಂಗಸರ ಛಾಯೆಯಿತ್ತು. ಅವಳ ಕಣ್ಣುಗಳಲ್ಲಿ ಆಂತರ್ಯದ ಸರಳತೆಯನ್ನು ಗ್ರಹಿಸಬಹುದಿತ್ತು.
“ಜೆಲಿ…. ಕೇಳಿಲ್ಲಿ…. ನಾಳೆ ಊರಿನಿಂದ ಗುರುಗಳು ಕುಟುಂಬಸಮೇತ ಬರುತ್ತಿದ್ದಾರೆ…. ಒಳ್ಳೆಯ ಒಂದಿಷ್ಟು ಹಣ್ಣುಗಳನ್ನು ಆಯ್ದು ಸ್ವಲ್ಪ ಜ್ಯೂಸ್ ತಯಾರಿಸು…. ಆಯ್ತಾ? ಇಲ್ಲವಾದರೆ ನೋಡು ಮತ್ತೆ….”
“ಅಯ್ಯೋ ಮತ್ತದೇ ಗೋಳು…. ಅದನ್ನೆಲ್ಲ ನನಗೆ ಹೇಳುವ ಮುಂಚೆ ನೀನು ಸ್ವಲ್ಪ ಯೋಚಿಸಬೇಕು.” ಎಂದ.
ಜೆಲಿಯ ತೋಳು ಹಿಡಿದು ಪಾಪಾ ಕ್ಯಾಮಿಲ್ಲೋ ಅವನನ್ನು ಗುಡಿಸಲಿನಿಂದ ಹೊರಕರೆದುಕೊಂಡು ಹೋಗಿ, “ಹಾಗೆಲ್ಲ ಮಾತಾಡಬೇಡ…. ಹೇಳಿದಷ್ಟು ಮಾಡು. ಗೊತ್ತಾಯಿತಾ….?” ಎಂದ.
ಜೆಲಿ ಸ್ಥಂಭೀಭೂತನಾದ.
ಪಾಪಾ ಕ್ಯಾಮಿಲ್ಲೋ ಈಗ ಕಣಿವೆಯಿಳಿದು ಎಲ್ಲೋ ಹೊರಟುಹೋದ. ಯುವಕ ಗುಡಿಸಲಿನಲ್ಲಿ ಅತ್ತಿಂದಿತ್ತ ಶತಪಥ ಹಾಕತೊಡಗಿದ.
“ನಾವು ಸೋತೆವು” ಎಂದಳು ಮಾಲಿಯಾ.
“ಕೊನೆಗೂ ನಾವು ನ್ಯಾಯಯುತವಾಗಿ ಯಶಸ್ವಿ ಯಾಗದೆ ಹೋದರೆ…”
“ಏ! ಜೆಲಿ…. ಏನು ಹೇಳ್ತಾ ಇದೀಯ ನೀನು?”
“ಏನು? ಅಷ್ಟೂ ಗೊತ್ತಿಲ್ವಾ ನಿಂಗೆ…. ನಾವು ಓಡಿಹೋಗಿಬಿಡೋಣ.”
“ಓಡಿ ಹೋಗುವುದಾ?” ಹುಡುಗಿ ಆಶ್ಚರ್ಯದಿಂದ ಕೇಳಿದಳು.
ಆತ ಈಗ ಹೊಳೆಯುತ್ತಿರುವ ಮಚ್ಚನ್ನೆತ್ತಿ ಕುತ್ತಿಗೆಯ ಸುತ್ತ ಇರಿಸಿ, “ಇಲ್ಲವಾದರೆ….” ಎಂದ.
ಮಾಲಿಯಾಗೆ ಮೈ ತತ್ತರಿಸಿ ಹೋಯಿತು. “ಅಯ್ಯೋ ದೇವರೆ!” ಎಂದು ಉದ್ಗರಿಸಿದಳು.
ಈವತ್ತು, ಸಂಜೆ ಏಳು ಗಂಟೆಗೆ! ಕೇಳಿಸಿತಾ ನಿಂಗೆ? ಎಂದವನೇ, ಜೆಲಿ ಅಲ್ಲಿಂದ ಕಣ್ಮರೆಯಾದ. ಹುಡುಗಿ ನಿಟ್ಟುಸಿರಿಟ್ಟಳು.
*
ಕತ್ತಲಾಗುತ್ತಿತ್ತು. ಮೊದಲೇ ನಿಗದಿಪಡಿಸಿಕೊಂಡಿದ್ದ ಸಮಯ ಸಮೀಪಿಸುತ್ತಿತ್ತು. ಒಣಗಿದ ಗುಲಾಬಿಯ ಪಕಳೆಗಳಂತಿರುವ ತುಟಿಗಳಲ್ಲಿ, ಸಪ್ಪೆ ಮುಖ ಹೊತ್ತುಕೊಂಡು ಮಾಲಿಯಾ ಬಾಗಿಲಿನ ಎದುರುಗಡೆಯೇ ಕುಳಿತಿದ್ದಳು. ಕತ್ತಲಲ್ಲಿ ತೊಯ್ದುಹೋದ ಹಸಿಹಸಿರು ಬಯಲನ್ನೇ ದಿಟ್ಟಿಸುತ್ತಿದ್ದಳು. ದೂರ ಹಳ್ಳಿಯಲ್ಲೆಲ್ಲೋ ಇಗರ್ಜಿಯೊಂದರ ಗಂಟೆ ಬಾರಿಸಿದಾಗ ತಾನೂ ಕೂತಲ್ಲೇ ಪ್ರಾರ್ಥಿಸಿದಳು.
ಆ ಗಂಭೀರ ಮೌನದಲ್ಲದು ಪ್ರಕೃತಿಯ ದಿವ್ಯ ಪ್ರಾರ್ಥನೆಯಂತಿತ್ತು!
ಬಹಳ ಹೊತ್ತು ಕಾದ ಬಳಿಕ ಜೆಲಿ ಬಂದ. ಈ ಬಾರಿ ತನ್ನ ಪೈಪನ್ನು ಬಿಟ್ಟು ಬಂದಿದ್ದ. ಮುಖ ಕೆಂಪಾಗಿ ದೃಢನಿಶ್ಚಯ ಮಾಡಿಕೊಂಡವನಂತೆ ಕಾಣುತ್ತಿದ್ದ.
“ಇಷ್ಟು ಬೇಗ ಹೊರಡುವುದಾ?” ಮಾಲಿಯಾ ಕಂಪಿಸುತ್ತ ಕೇಳಿದಳು.
“ಹದಿನೈದು ನಿಮಿಷ ಬೇಗವೋ, ವಿಳಂಬವೋ ಅಂತೂ ಎಲ್ಲ ಸಮಯದ ಉಳಿತಾಯವೇ” ಎಂದುತ್ತರಿಸಿದ ಜೆಲಿ.
“ಆದರೆ….”
“ಆದರೆ ಗೀದರೆ ಎಲ್ಲ ಏನೂ ಬೇಡ. ನಾವೇನು ಮಾಡಲು ಹೊರಟದ್ದೇವೆ ಎಂದು ನಿನಗೆ ಗೊತ್ತಲ್ಲ…. ?”
“ಹೌದು. ಚೆನ್ನಾಗಿ ಗೊತ್ತು!” ಎಂದು ಗಡಿಬಿಡಿಯಲ್ಲೇ ಅವನ ಕಟುನಿರ್ಧಾರಕ್ಕೆ ಹೊಂದಿಕೊಳ್ಳಲು ತಡವರಿಸುತ್ತ ಉತ್ತರಿಸಿದಳು.
ಅಷ್ಟರಲ್ಲಿ, ದೂರದಲ್ಲಿ ಯಾರೋ ಸೀಟಿ ಊದಿದ್ದೇ, ಹೊರಡುವ ತಯಾರಿಗೆ ಸೂಚನೆ ಸಿಕ್ಕಿತೆಂಬಂತೆ ಜೆಲಿ ತಡಬಡಿಸಿದ.
“ಬೇಗ ಹೊರಡು…. ಮಾಲಿಯಾ, ಬೇಗ…. ಧೈರ್ಯವಾಗಿರು…. ಮುಂದೆ ಸಂತೋಷ ತುಂಬಿದ ದಿನಗಳು ನಮ್ಮನ್ನೇ ಕರೆಯುತ್ತಿವೆ….”
ಮಾಲಿಯಾ ನಿಟ್ಟುಸಿರಿಟ್ಟಳು. ಜೆಲಿ ಅವಳ ತೋಳನ್ನು ಹಿಡಿದುಕೊಂಡ. ಇಬ್ಬರೂ ಅಲ್ಲಿಂದ ಓಡಿದರು. ರೈತರ ಒಂದು ಬಂಡಿಯೊಳಗೆ ಆತ ಕಾಲಿರಿಸಿದ್ದೇ, “ಎಷ್ಟು ಸಾಧ್ಯವೋ ಅಷ್ಟು ವೇಗದಲ್ಲಿ ಓಡಿಸು” ಎಂದು ಚೀರಿದ.
ಇಬ್ಬರೂ ಮೊಟ್ಟಮೊದಲ ಬಾರಿ ಆಲಂಗಿಸಿಕೊಂಡರು; ಚುಂಬಿಸಿದರು.
*
ರಾತ್ರಿ ಒಂಬತ್ತರ ಹೊತ್ತಿಗೆ ಪಾಪಾ ಕ್ಯಾಮಿಲ್ಲೋ ವಾಪಸಾದ. ನಂತರ ಗಟ್ಟಿಯಾಗಿ ಸೀಟಿ ಊದಿದ್ದೇ ಪುಟ್ಟ ಹುಡುಗಿ ಓಡಿಬಂದಳು: “ಜೆಲಿಯನ್ನು ನೋಡಿದೆಯಾ? ಎಲ್ಲಿ ಆತ?” ಎ೦ದು ಕೇಳಿದ. “ಯಜಮಾನರೇ….” ಎಂದು ಏದುಸಿರು ಬಿಡುತ್ತ ಏನೋ ಉತ್ತರಿಸಲು ಪ್ರಯತ್ನಪಟ್ವಳು. “ಏನು ಹೇಳ್ತಾ ಇದೀಯ? ಸರಿಯಾಗಿ ಬೊಗಳು” ಎಂದು ಗುಡುಗಿದ ಪಾಪಾ ಕ್ಯಾಮಿಲ್ಲೋ. “ಜೆಲಿ, ಮಾಲಿಯಾಳನ್ನು ಕರಕೊಂಡು ಓಡಿಹೋದ” ಎಂದಳು.
“….”
ಇದನ್ನು ಕೇಳಿದ್ದೇ ತಡ, ಪಾಪಾ ಕ್ಯಾಮಿಲ್ಲೋ ಗಂಟಲಲ್ಲೇ ಮೌನವಾಗಿ ಗರ್ಜಿಸಿದ; ಓಡಿಹೋಗಿ ಗುಡಿಸಲಿನೊಳಗೆಲ್ಲೋ ಇರಿಸಿದ್ದ ಬಂದೂಕನ್ನೆತ್ತಿ ಗಾಳಿಯಲ್ಲಿ ಗುಂಡು ಹಾರಿಸಿದ. ಹುಡುಗಿ ಕಂಗಾಲಾಗಿ ಸುಮ್ಮನೆ ನೋಡುತ್ತ ನಿಂತುಬಿಟ್ಟಳು.
ಅವನು ರೋಷದಿಂದ ಚೀರುತ್ತಿರುವ ದೃಶ್ಯ ಮಾತ್ರ ನೋಡುವಂತಿತ್ತು. ತುಟಿಗಳಿಂದ ಆವೇಶದ ನಗುವೊಂದು ಚಿಮ್ಮಿದ ನಂತರ ಅವನ ಗರ್ಜನೆ ಉಡುಗಿಹೋಯಿತು. ಅವನಿಗೀಗ ತಾನೇನು ಮಾಡುತ್ತಿದ್ದೇನೆ ಎಂಬ ಅರಿವೆಯೇ ಇರಲಿಲ್ಲ. ಅಲ್ಲಿದ್ದ ಎಲ್ಲವೂ ಓಡಿಹೋಗಿರುವ ಮಗಳ ಕುರಿತೇ ಮಾತಾಡುತ್ತಿವೆ ಎಂದನಿಸಿದ್ದೇ ಸಿಟ್ಟು ನೆತ್ತಿಗೇರಿ ಆ ಪುಟ್ಟ ಗುಡಿಸಲಿಗೆ ಬೆಂಕಿಯಿಟ್ಟ. ಬಂದೂಕನ್ನು ಹಿಡಿದು ಭುಸುಗುಡುತ್ತ ಓಡಿದ – ಪ್ರೇಮಿಗಳನ್ನು ಹುಡುಕಲು ಹೊರಟವನಂತೆ.
ಆ ಶೋಕ ಸಂಜೆಯ ಹೊತ್ತಿನಲ್ಲಿ ಬೆಂಕಿಯ ಕೆನ್ನಾಲಗೆಗಳು ಆಕಾಶದತ್ತ ಚಾಚಿದ್ದವು. ಆ ಪುಟ್ಟ ಗುಡಿಸಲು – ಕಪ್ಪಾಗಿ ಹೊಗೆಯುಗುಳುತ್ತ, ಲಟಲಟ ಸದ್ದುಮಾಡುತ್ತ ಮುರಿದು ಬೀಳುತ್ತಿರುವುದನ್ನೇ ನೋಡುತ್ತ ನಿಂತಿದ್ದ ಹುಡುಗಿಯನ್ನು ಸ್ವಾಗತಿಸಿದಂತಿತ್ತು. ಅವಳು ಹೆದರಿ ಬಿಳಿಚಿಕೊಂಡಿದ್ದಳು.
ಅವಳ ಯೋಚನೆಗಳೆಲ್ಲ ಪುಟ್ಟ ಗುಡಿಸಲಿನಿಂದ ಹೊರಹೊಮ್ಮುತ್ತಿದ್ದ ಹೊಗೆಯನ್ನೇ ಹಿಂಬಾಲಿಸಿದಂತಿತ್ತು. ಆಗಷ್ಟೇ ಹುಟ್ಟಿಕೊಂಡ ಮೌನದಲ್ಲಿ, ಆ ಪುಟ್ಟಹುಡುಗಿ ಸಂಪೂರ್ಣ ಸುಟ್ಟು ಕರಕಲಾದ ಗುಡಿಸಲಿನ ಬೂದಿರಾಶಿಯನ್ನೇ ನೋಡುತ್ತ ನಿಂತಳು.
ಇಟಾಲಿಯನ್ ಮೂಲ: ಲುಯಿಗಿ ಪಿರಾಂಡೆಲ್ಲೋ
LITTLE HUT – SICILIAN SKETCH
*****