ಕೆಲವು ವರ್ಷಗಳ ಹಿಂದೆ ರೇಲ್ವೇಸ್ಟೇಷನಿನ ಕ್ಯಾಂಟೀನಿನಲ್ಲಿ
ಚಹಾ ಕುಡಿಯುತ್ತಿರುವಾಗ ಬಟ್ಟಲಿನಲ್ಲಿ
ಗಾಂಧಿ ಟೋಪ್ಪಿಗೆ ಕಂಡು ಚಕಿತನಾದೆ. ಆಗ
ಆ ಕುರಿತು ಆಲೋಚಿಸಲು ಸಮಯವಿರಲಿಲ್ಲ.
ಅವಸರವಸರವಾಗಿ ಮಂದಿಯ ಮಧ್ಯೆ ಓಡೋಡಿ
ಗಾಡಿ ಹತ್ತಿದೆ. ನಿಂತವರ ನಡುವೆ ನಿಂತೆ.
ಮೊದಮೊದಲು ನಿಧಾನಗತಿ
ಮತ್ತೆ ಉಕ್ಕಿಗೆ ಉಕ್ಕು ಸಂಧಾನಶ್ರುತಿ
ನನ್ನ ಮಸ್ತಿಷ್ಕಕ್ಕೆ ಹೊಕ್ಕು ಹೊರಟು ಚಕ್ರಾರಪಂಕ್ತಿ
ಯುಗ ಮುಗುಚುತ್ತದೆ
ಬೆರಳುಗಳು ಬೇರುಗಳಾಗಿ ಒಡೆಯುತ್ತವೆ
ಕಣ್ಣಗುಡ್ಡೆಗಳು ನಕ್ಷತ್ರಗಳಾಗಿ ಸಿಡಿಯುತ್ತವೆ
ಎರಡೂ ಕೊನೆಗಳಲ್ಲಿ ಬಹುಶಃ ನಾವು ಸಂಧಿಸುತ್ತೇವೆ.
ಜನರ ಮತ್ತು ದೈವಗಳ ನಡುವೆ
ಆರಿಸುವುದು ಕಷ್ಟ
ನಿನಗೆ ಮನುಷ್ಯರ ಹಿಂದಿನ ದೇವರು ಬೇಕು
ನನಗೆ ದೇವರ ಮುಂದಿನ ಮನುಷ್ಯರು ಮಾತ್ರ ಸಾಕು
ನೀನು ನೋಖಾಲಿಯ ಹಿಂದೆ
ನಾನು ಢಾಕ್ಕಾದ ಮುಂದೆ
ನಿನಗೆ ರಾಮನ ಬಳಿಗೆ ಐದೇ ನಿಮಿಷ
ನನಗೆ ಆನ್ವೇಷಣೆಯ ಅನೇಕ ವರುಷ
ದೇವರನ್ನು ಕಳೆದುಕೊಂಡ ನಾನು
ಈ ಭೂಮಿಯಲ್ಲಿ ನೆಲೆಯಿಲ್ಲದೆ ಅಲೆಯುತ್ತಿದ್ದರೂ ಬಿಡದೆ
ಅಕ್ಟೋಬರ್ ಎರಡರಂತೆ ಮತ್ತೆ ಮತ್ತೆ ನನ್ನಲ್ಲಿ
ಹುಟ್ಟುತ್ತಿರುವೆಯಲ್ಲಾ, ಗಾಂಧಿ!
ಮಳೆ ಬಿಸಿಲಿಗೆ ನಿಂತ ನಿನ್ನ ನೂರಿನ್ನೂರು ಪ್ರತಿಮೆಗಳಂತೆ
ನಾನೂ ಮಾಸುತ್ತೇನೆ
ಯಥೇಚ್ಫ ಮೌನದಲ್ಲಿ
ಬುದ್ಧಭಗವಾನನ ಕಣ್ಣಿನಲ್ಲಿ
*****