ಸೀತೆಯೇ ಲೋಕಕ್ಕೆ ತಾಯಿ. ಸಾವಿರ ರಾಮ
ತೂಗುವರೆ ಇವಳ ತೂಕಕ್ಕೆ? ರಾಮಾಯಣದ
ಅಂಕಿತವೆ ಒಂದು ಅನ್ಯಾಯ ಸೀತೆಯ ಕಥೆಗೆ.
ಯಾರಿಗಾ ಸೇತುಬಂಧನ? ಸೀತೆಯ ವ್ಯಥೆಗೆ?
ಯಾರಿಗಾ ರಾಕ್ಷಸ ವಿನಾಶ ? ಯುದ್ಧ ಮುಗಿಯಲು,
ಸೆರೆತೆರೆದು ಬಂದ ಮಡದಿಯನು ಕೈಹಿಡಿದವನು
ಸಂಶಯದ ಓರೆಗಣ್ಣಿನಲಿ ನೋಡಿದಮೇಲೆ
ಇನ್ಯಾವ ಭಾಗ್ಯ ಉಳಿದಿತ್ತು ಸೀತೆಗೆ? ಇದಕೆ
ಲೋಕವನು ಒಪ್ಪಿಸುನ ಕುಂಟು ಕಾರಣವೇಕೆ ?…
ಬೆಂಕಿಯಲಿ ನಿಂತು ಬೆಳ್ದಿಂಗಳಾದಳು ಸೀತೆ.
ಮಹಾಲಕ್ಷ್ಮಿ ಸೀತೆ. ಗಂಡಿಗೆ ಬಂದ ಸಂಶಯವೆ
ಹೆಣ್ಣಿಗೂ ಬಂದು, ಒಂದೇ ಮಾತನಾಡಿದಳೆ?
ಲೋಕ ಸಮ್ಮತಿಯ ಬೇಡಿದಳೆ ? ಹೂ ಬಾಡದೆಯೆ,
ಬಂದು ನಿಂತಳು ನಗುತ ರಾಫವನ ಜೊತೆಗೆ.
*****