ಮನಸ್ಸಿಗೆ ನಾಟುವ ಪ್ರತೀಕಗಳನ್ನು ಬಯಸುವವರಿಗೆ
ಅರ್ಧ ಓದಿ ಬೋರಲು ಹಾಕಿದ ಪುಸ್ತಕ,
ಮೇಜಿನ ಮೇಲೆ ತೆಗೆದಿಟ್ಟ ಟೆಲಿಫೋನು,
ಬಟವಾಡೆಯಾಗದೆ ಬಂದ ಪತ್ರ-ಏನೂ
ಅನಿಸುವುದಿಲ್ಲ.
ಬೃಹತ್ತಾದ ಪ್ರತಿಮೆಗಳನ್ನು ಹುಡುಕಿಕೊಂಡು ಹೋದವರು
ರಸ್ತೆ ಚೌಕಗಳಲ್ಲಿ ಮೇಲೆ ನೋಡುತ್ತ ನಿಂತರು.
ಕೆಲವರು ಏನು ಧ್ಯಾನಿಸುತ್ತಾರೋ ಅದೇ
ಆಗಬಲ್ಲರು.
ಮಹಾದಾರ್ಶನಿಕರು ಮಹಾದರ್ಶನಗಳನ್ನು ಕೊಡುವರು.
ಕೆಲವು ದೃಷ್ಟಿಗೆ ಸಣ್ಣ ವಸ್ತುಗಳು ಬೀಳಲಾರವು.
ಉದಾಹರಣೆಗೆ: ಈ ಹಿಂದೆ ಹೇಳಿದ
ಅರ್ಧ ಓದಿ
ಬೋರಲು ಹಾಕಿದ ಪುಸ್ತಕ ಅಥವ ಹೊತ್ತಲ್ಲದ ಹೊತ್ತು
ಕಾಮಾಕ್ಷಮ್ಮನ ಹಿತ್ತಿಲಲ್ಲಿ ಆರಲು ಹಾಕಿದ ಕಾಚ-
ಸಣ್ಣ ಸಣ್ಣ ಕವಿಗಳು ಸಣ್ಣ ಸಣ್ಣ ಕವಿತೆಗಳನ್ನು
ಬರೆಯುತ್ತಾರೆ.
*****