ಅತ್ತೆಯನ್ನು ಮಾತನಾಡಿಸಿ ಬರಬೇಕೆಂದು ಅಳಿಯನು ಅತ್ತೆಯೂರಿಗೆ ಹೋದನು. ಆಕೆ ಹೆಣ್ಣು ಕೊಟ್ಟ ಅತ್ತೆ ಮಾತ್ರ ಆಗಿರದೆ, ಸೋದರತ್ತೆಯೂ ಆಗಿದ್ದಳು. ಚಿಕ್ಕಂದಿನಿಂದಲೂ ಅಳಿಯನಿಗೆ ತಿನ್ನಿಸಿ ಉಣ್ಣಿಸಿದವಳಾಗಿದ್ದಳು. ಆದರೂ ಆಕೆಯ ಕೈಬಿಗಿತ ; ಜೀನಳೇ ಆಗಿದ್ದಳು.
ಅಳಿಯಬಂದನೆಂದು ಅಕ್ಕರೆಯಿಂದ ಅತ್ತೆಯು, ಆತನ ಊಟಕ್ಕೆ ಪಾಯಸ ಮಾಡಿದಳು. ತುಪ್ಪದ ಪಾತ್ರೆ ನೋಡಿದರೆ ಅದರಲ್ಲಿ ತುಪ್ಪ ಹೆರತಿತ್ತು. ಅದನ್ನೆಲ್ಲ ಕರಗಿಸಿ, ಪಾತ್ರೆ ಬಗ್ಗಿಸಿ ಸುರುವಿದರೆ ಪಾತ್ರೆಯೊಳಗಿನ ತುಪ್ಪವೆಲ್ಲ ಗಂಗಾಳದಲ್ಲಿ ಬಿದ್ದು ಬಿಡುವುದಲ್ಲ! ಪಾತ್ರೆಯಿಂದ ತುಪ್ಪವನ್ನು ಸುರುವಿದಂತೆಯೂ ಆಗಿರಬೇಕು; ತುಪ್ಪವೂ ಕಡಿಮೆಬಿದ್ದಿರಬೇಕು – ಎನ್ನುವುದಕ್ಕೆ ಒಂದು ಯುಕ್ತಿ ತೆಗೆದಳು, ಏನಂದರೆ – ಸಣ್ಣಗಿನ ಸೂಜಿಯನ್ನು ಕಾಸಿ, ಹೆತ್ತ ತುಪ್ಪಿನಲ್ಲಿ ಚುಚ್ಚಿ ಪಾತ್ರೆ ಬಗ್ಗಿಸಿದರೆ, ಸೂಜಿಯಿಂದ ಕರಗಿದಷ್ಟೇ ಸಣ್ಣಗಿನ ಧಾರೆಯಾಗಿ ತಾಬಾಣದಲ್ಲಿ ಸುರಿಯುವದು. ಅದಕ್ಕಾಗಿ ಸೂಜಿಯನ್ನು ಒಲೆಯ ಬಿಸಿಬೂದಿಯಲ್ಲಿ ತುರುಕಿದಳು.
“ಒಳಗೆ ನೋಡುತ್ತಿರಪ್ಪ ಬೆಕ್ಕುಗಿಕ್ಕು. ನಾನೊಂದು ಕೊಡ ಸಿಹಿ ನೀರು ಎಳೆದುಕೊಂಡು ಬರುವೆನು” ಎಂದು ಹೇಳಿ ಅತ್ತೆ ಕೊಡ ತೆಗೆದುಕೊಂಡು ಬಾವಿಗೆ ಹೋದಳು.”
ಚಿಕ್ಕಂದಿನಿಂದಲೂ ಪರಿಚಯದ ಮನೆಯೇ ಆಗಿದ್ದರಿಂದ, ಅತ್ತೆ ತನಗಾಗಿ ಏನೇನು ಅಡಿಗೆ ಮಾಡಿದ್ದಾಳೆ, ನೋಡಬೇಕೆಂದು ಅಡಿಗೆ ಮನೆಯನ್ನು ಹೊಕ್ಕು ನೋಡಿದರೆ ಪಾಯಸ ಸಿದ್ಧವಾಗಿದೆ. ತುಪ್ಪದ ಪಾತ್ರೆ ಹೆತ್ತ ತುಪ್ಪದಿಂದ ತುಂಬಿ ಒಲೆಯಿಂದ ತುಸು ದೂರ ಇದೆ, ಒಲೆಯಲ್ಲಿ ಒತ್ತಿದ ಸೂಜಿಯ ಅರ್ಧಭಾಗವು ಹೊರಗೆ ಕಾಣುತ್ತಿತ್ತು. ಅದನ್ನೆಲ್ಲ ಕಂಡು ಅಳಿಯನಿಗೆ ಸಂಶಯವೇ ಬಂತು. ಅತ್ತೆ ಸಾಕಷ್ಟು ಜಿಪುಣೆಯೆನ್ನುವುದನ್ನೂ ಆತನು ಎಂದೋ ಅರಿತಿದ್ದನು. ತುಪ್ಪದ ಪಾತ್ರೆಯನ್ನು ಒಂದರೆಕ್ಷಣ ಕಿಚ್ಚದ ಮೇಲಿಟ್ಟು ಕೆಳಭಾಗವು ಕರಗುವಂತೆ ಮಾಡಿ, ಅದನ್ನು ಮತ್ತೆ ಮೊದಲಿನ ಸ್ಥಳದಲ್ಲಿಯೇ ಇರಿಸಿ ಹೊರಗೆ ಬಂದು ಕುಳಿತನು.
ಅತ್ತೆ ಬಾವಿಯಿಂದ ನೀರು ತಂದ ಬಳಿಕ ಅಳಿಯನನ್ನು ಊಟಕ್ಕೆ ಎಬ್ಬಿಸಿದಳು. ಮಣೆ ಹಾಕಿ ತಾಬಾಣ ಮುಂದಿಟ್ಟು ಪಾಯಸವನ್ನು ಎಡೆಬಡಿಸಿ, ತುಪ್ಪದ ಪಾತ್ರೆಯಲ್ಲಿ ಕಾದಸೂಜಿ ಚುಚ್ಚಿ ತಂದು ಪಾತ್ರೆಯನ್ನು ಬಗ್ಗಿಸಿ ಧಾರಾಳವಾಗಿ ನೀಡಿದಂತೆ ಮಾಡುವಷ್ಟರಲ್ಲಿ ಇಡಿಯ ತುಪ್ಪವು ಅಳಿಯನ ತಾಬಾಣದಲ್ಲಿ ಜಿಗಿದು ಬಿಟ್ಟಿತು. ಅದನ್ನು ಕಂಡು ಅತ್ತೆಯ ಹೊಟ್ಟೆ ಕಳವಳಿಸಿತು. ಇದ್ದಷ್ಟು ತುಪ್ಪವೆಲ್ಲ ಅಳಿಯನ ಪಾಲಾಗಿಬಿಟ್ಟರೆ, ನನ್ನ ಊಟಕ್ಕೇನು ಗತಿ – ಎಂದು ತಳಮಳಿಸತೊಡಗಿದಳು. ಆದರೆ ಆಕೆಗೆ ಕೂಡಲೇ ಒಂದು ಯುಕ್ತಿ ಹೊಳೆಯಿತು. ಏನಂದರೆ – “ಏನಪ್ಪ ಅಳಿಯ ದೇವರು, ನನ್ನ ಕಣ್ಣ ಮುಂದೆ ಬೆಳೆದ ಕೂಸು ನೀನು! ಒಂದೇ ತಾಬಾಣದಲ್ಲಿ ಕೂಡಿಕೊಂಡು ಉಂಡಿದ್ದೇವೆ ನಾವು. ನೀನು ದೊಡ್ಡವನಾಗಿರಬಹುದು. ಆದರೆ ನನಗೆ ನೀನು ಚಿಕ್ಕವನೇ. ಈಗಲೂ ಕೂಡಿಕೊಂಡೇ ಉಂಡರೆ ನನಗೆ ಸಮಾಧಾನ” ಎಂದವಳೇ ಅಳಿಯನ ಮುಂದೆ ಸರಿದು ಕುಳಿತು, ಆತನ ತಾಬಾಣದಲ್ಲಿಯೇ ಉಣ್ಣ ತೊಡಗಿದಳು.
ಅಳಿಯನಿಗೂ ಅದೇನು ಹೊಸ ಸಂಗತಿಯಲ್ಲ ‘ಆಗಲಿ’ ಎಂದು ತಾಬಾಣವನ್ನು ಮುಂದಕ್ಕೆ ಸರಿಸಿದನು.
ಕರಗಿದ ತುಪ್ಪ ತನ್ನ ಕಡೆಗೆ ಹರಿದು ಬರುವಂತೆ ಅಭಿನಯ ಮಾಡಬೇಕಾದರೆ. ಅದಕ್ಕೆ ತಕ್ಕ ಭಾಷಣ ಬೇಡವೇ ? ಅದನ್ನು ಆರಂಭಿಸಿದಳು ಅತ್ತೆ.
“ಅಳಿಯನೆಂದರೆ ಅಳಿಯ ನೀನು. ಅತ್ತೆಗೊಂದು ಸೀರೆ ಅಂದೆಯಾ, ಒಂದು ಕುಬಸ ಅಂದೆಯಾ? ಹಬ್ಬಕ್ಕೆ ಕರೆದೊಯ್ದೆಯಾ, ಹುಣ್ಣಿವೆಗೆ ಹೇಳಿಕಳಿಸಿದೆಯಾ? ಹಣ್ಣು ಆದಾಗ ಕೊಟ್ಟು ಕಳಿಸಿದೆಯಾ, ಹಯನು ಆದಾಗ ಹೊರಿಸಿಕಳಿಸಿದೆಯಾ? ಹೆ೦ಡತಿಯ ಮೈಮೇಲೆ ವಸ್ತು ಅಂದೆಯಾ, ಒಡವೆ ಅಂದೆಯಾ?”
ಬಾಯಿಂದ ಒಂದೊಂದು ವಾಕ್ಯಹೊರಬಿದ್ದಂತೆ, ತಾಬಾಣದ ಪಾಯಸದೊಳಗೆ ಬೆರಳಾಡಿಸಿ, ಕಾಲುವೆಮಾಡಿ ತುಪ್ಪ ಹರಿದುಬರುವಂತೆ ಮಾಡಿಕೊಳ್ಳತೊಡಗಿದಳು.
ಅಳಿಯನಿಗೂ ಆಕೆಯ ಹೊಲಬು ತಿಳಿಯಿತು. ಅವನೂ ಆಕೆಯ ಮಾತಿಗೆ ಉತ್ತರ ಕೊಡುತ್ತ ತನ್ನತ್ತ ತುಪ್ಪ ಉಳಿದುಕೊಳ್ಳುವಂತೆ ಎತ್ತುಗಡೆ ನಡೆಸಿದನು.
“ಅತ್ತೇ, ನೀನು ಹೀಗೆ ಮಾತಾಡುವದನ್ನು ಕಂಡು ನನ್ನ ಹೊಟ್ಟೆಯಲ್ಲಿ ಹೀಗೆ ಕಿವುಚಿದಂತಾಗುತ್ತದೆ, ನೋಡವ್ವ” ಎನ್ನುತ್ತ ಇಡಿಯ ಹುಗ್ಗಿಯಲ್ಲಿ ಆ ತುಪ್ಪವೆಲ್ಲ ಕಲೆಯುವಂತೆ ಕಿವುಚತೊಡಗಿದನು. ಅದೆಲ್ಲ ಮುಗಿದ ಬಳಿಕ ಅಳಿಯ ಹೇಳಿದನು – “ಅತ್ತೇ, ನಿನ್ನ ಕಡೆಯ ಪಾಯಸವನ್ನು ನೀನುಣ್ಣು; ನನ್ನ ಕಡೆಗಿದ್ದ ಪಾಯಸವನ್ನು ನಾನುಣ್ಣುತ್ತೇನೆ.”
ಹೀಗೆ ಯುಕ್ತಿ-ಪ್ರತಿಯುಕ್ತಿಗಳಿಂದ ಅಳಿಯ-ಅತ್ತೆಯರು ಒಂದೇ ತಾಬಾಣದಲ್ಲಿ ಕೂಡಿಕೊಂಡು ಉಂಡು ತೃಪ್ತಿಪಟ್ಟರು.
*****