ಸಾಗರ ಹುದುಗಿದೆ ಹನಿಹನಿಯಲ್ಲೂ
ಸೂರ್ಯನಿರುವ ಪ್ರತಿ ಕಿರಣದಲೂ,
ಒಂದೇ ಸಮ ಇದೆ ಮಾಧುರ್ಯದ ಹದ
ಮರವೊಂದರ ಪ್ರತಿ ಹಣ್ಣಿನಲೂ.
ಸಾವಿರ ಸಿಪ್ಪೆ, ಸಾವಿರ ಚಿಪ್ಪು
ಸಾವಿರ ಬಗೆ ನಡೆನುಡಿ ಅನ್ನ,
ಕಾಯದ ಕರಣದ ಸಾವಿರ ಚೇಷ್ಟೆ
ಹೊರಗಿನ ತೋರಿಕೆ ಬಹು ಭಿನ್ನ.
ಜೀವ ಜೀವದೊಳು ಒಂದೇ ಚೇತನ
ಕಾಣಿಸಿಕೊಳ್ಳುವ ಬಗೆ ಬೇರೆ,
ಹೊರಗಿನ ಭೇದವ ಸರಿಸಿದ ಗಳಿಗೆ
ಕಾಣುವುದೊಂದೇ ಧ್ರುವತಾರೆ.
ಒಂದೇ ತೇಜದ ಕಿರಣಗಳೆಲ್ಲಾ
ಒಂದೇ ಜಲಧಿಯ ಬಿಂದುಗಳು,
ಒಂದೇ ಮೂಲಕೆ ಬಂದೂ ತಿಳಿಯದೆ
ಭಿನ್ನವೆನ್ನುವುದು ಬರಿ ಮರುಳು.
*****