ಬುದ್ಧಿ ಚಿತ್ತ ಹಮ್ಮುಗಳೇ, ವಿಷಯೇಂದ್ರಿಯ ಬಿಮ್ಮುಗಳೇ
ನನ್ನ ಹೊತ್ತು ಗಾಳಿಯಲ್ಲಿ ಜಿಗಿದೋಡುವ ಗುಮ್ಮಗಳೇ!
ಓಡಬೇಡಿ ಕೆಡವಬೇಡಿ ಅಶ್ವಗಳೇ ನನ್ನನು
ಎಸೆಯಬಹುದೆ ಕೊರಕಲಲ್ಲಿ ರಥದಿ ಕುಳಿತ ದೊರೆಯನು?
ಸಾವಧಾನ ಎಳೆದು ಸಾಗಿ ಹೊಣೆಯನರಿತು ರಥವನು
ವಶವಾಗದೆ ಸವಿಯಬೇಕು ದಾರಿಬದಿಯ ಚೆಲುವನು
ಪ್ರೀತಿಸಿಯೂ ಅಣ್ಣ ತಮ್ಮ ಹೆತ್ತು ಹೊತ್ತ ತಾಯಿಯ
ಬಲಿಯಾಗದೆ ಅರಿಯಬೇಕು ಮಾಟಗಾತಿ ಮಾಯೆಯ
ಎಂಥ ಲೋಕ, ಏನು ಚೆಲುವು, ಯಾರದು ಈ ಸೃಷ್ಟಿಯು
ಎದುರು ಬಾರನೇಕೆ ಇದನು ರೂಪಿಸಿದಾ ಸ್ವಾಮಿಯು?
ಹೀಗೆ ನಮ್ಮ ಸೆಳೆವುದೇಕೆ, ಮೋಹದಲ್ಲಿ ಹಿಡಿವುದೇಕೆ
ಗೆಲ್ಲು ಇದನು ಎನುವುದೇಕೆ, ಏನು ಅವನ ಲೀಲೆಯು?
ಗಡಿಗೆಯೊಳಗೆ ಸೆರೆಯಾದ ನೀರಿನಂತೆ ನಾನು
ಹೊರಗೆ ಹರಿದು ಸೇರಬೇಕು ಜನ್ಮವಿತ್ತ ಕಡಲನು,
ಇಲ್ಲಿ ಇರುವ ತನಕ ಎಲ್ಲ ಲೋಕ ನಿಯಮ ನಡೆಸಿ
ಮಿತಿಯಳಿದ ಅನಂತನಾಗಬೇಕು ಕಡೆಗೆ ನಾನು.
*****