ಪ್ರಿಯ ಸಖಿ,
ಆ ಮನೆಯಲ್ಲಿ ನಿತ್ಯದಂತೆ ಆ ರಾತ್ರಿಯೂ ತನ್ನ ಕರಾಳ ಹಸ್ತ ಚಾಚಿದೆ. ಕಂಠಪೂರ್ತಿ ಕುಡಿದು ಬಂದ ಅವನು, ತನ್ನ ಪತ್ನಿ ದಿನವಿಡೀ ಬೆವರು ಹರಿಸಿ ದುಡಿವ ಹಣವನ್ನು ಕೊಡುವಂತೆ ಪೀಡಿಸುತ್ತಾ ಹೊಡೆಯುತ್ತಿದ್ದಾನೆ. ಅವಳು ನಿರಾಕರಿಸಿದಷ್ಟೂ ಇವನ ರೋಷ ಉಕ್ಕುತ್ತದೆ. ಮುಖ ಮೂತಿ ನೋಡದೇ ಅವಳನ್ನು ಚಚ್ಚುತ್ತಾನೆ. ಕೊನೆಗೊಮ್ಮೆ ಅವಳು ಸೋತು ಒಂದಿಷ್ಟು ಪುಡಿಗಾಸು ಅವನಿಗೆ ನೀಡುತ್ತಾಳೆ. ಅವನು ಮತ್ತೂ ಹಣ ಕೊಡುವಂತೆ ದಬಾಯಿಸುತ್ತಾನೆ. ಮತ್ತೆ…. ಅದೇ ಅದೇ ಘಟನೆಗಳು, ಮತ್ತೆ ಮತ್ತೆ ಅದೆಷ್ಟು ವರ್ಷಗಳಿಂದ ಪುನರಾವರ್ತನೆಯೋ ಲೆಕ್ಕವಿಟ್ಟವರಾರು ? ಆದರೆ ಆ ದಿನ ಮಾತ್ರ ಅವಳ ಹದಿನಾರು ವರ್ಷದ ಮಗಳು ಒಂದು ಪ್ರಶ್ನೆ ಕೇಳುತ್ತಾಳೆ. ಆ ಪ್ರಶ್ನೆ ತಾಯಿಯ ಬದುಕಿನ ಇಷ್ಟು ದಿನದ ಗೋಳಿಗೆ ಇತಿಶ್ರೀ ಹಾಡುತ್ತದೆ. ಬುದ್ಧಿ ತಿಳಿದಂದಿನಿಂದ
ಆ ಹುಡುಗಿ ದಿನ ರಾತ್ರಿ ಇದೇ ದೃಶ್ಯಗಳನ್ನು ತಪ್ಪದೇ ನೋಡುತ್ತಾ ಬಂದಿದ್ದಾಳೆ. ತಾಯಿಯನ್ನು ಅಪ್ಪನಿಂದ ಬಿಡಿಸಿಕೊಳ್ಳಲು ಹೋಗಿ ತಾನು ಹೊಡೆತ ತಿಂದಿದ್ದಾಳೆ, ಅತ್ತಿದ್ದಾಳೆ, ನೋವನುಭವಿಸಿದ್ದಾಳೆ. ಮತ್ತೆ ಎಲ್ಲಾ ಮರೆತು ನಿದ್ದೆ ಹೋಗಿದ್ದಾಳೆ.
ಆದರೆ ಅಂದು ಮಾತ್ರ ಅವಳಿಗೆ ಜ್ಞಾನೋದಯವಾದಂತಿದೆ. ಅಮ್ಮನನ್ನು ಪ್ರಶ್ನಿಸುತ್ತಾಳೆ. ಅಮ್ಮ ನಮ್ಮ ಸಂಸಾರ ಸಾಗ್ತಾ ಇರೋದೇ ನಿನ್ನ ದುಡಿಮೆಯಿಂದ, ನಿನ್ನ ಪ್ರೀತಿಯಿಂದ, ಬುದ್ಧಿವಂತಿಕೆಯಿಂದ. ಅಪ್ಪ ಈ ಸಂಸಾರಕ್ಕೆ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ. ಅಂದ ಮೇಲೆ ನೀನ್ಯಾಕೆ ದಿನಾ ಈ ನರಕವನ್ನು, ನೋವನ್ನು ಅನುಭವಿಸ್ಬೇಕು? ಅವನನ್ನು ಬಿಟ್ಟು ಬಿಡೋದಕ್ಕಾಗಲ್ವಾ ?
ಸಖಿ, ಈ ಪ್ರಶ್ನೆಗೆ ಅಮ್ಮ ಅಯ್ಯೋ ಅವನು ನನ್ನ ಗಂಡ. ಅವನು ಹೊಡೀಲಿ, ಬಡೀಲಿ ಸಾಯೋವರೆಗೂ ಅವನೊಂದಿಗೇ ಬದುಕಬೇಕಿರುವುದು ನನ್ನ ಧರ್ಮ-ಕರ್ಮ. ಗಂಡನ್ನ ಬಿಟ್ರೆ ಸಮಾಜ ಏನನ್ನುತ್ತೆ ? ಜನ ಏನನ್ತಾರೆ ?…ಇತ್ಯಾದಿ ಹೇಳ್ತಾಳೆ ಎಂದು ನಿನ್ನ ಊಹೆಯಾಗಿದ್ದರೆ, ಅದು ತಪ್ಪು. ಅಮ್ಮ ಹೇಳ್ತಾಳೆ, ಮಗಳೇ ಇವತ್ತು ನಿಜಕ್ಕೂ ನನಗೆ ಸಂತೋಷವಾಗಿದೆ. ಜನ, ಸಮಾಜ ಅನ್ನಲಿ. ನಿನಗೆ ನಿಜ ಏನು ಅನ್ನೋದು ಗೊತ್ತಿರಬೇಕು. ನಾನು ಯಾವತ್ತೋ ಈ ಗಂಡನ್ನ ಬಿಟ್ಟು ಹೋಗಬಹುದಿತ್ತು. ಆದರೆ ಆಗ ನಾನು ನಿನ್ನ ದೃಷ್ಟಿಯಲ್ಲೂ ಕೀಳಾಗಿಬಿಡ್ತಿದ್ದೆ. ಈಗ ನಿನಗೆ ಅಪ್ಪನ ಅವಶ್ಯಕತೆ ನಮಗಿಲ್ಲ ಅನ್ನೋ ತಿಳಿವಳಿಕೆ ಬಂದಿದೆ. ಅವನು ಮಾಡ್ತಾ ಇರೋದು ತಪ್ಪು, ನಾನು ಸರಿ ಅನ್ನೋ ನಂಬಿಕೆ ಬಂದಿದೆ. ಇನ್ನು ನಾನು ಯಾವುದಕ್ಕೂ ಹೆದರಬೇಕಿಲ್ಲ. ಇಂದಿಗೆ ನನಗೆ ಈ ನರಕದಿಂದಲೂ ಮುಕ್ತಿ ಸಿಕ್ಕಿದೆ. ನಾಳೇನೇ ಇಲ್ಲಿಂದ ದೂರ ಹೊರಟು ಹೋಗೋಣ ಎನ್ನುತ್ತಾ ಬುಡ್ಡಿಗೆ ಇನ್ನಷ್ಟು ಎಣ್ಣೆ ಸುರಿದು ಬೆಳಕು ಹೆಚ್ಚಿಸುತ್ತಾಳೆ.
ರಾತ್ರಿಯಿಡೀ ತಾಯಿ ಮಗಳು ಸೇರಿ ತಮ್ಮ ಸಾಮಾನು ಗಂಟು ಕಟ್ಟುತ್ತಾರೆ. ಆ ದಿನ ಸೂರ್ಯನಿಗೂ ಅವಸರ. ಬೇಗನೇ ಉದಯಿಸಿಬಿಟ್ಟಿದ್ದಾನೆ. ಇವರು ಗಂಟು ಮೂಟೆ
ಹಿಡಿದು ಮುಂದೆ ನಡೆದಂತೆಲ್ಲಾ ಸೂರ್ಯ ಅವರಿಗೆ ದಾರಿ ತೋರುತ್ತಾ ಮುನ್ನಡೆಯುತ್ತಾನೆ.
*****