ಯಾವ ಬೋಧೆಯಿಂದಿವನು ಬೋಧಿ ಸತ್ವನಾದಾನು?
ಯಾವ ಓದಿನಿಂದಿವನು ವಾದಾತೀತನಾದಾನು?
ಯಾವ ಚಿಲುಮೆಯಿಂದ ಇವನ ಕೊರಡು ಚಿಗುರೀತು?
ಯಾವ ಒಲುಮೆಯಿಂದ ಇವನಿಗೆ ಬಲ ಬಂದೀತು?
ಯಾವ ದಾರಿದೀಪದಿಂದ ಇವನ ಕಗ್ಗಾಡು ಬೆಳಗೀತು?
ಯಾವ ಸಾಧನೆಯಿಂದ ಇವನ ಬಾಧಕ ಭಂಗವಾದೀತು?
ಯಾವ ದುಡಿತದಿಂದ ಇವನ ದುಗುಡ ದೂರಾದೀತು?
ಯಾವ ಏಕಾಂತದಲ್ಲಿ ಇವನ ಮಂಗ ಸಂಗ ಕಳೆದೀತು?
ಯಾವ ಎಳೆಯಿಂದ ಇವನ ಹಗ್ಗ ಬಿಗಿಯಾದೀತು?
ಯಾವ ಕಳೆಯಿಂದ ಇವನ ಮರ ಅಮರವಾದೀತು?
ಯಾವ ಬೆಳೆಯಿಂದ ಇವನ ಮನೆ ತುಂಬೀತು?
ಯಾವ ಕರ್ಮದಿಂದ ಇವನ ಧರ್ಮ ರೂಪು ತೋರೀತು?
ಯಾವ ಮರ್ಮದಿಂದ ಇವನ ಮಾನ ಉಳಿದೀತು?
ಯಾವ ಗುರುವಿನಿಂದ ಇವನ ಗೌರವ ಮೆರೆದೀತು?
ಯಾವ ಕೈಯಿಂದ ಇವನ ಕಾಲು ನಡೆದಾವು?
ಯಾವ ಬೆಂಕಿಯಲ್ಲಿ ಇವನ ಕಾವು ಕುದಿದು ಪಕ್ವವಾದೀತು?
ಯಾವ ಬೇವಿಂದ ಇವನ ಬದುಕು ಸಮರಸವಾದೀತು?
ಯಾವ ವಿಷದಿಂದ ಇವನ ವಿಷಯ ತೀರೀತು?
ಯಾವ ಚಿಕ್ಕೆಯಿಂದ ಇವನ ಚೊಕ್ಕತನ ಮಿನುಗೀತು?
ಯಾವ ಬಿಕ್ಕೆಯಿಂದ ಇವನ ಜೋಳಿಗೆ ತುಂಬೀತು?
ಯಾವ ಹಂಗಿನಿಂದ ಇವನ ಹಗರಣ ಹಗುರಾದೀತು?
ಯಾವ ಪರೀಕ್ಷೆಯಲ್ಲಿ ಇವನ ಪರುಷ ದೊರೆತೀತು?
ಯಾವ ಹೊತ್ತಿಗೆಯಲ್ಲಿ ಇವನ ಗೊತ್ತುಗುರಿ ಸಿಕ್ಕೀತು?
ಯಾವ ಹೂವಿಂದ ಇವನ ಹೃದಯವರಳೀತು?
ಯಾವ ಭಾವದಿಂದ ಇವನ ಬೇರು ಬಲಿತೀತು?
ಯಾವ ಸೂಜಿಯಿಂದ ಇವನ ಗುಳ್ಳೆ ಒಡೆದೀತು?
ಯಾವ ಸಂದಿನಿಂದ ಇವನ ಬಂಧಿತ ಸತ್ವ ಚಿಮ್ಮೀತು?
ಯಾವ ಅನ್ನ ನೀರಿನಿಂದ ಇವನ ಒಡಲುರಿಯಾರೀತು?
ಯಾವ ಚುಚ್ಚಿನಿಂದ ಇವನ ರೊಚ್ಚು ಉರಿದೆದ್ದೀತು?
ಯಾವ ಶಸ್ತ್ರದಿಂದ ಇವನ ಸಂಶಯ ಛಿನ್ನವಾದೀತು?
ಯಾವ ಶಾಸ್ತ್ರದಿಂದ ಇವನ ಸ್ತರವು ವಿಸ್ತಾರವಾದೀತು?
ಇವನೊಳಗು ಮೊಳೆತು ಮೊಳಗದೆ
ತಿಳಿದು ತೊಳಗದೆ
ಗುಟ್ಟು ಗಟ್ಟಿಗೊಳ್ಳದೆ
ಇವನ ಯಾರುದ್ಧರಿಸಬೇಕು?
*****