ನೆನೆಯದೆ ಇರುವಾಗ ಬರುತ್ತಾನೆ ಕಿಟ್ಟುಣ್ಣಿ
(ಅವನ ಆತ್ಮಕ್ಕೆ ಶಾಂತಿಯಿರಲಿ!) ತನ್ನ
ಜನರೊಂದಿಗೆ ಸರಂಜಾಮುಗಳೊಂದಿಗೆ, ಬಂದು
ಶಾಲೆಯಂಗಳದಲ್ಲಿ ಹೂಡುತ್ತಾನೆ ಗೂಟ.
ಡೇರೆಯಿಲ್ಲದ ಸರ್ಕಸ್ಸು, ಕಿಟ್ಟುಣ್ಣಿ ಸರ್ಕಸ್ಸು
ನಿಜವಾದ ಸರ್ಕಸ್ಸಿಗಿಂತ ಸ್ವಲ್ಪ ಕೆಳಗೆ
ಡೊಂಬರಾಟಕ್ಕಿಂತ ಸ್ವಲ್ಪ ಮೇಲೆ-ಯಾವಾಗಲೂ
ಮಧ್ಯಂತರ ಸ್ಥಿತಿಯಲ್ಲಿ. ಆನೆ ಸಿಂಹಗಳಿಲ್ಲ
ಒಂದೆರಡು ನಾಯಿಗಳಿವೆ. ಉಳಿದೆಲ್ಲವನ್ನೂ
ಅವನ ಚುರುಕಾದ ಹುಡುಗ-ಹುಡುಗಿಯರೆ
ಮಾಡಬೇಕು. ಸಿದ್ಧವಾಯಿತು ರಂಗ ಇದೀಗ
ಸುರುವಾಯಿತು ಆಟ ಕಂಬಿಯ ಮೇಲೆ
ಒಬ್ಬಳು ಚಂದದ ಹುಡುಗಿ ನಡೆಯುವುದರಿಂದ
ಸುರು. ಆಕಳಿಸುವ ಡೋಲಿನವನು
ಬಡಿಯುತ್ತಲೇ ಇರುತ್ತಾನೆ. ತಮಾಷೆಯ ಟೊಪ್ಪಿ
ಧರಿಸಿದ ಹಾಸ್ಯಗಾರ ನಗಿಸುತ್ತಲೇ ಇರುತ್ತಾನೆ.
ಸುತ್ತಲೂ ಸೇರಿದ ನಾವು ಇಷ್ಟು ಚಂದದ
ಹುಡುಗಿರಯನ್ನು ಕಂಡದ್ದಿಲ್ಲ. ಹೀಗೆ ಬರೇ
ಚಡ್ಡಿಯಲ್ಲಿ ಕಂಡದ್ದಂತೂ ಇಲ್ಲವೇ ಇಲ್ಲ.
ನಮ್ಮಲ್ಲಿದ್ದ ನಾಣ್ಯಗಳನ್ನೆಲ್ಲ ಕೊಟ್ಟುಬಿಡುತ್ತೇವೆ.
ಕಿಟ್ಟುಣ್ಣಿಯ ಎತ್ತಿನ ಗಾಡಿಗಳು ನಮ್ಮೂರು ಬಿಡುವಾಗ
ನಾವು ನೋಡುತ್ತಲೇ ಇರುತ್ತೇವೆ. ಅರ್ಧಗಂಟೆಯ ಮೊದಲು
ನಮ್ಮ ಮನಸೆಳೆದ ಹುಡುಗಿಯರೀಗ ಯಾಕೆ
ಚಿಂದಿ ಬಟ್ಟೆಗಳನ್ನು ತೊಟ್ಟಿದ್ದಾರೋ ಅರ್ಥವಾಗುವುದಿಲ್ಲ.
*****