ಮನೆಗೆ ಬಂದ ಅತಿಥಿ ಅಭ್ಯಾಗತರನ್ನು ಸತ್ಕರಿಸುವುದಕ್ಕೆ ಹಿಂದಿನ ದಿನಗಳಲ್ಲಿ ತಂಬಾಕು ಸೇದುವ ಏರ್ಪಾಡು ಮಾಡಿಕೊಡುತ್ತಿದ್ದರು. ಬಂದವರಿಗೆ ಎಕ್ಕೆಲೆ – ತಂಬಾಕುಗಳನ್ನು ಒದಗಿಸಿದರೆ ದೊಡ್ಡ ಮನ್ನಣೆ ಮಾಡಿದಂತೆ. ಬಂದ ಅತಿಥಿಯಾಗಲಿ ಆಪ್ತರಾಗಲಿ ಮನೆಯವರಿತ್ತ ಎಕ್ಕೆಲೆಯಿಂದ ಚುಟ್ಟಕಟ್ಟಿ ಅದರಲ್ಲಿ ತಂಬಾಕು ತುಂಬಿ, ಮೇಲೆ ಬೆಂಕಿಯ ಕಿಡಿಯಿಟ್ಟು ಧೂಮ್ರಪಾನ ಮಾಡುತ್ತಿದ್ದರು.
ಎಕ್ಕೆಲೆ ತಂಬಾಕುಗಳಿಗೆ ಅಷ್ಟೂಂದು ದೊಡ್ಡಸ್ತಿಕೆ ಬರಲು ಕಾರಣವೇನು ? ಎಕ್ಕೆಲೆ ತಂಬಾಕುಗಳು ಹುಟ್ಟಿಕೊಂಡಿದ್ದು ಎಂದಿನಿಂದ ?
ಬಹಳ ಹಿಂದಿನ ಕಾಲದಲ್ಲಿ ಅ೦ದರೆ ಈ ಭೂಮಿಯ ಮೇಲೆ ಮನುಷ್ಯ ಪ್ರಾಣಿ ಹುಟ್ಟಿಬಂದ ಬಳಿಕ, ಮನೆಯೊಳಗಿನ ಗಂಡು ಹೆಣ್ಣುಗಳಿಗೆ ಹೊಂದಾಣಿಕೆಗೊಳಿಸಿ ಮದುವೆ ಮಾಡುವ ಪರಿಪಾಠವಿರಿಸಿಕೊಳ್ಳಲಾಗಿತ್ತು. ಮುಂದೆ ಅನೇಕ ಶತಮಾನಗಳನ್ನು ಕಳೆಯುವ ಹೊತ್ತಿಗೆ ಮನುಷ್ಯರ ಸಂಖ್ಯೆ ಬೆಳೆಯಿತು. ಅವರು ಗುಂಪು ಗುಂಪಾಗಿ ನೆಲೆಸತೊಡಗಿದರು. ಆವಾಗ ಮನುಷ್ಯ ಪ್ರಮುಖರು ಹೊಸಯುಕ್ತಿಯೊಂದನ್ನು ಕಂಡುಹಿಡಿದರು. ಏನೆಂದರೆ – ಗಂಡಿಗೆ ಹೆಣ್ಣನ್ನು ಮನೆಯೊಳಗಿಂದಲೇ ತೆಗೆದುಕೊಳ್ಳದೆ ಬೇರೂಂದು ಗುಂಪಿನೊಳಗಿನಿಂದ ತರುವುದು ಒಳ್ಳೆಯದು.
ಹೀಗೆ ಕೊಡುಗೂಸುಗಳನ್ನು ಬೇರೊಂದು ಮನೆಗೆ ಕೊಡುವ ಕ್ರಮವು ಬಳಕೆಯಲ್ಲಿ ಬಂದಿತು. ಆದರೆ ಹಳೆಯ ಸಂಪ್ರದಾಯವೂ ಅಧರ್ಮವೆನಿಸುತ್ತಿರಲಿಲ್ಲ. ಬೇರೊಂದು ಗುಂಪಿಗೆ ಕೊಡಮಾಡಿದ ಹೆಣ್ಣನ್ನು ಹಬ್ಬ – ಹುಣ್ಣಿಮೆ. ಉತ್ಸವ ಆಮೋದದ ಕಾಲಕ್ಕೆ ತವರುಮನೆಗೆ ಕರೆತರತೊಡಗಿದರು.
ನಾಗರಪಂಚಮಿ ಹಬ್ಬದ ಕಾಲಕ್ಕೆ ಮನೆಯ ಹೆಣ್ಮಗಳನ್ನು ತವರಿಗೆ ಕರೆತರುವದಕ್ಕೆ ತಮ್ಮನ್ನು ಕಂಟಲಿ ಎತ್ತು ತೆಗೆದುಕೊಂಡು, ಬೇರೊಂದು ಗುಂಪು ಇರುವಲ್ಲಿಗೆ ಹೋದನು. ಅಕ್ಕನ ಅತ್ತೆ ಮಾವಂದಿರು ಯಾವ ನೆವವನ್ನೂ ಮುಂದೊಡ್ಡದೆ ಸೊಸೆಯನ್ನು ಆಕೆಯ ತವರುಮನೆಗೆ ಕಳಿಸುವ ಏರ್ಪಾಡು ಮಾಡಿದರು.
ಅಕ್ಕನನ್ನು ಎತ್ತಿನಮೇಲೆ ಕುಳ್ಳಿರಿಸಿಕೊಂಡು ತನ್ನೂರಿಗೆ ಸಾಗಿದ ತಮ್ಮನ್ನು ಪ್ರಾಯದಿಂದ ತುಂಬಿತುಳುಕುವ ಅಕ್ಕನನ್ನು ಕಂಡು ತಬ್ಬಿಬ್ಬಾದನು. ಆಕೆಯು ಧರಿಸಿದ ಬಂಗಾರದೊಡವೆಗಳಿಂದ ಆಕೆಯ ಚೆಲುವು ನೂರ್ಮಡಿಸಿತ್ತು. ಹಿಂದಿನ ಕಾಲವಾಗಿದ್ದರೆ ಅಕ್ಕನೇ ತನ್ನ ಹೆ೦ಡತಿ ಆಗುತ್ತಿದ್ದಳಲ್ಲವೇ, ಎಂದು ಎಣಿಸಿದನು. ಅದೇ ಪದ್ಧತಿ ಯೋಗ್ಯವಾಗಿತ್ತೆಂದೂ ಬಗೆದನು. ಅಕ್ಕನೂ ಏನಾದರೂ ಕೇಳಿದರೆ ತಮ್ಮನು ತನ್ನ ತಲೆಯೊಳಗೆ ಸುಳಿದಾಡುವ ವಿಚಾರವನ್ನೇ ಮುಂದೆ ಮಾಡಿ ಮರುನುಡಿಯುವನು. ದಾರಿಸಾಗುತ್ತಲೇ ಇತ್ತು.
ಹೊತ್ತು ಮುಳುಗುವ ಸಮಯವಾಯಿತು. ತಮ್ಮನ ಬುದ್ಧಿ ತೀರ ಚಂಚಲ ಗೊಂಡಿತು. ಅವನ ಕಂಟಲಿ ಎತ್ತು ತೀರ ನಿರ್ಜನಪ್ರದೇಶವನ್ನು ಪ್ರವೇಶಿಸಿತು. ಒಂದೆರಡು ಕೂಗಳತೆ ದಾಟಿತ್ತೋ ಇಲ್ಲವೋ ತಮ್ಮನು ಅಡ್ಡಬಂದು ಎತ್ತಿನ ಮುಗದಾಣಿ ಹಿಡಿದನು. ಅದು ಗಕ್ಕನೆ ನಿಂತಿತು. ಅಕ್ಕನಿಗೆ ಕೆಳಗಿಳಿಯಲು ಹೇಳಿದನು.
ಆಕೆ ಮರುನುಡಿದಳು –
“ಹೊತ್ತು ಮುಳುಗಿತು, ಕತ್ತಲಾಗುವಷ್ಟರಲ್ಲಿ ಊರು ಸೇರುವುದು ಒಳ್ಳೆಯದಲ್ಲವೇ ? ಹುಲಿಕರಡಿಗಳ ಬಾಯಿಗೆ ಬೀಳುವುದಾಗಲಿ, ಕಳ್ಳರ ಕೈಗೆ ಸಿಗುವದಾಗಲಿ ಅದರಿಂದ ತಪ್ಪುತ್ತದೆ. ಆದ್ದರಿಂದ ಎತ್ತನ್ನು ಅವಸರದಿಂದ ಹೊಡೆಯುವುದನ್ನು ಬಿಟ್ಟು ಇಲ್ಲೇಕೆ ಇಳಿಯಬೇಕು?”
“ಊರು ಇನ್ನು ದೂರವಿಲ್ಲ. ಇಳಿದುಬಿಡು. ನೀರು ಕುಡಿದು ಮುಂದೆ ಸಾಗೋಣ” ಎಂದು ತಮ್ಮನು ಅಕ್ಕನಿಗೆ ನೆರವು ನೀಡಿ ಎತ್ತಿನಿಂದ ಕೆಳಗಿಳಿಸಿಕೊಂಡನು. ಆಕೆಯ ಸ್ಪರ್ಶದಿಂದ ಆತನಲ್ಲಿ ವಿದ್ಯುತ್ಸಂಚಾರವೇ ಆದಂತಾಯಿತು.
ಮುಂದೆ ಏನು ನಡೆಯಿತೆಂಬುದನ್ನು ಹೇಳುವ ಕಾರಣವೇ ಇಲ್ಲ, ಬಲಾತ್ಕಾರ! “ಇದು ಧರ್ಮವಲ್ಲ” ಎಂದು ಅಕ್ಕನು ಹಲುಬಿದಳು. “ಹಳೆಯದಾದರೇನು, ಇದು ಧರ್ಮವಾಗಿಯೇ ಇತ್ತು” ಎಂದನು ತಮ್ಮ.
“ಬಿಟ್ಟುಕೊಟ್ಟ ಧರ್ಮದದಾರಿ ಅಧರ್ಮವೇ ಅಲ್ಲವೇ ? ದೇವಿ, ಭೂಮಿತಾಯೀ, ಇಲ್ಲಿ ನೀನಲ್ಲದೆ ಇನ್ನಾರೂ ಇಲ್ಲ. ಅಧರ್ಮದಿಂದ ನನ್ನನ್ನು ಉಳಿಸು ತಾಯಿ” ಎಂದು ಕೈಮುಗಿದು ಹೃತ್ಪೂರ್ವಕವಾಗಿ ಮೊರೆಯಿಟ್ಟಳು.
ಭೂಮಿತಾಯಿಗೆ ಕೇಳಿಸಿತೇನೋ ಆಕೆಯಮೊರೆ. ಅದು ಬಿರಿದು ಬಿಟ್ಟಿತು. ದುಃಖಾರ್ತೆಯು ನೆಲದ ಬಿರುಕಿನಲ್ಲಿ ಇಳಿಯತೊಡಗಿದಳು. ಅದನ್ನು ಕಂಡು ತಮ್ಮನು ಮುಗಿದ ಆ ಕೈಗಳೆರಡನ್ನೂ ಹಿಡಿದು ಹಿಂದೆಳೆಯತೊಡಗಿದನು. ಆದರೆ ಅಕ್ಕನ ಇಡಿಯ ಶರೀರದೊಡನೆ ಮೇಲೆತ್ತಿದ್ದ ಕೈಗಳೆರಡೂ ಅಡಗಿಕೊಂಡವಾದರೂ ಮುಗಿದ ಹಸ್ತಗಳು ಮಾತ್ರ ಹೊರಗೆ ಕಾಣಿಸಿಕೊಂಡವು.
ಅದನ್ನೆಲ್ಲ ಕಂಡು ತಮ್ಮನಿಗೆ ಪಶ್ಚಾತ್ತಾಪವಾಯಿತು. ಅಕ್ಕನನ್ನು ಕಳೆದು ಕೊಂಡೆನೆಂದು ದಿಕ್ಕು ಮರುದನಿಗೊಡುವಂತೆ ಆಕ್ರೋಶಿಸತೊಡಗಿದನು. ಮುಂದುಗಾಣದೆ ಎತ್ತು ಎಳೆದುಕೊಂಡು ಊರದಾರಿ ಹಿಡಿದನು. ತಾಯಿ ತಂದೆಗಳ ಮುಂದೆ ಅಕ್ಕನ ಸುದ್ದಿಯನ್ನು ಏನೆಂದು ಹೇಳಲಿ – ಎಂಬ ವಿಚಾರದಲ್ಲಿಯೇ ಮುಳುಗಿದನು. ನೆಲದಲ್ಲಿ ಮುಗಿದುಹೋದ ಆ ಪವಿತ್ರಾತ್ಮಳ ಹಸ್ತಗಳೆರಡೂ ಮುಂದೆ ಎರಡು ಎಲೆಗಳಾಗಿ ಚಿಗುರಿದವು. ಒಂದು ಅಕ್ಕೆಲೆ, ಇನ್ನೊಂದು ತಮ್ಮಕ್ಕ.
ಅಂದಿನ ಆ ಅಕ್ಕೆಲೆಯೇ ಎಕ್ಕೆಲೆ ಎನಿಸಿತು. ತಮ್ಮಕ್ಕವೆ ತಂಬಾಕು ಎನಿಸಿತು. ಆ ಪವಿತ್ರಾತ್ಮಳು ಕೊಟ್ಟುಹೋದ ಎಕ್ಕೆಲೆ ತಂಬಾಕುಗಳೆರಡೂ ಅತಿಥಿಸತ್ಕಾರದಲ್ಲಿ ಹಿರಿಮೆಯಸ್ಥಾನ ಗಳಿಸಿದವು.
*****