ಪುರಾಣ ಪುಣ್ಯಕಥೆಗಳ ಮಿಥ್ಯಾಲಾಪಗಳು ಇನ್ನು ಸಾಕು
ಮುಗಿಲ ಮಲ್ಲಿಗೆಗಳ ಮೂಸುವ ಭ್ರಮೆ ಇನ್ನು ಸಾಕು,
ಕಾಣದುದರ ಕೈಕಾಲುಗಳಿಗೆ ಜೋತಾಡಿ
ಕರ್ರಗೆ ಕಲೆಕಲೆ ಮಾಡಿದ್ದ ಕಂತೆಗಳು ಇನ್ನು ಸಾಕು
ಇದೋ ನೋಡಿ ನಿಮ್ಮ ಮುಂದಿರುವುದು
ಪುಣ್ಯ ಗಣ್ಯ ಭೂಮಿ ಭಾರತವಲ್ಲ
ಹಂದೆಗಳ ಹಡೆಯುವ ದಾರಿದ್ರ್ಯ ದಳ್ಳುರಿಯ
ಆತ್ಮಘಾತಕತನದ ಗಟಾರಮತಿಗಳ ಒಣನೆಲವಾಗಿದೆ.
ನಾವೀಗ ನಿಜವನರಿಯದ ಕೂಪಮಂಡೂಕಗಳು
ಹಲವು ಹಲ್ಕಟ್ತನಗಳ ಮುಚ್ಚಿ ಆದರ್ಶ ಹಾಡುವವರು,
ಸಂಪನ್ನ ರಾಮರೊಳಗೆ ಹುದುಗಿರುವ ರಾವಣರು,
ಪತಿವ್ರತಾ ಮೇಕಪ್ಪಿನೊಳಗೆ ಮಿಡುಕುವ ಪತಿತೆಯರು,
ಜಗವನ್ನೇ ಬೆಳಗುವ ರವಿಕಿರಣಗಳು
ಈ ಒಣಕಾಡಿನೆಲೆಗಳಿಗೂ ಸೋಕವು
ನೆಲವ ಬೆಳಗುವುದನ್ನಂತು ಕೇಳಬೇಡ
ಇಲ್ಲಿಯ ಕಾಗೆ ಗೂಗೆಗಳಿಗೆ ಹೊಸಪಾಠ ಕಲಿಸಿದರೆ
ಅವು ಕೂಗುವುದು ಮತ್ತದೇ ಕಾಕಾ ಗೂಗೂ
ಇಲ್ಲಿಯ ನಾಯಿಗಳಿಗೆ ಹೊಸ ಶಾಸ್ತ್ರ ಕಲಿಸಿದರೆ
ಅವು ಊಳಿಡುವುದು ಮತ್ತದೇ ಬೌಬೌ
ನವ ವೇಷ ಭೂಷಣಗಳೊಳಗೆ
ಅದೇ ಪಾಚಿಗಟ್ಟಿದ ಭೂತಬುದ್ಧಿ,
ಯಾವ ಹೊಸಗಾಳಿಗೂ ಮೈತೆರೆಯದ ಹಳಸಲು ಬಾವಿ ಇದು
ಯಾವ ಹೊಸ ಪ್ರಭಾವಗಳಿಗೂ ಪಕ್ಕಾಗದ ಮೋಟು ಮರವಿದು
ಯಾವ ಹೊಸ ಬೀಜವೂ ನಾಟದ ಕಗ್ಗಲ್ಲಿದು
ಇಲ್ಲಿಯವರೆಗೆ ವಿಧಿ ನಿಷೇಧಗಳ
ಋಣಮಾರ್ಗದಲ್ಲಿ ನಡೆದದ್ದಾಯಿತು
ಹುಲಿ ಹಲ್ಲು ಕಿತ್ತು ಆಕಳ ಮಾಡುವ ಯತ್ನ ನಡೆಯಿತು
ಆಡುವ ಬಾಲಕನ ಕೈಕಾಲು ಕಟ್ಟಿ ಮೂಲೆ ಹಿಡಿಸಿದ್ದಾಯಿತು
ಹರಿವ ನಾಲಗೆಯ ಕತ್ತರಿಸಿ, ಉರಿವಗ್ನಿಯ ಮೇಲೆ ತಣ್ಣೀರು
ಸುರುವಿ
ಕಡಿವ ಕತ್ತಿಯನು ಬಂಡೆಗೆ ಹೊಡೆದು ಮೊಂಡಾಗಿಸಿ
ಜೀವಚ್ಛವವಾದೆವು
ಭಕ್ತಿಯ ಬೋಳೆತನ, ಅಹಿಂಸೆಯ ಹೇಡಿತನ, ಸ್ವರ್ಗದ
ದುರ್ಮಾರ್ಗತನ,
ಬ್ರಹ್ಮಚರ್ಯದ ಭಾನಗಡಿತನ, ಯೋಗದ ಗಂಡುಜೋಗತಿತನ,
ಇವನ್ನೆಲ್ಲ ಇನ್ನಾದರೂ ಸಾಕು ಮಾಡೋಣ
ಚೆನ್ನಾಗಿ ಉಳುವ-ಬೆಳೆವ, ಚೆನ್ನಾಗಿ ಉಣ್ಣುವ-ಉಡುವ,
ಮೈತುಂಬ ಕೆಲಸ ತುಂಬಿ ಕಾಯ ಕಲ್ಲಾಗಿಸುವಾ,
ಮನ ತುಂಬ ಸೊಗವುಂಡು ಭಾವಪೂರ ಹರಿಸುವಾ,
ನಮ್ಮ ಬೆನ್ನಿಗಂಟಿದ ಹೊಟ್ಟೆ ತುಂಬಿಸಿ ತೇಗುವ,
ಕಣ್ತುಂಬ ನಿದ್ರಿಸಿ ಪುನರ್ಜನ್ಮವನಣಕಿಸುವ
ಇಹ ಸಾರ್ಥಕತೆಯ ಧನಮಾರ್ಗ ಹಿಡಿಯೋಣ
ಎಲ್ಲಿ ಬೇಡದು ಕೂಡದು ಬಾರದುಗಳು ಬಂಧಿಸವೋ
ಎಲ್ಲಿ ಬೇಕು ಮಾಡು ಕೂಡುನಲಿಯುವಿಕೆಗಳು
ತಂತಾವೇ ಆಳುವುವೋ
ಹಾಗೆಯೇ ಬಾಳೋಣ.
*****