ಹೊಲಸಲ್ಲೇ ಹೊರಳಾಡುವುದು
ನಮಗೆ ಒಗ್ಗಿ ಹೋಗಿದೆ
ಊರ ಹತ್ತಿರ ಹೊರದಾರಿಗಳೆಲ್ಲ
ಬಯಲು ಕಕ್ಕಸುಗಳು
ಊರೂಳಗೆ ಹೋಗುವಾಗ ನಾವು
ಮೂಗು ಮುಚ್ಚಿಕೊಳ್ಳುವುದಿಲ್ಲ
ಏಕೆಂದರೆ ದುರ್ವಾಸನೆಗೆ ಸಹಜವಾಗಿ
ಒಗ್ಗಿಕೊಂಡ ದುರ್ವಾಸರು ನಾವು
ದೇವರುಗಳಿಗೆ ಮಾತ್ರ ಹೆದರುತ್ತೇವೆ
ವರ್ಷಕ್ಕೊಮ್ಮೆ ದೇವರ ಹಬ್ಬಕ್ಕೆ
ಮನೆ ಮನೆಗೆ ಸುಣ್ಣ ಬಣ್ಣ
ಓಣಿಗಳು ಅಲ್ಪಸ್ವಲ್ಪ ಸ್ವಚ್ಛ
(ಈಗಿನ ದೇವರು ಮಂತ್ರಿ ಮಾನ್ಯರು
ಬಂದಾಗಲು ಅಷ್ಟೆ)
ದೇವರು ಹೇಳಿಕೆ ಕೊಡುತ್ತವೆ
ಕೇಳಿದ್ದು ಕೊಡುತ್ತವೆ
ಎಂಬ ವದಂತಿ ಹಬ್ಬಿದರೆ ಸಾಕು
ಮರ ಸುತ್ತಿ ಚಪ್ಪಲಿ ಗುಡ್ಡೆ ಹಾಕುತ್ತೇವೆ
ಕೊಂಬೆಗಳಿಗೆ ತೊಟ್ಟಿಲು ಕಟ್ಟುತ್ತೇವೆ
ಮೈಮೇಲೆ ಬಂದು ಪೂಜಾರಿ
ಹೂಂಕರಿಸುತ್ತಾನೆ ಅಪ್ಪಣೆ ಕೊಡುತ್ತಾನೆ
ಭಯಭಕ್ತಿಯಿಂದ ಆರು ಮೊಳ ಮೈಯ
ಮೂರು ಗೇಣು ಮಾಡಿಕೊಂಡು
ಅಡ್ಡ ಬೀಳುತ್ತೇವೆ ಕಾಣಿಕೆ ಕೂಡುತ್ತೇವೆ
ತಿಂಗಳು ತಿಂಗಳು ವಾರಾವಾರಾ
ಆ ದೇವರಿಗೆ ತಪ್ಪದೆ ನಡೆದುಕೊಳ್ಳುತ್ತೇವೆ
ವಾಹನಗಳ ಸಾಲು ಸಾಲು
ಗುಂಪು ಗುಂಪು ಕುರಿಗಳ ಜಾತ್ರೆ
ಪುಣ್ಯಕ್ಷೇತ್ರಗಳ ಹೊಳೆಹಳ್ಳಗಳ
ದಂಡೆಗಳು ಶರೀರ ತ್ಯಾಜ್ಯ ತಿಂಡಿ ತ್ಯಾಜ್ಯ
ಗಳಿಂದ ಗಬ್ಬೆದ್ದು ನಾರುತ್ತವೆ
ನಾವು ಅಲ್ಲಿ ಮೂಗು ಮುಚ್ಚಿಕೊಳ್ಳದೆ
ಸೇವೆಗಳ ಮಾಡಲು ಹೋಗುತ್ತೇವೆ
ಧನ್ಯರಾಗುತ್ತೇವೆ
ದೇಹವೇ ದೇವಾಲಯವೆಂದು ಸಾರಿ
ಮೌಢ್ಯಗಳ ಹೊಲಸು ತೊಳೆಯಲು
ನಮ್ಮ ನಿಮ್ಮೊಳಗಿಂದಲೇ ಮೇಲೆದ್ದು ಬಂದ
ಮಾದಾರ ಮೇದಾರ ಡೋಹಾರ ಕುಂಬಾರ
ಕಂಬಾರ ಮಡಿವಾಳ ನೇಕಾರರಾದಿ
ಶರಣರು ಇದೇ ನೆಲದಲ್ಲೇ ಹುಟ್ಟಿಬಂದರೇ!
ಅವರಿಗೂ ಗುಡಿ ಮಠಗಳ
ಕಟ್ಟಿದ್ದೇವೆ ಬಿಡಿ
ನಮ್ಮ ಮಲಿನ ಮೌಢ್ಯಗಳನ್ನೆಲ್ಲ
ಅವುಗಳ ಸುತ್ತ ಗುಡ್ಡೆ ಹಾಕಲು
ಹೊಲಸು ಹುಲುಸು ಎನ್ನುತ್ತೇವೆ
ಹೊಲಸು ನಮಗೆ ಒಗ್ಗಿ ಹೋಗಿದೆ
*****