ಪ್ರಿಯ ಸಖಿ,
ಹಣ್ಣು ಮಾಗುವುದು, ವಯಸ್ಸು ಮಾಗುವುದು ಎಲ್ಲ ಸೃಷ್ಟಿ ಸಹಜ ಕ್ರಿಯೆಗಳು. ಹೀಚಾಗಿದ್ದು, ಕಾಯಾಗಿ, ದೋರುಗಾಯಾಗಿ, ಪರಿಪಕ್ವವಾಗಿ ಹಣ್ಣಾದಾಗ ಅದು ಮಾಗಿದ ಹಂತವನ್ನು ತಲುಪುತ್ತದೆ. ಹಾಗೇ ವ್ಯಕ್ತಿ ಕೂಡ. ಬಾಲ್ಯ ಕಳೆದು, ಯೌವ್ವನ ಮುಗಿದು ಮಧ್ಯ ವಯಸ್ಸು ಜಾರಿ, ಕೆನ್ನೆ ಸುಕ್ಕಾಗಿ ತಲೆ ನರೆತು ಸಾವಿಗೆ ಸಮೀಪಿಸಿದಾಗ ಅವನು ಸಂಪೂರ್ಣ ಮಾಗಿದ್ದಾನೆ ಎಂದು ಹೇಳುತ್ತೇವೆ.
ಆದರೆ ಇವುಗಳೆಲ್ಲಾ ಬಾಹ್ಯದ ಸಹಜ ಮಾಗುವಿಕೆಯ ಮಾತಾಯ್ತು. ನಮ್ಮ ಅಂತರಂಗದ ಮಾಗುವಿಕೆಯೂ ಇಷ್ಟೇ ಸಹಜವಾಗಿ ಆಗುತ್ತದೆಯೇ? ಎಂಬುದು ನಮ್ಮನ್ನು ಕಾಡುವ ಪ್ರಶ್ನೆ. ವಯಸ್ಸು ಏರಿದಂತೆಲ್ಲಾ, ಅನುಭವ ಪ್ರಪಂಚ ವಿಸ್ತಾರವಾದಂತೆಲ್ಲಾ ಜಗತ್ತಿನ ಆಗು ಹೋಗುಗಳ ಹಿನ್ನೆಲೆ ತಿಳಿಯುತ್ತಾ ಹೋದಂತೆಲ್ಲಾ ಮನಸ್ಸೂ ಮಾಗುತ್ತಾ ಹೋಗಬೇಕು. ವ್ಯಕ್ತಿ ತನ್ನ ಆಕ್ರೋಶ, ಸಿಟ್ಟು, ದ್ವೇಷ, ಅಸೂಯೆಗಳನ್ನು ಮೀರಲಾಗದಿದ್ದರೂ ನಿಧಾನಕ್ಕೆ ಕಡಿಮೆ ಮಾಡಿಕೊಳ್ಳುವ ದಿಕ್ಕಿನಲ್ಲಿ ಪ್ರಯತ್ನಿಸಬೇಕು. ತನ್ನ ಅಂತಃಚಕ್ಷುಗಳನ್ನು ತೆರೆದು ಬದುಕನ್ನು ಅರ್ಥೈಸಿಕೊಳ್ಳುತ್ತಾ ಹೋಗಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಹಲವಾರು ಮುಖವಾಡಗಳನ್ನು ತೊಟ್ಟುಕೊಂಡಿರುತ್ತಾನೆ. ಆದರೆ ಮನಸ್ಸಿನ ಮಾಗುವಿಕೆಯಿಂದ ಆ ಮುಖವಾಡಗಳನ್ನು ಮೀರಿ ತನಗೆ ತಾನು ಸತ್ಯವಾಗಿ ಗೋಚರಿಸುವಂತಾಗಬೇಕು. ತನ್ನ ಭಾವನೆಗಳಿಗೆ, ಆಲೋಚನೆಗಳಿಗೆ ಪ್ರಾಮಾಣಿಕನಾಗಲು ಪ್ರಯತ್ನಿಸಬೇಕು. ಸಂಪೂರ್ಣ ಮಾಗುವಿಕೆ ಸಾಧ್ಯವಾಗದಿದ್ದರೂ ಆ ದಾರಿಯಲ್ಲಿ ಸಾಗುತ್ತಾ ಹೋಗಬೇಕು. ಗಾಂಧಿ, ಬುದ್ಧ, ಬಸವಣ್ಣ, ವಿವೇಕಾನಂದ, ಕ್ರಿಸ್ತ, ಮಹಾವೀರರು ತಮ್ಮ ಬಾಹ್ಯದ ಮಾಗುವಿಕೆಗೂ ಮೊದಲೇ ಅಂತರಂಗದಲ್ಲಿ ಮಾಗುತ್ತಾ ಸಾಗಿದವರು. ಆದ್ದರಿಂದಲೇ ಅವರು ಮಹಾನ್ ವ್ಯಕ್ತಿಗಳಾದರು. ಸರ್ವಮಾನ್ಯರಾದರು. ಸಂತರೆನಿಸಿದರು. ಇಂತಹ ವ್ಯಕ್ತಿಗಳನ್ನು ಅಪರೂಪಕ್ಕೊಮ್ಮೆಯಷ್ಟೇ ಕಾಣುತ್ತೇವೆ. ಆದರೆ ವಯಸ್ಸಾಗಿಯೂ ಮನಸ್ಸು ಮಾಗದೇ ಮೇಲೆ ಹಣ್ಣಾದಂತೆ ಕಂಡರೂ ಒಳಗೆ ಕಾಯಾಗಿಯೇ ಇರುವ ಅಪರಿಪಕ್ವ ಮನಸ್ಸಿನ ವ್ಯಕ್ತಿಗಳು ನಮ್ಮ ಸುತ್ತಲೂ ಕಾಣುತ್ತಲೇ ಇರುತ್ತೇವೆ.
ವಯಸ್ಸಾಗಿದ್ದರೂ ಮಕ್ಕಳಂತೆ ಹಠ, ಎಲ್ಲರಮೇಲೂ ಕೋಪ, ತಾತ್ಸಾರ, ದ್ವೇಷ. ವ್ಯಂಗ್ಯವಾಡುವುದು, ವಿನಾಕಾರಣ ಕಿರುಚಾಟ, ಹಾರಾಟ, ಜಗಳ, ಅಸಹ್ಯ ನಡುವಳಿಕೆ. ಇತರರನ್ನು ಕಂಡಾಗ ಅವರ ವಯಸ್ಸಿಗೆ ಕೊಡಬೇಕಾದ ಗೌರವವನ್ನೂ ಕೊಡಲು ಮನಸ್ಸು ನಿರಾಕರಿಸುತ್ತದೆ. ವಯಸ್ಸಾದರೂ ಬುದ್ಧಿ ಬಂದಿಲ್ಲ ಎಂಬ ಮಾತು ಇಂಥವರಿಗಾಗಿಯೇ ಸೃಷ್ಟಿಯಾದುದು.
ಸಖಿ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವಯಸ್ಸಿನೊಂದಿಗೆ ತನ್ನ ಮನಸ್ಸನ್ನೂ ಮಾಗಿಸಿ, ತಿಳಿಗೊಳಿಸಿಕೊಳ್ಳಲು ಪ್ರಯತ್ನಿಸಬೇಕು. ಅರಳಿಸಿಕೊಳ್ಳಲು ಪ್ರಯತ್ನಿಸಬೇಕು. ಎಲ್ಲವನ್ನೂ ಪ್ರೀತಿಯ ನೆಲೆಗಳಿಂದ, ಮಾನವೀಯ ನೆಲೆಗಳಿಂದ, ಅರ್ಥೈಸಿಕೊಳ್ಳಲು ಪ್ರಯತ್ನಿಸಬೇಕು. ಸೋಲು ಗೆಲವುಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಹೀಗಾದಾಗ ಮಾತ್ರ ವ್ಯಕ್ತಿಯೊಬ್ಬ ನಿಜವಾದ ಅರ್ಥದಲ್ಲಿ ಹಣ್ಣಾದ, ಮಾಗಿದ ಎಂದು ಹೇಳಬಹುದು. ತನಗೆ ತಾನು
ಅರ್ಥವಾಗಲು, ಸತ್ಯವಾಗಲು ಪ್ರಪಂಚದ ನೋವು ನಲಿವುಗಳು ಅರ್ಥವಾಗಲು ಸಾಧ್ಯವಾಗುತ್ತದೆ. ಸಖಿ, ವಯಸ್ಸಿಗೆ ತಕ್ಕಂತೆ ಮನಸ್ಸು ಮಾಗುವ ಕಲೆಯನ್ನು ಕಲಿಯಲು ಎಲ್ಲರೂ ಪ್ರಯತ್ನಿಸಬೇಕಲ್ಲವೇ?
*****