ನಿನಗಾಗೇ ಕಾಯುತಿರುವೆ
ನೀನಿಲ್ಲದೆ ನೋಯುತಿರುವೆ
ಮರಳಿ ಮರಳಿ ಬೇಯುತಿರುವೆ
ಓ ಬೆಳಕೇ ಬಾ;
ಬೇರಿಲ್ಲದೆ ಹೂವೆಲ್ಲಿದೆ
ಹೂವಿಲ್ಲದೆ ಫಲವೆಲ್ಲಿದೆ
ನಾನಿರುವೆನೆ ನೀನಿಲ್ಲದೆ
ನಿಜದೊಲವೇ ಬಾ.
ನಿನ್ನನುಳಿದು ಬಾಳೆ ಬರಿದು
ಖಾಲಿ ಮುಗಿಲು ಜಲವೆ ಸುರಿದು
ನನಗೇ ನಾ ತಿಳಿಯಲರಿದು
ತಿಳಿಸಿ ಹೇಳು ಬಾ;
ಪಾಲಾಗಿಹ ಕಾಳು ನಾನು
ದೂರ ಉಳಿದ ಬೇಳೆ ನೀನು
ಕೂಡಿ ಅರ್ಥ ನೀಡುವವನೆ
ಜೋಡಿಯಾಗು ಬಾ.
ಲೆಕ್ಕಕಿರದ ಸೊನ್ನೆ ನಾನು
ಹಿಂದೆ ನಿಂತ ಒಂದು ನೀನು
ನೀನಿಲ್ಲದೆ ಎಲ್ಲಿ ಬೆಲೆ
ನೆಲೆಯ ನೀಡು ಬಾ;
ನಿನ್ನ ಕೂಡಿ ಇಡಿಯಾಗುವೆ
ಮೊಳಕೆಯೆದ್ದು ಗಿಡವಾಗುವೆ
ಹೂವಾಗುವೆ ಹಣ್ಣಾಗುವೆ
ಕಣ್ಮಣಿಯೇ ಬಾ.
*****