ಒಳಗೆ ಇಳಿದು ಬಾ ಇಳಿಯುವಂತೆ ನೀ
ಮಳೆಯು ಮಣ್ಣ ತಳಕೆ
ಕೆಸರ ಮಡಿಲಿಂದ ಕೆಂಪನೆ ಕಮಲವ
ಮೇಲೆತ್ತುವ ಘನವೇ
ಹೂವಿನ ಎದೆಯಲಿ ಬಗೆಬಗೆ ಪರಿಮಳ
ಬಿತ್ತುವಂಥ ಮನವೇ
ನಿಂತ ಗಿರಿಗಳಿಗೆ ನಡೆಯುವ ನದಿಗಳ
ಕರುಣಿಸುವಾ ಒಲವೇ
ಆನೆ ಅಳಿಲುಗಳ ಅಂತರವೆಣಿಸದೆ
ತಾಳುವಂಥ ನೆಲವೇ
ಸೂರ್ಯಚಂದ್ರರನು ಸರದಿ ಕಾವಲಿಗೆ
ನೇಮಿಸಿದಾ ಧಣಿಯೇ
ನೀಲಿನಭದಲ್ಲಿ ನಿತ್ಯವು ಜ್ವಲಿಸುವ
ನಕ್ಷತ್ರದ ಗಣಿಯೇ
ಗಾಳಿಯ ಕರೆಸಿ ಮೋಡದ ಮುಚ್ಚಳ
ತೆರೆದು ಸರಿವ ಕರವೇ
ಬಾನಿನ ತುಂಬ ಬೆಳಕಿನ ಕವಿತೆಯ
ಹಾಡುವಂಥ ಕೊರಳೇ!
ತರ್ಕಬುದ್ಧಿಗಳ ಬಲೆಯ ಜಾಲಕ್ಕೆ
ಸಿಕ್ಕದ ಧೋರಣೆಯೇ
ಭಾವನೆಯಲ್ಲಿ ಮಿಂಚಿ ಮೈದೋರಿ
ಹರಿಯುವ ಪ್ರೇರಣೆಯೇ
ವಿಶ್ಚಕ್ಕೇ ಪ್ರಭುವಾಗಿಯು ಪೀಠವ
ಬಯಸದಂಥ ನಿಲುವೇ
ಸ್ನೇಹ ಕರುಣೆ ವಾತ್ಸಲ್ಯ ಗಂಗೆಗೆ
ತವರೆನಿಸಿದ ಒಲವೇ!
*****