ಪಶ್ಚಿಮದಿಂದೆದ್ದ ಹೊಸ ಬಿರುಗಾಳಿ
ಪೂರ್ವವನ್ನೆಲ್ಲ ಹಾರಿಸಿ ಧೂಳಿಪಟ ಮಾಡಿದೆ
ಕಾಣುತ್ತಿಲ್ಲ ಅಶ್ವಿನಿ ಭರಣಿ ಕೃತ್ತಿಕೆಯರು
ಮಾಯವಾಗಿವೆ ಧ್ರುವ ನಕ್ಷತ್ರ ಸಪ್ತರ್ಷಿಮಂಡಲ
ಋತವ ಸಾರಿದ ವೇದ ಉಷನಿಷತ್ತುಗಳು
ಕಣ್ಮರೆಯಾದವು ಸದ್ದುಗದ್ದಲದಲ್ಲಿ
ಏಕಪತ್ನೀವ್ರತಸ್ಥ ಬೆಡಗಿಯರ ಬೆಂಬತ್ತಿದ್ದಾನೆ
ಸಹನೆ ತಾಳ್ಮೆ ಎಂದು ಕನವರಿಸಿದ ಧರ್ಮ
ಯಾರಿಗೂ ಬೇಡವಾದ ಜಡ ಕರ್ಮ
ಅಹಿಂಸೆ ಪರಧರ್ಮ ಎಂದ ಸಿದ್ಧಾಂತಗಳು
ಕಾಲು ಕಸ ಕೊಳೆತ ತಿಪ್ಪೆಗಳು
ಆಧ್ಯಾತ್ಮ ವೈರಾಗ್ಯ ತ್ಯಾಗ ಭಕ್ತಿ
ಜಪ ತಪಾದಿಗಳು ಪಾಚಿ ಗಟ್ಟಿಹೋಗಿವೆ
ಪಾತಿವ್ರತ್ಯ ಸೋದರ ಪ್ರೇಮ ಸ್ನೇಹ ವಾತ್ಸಲ್ಯ
ಮಾತಾಪಿತೃ ಗುರು ಭಕ್ತಿಗಳು
ಮಾನವೀಯ ಸಂಬಂಧಗಳು
ಅಂತರಂಗ ಶುದ್ದಿ ಆಚಾರ ವಿಚಾರ
ಎಲ್ಲಾ ಎಲ್ಲಾ ಈ ಬಿರುಗಾಳಿಯಲ್ಲಿ
ತೂರಿ ಹೋಗಿವೆ
ಬಣ್ಣ ಬಣ್ಣದ ಗರಿಗಳ ಜಾನಪದ ಹಕ್ಕಿಗಳು
ಅನಾದಿ ಕಾಲದಿಂದ ನಮ್ಮಂಗಳದಲ್ಲಿ
ಆಡಿಕೊಂಡಿದ್ದವು
ಅವು ಬೆದರಿ ಕಂಗಾಲಾಗಿ
ಆಕಾಶಕ್ಕೆ ಹಾರಿದವು
ನೀತಿ ನಿಯಮ ಸಂಯಮ ಸೌಜನ್ಯಗಳ
ದಾರಗಳು ಫಟ್ ಫಟ್ಟೆಂದು ಕಿತ್ತಿ ಹೋದವು
ದೇಶೀ ಊಟ ಪಾಟ ಉಡಿಗೆ ತೊಡಿಗೆಗಳು
ಅಯ್ಯೋ ಪರದೇಶಿಯಾದವು
ರೋಡ್ ರೋಲರ್ ಡಾಲರ್ ದಾಳಿಯಡಿ
ಕೋಮಲಭಾವಗಳ ಹಸುಗೂಸು ಕಂದಮ್ಮಗಳು
ಪುಟಾಣಿ ಹೂಗಿಡಗಳು ಮೊಳಕೆಗಳು
ಅಪ್ಪಚ್ಚಿಯಾಗಿ ಹೋದವು
ನಮ್ಮದೆಯು ಹೆಮ್ಮೆಯಿಂದ ಬೀಗುತ್ತಿದ್ದ
ಇತಿಹಾಸ ಪುರುಷರು ಅವರ ಆದರ್ಶಗಳು
ತ್ಯಾಗ ಬಲಿದಾನ ಸೇವೆಗಳ ಕತೆಗಳು
ವೀರ ವಿದ್ಯುನ್ಮಣಿಗಳು ಧೀರ ವಿದ್ವನ್ಮಣಿಗಳು
ದಾಸರು ಶರಣರು ಸಂತರು
ಕವಿವರೇಣ್ಯರ ದಿವ್ಯವಾಣಿಗಳು
ಶಿಲ್ಪ ಚಿತ್ರ ನಾಟ್ಯಾದಿ ಕಲಾಕುಸುಮಗಳು
ನೆಮ್ಮದಿಯ ಗೂಡಿನಲ್ಲಿ ಬೆಚ್ಚಗಿದ್ದ
ಹಕ್ಕಿಗಳು ಎಲ್ಲ ಎಲ್ಲ ಮನದ ಪರದೆಯಿಂದ ಮಾಯವಾಗಿವೆ
ಎಂಥೆಂಥ ಚಂಡಮಾರುತಗಳಿಗೂ
ಅಲ್ಲಾಡದ ಗಾಜಿನ ಬುರುಡೆಯೊಳಗಿನ
ನಂದಾ ದೀಪದಂತಿದ್ದ ಆತ್ಮ ಚಿಂತನ
ಪರಲೋಕ ಧ್ಯಾನದ ಹಣತೆ
ನೆಲಕ್ಕುರುಳಿ ಹೋಗಿ
ಕಮಟು ಹೊಗೆ ವಾಸನೆ ಮಾತ್ರ
ಗಾಳಿಯಲ್ಲಿ ಹರಡಿ ಕರಗಿ ಹೋಗಿದೆ
ಮಾನವರೆಲ್ಲ ಬುರುಗು ಭೋಗದ
ಮೆರಗು ಮಾಯೆಯ ನೋಟು ಗಿಲೀಟಿನ
ಷೋಕಿ ಸುಖಲೋಲುಪ್ತಿಯ ದಟ್ಟ
ಪಡುವಲ ಬಿರುಗಾಳಿಗೆ ಸಿಕ್ಕು
ತರಗೆಲೆಗಳಾಗಿದ್ದಾರೆ….
ಓಡಾಡುವ ಬೆಂತರಗಳಾಗಿದ್ದಾರೆ
*****