ಎಲ್ಲ ನಿನ್ನ ಲೀಲೆ ತಾಯೆ ಎಲ್ಲ ನಿನ್ನ ಮಾಯೆ
ನಿನ್ನ ಅಲ್ಲಗಳೆದ ನಮ್ಮ ಕರುಣೆಯಿಂದ ಕಾಯೆ
ಕಾರಿರುಳನು ಸೀಳಿ ಬರುವ ನಿಗಿ ನಿಗಿ ಉರಿಹರಳು
ನೀಲಿನಭದ ಹಾಸಿನಲ್ಲಿ ಮಣಿನೇಯುವ ಇರುಳು,
ಋತು ಮೀರದೆ ಮುಗಿಲ ಗಡಿಗೆ ಉರುಳಿ ಸುರಿವ ಜಲವು
ಎಲ್ಲ ನಿನ್ನ ಲೀಲೆ ತಾಯೆ ಎಲ್ಲ ನಿನ್ನ ಮಾಯೆ!
ಸಿಂಗಾರದ ನಡಿಗೆಯಲ್ಲಿ ನದಿಯ ರೀತಿ ಹರಿವೆ,
ಮಂಗಳಮಯ ಶಾಲಿವನದ ಸೆರಗ ಹೊದ್ದು ನಿಲುವೆ,
ಬಂಗಾರದ ಸಂಜೆಯಲ್ಲಿ ಒಂದೇ ಕ್ಷಣ ಸುಳಿವೆ
ಎಲ್ಲ ನಿನ್ನ ಲೀಲೆ ತಾಯಿ ಎಲ್ಲ ನಿನ್ನ ಮಾಯೆ!
ಹಕ್ಕಿ ಸಾಲು ಹಾರಿ ಅದೋ ನಿನ್ನ ಕಣ್ಣಸನ್ನೆ
ಸೊಕ್ಕಿ ಹಸಿರು ಮೆರೆಯುವಲ್ಲಿ ನಿನ್ನ ಪಾದಚಿಹ್ನೆ
ಗಣಿ ಗಿರಿಗಳ ಮಣಿ ವನಗಳ ಸಿರಿಯೊಡಲಿನ ಧನ್ಯೆ
ಎಲ್ಲ ನಿನ್ನ ಲೀಲೆ ತಾಯೆ ಎಲ್ಲ ನಿನ್ನ ಮಾಯೆ!
*****