ಮಿಷೇಲನ ಮನೆಯಲ್ಲಿ ಮಧ್ಯಾಹ್ನದ ಊಟ ಮುಗಿಸಿ, ಅವನ ಏರ್‌ಕಂಡೀಶನ್ಡ್ ಕಾರಲ್ಲಿ ತುಲೋರ್ಸ್ ವಿಮಾನ ನಿಲ್ದಾಣಕ್ಕೆ ತಲುಪಿದಾಗ, ನಮ್ಮ ತಂಡದವರ ಪೈಕಿ ಯಾರೊಬ್ಬರೂ ಅಲ್ಲಿರಲಿಲ್ಲ. ಇಪ್ಪತ್ತು ನಿಮಿಷಗಳ ಬಳಿಕ ಹೆಬ್ಬಾರರು ಜಾಕ್‌ಗಿಬೇ ಜತೆ ಕಾಣಿಸಿಕೊಂಡರು. ಎಲೈನ್ ಮತ್ತು ಗುರುವನ್ನು ಜುವಾನ್ ಬುಯೋ ತನ್ನ ಕಾರಲ್ಲಿ ಕರೆತಂದ. ಬೇರಾವುದೋ ಕೆಲಸಕ್ಕೆ ಹಂಬರ್ಗ್ ಕೂಡಾ ಅಲ್ಲಿಗೆ ಬಂದಿದ್ದ. ‘ತಾಂತ್ರಿಕ ಅಡಚಣೆಯಿಂದಾಗಿ ಲಂಡನ್ನಿಗೆ ಹೋಗುವ ವಿಮಾನ ಎರಡು ಗಂಟೆ ತಡವಾಗಿ ಹೊರಡಲಿದೆ’ ಎನ್ನುವ ಪ್ರಕಟಣೆ ಕಾಣಿಸಿಕೊಂಡಾಗ ನಾವು ಮುಖ ಮುಖ ನೋಡಿಕೊಳ್ಳುವಂತಾಯಿತು. ನಾನು ಮಿಷೇಲನೊಡನೆ ‘ನೀನ್ಯಾಕೆ ಸಮಯ ವ್ಯರ್ಥ ಮಾಡಬೇಕು, ತುಂಬಾ ಬ್ಯುಸಿ ಮನುಷ್ಯ ನೀನು. ನಮಗಿದು ಅನಿವಾರ್ಯ. ನೀನು ಹೋಗು’ ಅಂದೆ. ಅವನದಕ್ಕೆ ಒಪ್ಪಲಿಲ್ಲ. ‘ಇನ್ನು ನಮ್ಮ ನಿಮ್ಮ ಭೇಟಿ ಯಾವತ್ತೋ. ಸ್ವಲ್ಪ ಹೊತ್ತು ನಿಮ್ಮೊಡನೆ ಕಾಲ ಕಳೆಯುತ್ತೇನೆ. ಫ್ರೆಂಚರ ಬಗ್ಗೆ ನಿನಗೆ ಏನನಿಸಿತು ಎಂದು ಹೇಳಬಹುದಾ?’ ಎಂದು ಕೇಳಿದ. ‘ಮಹಾರಾಯಾ. ಇದು ಅಷ್ಟು ಸುಲಭವಾಗಿ ಉತ್ತರಿಸುವ ಪ್ರಶ್ನೆಯಲ್ಲ’ ಎಂದೆ. ಅಷ್ಟು ಹೊತ್ತಿಗೆ ಜುವಾನ್ ಬುಯೋ ಮಿಷೇಲನನ್ನು ಕರೆದು ಹೆಬ್ಬಾರರ, ಎಲೈನಳ ಮತ್ತು ಗುರುವಿನ ಪರಿಚಯ ಮಾಡಿಸಿದ. ಮಿಷೇಲ್ ಅವರೊಡನೆ ಸಂಭಾಷಿಸುತ್ತಿರುವಾಗ ಅವನ ಪ್ರಶ್ನೆ ನನ್ನನ್ನು ಕಾಡತೊಡಗಿತು.
ನಾವಿರೋದೇ ಹೀಗೆ
‘ಫ್ರೆಂಚರು ನೋಡಲು ಹೇಗಿದ್ದಾರೆ?’ ಎಂದು ಕೇಳಿದರೆ ಖಚಿತವಾಗಿ ‘ಹೀಗೆಯೇ’ ಎಂದು ಹೇಳುವುದು ಕಷ್ಟ. ಬಹುತೇಕ ಫ್ರೆಂಚರು ಎತ್ತರಕ್ಕೆ, ಬೆಳ್ಳಗೆ ಮತ್ತು ಕೆಂಪಗೆ ಇರುತ್ತಾರೆ. ಅವರ ಕೆನ್ನೆಗಳ ಆಕರ್ಷಕ ಕೆಂಬಣ್ಣಕ್ಕೆ ಅವರು ಸದಾ ಬಳಸುವ ಕೆಂಪು ವೈನೇ ಕಾರಣವಿರಬಹುದು. ಈಗಿನ ಯುವಜನಾಂಗ ವೈನಿನಿಂದ ಬಿಯರ್‌ನತ್ತ ತುಡಿಯುತ್ತಿರುವುದು ಹಿರಿಯ ಫ್ರೆಂಚರಿಗೆ ಗಾಬರಿಯ ವಿಷಯ. ಯುವಜನಾಂಗ ಬಿಯರ್ ಕುಡಿದು ಹಾಳಾಗುತ್ತಿರುವುದು ಒಂದು ಚಿಂತೆಯಾದರೆ, ವೈನ್ ಉತ್ಪಾದನೆಯೇ ಆರ್ಥಿಕತೆಯ ಬಹುಮುಖ್ಯ ಉದ್ಯಮವಾದುದರಿಂದ, ವೈನಿನ ಬೇಡಿಕೆಯ ಕುಸಿತದಿಂದ ಅರ್ಥವ್ಯವಸ್ಥೆಯಲ್ಲಿ ಉಂಟಾಗಬಹುದಾದ ಅಸ್ಥಿರತೆಯ ಚಿಂತೆ ಇನ್ನೊಂದೆಡೆ.
ಚಳಿಗಾಲದಲ್ಲಿ ಫ್ರೆಂಚರ ಡ್ರೆಸ್ಸಲ್ಲಿ ವೈವಿಧ್ಯವಿರುವುದಿಲ್ಲ. ಗಾಢನೀಲಿ ಅರ್ಥವಾ ಅಚ್ಚಗಪ್ಪು ಬಣ್ಣದ ಪ್ಯಾಂಟು, ಲಾಂಗ್ ಕೋಟು ಹಾಕಿ ಲಟ್ಟನೆ ನಡೆಯುವ ಫ್ರೆಂಚರನ್ನು ದೂರದಿಂದಲೇ ಹೆಣ್ಣೋ ಗಂಡೋ ಎಂದು ಖಚಿತವಾಗಿ ಹೇಳುವುದು ಸ್ವಲ್ಪ ಕಷ್ಟವೇ. ಆ ಡ್ರೆಸ್ಸಲ್ಲಿ ಎಂತಹ ಫ್ರೆಂಚ್ ಹೆಣ್ಣೂ ನಮ್ಮ ಕಣ್ಣಿಗೆ ಅಪ್ಪಟ ಅಪ್ಸರಸ್ತ್ರೀಯಂತೆ ಕಾಣುತ್ತಾಳೆ. ಬೇಸಿಗೆ ಬಂತೆಂದರೆ ಎಲ್ಲರೂ ಕನಿಷ್ಠ ಡ್ರೆಸ್ಸು ಧರಿಸುತ್ತಾರೆ. ಹೆಂಗಸರು ಚೆಲುವು ಇರುವುದೇ ಪ್ರದರ್ಶನಕ್ಕೆ ಎಂದು ಭಾವಿಸುತ್ತಾರೆ. ‘ಜೀವನ ಇರುವುದೇ ಅನುಭವಿಸುವುದಕ್ಕೆ. ಅವಕಾಶ ಸಿಕ್ಕಾಗ ಅನುಭವಿಸು’ ಎಂಬ ಅವರ ಜೀವನ ತತ್ವಕ್ಕೆ ಗಂಡು ಹೆಣ್ಣೆಂಬ ಭೇದವಿಲ್ಲ.
ಯುರೋಪಿನ ಅನೇಕ ರಾಷ್ಟ್ರಗಳೊಡನೆ ಹೋಲಿಸಿದರೆ ಫ್ರಾನ್ಸ್ ಸಣ್ಣದೇಶವೇನಲ್ಲ. 547 ಲಕ್ಷ ಚದರ ಕಿ.ಮೀ. ವಿಸ್ತೀರ್ಣದ ಫ್ರಾನ್ಸ್ ರಶಿಯಾವನ್ನು ಬಿಟ್ಟರೆ ಯುರೋಪಿನ ಅತ್ಯಂತ ದೊಡ್ಡ ದೇಶ. ರಶಿಯಾ, ಏಷ್ಯಾ ಮತ್ತು ಯುರೋಪು ಎರಡೂ ಖಂಡಗಳಲ್ಲಿ ಹರಡಿಕೊಂಡಿರುವ ದೇಶವಾದುದರಿಂದ ಫ್ರಾನ್ಸನ್ನೇ ಯುರೋಪಿನ ಅತ್ಯಂತ ದೊಡ್ಡ ದೇಶ ಎನ್ನಲಾಗುತ್ತದೆ. ಸಮೃದ್ಧಿ ಫ್ರಾನ್ಸಿನ ಜನರು ಮೃದು ಹೃದಯಿಗಳು. ಮನೆಯ ಕೆಲಸದಾಕೆಯನ್ನು ಕೂಡಾ ‘ಬೋನ್ಸೂರ್’ ಎಂದು ಆತ್ಮೀಯತೆಯಿಂದ ಸ್ವಾಗತಿಸಿ ಚುಂಬಿಸುವಷ್ಟು ವಿನಯವಂತರು. ಏನನ್ನಾದರೂ ಕೇಳುವಾಗ ‘ಸಿಲ್‌ವು ಪ್ಲೇ’ (ದಯವಿಟ್ಟು) ಎಂದು ಸೇರಿಸುತ್ತಾರೆ. ಊಟಕ್ಕೆ ಮೊದಲು ‘ಬೋನಪಿಟಿ’ (ಚೆನ್ನಾಗಿ ಹಸಿವಾಗಲಿ) ಎಂದೂ, ಮದ್ಯಪಾನಕ್ಕೆ ಮೊದಲು ‘ಅವಾತ್ರಸಾಂತೆ’ (ನಿನ್ನ ಆರೋಗ್ಯಕ್ಷ್ಕಾಗಿ) ಎಂದೂ ಹಾರೈಸುತ್ತಾರೆ. ವಿದಾಯ ಹೇಳಬೇಕಾದ ಸಂದರ್ಭದಲ್ಲಿ ‘ಅವ್ಪ’ (ಪುನಃ ಭೇಟಿಯಾಗೋಣ) ಎನ್ನುತ್ತಾರೆ. ಹೆದ್ದಾರಿಗಳ ಸುಂಕದಕಟ್ಟೆಗಳಲ್ಲಿ ಸುಂಕವಸೂಲಿ ಮಾಡುವವನೂ ‘ಅವ್ಪ’ ಎಂದು ಹೇಳಲು ಮರೆಯುವುದಿಲ್ಲ. ಸುಂಕ ವಸೂಲಿ ಮಾಡುವಲ್ಲಿ ಯಂತ್ರಗಳಿದ್ದರೆ ಚೀಟಿ ತೂರಿಸಿ ಗುಂಡಿ ಒತ್ತಿದಾಗ, ಗೇಟು ತೆಗೆದುಕೊಂಡು, ಆ ಯಂತ್ರ ‘ಅವ್ಪ’ ಎಂದು ಹಾರೈಸುತ್ತದೆ. ಸುಂಕದವನ ಮುಂದೆ ಸುಖ ದುಃಖ ಹೇಳಿಕೊಂಡಂತೆ’ ಎಂಬ ಗಾದೆ ಆಗ ನೆನಪಾಗುತ್ತದೆ.
ಕನ್ನಡಿ ರಸ್ತೆಗಳು : ಫ್ರಾನ್ಸಿನ ಅಭಿವೃದ್ಧಿ ಕಣ್ಣಿಗೆ ರಾಚುವಂತೆ ಕಾಣುವುದು ಅದರ ಸಂಚಾರ ವ್ಯವಸ್ಥೆಯಲ್ಲಿ. ಹೆದ್ದಾರಿಗಳಲ್ಲಿ ನಾಲ್ಕು ಸಾಲುಗಳಲ್ಲಿ ವಾಹನಗಳು ಓಡುವ ವ್ಯವಸ್ಥೆ. ಕೆಲವೆಡೆ ಆರು ಸಾಲುಗಳೂ ಇರುತ್ತವೆ. ವಿಶಾಲವಾದ ರಸ್ತೆ, ರಸ್ತೆ ವಿಭಾಜಕಗಳು, ವೃತ್ತಗಳು, ಸಿಗ್ನಲ್ ವ್ಯವಸ್ಥೆಗಳು, ಕೈಕೊಡುವ ವಾಹನಗಳನ್ನು ನಿಲ್ಲಿಸಲು ನಿರ್ದಿಷ್ಟ ಸ್ಥಳಗಳು. ಹಾಗಾಗಿ ಫ್ರಾನ್ಸಿನ ಹೆದ್ದಾರಿಗಳಲ್ಲಿ ಗಂಟೆಗೆ 120 ರಿಂದ 180 ಕಿ.ಮೀ. ವೇಗದಲ್ಲಿ ವಾಹನಗಳು ಓಡಿದರೂ ಅಪಘಾತವಾಗುವುದು ತೀರಾ ಕಡಿಮೆ. ಆರು ಲೇನ್‌ಗಳ ಹೆದ್ದಾರಿಯಲ್ಲಿ 90 ವರ್ಷದ ದಾಟಿದ ವೃದ್ಧರೂ ಗಂಟೆಗೆ 150 160 ಕಿ.ಮೀ. ವೇಗದಲ್ಲಿ ಕಾರು ಓಡಿಸುತ್ತಾರೆ. ರಸ್ತೆಯಲ್ಲಿ ಕೆಲವೆಡೆ ಸ್ಪೀಡ್ ಮಿತಿಯನ್ನು ಸೂಚಿಸುವ ಫಲಕಗಳಿರುತ್ತವೆ. ಫಲಕಗಳಲ್ಲಿ ಸೂಚಿತವಾದ ಮಿತಿಯನ್ನು ಮೀರಿದರೆ ವಾಹನದಿಂದ ದಡ್‌ದಡ್ ಸದ್ದು ಕೇಳಿಸುತ್ತದೆ. ಆಗ ದಿಢೀರನೆ ಎಲ್ಲಿಂದಲೋ ಪ್ರತ್ಯಕ್ಷನಾದ ನೀಲಿ ಯೂನಿಫಾರಮ್ಮಮಿನ ಪೋಲೀಸು ನಿರ್ಧಾಕಿಣ್ಯವಾಗಿ ದಂಡ ವಸೂಲಿ ಮಾಡಿಬಿಡಬಹುದು.
ನಗರಗಳಲ್ಲಿ ಬಿಡಿ, ಪುಟ್ಟ ಪಟ್ಟಣ ಪ್ರದೇಶಗಳಲ್ಲೂ ವಿಶಾಲವಾದ ಪುಟ್ಟ ಪಥಗಳಿರುವುದು (Foot Path) ಫ್ರಾನ್ಸಿನ ವೈಶಿಷ್ಟ್ಯ. ಭಾರತದಲ್ಲಿ ಡ್ರೈವರ್, ವಾಹನದ ಬಲಪಾರ್ಶ್ವದಲ್ಲಿ ಕೂತು ರಸ್ತೆಯ ಎಡಬದಿಯಲ್ಲಿ ವಾಹನ ಚಲಾಯಿಸುತ್ತಾನೆ. ಇದು ಇಂಗ್ಲೀಷರಿಂದ ಬಳುವಳಿಯಾಗಿ ಬಂದ ಕ್ರಮ. ಬ್ರಿಟನ್ನಿನಲ್ಲಿ ಇದೇ ಕ್ರಮ ಈಗಲೂ ಉಳಿದುಕೊಂಡಿದೆ. ನಾವು ಕೂಡಾ ಉಳಿಸಿಕೊಂಡಿದ್ದೇವೆ. ಆದರೆ ಬ್ರಿಟನ್ನನ್ನು ಹೊರತುಪಡಿಸಿ ಇಡೀ ಯುರೋಪಿನಲ್ಲಿ, ಚಾಲಕ ವಾಹನದ ಎಡಪಾರ್ಶ್ವದಲ್ಲಿ ಕೂತು ರಸ್ತೆಯ ಬಲಬದಿಯಲ್ಲಿ ವಾಹನ ಚಲಾಯಿಸುತ್ತಾನೆ. ಅದಕ್ಕಾಗಿ ಫ್ರೆಂಚರು ‘ಇಡೀ ಯುರೋಪಿಗೆ ಒಂದು ದಾರಿಯಾದರೆ, ಬ್ರಿಟನ್ನಿಗೆ ಬೇರೆಯೇ ಒಂದು ದಾರಿ. ಯಾವುದು ಯುರೋಪಿನಲ್ಲಿ ಸರಿಯೋ, ಅದು ಬ್ರಿಟನಿನ್ನಲ್ಲಿ ತಪ್ಪು. ಆ ಇಂಗ್ಲೀಷರು ತಪ್ಪು ಹಾದಿಯಲ್ಲಿ ವಾಹನ ಓಡಿಸುವ ಜನ’ ಎಂದು ಇಂಗ್ಲೀಷರ ಬಗ್ಗೆ ಅಸಹನೆಯನ್ನು ಸೂಚಿಸುತ್ತಾರೆ. ಪರ್ಯಾಯವಾಗಿ ಭಾರತೀಯರ ಬಗ್ಗೆಯೂ! ಫ್ರಾನ್ಸಿನಲ್ಲಿ ನಾವಿದ್ದಷ್ಟು ಕಾಲ ಹೆಚ್ಚು ಕಡಿಮೆ ಪ್ರತಿದಿನ ಈ ಮಾತುಗಳನ್ನು ಒಬ್ಬರಲ್ಲ ಒಬ್ಬರ ಬಾಯಿಯಿಂದ ಕೇಳಿದ್ದೇವೆ.
ಫ್ರಾನ್ಸಿನಲ್ಲಿ ರಿಕ್ಷಾಗಳಿಲ್ಲ. ಇತ್ತೀಚೆಗೆ ಯುವ ಜನಾಂಗ,ದ್ವಿಚಕ್ರ ವಾಹನಗಳಿಗೆ, ಅದರಲ್ಲೂ ಮುಖ್ಯವಾಗಿ ಗುಡುಗಿನಂತೆ ಸದ್ದು ಹೊರಡಿಸುವ ಹೋಂಡಾ ಬೈಕಿಗೆ ಒಲಿಯುತ್ತಿದ್ದಾರೆ. ಈ ಹೋಂಡಾ ಬೈಕುಗಳಿಗೆ ಕೆಲವರು ಹಿಂಬದಿಯಲ್ಲಿ ಟ್ರೈಲರ್ ಸಿಕ್ಕಿಸಿ ಅದರಲ್ಲಿ ಜನರನ್ನೋ, ತಮ್ಮ ಲಗ್ಗೇಜನ್ನೋ ಒಯ್ಯುತ್ತಾರೆ. ದುರ್ಗಮ ಪರ್ವತ ಪ್ರದೇಶಗಳಿಗೆ, ಮೋಜಿನ ಯಾತ್ರೆಗೆ ಹೋಗುವವರು, ಹೆಚ್ಚಾಗಿ ಇಂತಹ ಬೈಕುಗಳನ್ನು ಬಳಸುತ್ತಾರೆ. ಅದರ ಟಯರು ಲಾರಿಯ ಟಯರಿನಷ್ಟು ದಪ್ಪಗಿದೆ. ದ್ವಿಚಕ್ರ ವಾಹನದ ರೈಡರ್ ಮಾತ್ರವಲ್ಲದೆ, ಪಿಲಿಯನ್ ರೈಡರ್ ಕೂಡಾ ಕಡ್ಡಾಯವಾಗಿ ಹೆಲ್ಮೆಟ್ ಬಳಸಲೇಬೇಕು. ಹಗಲು ಕೂಡಾ ಹೆಡ್‌ಲೈಟ್ ಹಾಕಿಕೊಂಡೇ ದ್ವಿಚಕ್ರ ವಾಹನಗಳನ್ನು ಓಡಿಸಬೇಕು. ಈ ದ್ವಿಚಕ್ರಗಳನ್ನು ಬಿಟ್ಟರೆ ಉಳಿದಂತೆ ಯಾವುದೇ ವಾಹನಗಳು ಹೆಚ್ಚು ಕಡಿಮೆ ನಿಶ್ಶಬ್ದವಾಗಿ ಚಲಿಸುತ್ತವೆ. ತೀರಾ ಅನಿವಾರ್ಯವಾದಾಗ ಮಾತ್ರ, ಮುಖ್ಯವಾಗಿ ಪರ್ವತ ಪ್ರದೇಶದ ಇಕ್ಕಟ್ಟಾದ ರಸ್ತೆ ತಿರುವುಗಳಲ್ಲಿ, ವಾಹನಗಳ ಹಾರ್ನ್ ಬಳಸುತ್ತಾರೆ. ಭಾರತದಲ್ಲಿ ಹಾರ್ನ್ ಇರುವುದು ಅನಗತ್ಯ ಬಾರಿಸಿಕೊಂಡೇ ಇರುವುದಕ್ಕೆ ಎಂಬ ಭಾವನೆಯನ್ನು ಚಾಲಕರು ಮೂಡಿಸಿದರೆ, ಫ್ರಾನ್ಸಿನಲ್ಲಿ ವಾಹನಗಳಿಗೆ ಹಾರ್ನೇ ಇಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಪೋಲೀರ್ಸ್ ವಾಹನ, ಅಂಬ್ಯುಲೆನ್ರ್ಸ್ ಮತ್ತು ಫೈರ್ ಎಂಜಿನ್ನುಗಳು ಮಾತ್ರ ವಿಪರೀತ ಗದ್ದಲ ವೆಬ್ಬಿಸಿಕೊಂಡು ಶರವೇಗದಲ್ಲಿ ಧಾವಿಸುತ್ತವೆ. ತುರ್ತು ಪರಿಸ್ಥತಿಯಲ್ಲಿ ಮಾತ್ರ ಅವುಗಳ ಓಡಾಟವಾದುದರಿಂದ ಉಳಿದ ವಾಹನಗಳು ಅವುಗಳಿಗೆ ರಾಜಮರ್ಯಾದೆ ತೋರಿಸುತ್ತವೆ.
ಫ್ರಾನ್ಸಿನಲ್ಲಿ ಶೇಕಡಾ 90 ಮಂದಿಗೆ ಸ್ವಂತ ವಾಹನವಿದೆ. ‘ನಮ್ಮ ದೊಡ್ಡ ಸಮಸ್ಯೆಯೆಂದರೆ ಪಾರ್ಕಿಂಗಿನದ್ದು’ ಎಂದು ನಾಬೋನಿನ್ನ ಪೇಜರ್ಸ್ ಜುವಾನ್ ಹೇಳಿದ್ದ. ‘ಪಾರ್ಕಿಂಗ್‌ಗೆ ಸ್ಥಳ ಸಿಕ್ಕಿದರೆ ಅದು ಜಾಕ್‌ಪಾಟ್ ಹೊಡೆದಂತೆ’ ಎಂದಿದ್ದ ತುಲೋಸಿನ ಜಾಕ್‌ಗಿಬೆ. ಪಾರ್ಕಿಂಗ್ ಸಮಸ್ಯೆಯ ನಿವಾರಣೆಗಾಗಿ ಅಂಡರ್‌ಗ್ರೌಂಡ್ ಪಾರ್ಕಿಂಗ್ ವ್ಯವಸ್ಥೆ ಮಾಡಿದರೂ ಸಮಸ್ಯೆ ಪರಿಹಾರವಾಗಿಲ್ಲ. ಸಂಚಾರ ವ್ಯವಸ್ಥೆಯ ಯಾಂತ್ರೀಕರಣವನ್ನು ಫ್ರಾನ್ಸಿನಲ್ಲಿ ಬಹುತೇಕವಾಗಿ ಸಾಧಿಸಲಾಗಿದೆ. ಕೆಲವು ಸುಂಕದಕಟ್ಟೆಗಳಲ್ಲಿರುವ ಸಿಬ್ಬಂದಿಗಳನ್ನು ತೆಗೆದುಬಿಟ್ಟರೆ ಸಾರಿಗೆ ವ್ಯವಸ್ಥೆ ಪೂರ್ತಿ ಯಾಂತ್ರೀಕರಣಗೊಂಡಂತೆಯೇ. ಮನೆಯ ಗೇಟುಗಳು ಸ್ವಯಂಚಾಲಿತವಾಗಿರುತ್ತವೆ. ಫ್ರಾನ್ಸಿನಲ್ಲಿ ಇತ್ತೀಚೆಗೆ ಕಳ್ಳ ಕಾಕರ ಸಂಖ್ಯೆ ಹೆಚ್ಚಾಗುತ್ತಿದೆ. ಸುಖ ಲೋಲುಪ ನಿರುದ್ಯೋಗಿಗಳು, ಸರಕಾರದಿಂದ ನಿರುದ್ಯೋಗ ಭತ್ಯೆ ಸಿಗುತ್ತದಾದರೂ, ಅದು ವಿಲಾಸೀ ವಿಭ್ರಮದ ಜೀವನಕ್ಕೆ ಸಾಕಾಗದೆ, ಕಳ್ಳತನಕ್ಕೆ ಇಳಿದುಬಿಡುವುದುಂಟು. ಮಹಾನಗರಗಳಲ್ಲಿ ಕೆಲವು ಪರದೇಶೀ ನಿರಾಶ್ರಿತರು ಕಳ್ಳತನ, ದರೋಡೆಗಳಿಗೆ ಇಳಿಯುತ್ತಾರೆ. ಆದುದರಿಂದ ಗೇಟಿನ ಗುಂಡಿ ಅದುಮಿ, ತಮ್ಮ ಪರಿಚಯವನ್ನು ಸರಿಯಾಗಿ ಹೇಳದೆ ಇದ್ದರೆ ಗೇಟು ತೆರೆಯುವುದಿಲ್ಲ. ಮಕ್ಕಳಿಂದ ದೂರವಾಗಿರುವ ವೃದ್ಧ ದಂಪತಿಗಳು ಹೆಚ್ಚಾಗಿ ಭೀತಿಯಲ್ಲೇ ಬದುಕುತ್ತಾರೆ. ರಕ್ಷಣೆಗಾಗಿ ಇಂತಹ ವ್ಯವಸ್ಥೆಗಳನ್ನು ರೂಪಿಸುತ್ತಾರೆ. ಮಹಾಮಾಂತ್ರಿಕ ಮಾಂಡ್ರೇಕನ ಯಕ್ಷಿಣಿಯ ಕತೆಗಳನ್ನು ಓದಿದವರಿಗೆ, ಅವನ ಜನಾಡು ಕೋಟೆಯ ಮಾತಾಡುವ ಕಂಬಗಳು, ತಾನಾಗಿಯೇ ತೆರೆದುಕೊಳ್ಳುವ ಗೇಟುಗಳ ನೆನಪಿರಬಹುದು. ಅವನ್ನು ವಾಸ್ತವವಾಗಿ ಫ್ರಾನ್ಸಿನಲ್ಲಿ ಕಾಣಬಹುದು.
ಫ್ರಾನ್ಸಿನಲ್ಲಿ ಹೆಚ್ಚಿನವರು ತಮ್ಮ ಸ್ವಂತ ವಾಹನಗಳಲ್ಲಿ ಓಡಾಡುವುದರಿಂದ ಸಿಟಿಬಸ್ಸುಗಳು ಬಹುತೇಕವಾಗಿ ಖಾಲಿಯಾಗಿಯೇ ಓಡುತ್ತವೆ. ಹಾಗಾಗಿ ಈ ಸಿಟಿಬಸ್ಸುಗಳ ಪ್ರಯಾಣ ತುಂಬಾ ಆಹ್ಲಾದಕರವಾಗಿರುತ್ತದೆ. ಮೂವತ್ತು ಮಂದಿಗೆ ಕಾಲು ನೀಡಿ ಕುಳಿತುಕೊಳ್ಳಲು ಸಾಧ್ಯವಾಗುವ ಬಸ್ಸುಗಳವು. ಅವುಗಳಿಗೆ ಕಂಡೆಕ್ಟರ್ ಇರುವುದಿಲ್ಲ. ಬಸ್ಸೊಳಗಿರುವ ಯಂತ್ರವೊಂದಕ್ಕೆ ಹಣಹಾಕಿ ಗುಂಡಿ ಒತ್ತಿದರೆ ಟಿಕೇಟು ಹೊರಬರುತ್ತದೆ. ಡ್ರೈವರ್ ತನ್ನ ಬಳಿಯಿರುವ ಗುಂಡಿಯೊಂದನ್ನು ಒತ್ತಿ ಬಾಗಿಲು ತೆರೆಯುತ್ತಾನೆ ಮತ್ತು ಮುಚ್ಚುತ್ತಾನೆ. ಬಸ್‌ಸ್ಟಾಂಡ್‌ಗಳು ಪೂರ್ತಿ ಗಾಜಿನವು. ರಸ್ತೆಯ ಬದಿಯಲ್ಲಿರುವ ಟೆಲಿಫೋನ್ ಬೂತುಗಳೂ ಕೂಡಾ. ಫ್ರಾನ್ಸಿನಲ್ಲಿ ಮುಷ್ಕರಗಳಾಗುವುದೇ ಕಡಿಮೆ. ಆದರೂ ಅವು ಶಾಂತಿಯುತವಾಗಿರುತ್ತವೆ. ಕಲ್ಲು ತೂರಾಟ ನಡೆಯುವುದಿಲ್ಲ. ಆದುದರಿಂದ ಗಾಜಿನ ಬಸ್‌ಸ್ಟೇಂಡ್‌ಗಳು ಮತ್ತು ಟೆಲಿಫೋನ್ ಬೂತುಗಳು ಯಾರ ರಕ್ಷಣೆಯೂ ಇಲ್ಲದೆ ಹಾಗೆಯೇ ಉಳಿದುಕೊಂಡಿವೆ. ರಸ್ತೆಯ ಬದಿಯಲ್ಲಿ ಮೂಟೆ ಕಟ್ಟಿಟ್ಟ ಕಸವನ್ನು ನಗರಪಾಲಿಕೆಯ ಲಾರಿಗಳು ದಿನಾ ಬೆಳಿಗ್ಗೆ ಹೊತ್ತೊಯ್ಯುತ್ತವೆ. ರಸ್ತೆಯನ್ನು ನೀರು ಹಾಕಿ, ಕ್ರಿಮಿನಾಶಕ ಸಿಂಪಡಿಸಿ ವಾಹನಗಳೇ ಗುಡಿಸುತ್ತವೆ. ಆದುದರಿಂದ ರಸ್ತೆಗಳು ಸದಾ ಥಳಥಳಿಸುತ್ತಿರುತ್ತವೆ. ಫ್ರೆಂಚರ ಬಾತ್‌ರೂಮು, ಟಾಯ್ಲಯೆಟ್ಟುಗಳು ಕೂಡಾ ಕನ್ನಡಿಯಂತೆ ಹೊಳೆಯುತ್ತಿರುತ್ತವೆ.
ಫ್ರೆಂಚರ ಭೋಜನ : ಫ್ರೆಂಚರು ಅತಿಥಿಗಳನ್ನು ನೋಡಿಕೊಳ್ಳುವ ರೀತಿ ವಿಚಿತ್ರವಾದುದು. ನಾನು ಉಳಿದುಕೊಂಡಿದ್ದ ಕೆಲವು ಮನೆಗಳಲ್ಲಿ, ಮನೆಮಂದಿಗಳು ಕೆಲವೊಮ್ಮೆ ನನ್ನೆದುರೇ ಬ್ರೇಕ್‌ಫಾಸ್ಟ್ ಮುಗಿಸಿ, ಟೇಬಲ್ ಸ್ವಚ್ಢಗೊಳಿಸಿ, ಆ ಬಳಿಕ ನನ್ನೆದುರು ತಿಂಡಿ ತೀರ್ಥಗಳನಿನರಿಸಿ ‘ಏನು ಬೇಕಾದರೂ ತಿನ್ನು’ ಎನ್ನುತ್ತಿದ್ದರು. ಬೆಳಗ್ಗಿನ ಬ್ರೇಕ್‌ಫಾಸ್ಟ್ ಮಾತ್ರ ವೈವಿಧ್ಯಮಯವಾಗಿರುತ್ತದೆ. ಎಲ್ಲಕ್ಕಿಂತ ಮೊದಲು ಬೇಕಾದಷ್ಟು ಹಣ್ಣಿನ ರಸ, ಬಳಿಕ ಬ್ರೆಡ್, ಕ್ರಸೆಂಟ್ ಜತೆ ಯೋಗರ್ತ್, ಬೆಣ್ಣೆ ಮತ್ತು ಜಾಮು. ಆಮೇಲೆ ಅವರು ‘ಕಾರ್ನ್’ ಎಂದು ಕರೆಯುವ ವಿವಿಧ ಧಾನ್ಯಗಳಿಂದ ಮಾಡಿದ ಚರ್ಮುರಿಯಂತಹಾ ರೆಡಿಮೇಡ್ ಪೇಕ್‌ಡ್ ತಿಂಡಿಗಳು. ಅವುಗಳನ್ನು ಶೇಕಡಾ ನೂರರಷ್ಟು ಪರಿಶುದ್ಧವಾದ ಹಾಲಿನಲ್ಲಿ ಹಾಕಿ ತಿನ್ನಲು ತುಂಬಾ ಚೆನ್ನಾಗುತ್ತಿತ್ತು. ಇದಾದ ಬಳಿಕ ಮೊಟ್ಟೆ ಆಮ್ಮೆಟ್ಟು. ಮತ್ತೆ ಬಾಳೆಹಣ್ಣು, ಆ್ಯಪಲ್ ಮತ್ತು ಮೂಸಂಬಿ. ಕೊನೆಯಲ್ಲಿ ಕಪ್ಪು ಕಾಫಿ. ಬೇಕೆಂದರೆ ನಾವು ಹಾಲು ಸೇರಿಸಿಕೊಳ್ಳ ಬಹುದು. ಫ್ರೆಂಚರಿಗೆ ಹಾಲು ಹಾಕಿದ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸವಿಲ್ಲ .
ಹೋಟೆಲುಗಳಲ್ಲಿ ಬ್ರೇಕ್‌ಫಾಸ್ಟ್ ಅಂದರೆ ಅದೊಂದು ಹಬ್ಬವೇ. ಡೈನಿಂಗ್ ಹಾಲಿನಲ್ಲಿ ಏಳೆಂಟು ಮೇಜುಗಳಲ್ಲಿ ಅದೆಷ್ಟು ಬಗೆಯ ತಿಂಡಿಗಳು, ಹಣ್ಣುಗಳು, ಜಾಮುಗಳು ಮತ್ತು ಬೇಯಿಸಿದ ಮೊಟ್ಟೆಗಳು! ನಾವು ಯಾವುದನ್ನು ಬೇಕಾದರೂ ಆರಿಸಿಕೊಳ್ಳಬಹುದು. ಎಷ್ಟು ಬೇಕಾದರೂ ತೆಗೆದುಕೊಳ್ಳಬಹುದು. ಶುದ್ಧ ಸಸ್ಯಾಹಾರಿಗಳು ಮಾತ್ರ ಸ್ವಲ್ಪ ಎಚ್ಚರವಹಿಸಬೇಕಾಗುತ್ತದೆ. ಇನ್ನು ಪಾನೀಯ ಮತ್ತು ಹಾಲನ್ನು ಎಷ್ಟು ಕುಡಿದರೂ ಕೇಳುವವರೇ ಇಲ್ಲ. ಹೋಟೆಲುಗಳಲ್ಲಿ ಉಳಿದುಕೊಳ್ಳಬೇಕಾದಂತಹ ಸಂದರ್ಭದಲ್ಲಿ ನಾನು ಬೆಳಗ್ಗಿನ ಬ್ರೇಕ್ ಫಾಸ್ಟನ್ನು ಸ್ವಲ್ಪ ಮಧ್ಯಾಹ್ನಕ್ಕೂ ಉಳಿಸಿಕೊಂಡು ಬೇರೇನೂ ತಿನ್ನದೆ ದಿನ ದೂಡಿದ್ದೂ ಉಂಟು.
ಭಾರತದಲ್ಲಿ ಸಂಜೆ ಹೊತ್ತು ಹೋಟೆಲುಗಳು ಗಿಜಿಗುಟ್ಟುತ್ತವೆ. ಫ್ರಾನ್ಸಿನಲ್ಲಿ ಇದಕ್ಕೆ ವ್ಯತಿರಿಕ್ತವಾದ ವಾತಾವರಣ. ಊಟದೊಂದಿಗೇ ಚಹಾ ಅಥವಾ ಕಾಫಿ ಸೇವಿಸುವ ಫ್ರೆಂಚರು ಆಗಾಗ ಚಾಃಕಾಫಿ ಕುಡಿಯುವ ಸ್ವಭಾವದವರಲ್ಲ. ಹಾಗಾಗಿ ಇಲ್ಲಿನ ಯಾವುದೇ ಕಛೇರಿಗೆ ಹೋದರೂ ‘ಅವರು ಕಾಫಿಗೆ ಹೋಗಿದ್ದಾರೆ. ಈಗ ಬರುತ್ತಾರೆ’ ಎಂದು ಜವಾನರು ಹೇಳುವ ಸಂದರ್ಭಗಳೇ ಇರುವುದಿಲ್ಲ. ಸಂಜೆ ಫ್ರೆಂಚರು ಮನೆಯಲ್ಲೂ ಕಾಫಿ ಮಾಡುವವರಲ್ಲ. ಆದರೆ ಫ್ರಿಜ್ಜಿನಿಂದ ಏನನ್ನಾದರೂ ತೆಗೆದು ತಿನ್ನುತ್ತಾ, ಹಣ್ಣಿನ ರಸವನ್ನೋ, ವೈನನ್ನೋ ಹೀರುತ್ತಾ ಕಾಲ ಕಳೆಯುತ್ತಾರೆ. ತುಲೋಸಿನ ಮ್ಯಾಗಿಯ ಗಂಡ ಜಾರ್ಜ್, ಅಡುಗೆ ಮನೆಯ ಮೇಜಿನ ಮೇಲಿರಿಸಿದ ದಪ್ಪನೆಯ ಆರಾರೂಟಿನಂತಹದ್ದೇನನ್ನೋ, ಅದರ ಜತೆಯಲ್ಲೇ ಇರಿಸಿದ್ದ ಚಾಕುವಿನಿಂದ ತುಂಡು ಮಾಡಿ, ಆಗಾಗ ತಿನ್ನುತ್ತಿದ್ದ. ಅದು ಉಪ್ಪು ಹಾಕಿ ಹದಬರಿಸಿ ಒಣಗಿಸಿ ರೋಲ್ ಮಾಡಿದ ಹಂದಿಮಾಂಸ! ಹೀಗೆ ಫ್ರೆಂಚರು ನಮ್ಮ ಎದುರೇ ತಿನ್ನುವಾಗ ‘ನಿಮಗೇನಾದರೂ ಬೇಕೆ’ ಎಂದು ಕೇಳುವುದಿಲ್ಲ. ಆರಂಭದಲ್ಲಿ ಸಂಜೆ ವಿಪರೀತ ಹಸಿವಾಗುತ್ತಿದ್ದರೂ ‘ಏನಾದರೂ ಕೊಡಿ’ ಎಂದು ಕೇಳಲು ನನಗೆ ಮುಜುಗರವಾಗುತ್ತಿತ್ತು. ಕೊನೆಗೂ ಪ್ರಕೃತಿ ಮುಜುಗರವನ್ನು ಗೆದ್ದೇಬಿಟ್ಟಿತು. ನಾನು ನಾಚಿಕೆಬಿಟ್ಟು ಸಂಜೆ ಹೊತ್ತು ಕಾಫಿತಿಂಡಿ ಕೇಳತೊಡಗಿದೆ. ನಾವಾಗಿ ಕೇಳಿದರೆ ಫ್ರೆಂಚರು ತೋರುವ ಉದಾರತೆಯನ್ನು ಅನುಭವಿಸಿಯೇ ಹೇಳಬೇಕು. ನನ್ನ ಹೊಟ್ಟೆ ಬಿರಿಯುವಷ್ಟನ್ನು ತಂದು ನನ್ನೆದುರು ಇಟ್ಟು ‘ಎಷ್ಟು ಬೇಕಾದರೂ ಸಂಕೋಚ ಇಲ್ಲದೆ ತಿನ್ನು’ ಎಂದು ನನಗೆ ಏಕಾಂತ ಕಲ್ಪಿಸಿಕೊಡುತ್ತಿದ್ದರು.
ಫ್ರೆಂಚರು ತಮ್ಮ ಮನೆಯಲ್ಲಾದರೆ ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಅತ್ಯಂತ ಸರಳವಾಗಿ ಮುಗಿಸಿಬಿಡುತ್ತಾರೆ. ಆದರೆ ಹೋಟೆಲುಗಳಲ್ಲಿ ಡಿನ್ನರ್ ಎಂದರೆ ಅದು ಅತ್ಯಂತ ವಿಶಿಷ್ಟವಾದುದು. ಭಾರತದಿಂದ ಹೋದ ನಮ್ಮೈವರನ್ನು ಬೇರೆ ಬೇರೆ ಟೇಬಲ್ಲಿಗೆ ಹಂಚಿ ಹಾಕಿ, ಅಲ್ಲಿ ಮಾತುಕತೆಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಇಂತಹಾ ಭೋಜನಕೂಟಕ್ಕೆ ಬರುವ ರೊಟೇರಿಯನನರು, ತಮ್ಮ ಪತ್ನಿಯರನ್ನೂ ಕರೆದುಕೊಂಡು ಬರುತ್ತಿದ್ದರು. ಊಟಕ್ಕೆ ಕೂರುವಾಗ ಒಬ್ಬನ ಪತ್ನಿ ಇನ್ನೊಬ್ಬನ ಪಕ್ಕದಲ್ಲಿ ಕೂರಬೇಕೇ ಹೊರತು, ತನ್ನ ಗಂಡನಿಗೆ ಅಂಟಿಕೊಂಡು ಕೂತು ಊಟ ಮಾಡುವಂತಿಲ್ಲ. ಪ್ರತಿ ಟೇಬಲ್ಲಿನಲ್ಲಿ ಒಬ್ಬರಾದರೂ ಇಂಗ್ಲೀಷ್ ಬಲ್ಲವರು ಇರುವಂತೆ ನೋಡಿಕೊಳ್ಳಲಾಗುತ್ತಿತ್ತು. ಫ್ರೆಂಚರು ಆ ಸಂದರ್ಭದಲ್ಲಿ ಭಾರತದ ಬಗ್ಗೆ ಎಗ್ಗಿಲ್ಲದೆ ಪ್ರಶ್ನೆ ಕೇಳುತ್ತಿದ್ದರು. ನಾವು ಕೂಡಾ ಫ್ರಾನ್ಸ್ ಬಗ್ಗೆ ಏನು ಬೇಕಾದರೂ ಕೇಳಬಹುದಾದ ಸಂದರ್ಭ ಅದು. ಊಟದ ಮಧ್ಯದಲ್ಲಿ ರೋಟರಿ ಅಧ್ಯಕ್ಷ ತನ್ನೆದುರಿರುವ ವೈನ್ ಬಾಟಲಿಗಳಲ್ಲಿ ಒಂದಕ್ಕೆ ಚಮಚಾದಿಂದ ಬಡಿಯುತ್ತಾನೆ. ಅಲ್ಲೇ ಸಭಾಕಲಾಪಗಳು ನಡೆಯುತ್ತವೆ. ನಾವು ಅಧ್ಯಕ್ಷನ ಬಳಿಗೆ ಹೋಗಿ ನಮ್ಮ ಪರಿಚಯವನ್ನು ಧ್ವನಿವರ್ಧಕದಲ್ಲಿ ಹೇಳಿ, ರಾಷ್ಟ್ರಧ್ವಜ ಮತ್ತು ರೋಟರಿ ಧ್ವಜಗಳನ್ನು ಹಸ್ತಾಂತರಿಸುತ್ತಿದ್ದೆವು. ಅವಕಾಶವಿದ್ದರೆ ಸ್ಲೈಡ್‌ಶೋ, ಹಾಡು ಮತ್ತು ಕುಣಿತ ಇರುತ್ತಿದ್ದವು. ಇಲ್ಲದಿದ್ದರೆ ಊಟ ಮುಗಿಸಿ ನಮ್ಮ ಅತಿಥೇಯರುಗಳ ಮನೆಗೆ ಹೋಗಿಬಿಡುತ್ತಿದ್ದೆವು.
ಫ್ರೆಂಚರ ಔತಣದಲ್ಲಿ ಏನೇನಿರುತ್ತವೆ? ಮೊದಲು ಎಲ್ಲರಿಗೂ ವೈನ್ ಸರಬರಾಜಾಗುತ್ತದೆ. ಅದು ಸ್ವಸ್ತಿಪಾನ. ಅದರೊಂದಿಗೆ ಕುರುಕಲು ತಿಂಡಿ ಏನಾದರೂ ಇರುತ್ತದೆ. ಅದಾದ ಬಳಿಕ ನಮಗಾಗಿ ನಿಗದಿಯಾದ ಟೇಬಲ್ಲಿಗೆ ನಾವು ಹೋಗುತ್ತೇವೆ. ಅಲ್ಲಿ ಆರಂಭಕ್ಕೆ ‘ಸೂಪ್’ ಕೊಡುತ್ತಾರೆ. ಆ ಬಳಿಕ ಎಂಟ್ರಿ; ಅದಾಗಿ ಅರ್ಧಗಂಟೆಯ ಬಳಿಕ ಫಸ್ಟ್‌ಕೋರ್ಸ್ ಮತ್ತೆ ಸೆಕೆಂಡ್ ಕೋರ್ಸ್ ಹೀಗೆ ಎರಡು ತಟ್ಟೆಗಳಲ್ಲಿ ತಿನ್ನಲು ಏನೇನೋ ಬರುತ್ತವೆ. ಸೆಕೆಂಡ್ ಕೋರ್ಸಿನ ಬಳಿಕ ಮೈನ್‌ಡಿಶ್. ಅದು ಮುಗಿದಾಗ ಮೈನ್‌ಡಿಶ್ ಎರಡನೆಯ ಬಾರಿಗೆ ಬರುತ್ತದೆ. ಮೈನ್ ಡಿಶ್ ಆಗಿ ಡೆಸರ್ಟ್. ಡೆಸರ್ಟ್ ಆಗಿ ಹಣ್ಣು ಹಂಪಲು ಮತ್ತು ಕೊನೆಯಲ್ಲಿ ಹಾಲು ಹಾಕದ ಚಹಾ ಅಥವಾ ಕಾಫಿ. ಈ ನಡುವೆ ಎಷ್ಟು ಬೇಕಾದರೂ ಸೇವನೆಗೆ ವಿವಿಧ ರೀತಿಯ ವೈನ್‌ಗಳು.
ಸಸ್ಯಾಹಾರಿಗಳಾದರೆ ತರಕಾರಿ ಸೂಪನ್ನು ಆರಂಭದಲ್ಲಿ ಕೊಡುತ್ತಾರೆ. ಫಸ್ಟ್‌ಕೋರ್ಸಿನಲ್ಲಿ ಒಂದು ಪ್ಲೇಟು ತುಂಬಾ ತುಂಡರಿಸಿದ ಹಸಿ ತರಕಾರಿಗಳು ಮತ್ತು ಸೊಪ್ಪು. ಅದಕ್ಕೆ ಒಂದಿಷ್ಟು ವಿನೆಗರ್ ಹಾಕಿ ಕೊಡುತ್ತಾರೆ. ಸದ್ಯ ಟೊಮೆಟೋ ಮತ್ತು ಸೌತೆ ಕೂಡಾ ಪ್ಲೇಟಿನಲ್ಲಿರುವುದರಿಂದ ವಿನೆಗರ್ ರುಚಿಗೆ, ಅದು ಹೇಗೋ ಅವೆಲ್ಲಾ ಹೊಟ್ಟೆಗೆ ಹೋಗಿಬಿಡುತ್ತಿದ್ದವು. ಸೆಕೆಂಡ್ ಕೋರ್ಸ್ ಅಂದರೆ ಫಸ್ಟ್‌ಕೋರ್ಸಿನಲ್ಲಿ ನೀಡಿದ ತರಕಾರಿ ಮತ್ತು ಸೊಪ್ಪಿನ ಬೇಯಿಸಿದ ರೂಪ! ಅದಕ್ಕೆ ಹಾಕಲು ಹುಡಿ ಉಪ್ಪು ಮತ್ತು ಕಾಳುಮೆಣಸಿನ ಹುಡಿಯನ್ನು ಪ್ರತ್ಯೇಕವಾಗಿ ನಮ್ಮೆದುರು ತಂದು ಇಡುತ್ತಾರೆ. ಮೈನ್ ಡಿಶ್ ಅಂದರೆ ಬ್ರೆಡ್ಡು ಮತ್ತು ವೈವಿಧ್ಯಮಯವಾದ ಮಾಂಸ. ಸಸ್ಯಾಹಾರಿಗಳು ಬ್ರೆಡ್ಡಿನಲ್ಲೇ ತೃಪ್ತಿಪಟ್ಟುಕೊಳ್ಳಬೇಕು. ನಾವಾಗಿ ಕೇಳಿದರೆ ಬಸುಮತಿಯ ಅನ್ನ ಮತ್ತು ಯೋಗರ್ತ್ (ಮೊಸರು) ಸಿಗುವುದುಂಟು. ಕೊನೆಗೆ ಹೆಚ್ಚಾಗಿ ನಾನು ತೆಗೆದುಕೊಳ್ಳುತ್ತಿದ್ದುದು ಐರ್ಸ್‌ಕ್ರೀಂ ಮತ್ತು ಹಾಲು ಹಾಕಿದ ಕಾಫಿ. ಇಷ್ಟೆಲ್ಲಾ ಆಗುವಾಗ ಕನಿಷ್ಠ ಮೂರೂವರೆ ಗಂಟೆ ದಾಟಿರುತ್ತದೆ. ಅಂದರೆ ಎಂಟು ಗಂಟೆ ರಾತ್ರೆ ನಾವು ಊಟಕ್ಕೆ ಕೂತರೆ, ಅದು ಮುಗಿಯುವುದು ರಾತ್ರಿ ಹನ್ನೊಂದುವರೆ ಅಥವಾ ಹನ್ನೆರಡು ಗಂಟೆಗೆ. ಫ್ರೆಂಚರು ಊಟದ ಸಮಯದಲ್ಲಿ ಹರಟೆ ಕೊಚ್ಚುತ್ತಾರೆ. ಉಳಿದ ಸಮಯವನ್ನು ಅಪವ್ಯಯ ಮಾಡುವುದಿಲ್ಲ. ಯಾವಾಗ ಬೇಕಾದರೂ ಹರಟೆಯಲ್ಲಿ ಮುಳುಗುವ ನನ್ನಂಥವನಿಗೆ ಈ ಮೂರೂವರೆ ನಾಲ್ಕು ಗಂಟೆಯ ಊಟ ಅಂದರೆ ತಲೆಚಿಟ್ಟುಹಿಡಿದು ಹೋಗುತ್ತಿತ್ತು. ಹಾಗಂತ ಹೇಳಲಾಗುತ್ತದೆಯೇ ?
ತಾಜಾ ಹಣ್ಣು, ತಾಜಾ ಮಾಂಸ, ತಾಜಾ ತರಕಾರಿ ಅಂದರೆ ಫ್ರೆಂಚರಿಗೆ ತುಂಬಾ ಇಷ್ಟ. ಜೀವಂತ ಲ್ಯಾಬ್‌ಸ್ಟರನ್ನು ಬೇಯಿಸಿಕೊಡುವ ವ್ಯವಸ್ಥೆಯ ಬಗ್ಗೆ ಕ್ಯಾಸ್ತ್ರದ ಬೆರ್ನಾರ್ಡಿನ್ ನನಗೆ ಹೇಳಿದ್ದ. ಮಜಾಮೆಯಲ್ಲಿ ನನ್ನ ಮಾಂಸಾಹಾರಿ ಮಿತ್ರರಿಗೆ ಸಮುದ್ರದ ಜೀವಂತ ಚಿಪ್ಪಿನ ಹುಳವನ್ನು ತಿನ್ನುವ ಯೋಗ ಒದಗಿಬಂದಿತ್ತು. ಮಾಂಪಿಲಿಯೇದಲ್ಲಿ ಒಣಗಿದ ಮಾಂಸದಂತಿರುವ ಯಾವುದೋ ವಸ್ತುವನ್ನು ಮಾಂಸಾಹಾರಿಗಳ ಎದುರು ತಂದಿಡಲಾಗಿತ್ತು. ಸ್ಥಬ್ಧವಾಗಿದ್ದ ಆ ವಸ್ತುವಿನ ಮೇಲೆ ಅದೇನೋ ದ್ರಾವಣ ಸುರಿದಾಗ ಅದರಲ್ಲಿ ಜೀವ ಸಂಚಾರವಾಗಿತ್ತು. ಅದನ್ನು ನಮ್ಮ ಅತಿಥೇಯರುಗಳೆಲ್ಲಾ ಚಪ್ಪರಿಸಿ ತಿಂದಿದ್ದರು. ಅದೇ ಮಾಂಪಿಲಿಯೇದಲ್ಲಿ ಜೀವಂತ ಮೀನು ಮಾರಾಟ ವ್ಯವಸ್ಥೆಯೊಂದನ್ನು ನೋಡಿದ್ದೆ. ದೊಡ್ಡ ಲಾರಿಯ ಬಾಡಿಯಲ್ಲಿ ನೀರಿನ ಟಾಂಕಿಯೊಂದಿತ್ತು. ಗಾಜಿನಿಂದ ಮಾಡಿದ ಆ ಟಾಂಕಿಯಲ್ಲಿ ಬೇರೆ ಬೇರೆ ಜಾತಿಯ ಮೀನುಗಳು ತಮಗೆ ಮುಂದೇನು ಬರಲಿದೆ ಎಂದು ತಿಳಿಯದೆ ತೇಲಿಕೊಂಡು ಹಾಯಾಗಿರುತ್ತಿದ್ದವು. ಗಿರಾಕಿ ತನಗೆ ಬೇಕಾದ ಮೀನನ್ನು ಹೊರಗಿನಿಂದ ತೋರಿಸಿಕೊಡುತ್ತಾನೆ. ವ್ಯಾಪಾರಿ ತಕ್ಷಣ ಚಿಟ್ಟೆಬಲೆಯಂಥದ್ದನ್ನು ಹಾಕಿ ಆ
ಮೀನನ್ನು ಹಿಡಿದು ಮರದ ಸುತ್ತಿಗೆಯಿಂದ ಟಕ್ಕೆಂದು ಅದರ ತಲೆಗೆ ಬಡಿಯುತ್ತಾನೆ. ಗಿರಾಕಿ ಇನ್ನೂ ಪೂರ್ತಿ ಸತ್ತಿಲ್ಲದ ಆ ಮೀನನ್ನು ತಕಣ ಮನೆಗೆ ಒಯ್ದು ಭಕ್ಷ್ಯ ಮಾಡಿ ಮೆದ್ದು ಸುಖಿಸುತ್ತಾನೆ. ಇದು ಫ್ರೆಂಚರ ವೈಶಿಷ್ಟ್ಯ.
ಪಾಲಿಗೆ ಬಂದದ್ದು : ‘ನೀನೇಕೆ ಮಾಂಸ ತಿನ್ನುವುದಿಲ್ಲ?’ ಈ ಪ್ರಶ್ನೆಯನ್ನು ಫ್ರಾನ್ಸಿನ ನನ್ನ ಅತಿಥೇಯರೆಲ್ಲರೂ ಬೇರೆ ಬೇರೆ ಸಂದರ್ಭಗಳಲ್ಲಿ ಕೇಳಿದ್ದಾರೆ. ತುಲೋಸಿನಲ್ಲಿ ಮ್ಯಾಗಿಯ ಮನೆಗೆ ಹೋದಂದೇ ಈ ಪ್ರಶ್ನೆಯನ್ನು ಆಕೆ ಹೆಬ್ಬಾರರಲ್ಲಿ ಮತ್ತು ನನ್ನಲ್ಲಿ ಕೇಳಿದ್ದಳು. ಹೆಬ್ಬಾರರು ಅದಕ್ಕೆ ‘ನಾನು ಜನ್ಮತಾಃ ಒಬ್ಬ ಬ್ರಾಹ್ಮಣ. ನಮ್ಮಲ್ಲಿ ಬ್ರಾಹ್ಮಣರು ಮಾಂಸ ತಿನ್ನುವ ಸಂಪ್ರದಾಯ ಇಲ್ಲ’ ಎಂದಿದ್ದರು. ‘ದಿ ಬ್ರಮ್ಯಾನ್, ದಿ ತ್ರೇತ್. ಎಲ್ಲಿ ನಿನ್ನ ತ್ರೇತ್ ತೋರಿಸು’ ಮ್ಯಾಗಿ ಹೆಬ್ಬಾರರಿಗೆ ಗಂಟುಬಿದ್ದಳು. ಅವರು ಒಳಗೆಲ್ಲೋ ಚಳಿಗೆ ಮುದುಡಿಹೋಗಿದ್ದ ಜನಿವಾರವನ್ನು ಹೊರಕ್ಕೆಳೆದು ಆಕೆಗೆ ತೋರಿಸಿದ್ದರು. ಆಗ ಆಕೆ ‘ನೀನು ಕೂಡಾ ರಿಲೀಜಿಯರ್ಸ್ ಕಾರಣಕ್ಕೆ ಮಾಂಸ ತಿನ್ನುವುದಿಲ್ಲವಾ’ ಎಂದು ನನ್ನಲ್ಲಿ ಕೇಳಿದಾಗು ಹಾಗಲ್ಲ, ನನಗದು ಒಗ್ಗುವುದಿಲ್ಲ.’ ಎಂದು ಹೇಳಿ ಪಾರಾಗಿದ್ದೆ.
ಆದರೆ ಕ್ಯಾಸ್ತ್ರಾದ ವಿಚಿತ್ರ ವ್ಯಕ್ಷ್ತಿ ಬೆರ್ನಾರ್ಡಿನ್ ‘ನಾವೆಲ್ಲಾ ಮಾಂಸ ತಿನ್ನುವವರು ಮತ್ತು ಮದ್ಯಪಾನ ಮಾಡುವವರು. ನೀನು ಮಾಂಸ ತಿನ್ನದೆ, ಮದ್ಯ ಕುಡಿಯದೆ ಫ್ರಾನ್ಸಿನ ಪ್ರವಾಸದ ಸುಖವನ್ನೇ ಕಳಕೊಂಡೆ. ಬಿ ಎ ಫ್ರೆಂಚ್ ಇನ್ ಫ್ರಾರ್ನ್ಸ್’ ಎಂದು ತನ್ನ ಅಸಹನೆಯನ್ನು ಪ್ರದರ್ಶಿಸಿದ್ದ. ನಾನಾಗ ಅವನಿಗೆ ಹೀಗೆ ಉತ್ತರಿಸಿದೆತ ‘ಮಹಾರಾಯಾ, ನನಗದು ಒಗ್ಗುವುದಿಲ್ಲ. ಅದಿಲ್ಲದೆಯೂ ಈ ಪ್ರವಾಸವನ್ನು ನನ್ನಷ್ಟು ಖಂಡಿತಾ ಯಾರೂ ಆನಂದಿಸಿರಲಾರರು. ಮತ್ತೆ ನೀನು ಫ್ರಾನ್ಸಿನಲ್ಲಿ ಫ್ರೆಂಚನಂತಿರು ಅಂದಿದ್ದೀಯಲ್ಲಾ! ನಮ್ಮ ನಮ್ಮ ಅಭ್ಯಾಸಗಳನ್ನು ಮತ್ತು ಸಂಸ್ಕಾರವನ್ನು ಅಷ್ಟು ಸುಲಭವಾಗಿ ಬದಲಾಯಿಸಲು ಸಾಧ್ಯವೇ? ನೀನು ಚೀನಾಕ್ಕೋ, ಕೊರಿಯಾಕ್ಕೋ ಹೋದರೆ ನಾಯಿ ಮಾಂಸ ತಿನ್ನುತ್ತೀಯಾ?’ ಬೆರ್ನಾರ್ಡಿನ್ ಅಸಹ್ಯದಿಂದ ಮುಖ ಸೊಟ್ಟಗೆ ಮಾಡಿ ‘ಛೆ! ಛೇ! ನೆವರ್’ ಅಂದ. ನಾನದಕ್ಕೆ ನಗುತ್ತಾ ‘ನನಗೂ ಹಾಗೇ ಆಗಿದೆ ಮಾರಾಯ. ನನಗೆ ಮಾಂಸಾಹಾರದ ಬಗ್ಗೆ ತಿರಸ್ಕಾರ ಇಲ್ಲ. ನನ್ನ ಹೆಂಡತಿ ಮಕ್ಕಳಿಗೆ ಮಾರ್ಕೆಟ್ಟಿನಿಂದ ಮೀನು ಮತ್ತು ಮಾಂಸ ತಂದುಕೊಡುವ ನಾನು ಅವನ್ನು ತಿನ್ನುವುದಿಲ್ಲ. ನನಗದು ಒಗ್ಗುವುದೇ ಇಲ್ಲ. ನನಗೆ ಮೀನು ಮಾಂಸ ಕಂಡಾಗ ಆ ಮೀನುಗಳು ಜೀವಂತವಾಗಿ ಓಡಾಡುವುದು ನೆನಪಾಗುತ್ತದೆ. ಜೀವಂತ ಕುರಿಯೋ, ಕೋಳಿಯೋ, ಹಂದಿಯೋ ಕಣ್ಣಿಗೆ ಕಟ್ಟುತ್ತದೆ. ಹಾಗಾಗಿ ನನಗೆ ಮೀನು ಅಥವಾ ಮಾಂಸ ತಿನ್ನಲು ಆಗುವುದೇ ಇಲ್ಲ. ಬೇಕಾದರೆ ಇದನ್ನು ನೀನು ನನ್ನ ಮನೋರೋಗ ಅಂದುಕೋ. ಹಾಗಂತ ಮಾಂಸ ತಿನ್ನುವವರ ಬಗ್ಗೆ ನನಗೆ ಖಂಡಿತಾ ಯಾವುದೇ ಪೂರ್ವಗ್ರಹಗಳಿಲ್ಲ. ಅವರವರ ಅಭ್ಯಾಸ ಅವರವರಿಗೆ. ಈ ವಿಷಯದಲ್ಲಿ ಬಲವಂತ ಕೂಡದು ಎಂದು ನನ್ನ ಭಾವನೆ’ ಅಂದಿದ್ದೆ. ಬೆರ್ನಾರ್ಡಿನ್ ಮುಂದಕ್ಕೆ ಆ ವಿಷಯ ಎತ್ತಿರಲಿಲ್ಲ.
ಕಮಲಾದೇವಿ ಚಟ್ಟೋಪಾಧ್ಯಾಯ ಎಂದು ಕರೆಯುತ್ತಿದ್ದ ಮಾಂಪಿಲಿಯೇದ ಮದಾಂ ಜೋಸೆಟ್ಟ್ ಗಿರಾರ್ದ್‌ಳಿಗೆ ಮಾತ್ರ, ನಾನು ಸಸ್ಯಾಹಾರಿಯಾದುದರ ಹಿನ್ನೆಲೆ ಹೇಳಲೇಬೇಕಾಗಿ ಬಂತು. ಅವಳ ಮಗ ಮುಂಬಯಿಯಲ್ಲಿ ಎಂಜಿನಿಯರನಾಗಿದ್ದಾನೆ. ಆಕೆ ಭಾರತಕ್ಕೆ ಎರಡು ಬಾರಿ ಬಂದವಳು. ‘ನಿಮ್ಮ ಆಹಾರ ಕ್ರಮಗಳ ಬಗ್ಗೆ ಸಾಕಷ್ಟು ಓದಿದ್ದೇನೆ ಮಾರಾಯ. ಮಾಂಸ ತಿನ್ನಬಾರದೆಂಬ ಸಂಪ್ರದಾಯಸ್ಥರಲ್ಲಿ ಅನೇಕರು ಮಾಂಸವನ್ನು ಪಟ್ಟಾಗಿ ಹೊಡೆಯುತ್ತಿದ್ದಾರೆಂದೂ ಕೇಳಿದ್ದೇನೆ. ನೀನು ಮಾತ್ರ ಮಾಂಸ ತಿನ್ನದಿರಲು ಕಾರಣವೇನೆಂದು ಗೊತ್ತಾಗಲಿಲ್ಲ. ತೀರಾ ಪರ್ಸನಲ್ ಎಂದಾದರೆ ಬೇಡ ಬಿಡು. ನೀನು ಕಾರಣ ಹೇಳಿದರೆ ಸಂತೋಷ’ ಎಂದು ನನ್ನನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದಳು. ನಾನವಳಿಗೆ ಕಾರಣ ಹೇಳತೊಡಗಿದೆ.
ಅಹಿಂಸಾ ಪರಮೋಧರ್ಮಃ : ಏಳನೆಯ ತರಗತಿಯಲ್ಲಿ ಒಳ್ಳೆಯ ಅಂಕ ಗಳಿಸಿದರೂ ಆರ್ಥಿಕ ಅಡಚಣೆಯಿಂದ ಮುಂದೆ ಓದಲಾಗದ ನನ್ನನ್ನು, ಧರ್ಮಸ್ಥಳ ಕೇತ್ರದ ಆಶ್ರಯದಲ್ಲಿ ನಡೆಯುವ ಉಜಿರೆಯ ಸಿದ್ಭವನ ಗುರುಕುಲಕ್ಕೆ ನನ್ನ ಮಾವ ಶಿವರಾಮ ಶಿಶಿಲರು ಸೇರಿಸಿ, ಹೈಸ್ಕೂಲು ಶಿಕ್ಷಣಕ್ಕೆ ಆಸ್ಪದ ಕಲ್ಪಿಸಿದ್ದರು. ಸಿದ್ಭವನ ಗುರುಕುಲ ಅನ್ನುವುದು ಹೆಸರಿಗೆ ಮಾತ್ರ ಗುರುಕುಲವಾಗಿರಲಿಲ್ಲ. ಸರಳವಾದ ಊಟ, ಓದಿಗೆ ಬೇಕಾದ ವಾತಾವರಣ, ಬೆಳಿಗ್ಗೆ ಐದಕ್ಕೆ ಎದ್ದರೆ ರಾತ್ರೆ ಹತ್ತರವರೆಗೆ ನಿದ್ದೆ ಮಾಡಬಾರದೆನ್ನುವ ಶಿಸ್ತು, ಸಂಜೆ ಆರಕ್ಕೆ ಊಟವಾದರೆ, ಏಳರಿಂದ ಏಳುವರೆವರೆಗೆ ಗುರುಕುಲದ ವಾರ್ಡನ್ ಜಿನರಾಜಶಾಸ್ತ್ರಿಗಳಿಂದ ಭಗವದ್ಗೀತಾ ಪಾರಾಯಣ. ಇದರೊಂದಿಗೆ ಎಂಟನೆ ಮತ್ತು ಒಂಬತ್ತನೆಯ ತರಗತಿಗಳವರಿಗೆ ಕಡ್ಡಾಯ ಜೈನಧರ್ಮ ಶಿಕ್ಷಣ ಮತ್ತು ಪರೀಕ್ಷೆ. ಸಂಸ್ಕೃತ ಮತ್ತು ಪ್ರಾಕೃತಗಳ ಗಂಧಗಾಳಿ ಇಲ್ಲದವರಿಗೆ ಇವೆಲ್ಲಾ ಕಬ್ಬಿಣದ ಕಡಲೆಗಳೇ. ಜೈನಧರ್ಮ ಪರೀಕೆಯಲ್ಲಿ ಫಲಿತಾಂಶ ಚೆನ್ನಾಗಿ ಬಾರದಿರುವಾಗ, ಜಿನರಾಜಶಾಸ್ತ್ರಿಗಳಿಗೆ ತಮ್ಮ ಶ್ರಮವೆಲ್ಲಾ ವ್ಯರ್ಥವಾಗುತ್ತಿದೆಯಲ್ಲಾ ಎಂಬ ಆತಂಕ ಕಾಡತೊಡಗಿತು. ಅದಕ್ಕೆ ಆ ಪರೀಕೆಗಳನ್ನು ಸ್ಪರ್ಧಾತ್ಮಕವಾಗಿಸಬೇಕೆಂಬ ಸಲಹೆಯನ್ನು ಧರ್ಮಸ್ಥಳದ ಈಗಿನ ಖಾವಂದರಾದ ಡಾ| ವೀರೇಂದ್ರ ಹೆಗ್ಗಡೆಯವರ ತಾಯಿ ರತ್ನಮ್ಮನವರ ಮುಂದಿರಿಸಿದರು. ರತ್ನಮ್ಮನವರು ಈ ಪರೀಕೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆಯುವ ಗುರುಕುಲದ ವಿದ್ಯಾರ್ಥಿಗಳಿಗೆ, ತಲಾ ರೂ. 50 ಮತ್ತು ರೂ. 25 ಬಹುಮಾನ ನೀಡುವುದಾಗಿ ಫೋಷಿಸಿದರು. ಅದು 1966ರ ಮಳೆಗಾಲ. ಅದು 25 ಪೈಸೆಗೆ ಒಂದು ತಟ್ಟೆ ತಿಂಡಿ, ಒಂದು ಲೋಟಾ ಕಾಫಿ ಸಿಗುತ್ತಿದ್ದ ಕಾಲ. ಬಡ ಕುಟುಂಬದಿಂದ ಬಂದ ನನ್ನಂತಹ ವಿದ್ಯಾರ್ಥಿಗಳಿಗೆ ಆಗ ಐವತ್ತು ರೂಪಾಯಿ ಅಂದರೆ ಕರ್ನಾಟಕ ಲಾಟರಿ ಯಲ್ಲಿ ಒಂದು ಲಕ್ಷ ಹೊಡೆಯುವುದಕ್ಕೆ ಸಮ. ಸರಿ, ನಮ್ಮಲ್ಲಿ ಸ್ಪರ್ಧೆ ಆರಂಭವಾಯಿತು.
ಎಂಟನೆಯ ತರಗತಿಯಲ್ಲಿ ನಮಗೆ ರತ್ನಕರಂಡ ಶ್ರಾವಕಾಚಾರ ಎಂಬ ಜೈನಧರ್ಮ ಗ್ರಂಥವನ್ನು ಪರೀಕೆಗೆ ನಿಗದಿಗೊಳಿಸಲಾಗಿತ್ತು. ಆ ಪರೀಕೆಯಲ್ಲಿ ನಾನು ಪ್ರಥಮ ಸ್ಥಾನ ಪಡೆದೆ. 1967ರ ಮಳೆಗಾಲದ ಒಂದು ದಿನ ರತ್ನಮ್ಮನವರು ಸಿದ್ಭವನಕ್ಕೆ ಬಂದರು. ಜಿನರಾಜ ಶಾಸ್ತ್ರಿಗಳು ಅಂದು ಜೈನಧರ್ಮ ಪರೀಕೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಅವರಿಂದ ಸರ್ಟಿಫಿಕೇಟು ಕೊಡಿಸಿದರು. ದ್ವಿತೀಯ ಸ್ಥಾನ ಪಡೆದ ತಿಮ್ಮಪ್ಪ ನಿಗೆ ಇಪ್ಪತ್ತೈದು ಮತ್ತು ಪ್ರಥಮ ಸ್ಥಾನ ಗಳಿಸಿದ ನನಗೆ ಐವತ್ತು ರೂಪಾಯಿ ನೀಡಿದರು. ಬಹುಮಾನ ನೀಡುವಾಗ ರತ್ಮಮ್ಮನವರು ‘ಜೈನಧರ್ಮ ಓದಲಿಕ್ಕಿರುವುದು ಮಾತ್ರವಲ್ಲ. ನೀವಿದರಲ್ಲಿ ಏನನ್ನು ಓದಿದಿರೋ ಅದನ್ನು ಆಚರಣೆಗೆ ತರಲು ನಿಮಗೆ ಸಾಧ್ಯವಾಗಬೇಕು. ನೀನು ಮಾಂಸ ತಿನ್ನದೆ ಇದ್ದರೆ ಜೈನಧರ್ಮ ಪರೀಕೆಯಲ್ಲಿ ಪ್ರಥಮನಾದುದಕ್ಕೆ ಸಾರ್ಥಕ’ ಎಂದಿದ್ದರು. ಹದಿನಾಲ್ಕರ ಹರೆಯದ ನಾನಾಗ ಅವರಂದುದಕ್ಕೆ ಹೌದೆಂಬಂತೆ
ತಲೆಯಾಡಿಸಿದ್ದೆ.
ಮರುವರ್ಷ ‘ದ್ರವ್ಯ ಸಂಗ್ರಹ’ ಜೈನ ಧರ್ಮ ಪರೀಕೆಯಲ್ಲಿ ಮತ್ತೆ ನಾನು ಗುರುಕುಲಕ್ಕೆ ಪ್ರಥಮನಾದೆ. ಅದು ಅಖಿಲ ಭಾರತ ಮಟ್ಟದ ಪರೀಕ್ಷೆ. ಭಾರತದಲ್ಲಿ ಆ ಪರೀಕೆಗೆ ಅದೆಷ್ಟು ಜನ ಹಾಜರಾಗಿದ್ದರೋ ನನಗೆ ತಿಳಿಯದು. ಆದರೆ ನನಗೆ ಆ ಪರೀಕೆಯಲ್ಲಿ ರಾಷ್ಟ್ರ ಮಟ್ಟದ ತೃತೀಯ ರ್ಯಾಂಕ್ ಬಂದಿತ್ತು. ಅಖಿಲ ಭಾರತ ಜೈನ ಪರಿಷತ್‌ನವರಿಂದ ಒಂದು ವಿದ್ಯಾರ್ಥಿವೇತನವೂ ದೊರೆಯಿತು. ಗುರುಕುಲಕ್ಕೆ ಬರುತ್ತಿರುವ ಮೊದಲ ರ್ಯಾಂಕದು. ಜಿನರಾಜ ಶಾಸ್ತ್ರಿಗಳಿಗೆ ಎಲ್ಲಿಲ್ಲದ ಸಂಭ್ರಮ. ವೀರೇಂದ್ರ ಹೆಗ್ಗಡೆಯವರು ಆಗ ತಾನೇ ಧರ್ಮಸ್ಥಳದ ಧರ್ಮಾಧಿಕಾರಿ ಪಟ್ಟವನ್ನು ಏರಿದ್ದರು. ಶಾಸ್ತ್ರಿಗಳು ಬಹುಮಾನ ವಿತರಣೆಗೆ ಹೆಗ್ಗೆಡೆಯವರನ್ನೇ ಕರೆದುಕೊಂಡು ಬಂದರು. ರ್ಯಾಂಕು ಸರ್ಟಿಫಿಕೇಟು ಮತ್ತು ಬಹುಮಾನ ವಿತರಿಸುವಾಗ ಹೆಗ್ಗಡೆಯವರು ‘ಜೈನನಲ್ಲದ ಒಬ್ಬ ಹುಡುಗ ಜೈನಧರ್ಮದಲ್ಲಿ ರ್ಯಾಂಕು ಗಳಿಸಿದ್ದು ಧರ್ಮಸ್ಥಳದ ಜಾತ್ಯತೀತ ಆದರ್ಶಕ್ಕೆ ತಕ್ಕಂತೆಯೇ ಇದೆ. ನಿಮಗೆಲ್ಲಾ ಗೊತ್ತಿರುವ ಹಾಗೆ ಶ್ರೀ ಕೇತ್ರದ ದೇವರು ಶಿವ. ಶಿವನ ಅರ್ಚಕರು ವೈಷ್ಣವರು. ಧರ್ಮಾಧಿಕಾರಿಯಾದ ನಾನು ಜನ್ಮತಾಃ ಒಬ್ಬ ಜೈನ. ಇದುವೇ ಶ್ರೀ ಕೇತ್ರದ ಜಾತ್ಯತೀತತೆ. ಆ ಸಂಪ್ರದಾಯ ಈ ಗುರುಕುಲದಲ್ಲೂ ಮುಂದು ವರಿಯುತ್ತಿರುವುದಕ್ಕೆ ಈ ರ್ಯಾಂಕು ಸಾಕ್ಷಿ. ಆದರೆ ಜೈನಧರ್ಮದ ಮೂಲ ಆಶಯವಾದ ಅಹಿಂಸಾ ಪರಮೋ ಧರ್ಮಃ ಎಂಬ ಮಾತನ್ನು ಈತ ಮಾಂಸಾಹಾರ ತ್ಯಾಗದ ಮೂಲಕ ಮಾಡಿದರೆ ಅದು ರ್ಯಾಂಕು ಗಳಿಸಿದ್ದಕ್ಕಿಂತಲೂ ದೊಡ್ಡ ಸಾಧನೆಯಾಗುತ್ತದೆ. ನಿನಗಿದು ಸಾಧ್ಯವಾ?’ ಎಂದು ಕಣ್ಣಲ್ಲಿ ಕಣ್ಣಿಟ್ಟು ಕೇಳಿದರು. ಹದಿನೈದರ ಹರೆಯದ ನಾನಾಗ ಅಳುಕುತ್ತಾ ‘ಪ್ರಯತ್ನಿಸಿ ನೋಡುತ್ತೇನೆ. ಸಾಧ್ಯವಾದೀತು’ ಎಂದಿದ್ದೆ.
ನನಗೆ ಮಾಂಸಾಹಾರದ ಬಗ್ಗೆ ಮೊದಲಿನಿಂದಲೂ ಇದ್ದ ಒಲವು ಅಷ್ಟಕಷ್ಟೇ. ಆದರೆ ಶಿಶಿಲದ ನಮ್ಮ ಮನೆಯಲ್ಲಿ ರಾತ್ರೆಯ ಊಟಕ್ಕೆ ಹೆಚ್ಚಾಗಿ ಒಣಗಿದ ಸಿಗಡಿಯನ್ನೋ, ಒಣಗಿದ ಮೀನನ್ನೇ ಸಾರು ಮಾಡುತ್ತಿದ್ದರು. ಅದು ಅತ್ಯಂತ ಸುಲಭ ಮತ್ತು ಮಿತವ್ಯಯಕಾರಿ ಕೂಡಾ. ಶಿಶಿಲದಲ್ಲಿ ತರಕಾರಿ ಸಾಕಷ್ಟು ಬೆಳೆಯುತ್ತಿದ್ದರೂ, ಮಿಡಿತೆಗಳ ಹಾವಳಿ, ಮಂಗ ಮತ್ತು ನರಿಗಳ ಕಾಟದಿಂದ ಒಂದೂ ನಮ್ಮ ಕೈಸೇರುತ್ತಿರಲಿಲ್ಲ. ಅರುವತ್ತರ ದಶಕದಲ್ಲಿ ಶಿಶಿಲಕ್ಕೆ ಬಸ್ಸೂ ಇರಲಿಲ್ಲ. ಹಾಗಾಗಿ ಹೊರಗಡೆಯಿಂದ ತರಕಾರಿ ಬರುವ ಮಾತು ದೂರವೇ ಉಳಿಯಿತು. ಒಣಮೀನನ್ನು ಮಾತ್ರ ಯಾರಾದರೂ ಆಗಾಗ ತರುತ್ತಲೇ ಇದ್ದರು. ಹಾಗಾಗಿ ಶಿಶಿಲದ ಬಹುತೇಕರಿಗೆ ಸಾರಿಗೆ ಅದೇ ಏಕೈಕ ಆಸರೆ.
ನನ್ನೊಬ್ಬ ಮಾವನಿಗೆ ಬೇಟೆಯ ಹುಚ್ಚಿತ್ತು. ಒಳ್ಳೆಯ ಮದ್ದಲೆವಾದಕರಾದ ಅವರನ್ನು ಬೇಟೆಯ ರಂಗಕ್ಕೆ ಎಳೆದದ್ದು ಓರ್ವ ಮಧ್ಯವಯಸ್ಕ ಬ್ರಾಹ್ಮಣ. ಆ ವ್ಯಕ್ತಿಯದು ಹೆಚ್ಚು ಕಡಿಮೆ ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿಯ ನಾರ್ಣಪ್ಪಯ್ಯನವರ ವ್ಯಕ್ತಿತ್ವ. ಶಿಶಿಲದಿಂದ ಅವರ ಮನೆಗೆ ಮೂರು ಮೈಲು ದೂರ. ಮಾಂಸ ತಿನ್ನಬೇಕೆಂಬ ಬಯಕೆಯಾದಾಗ ಅವರು ಕೋವಿ ಹೆಗಲಿಗೇರಿಸಿ ನೇರವಾಗಿ ನಮ್ಮಲ್ಲಿಗೆ ಬಂದುಬಿಡುತ್ತಿದ್ದರು. ಮಾವ ಒಂದು ಬಾಳುಕತ್ತಿಯನ್ನು ಹಿಡಿದುಕೊಂಡು ಜೊತೆಗೆ ಹೋಗುತ್ತಿದ್ದರು. ನಮ್ಮ ನಾರ್ಣಪ್ಪಯ್ಯ ಅಸಾಮಾನ್ಯ ಈಡುಗಾರ. ಅವರು ಅದೆಷ್ಟು ಜಿಂಕೆ, ಕಾಡು ಕುರಿ, ಕೆಂಚಳಿಲು, ಮೊಲಗಳನ್ನು ಬೇಟೆಯಾಡಿ ನಮ್ಮಲ್ಲಿಗೆ ತಂದು ಅಡುಗೆ ಮಾಡಿಸಿ ನಮ್ಮಡನೆ ಕೂತು ಉಂಡಿದ್ದರೋ?
ಅವರಲ್ಲದೆ ಇರುತ್ತಿದ್ದರೆ ನಮಗೆ ಮೀನು, ಕೋಳಿ ಬಿಟ್ಟರೆ ಬೇರಾವುದರ ರುಚಿಯೂ ಖಂಡಿತಾ ಗೊತ್ತಾಗುತ್ತಿರಲಿಲ್ಲ. ರಜಾಕಾಲದಲ್ಲಿ ನಾನು ಶಿಶಿಲಕ್ಕೆ ಹೋದಾಗ ಅವರೊಂದಿಗೆ ನಾನೂ ಬೇಟೆಗೆ ಹೋದದ್ದುಂಟು. ಈ ಎಲ್ಲಾ ಕಾರಣಗಳಿಂದಾಗಿ ಗುರುಕುಲದಲ್ಲಿ ಶುದ್ಧ ಶಾಖಾಹಾರಿಯಾಗಿದ್ದ ನಾನು, ಶಿಶಿಲದಲ್ಲಿ ಅನಿವಾರ್ಯ ಮಾಂಸಾಹಾರಿಯಾಗಿದ್ದೆ. ಆದುದರಿಂದ ವೀರೇಂದ್ರ ಹೆಗ್ಗಡೆಯವರೆದುರು ಮಾಂಸಾಹಾರ ತ್ಯಜಿಸುತ್ತೇನೆಂದು ಹೇಳಿದ್ದರೂ, ಅದನ್ನು ಬಿಟ್ಟರೆ ನಾನು ಶಿಶಿಲದಲ್ಲಿ ಉಪವಾಸವಿರಬೇಕಾಗುತ್ತಿತ್ತು.
ಕೊಟ್ಟ ಮಾತಿಗೆ : ಹತ್ತನೇ ತರಗತಿ ಉತ್ತೀರ್ಣನಾದ ಬಳಿಕ ಮತ್ತೆ ಆರ್ಥಿಕ ಅಡಚಣೆ ನನ್ನ ವಿದ್ಯಾಭ್ಯಾಸಕ್ಕೆ ತಡೆಯೊಡ್ಡಿತು. ನನಗಿಂತ ಕಡಿಮೆ ಮಾರ್ಕಿನವರು ಪಿ.ಯು.ಸಿ.ಗೆ ಹೋಗುತ್ತಿದ್ದುದನ್ನು ನೆನೆದು, ನನ್ನ ದೌರ್ಭಾಗ್ಯಕ್ಷ್ಕೆ ನಾನು ಕೊರಗುತ್ತಾ ಕೂತಿದ್ದಾಗ ನನ್ನ ಹಿರಿಯ ಮಾವ ಗೋಪಾಲಕೃಷ್ಣ ಮದ್ಲೆಗಾರ್ ನನ್ನನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ ತಾಲೂಕಿನ ಅಳಿಕೆಯ ಲೋಕಸೇವಾವೃಂದಕ್ಕೆ ಕರೆದೊಯ್ದರು. ಅದರ ಸಂಸ್ಥಾಪಕ ಅಧ್ಯಕ್ಷ ಮಡಿಯಾಲ ನಾರಾಯಣ ಭಟ್ಟರು ವಿರಾಟ್ ಹಿಂದೂ ಮಿಶನರಿ ಸಂಸ್ಥೆಯೊಂದನ್ನು ಕಟ್ಟುವ ಕನಸು ಕಂಡು ಪ್ರೇಮಕುಟೀರ ಎಂಬ ಆಶ್ರಮವನ್ನು ಸ್ಥಾಪಿಸಿದ್ದರು. ಅಲ್ಲಿ ನಲುವತ್ತು ಮಂದಿ ಹಿಂದೂ ಮಿಶನರಿಗಳಿದ್ದರು. ಆಶ್ರಮದಲ್ಲಿ ಸಹಾಯಕ ಅಡುಗೆ ಭಟ್ಟನ ಹುದ್ದೆ ಖಾಲಿಯಿತ್ತು. ಅಡುಗೆ ಕೆಲಸದ ಓಂನಾಮ ತಿಳಿಯದ ನಾನು ಮುಂದೆ ಶಿಕ್ಷಣ ಮುಂದುವರೆಸಲು ಸಾಧ್ಯ ಎಂದು ಆ ಕೆಲಸಕ್ಕೆ ಸೇರಿಕೊಂಡೆ.
ನಾನಲ್ಲಿ ಕೆಲಸಕ್ಕೆ ಸೇರಿದ ಎರಡೇ ತಿಂಗಳಲ್ಲಿ ಅಲ್ಲಿನ ಪ್ರಧಾನ ಬಾಣಸಿಗ ಕೇಶವ ಭಟ್ಟರು, ನಾರಾಯಣ ಭಟ್ಟರ ಮಡಿಯಾಲ ಮನೆಗೇ ಬಾಣಸಿಗನಾಗಿ ಹೋಗಬೇಕಾಯಿತು. ಮಡಿಯಾಲ ನಾರಾಯಣ ಭಟ್ಟರನ್ನು ಅಳಿಕೆಯಲ್ಲಿ ಎಲ್ಲರೂ ‘ಅಣ್ಣ’ ಎಂದು ಕರೆಯುತ್ತಿದ್ದರು. ಅಣ್ಣ ತಮ್ಮಂದಿರಾಗಲೀ, ಅಕ್ಕ ತಂಗಿಯರಾಗಲೀ ಇಲ್ಲದ ನನಗೆ ಒಬ್ಬ ಅಣ್ಣ ದೊರಕಿದ್ದರು. ಕೇಶವ ಭಟ್ಟರು ವರ್ಗವಾದಾಗ ಅವರು ನನ್ನನ್ನು ಕರೆದು ‘ಇನ್ನು ಮುಂದೆ ನೀನೇ ಇಲ್ಲಿಯ ವಲಲ. ನಿನಗೊಬ್ಬ ಅಸಿಸ್ಟೆಂಟ್ ಇಂದೇ ಬರ್ತಾನೆ’ ಎಂದಿದ್ದರು. ಅದಾಗಲೇ ಅನೇಕ ಬಗೆಯ ಸಾರು, ಸಾಂಬಾರು, ತಂಬುಳಿ, ಚಟ್ನಿ, ಪಲ್ಯ ಮಾಡಲು ಕಲಿತಿದ್ದ ನನಗೆ ಅಣ್ಣನವರ ಮಾತಿನಿಂದ ಗಾಬರಿಯೇನಾಗಿರಲಿಲ್ಲ. ಹದಿನಾರರ ಹರೆಯದ ನಾನು, ನಲುವತ್ತು ಮಂದಿ ಆಶ್ರಮವಾಸಿಗಳಿಗೆ ಮೂರು ತಿಂಗಳುಗಳ ಕಾಲ ಊಟ ತಿಂಡಿ ಮಾಡಿ ಹಾಕಿ ಸೇವೆ ಸಲ್ಲಿಸಿದೆ. ಈಗ ಮಾತ್ರ ನಾನು ಅವನ್ನೆಲ್ಲಾ ಮಾಡಿದ್ದು ಹೌದೇ ಎಂದು ನನ್ನನ್ನು ನಾನು ಪ್ರಶ್ನಿಸಿಕೊಳ್ಳುವುದುಂಟು !
ಒಂದು ದಿನ ಅಣ್ಣನವರಿಗೆ ಬಹಳ ಇಷ್ಟದ ‘ಗುಡ್ಡೆ ಕೊಡಿ ತಂಬುಳಿ’ ಮಾಡಿ ಬಡಿಸುತ್ತಿದ್ದಾಗ, ಅವರು ಅದನ್ನು ಚಪ್ಪರಿಸುತ್ತಾ ‘ಬಹಳ ಚೆನ್ನಾಗಿದೆ ಮಾರಾಯ ಪ್ರಭಾಕರ. ನಾವೆಲ್ಲಾ ಸನ್ಯಾಸಿಗಳು. ನಮಗೆ ಅಡುಗೆ ಮಾಡಿ ಹಾಕುವ ನೀನು ನಮಗೆಲ್ಲಾ ತಾಯಿ ಆಗಿಬಿಟ್ಟೆ. ಅಂದ ಹಾಗೆ ನೀನು ನಮ್ಮ ಹಾಗೆ ಸಸ್ಯಾಹಾರಿಯಾ, ಅಥವಾ ಮಾಂಸಾಹಾರಿಯಾ?’ ಎಂದು ಪ್ರಶ್ನಿಸಿದರು. ನಾನವರಿಗೆ ಆಗ ಶಿಶಿಲಕ್ಕೆ ಹೋದಾಗ ನಾನು ಮಾಂಸಾಹಾರಿಯಾಗಲೇ ಬೇಕಾದ ಅನಿವಾರ್ಯತೆಯನ್ನು ವಿವರಿಸಿದೆ. ಆಗವರು ‘ನೋಡು, ನಾವೆಲ್ಲಾ ಸಸ್ಯಾಹಾರಿಗಳು. ನಮ್ಮ ಅನ್ನದಾತನಾದ ನೀನು ಕೂಡಾ ಸಸ್ಯಾಹಾರಿಯಾಗಬೇಡವಾ? ನಿನಗೆ ಗೊತ್ತಿಲ್ಲ. ಸಸ್ಯಾಹಾರಿಗಳು ಮಾಂಸಾಹಾರಿಗಳಿಗಿಂತ ಹೆಚ್ಚು ಕಾಲ ನಿರೋಗಿಗಳಾಗಿ ಬದುಕುತ್ತಾರೆ. ಹೇಗೆ? ನನ್ನ ಮಾತು ಪಾಲಿಸುತ್ತೀಯಾ?’ ಎಂದು ಕೇಳಿದರು. ಅವರ ಜೀವನಾದರ್ಶಗಳನ್ನು ಹತ್ತಿರದಿಂದ ನೋಡಿಬಲ್ಲ ನನಗೆ ಅವರು ಹಾಗೆ ಕೇಳಿದಾಗ ಇಲ್ಲವೆನ್ನನಲಾಗಲಿಲ್ಲ. ಹಾಗೆ ಅವರಿಗೆ ಮಾತು ಕೊಟ್ಟವ 1969ರಿಂದ ಇಲ್ಲಿಯವರೆಗೆ ಮಾಂಸ ತಿಂದಿಲ್ಲ. ನನಗೆ ಜೈನಧರ್ಮ ಕಲಿಸಿದ ಜಿನರಾಜಶಾಸ್ತ್ರಿಗಳು ಈಗ ಬದುಕಿಲ್ಲ. ನನ್ನನ್ನು ತಾಯಿ ಮತ್ತು ಅನ್ನದಾತನೆಂದು ಕರೆದು ನನ್ನಲ್ಲಿ ಅತೀವ ಆತ್ಮವಿಶ್ವಾಸ ಮೂಡಿಸಿದ್ದ ನನ್ನ ಗುರು ಮಡಿಯಾಲ ನಾರಾಯಣ ಭಟ್ಟರು, ಕಾರು ಅಪಘಾತವೊಂದರಲ್ಲಿ ತೀರಿಹೋದರು. ಆದರೆ ಆ ಪ್ರಭಾವ ಹಾಗೆ ಉಳಿದು ನನ್ನನ್ನು ಸಸ್ಯಾಹಾರಿಯನ್ನಾಗಿಸಿದೆ.
ನನ್ನ ಸಸ್ಯಾಹಾರದ ಹಿನ್ನೆಲೆಯನ್ನು ಕೇಳಿದ ಮದಾಂ ಜೋಸೆಟ್ಟ್ ಗಿರಾರ್ಡ್ ಆಶ್ಚರ್ಯದಿಂದ ನನ್ನ ಮುಖವನ್ನೇ ನೋಡಿದಳು. ‘ಹಾಗಾದರೆ ನಿನಗೀಗ ಮಾಂಸಾಹಾರ ಕಂಡರೆ ಆಸೆ ಆಗುವುದಿಲ್ವೆ?’ ಎಂದು ಪ್ರಶ್ನಿಸಿದಳು. ‘ಮಾಂಸಾಹಾರ ತ್ಯಜಿಸಿದ ಆರಂಭದಲ್ಲಿ ಆಗುತ್ತಿತ್ತು. ಈಗ ಖಂಡಿತಾ ಇಲ್ಲ. ಅಷ್ಟು ಮನೋನಿಗ್ರಹ ಸಾಧ್ಯವಾಗಿದೆ. ಅಲ್ಲದೆ ಒಂದು ತತ್ವಕ್ಕೆ ಬದ್ಧರಾದ ಮೇಲೆ ಅದನ್ನು ನಿಷ್ಠೆಯಿಂದ ಪಾಲಿಸುವಾಗ ಸಿಗುವ ಸಂತೋಷಕ್ಕೆ ಎಣೆಯೇ ಇಲ್ಲ’ ಅಂದೆ. ‘ಹೌದು ಮಾರಾಯ. ನಿನ್ನ ಗಾಂಧಿ ಬರೆದ ಮೈ ಎಕ್ಸ್‌ಪರಿಮೆಂಟ್ಸ್ ವಿದ್ ಟ್ರುತ್ ಓದಿದ್ದೇನೆ. ಅದರಲ್ಲಿ ಆತ ನೀನು ಈಗ ಹೇಳಿದ ಮಾತನ್ನೇ ಹೇಳಿದ್ದಾನೆ’ ಎಂದು ನನ್ನ ಭುಜ ತಟ್ಟಿದಳು.
ಫ್ರಾನ್ಸಿನಲ್ಲಿ ನನ್ನ ಮತ್ತು ಹೆಬ್ಬಾರರ ಸಸ್ಯಾಹಾರದ ಯಶಸ್ಸಿನ ಕತೆಯನ್ನು ತುಲೋಸಿನ ಬೀಳ್ಕೂಡುವ ಸಮಾರಂಭದಲ್ಲಿ ಹೇಳಿದ್ದೆ. ಅದನ್ನು ಕೇಳಿದ ಜುವಾನ್ ಬುಯೋ ನನ್ನ ಬಳಿಗೆ ಬಂದು ನನ್ನನ್ನು ಆಲಿಂಗಿಸಿಕೊಂಡು ‘ಫ್ರಾನ್ಸಿನಲ್ಲಿ ಮಾಂಸ ಮತ್ತು ಮದ್ಯಗಳಿಲ್ಲದೆ ಒಂದು ತಿಂಗಳು ಕಳೆಯುವುದೆಂದರೆ ಅದು ಬಹಳ ದೊಡ್ಡ ಸಾಧನೆ. ನೀನು ಮತ್ತು ನಿನ್ನ ಶೆಫ್‌ದ ಗ್ರುಫ್ (ತಂಡದ ನಾಯಕ್ಷ) ಹೆಬ್ಬಾರರು ನಿಜಕ್ಕೂ ಗ್ರೇಟ್!’ ಅಂದಿದ್ದ. ಅಂಗವಿಕಲರಿಗಾಗಿ ಸಂಸ್ಥೆಯೊಂದನ್ನು ನಡೆಸುವ ಜುವಾನ್‌ಬುಯೋನಿಗೆ ‘ನೀನು ಗ್ರೇಟ್’ ಎಂದಾಗ ಅವನದನ್ನು ‘ಎಸ್, ಎಸ್’ ಎಂದು ಹೇಳಿ ಸ್ವೀಕರಿಸಿದ್ದ. ಆದರೆ ನನಗೆ ಮಾತ್ರ ಅವನ ಮಾತುಗಳನ್ನು ಕೇಳಿ ತೀರಾ ಮುಜುಗರವಾಯಿತು.
ಫ್ರಾನ್ಸಿನಲ್ಲಿ ನಾನಿದ್ದ ಮೂವತ್ತೈದು ದಿನ ಫ್ರೆಂಚರು ನನಗೆ ನೀಡುತ್ತಿದ್ದ ಹಸಿ ತರಕಾರಿ ಮತ್ತು ಸೊಪ್ಪು ನಾಲಿಗೆಗೆ ಹಿಡಿಸುತ್ತಿರಲಿಲ್ಲ. ಬದುಕುವುದಕ್ಕಾಗಿ ನಾನವನ್ನು ತಿನ್ನಲೇಬೇಕಾಗಿತ್ತು. ಆದರೆ ಅದು ಅತ್ಯಂತ ಪೌಷ್ಟಿಕ ಆಹಾರವಾಗಿತ್ತು. ಅಲ್ಲದೆ ಅಲ್ಲಿ ತಾಜಾ ಹಣ್ಣು ಹಂಪಲು, ಒಂದು ಹನಿ ನೀರು ಸೇರಿಸದ ಹಾಲು ನನಗೆ ಯಾವಾಗಲೂ ಸಿಗುತ್ತಿದ್ದವು. ಆದುದರಿಂದ ಅಲ್ಲಿದ್ದಷ್ಟು ದಿನ ನನಗೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿರಲಿಲ್ಲ. ಬದಲಾಗಿ, ಪೌಷ್ಟಿಕಾಹಾರ ಸೇವಿಸುತ್ತಿದ್ದುದರ ಪರಿಣಾಮವಾಗಿ ನನ್ನ ತೂಕ ನಾಲ್ಕೂವರೆ ಕೆ.ಜಿ. ಹೆಚ್ಚಿತ್ತು. ಅಲ್ಲದೆ ಅಲ್ಲಿನ ಹವಾಮಾನದಿಂದಾಗಿ ನಾನು ಸ್ವಲ್ಪ ಬೆಳ್ಳಗಾಗಿ ಕೆನ್ನೆಗಳು ಕೆಂಪನೆ ಹೊಳೆಯುತ್ತಿದ್ದವು!
ಮೂರು ದಿನದಾ ಬಾಳು
ವಯಸ್ಸಾದುದನ್ನು ತೋರ್ಪಡಿಸದೆ ಇರುವುದು ಫ್ರೆಂಚರ ಇನ್ನೊಂದು ಗುಣ. ತುಲೋಸಿನ ಮ್ಯಾಗಿಗೆ ನಾನು ‘ಮದರ್’ ಅಂದಾಗ ಸಿಟ್ಟು ಬಂದಿತ್ತು. ನನ್ನ ವಯಸ್ಸನ್ನು ಕೇಳಿ ತಿಳಿದುಕೊಂಡಿದ್ದ ಅವಳು ಫ್ರಾನ್ಸಿನಲ್ಲಿ ಮಹಿಳೆಯರ ವಯಸ್ಸನ್ನು ಕೇಳಕೂಡದೆಂದು ತಾಕೀತು ಮಾಡಿದ್ದಳು. ಮೂವರು ಮಕ್ಕಳ ತಾಯಿ ಮತ್ತು ಐದು ಮೊಮ್ಮಕ್ಕಳ ಅಜ್ಜಿಯಾದ ಮ್ಯಾಗಿ ಮಿನಿಸ್ಕರ್ಟು ಹಾಕಿ, ಸ್ಲೀವ್‌ಲೆಸ್ ಧರಿಸಿ, ಅತ್ತರು ಪೂಸಿ, ಬೇರೆ ಬೇರೆ ಬಣ್ಣದ ಕನ್ನಡಕ ಹಾಕಿ, ಠಾಕು ಠೀಕಾಗಿ ನಡೆಯುತ್ತಾಳೆ. ಫಿಜೆಯಾಕಿನ ನಿಕೋಲಳದ್ದೂ ಅದೇ ಸ್ವಭಾವ. ಮಾಂಪಿಲಿಯೇದ ಎಪ್ಪತ್ತೈದರ ಡಾ| ಜುವಾನನಿಗೆ ದೃಷ್ಟಿದೋಷವಿದೆ. ಹಾಗಂತ ನನ್ನೆದುರು ಅವನು ಕನ್ನಡಕ ಹಾಕುತ್ತಿರಲಿಲ್ಲ. ಇಂತಹ ಉದಾಹರಣೆಗಳು ಪ್ರವಾಸದುದ್ದಕ್ಕೂ ನನಗೆ ದೊರೆತಿದ್ದವು.
ಫ್ರೆಂಚರಿಗೆ ‘ಮಾನವರಿಗಿರುವುದು ಒಂದೇ ಜನ್ಮ’ ಎನ್ನುವುದು ಖಚಿತವಾಗಿ ಗೊತ್ತು. ಹಾಗಾಗಿ ಸಾಧ್ಯವಿರುವಾಗ ಜೀವನವನ್ನು ಪೂರ್ತಿಯಾಗಿ ಅನುಭವಿಸುವುದು ಅವರ ಸ್ವಭಾವ. ಅದಕ್ಕಾಗಿ ಅವರು ಸದಾ ದೇಹದ ಫಿಟ್‌ನೆಸ್ಸಿಗೆ ಮಹತ್ವ ನೀಡುತ್ತಾರೆ. ದೇಹವೆಂದರೆ ಸುಖದ ಬುಗ್ಗೆ ಎಂದು ತಿಳಿದುಕೊಂಡಿರುವ ಅವರು, ವಾರಕ್ಕೊಮ್ಮೆ ಹದಿನೈದರಿಂದ ಇಪ್ಪತ್ತು ಕಿ.ಮೀ. ಜಾಗಿಂಗ್ ಹೋಗುತ್ತಾರೆ. ಎಂತಹಾ ಮುದುಕರಾದರೂ ವಾರಕ್ಕೊಮ್ಮೆ ನಲ್ವತ್ತು ಐವತ್ತು ಕಿ.ಮೀ. ಸೈಕ್ಲಿಂಗ್ ಮಾಡುತ್ತಾರೆ. ಪೌಷ್ಟಿಕ ಆಹಾರ, ಸರಿಯಾದ ವ್ಯಾಯಾಮಗಳಿಂದಾಗಿ ತೊಂಬತ್ತರ ಮುದುಕರೂ ಕೂಡಾ ಲಟ್ಟ ನಡೆಯುತ್ತಾರೆ. ನಾನು ಫ್ರಾನ್ಸಿನಲ್ಲಿ ಎಪ್ಪತ್ತು ದಾಟಿದ ಅದೆಷ್ಟೋ ಮಂದಿಯನ್ನು ಕಂಡಿದ್ದೇನೆ. ಯಾರ ಬೆನ್ನೂ ಬಾಗಿಲ್ಲ. ಕೈಗೆ ಕೋಲು ಬಂದಿಲ್ಲ! ಮಿಷೇಲನ ರಾಕ್ ಎನ್ ರೋಲ್‌ನಲ್ಲಿ ಹದಿಹರೆಯದವರೊಡನೆ ನರ್ತಿಸಿ, ಜೀವನೋತ್ಸಾಹ ಉಳಿಸಿಕೊಳ್ಳುವ ಮುದುಕರನ್ನು ಕಂಡು ನಿಜಕ್ಕೂ ದಂಗಾಗಿದ್ದೇನೆ.
ಸ್ವಾವಲಂಬನೆಯ ಪಾಠ : ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಗೆ ಫ್ರೆಂಚರು ಬಹಳ ಮಹತ್ವ ನೀಡುತ್ತಾರೆ. ಎಳವೆಯಲ್ಲೇ ಮಕ್ಕಳಿಗೆ ಸ್ವಾವಲಂಬನೆಯ ಪಾಠ ದೊರೆಯುತ್ತದೆ. ಮಕ್ಕಳಿಗೆ ನಾಲ್ಕು ವರ್ಷ ಕಳೆದ ಮೇಲೆ ಪ್ರತ್ಯೇಕ ಬೆಡ್‌ರೂಮು ನೀಡಲಾಗುತ್ತದೆ. ಕೆಲಸ ದೊರೆತ ಮೇಲೆ ಮಕ್ಕಳು ಹೆತ್ತವರಿಂದ ಪ್ರತ್ಯೇಕವಾಗುತ್ತಾರೆ. ಮಕ್ಕಳು ದೊಡ್ಡವರಾದ ಮೇಲೆ ಫ್ರೆಂಚರದು ಏಕಾಂತದ ಬದುಕು. ಹಾಗಾಗಿ ವೃದ್ಧಾಪ್ಯದಲ್ಲಿ ಫ್ರೆಂಚರು ಬಹಳ ಎಚ್ಚರಿಕೆಯಿಂದ ಜೀವನ ಸಾಗಿಸುವುದು ಅನಿವಾರ್ಯವಾಗಿರುತ್ತದೆ. ಏನೂ ಕೂಡುವುದಿಲ್ಲ ಎಂದು ಇವರು ಹಾಸಿಗೆ ಹಿಡಿದು ಮಲಗುವುದಿಲ್ಲ. ವೃದ್ಧ ದಂಪತಿಯರಲ್ಲಿ ಯಾರಾದರೂ ಒಬ್ಬರು ಮಡಿದರೆ, ಬದುಕುಳಿದ ಇನ್ನೊಬ್ಬರಿಗೆ ವೃದ್ಧಾಶ್ರಮವೇ ಗತಿ. ಭೂತ ಬಂಗ್ಲೆಯಂತಹ ಅವರ ವಿಶಾಲವಾದ ಮನೆಯಲ್ಲಿ ಅವರನ್ನು ನೋಡಿಕೊಳ್ಳುವವರಾದರೂ ಯಾರು?
ಫ್ರೆಂಚರು ಎಳವೆಯಲ್ಲೇ ತಮ್ಮ ಮಕ್ಕಳಲ್ಲಿ ಸಾಹಸವನ್ನು ಪ್ರಚೋದಿಸುತ್ತಾರೆ. ಏಳೆಂಟು ತಿಂಗಳ ಮಕ್ಕಳನ್ನು ಅವರು ಈಜುಕೊಳಕ್ಕಿಳಿಸಿ, ಈಜು ಕಲಿಸಲು ಆರಂಭಿಸುತ್ತಾರೆ. ಸಣ್ಣ ಮಕ್ಕಳಿಗೆ ಸ್ಕೇಟಿಂಗ್, ಹಿಮ ಜಾರುವಿಕೆ (ಸ್ಕೈಯಿಂಗ್) , ಸೈಕ್ಲಿಂಗ್ ಕಲಿಸಿಕೊಡುತ್ತಾರೆ. ರಗಿಪ್, ಟೆನ್ನಿರ್ಸ್, ಫುಟ್‌ಬಾಲ್‌ನಂತಹ ಕ್ರೀಡೆಗಳೊಡನೆ ಫ್ರೆಂಚ್ ಮಕ್ಕಳು ಶಿಲಾರೋಹಣ, ಪರ್ವತಾರೋಹಣ, ವಿಂಡ್‌ಸರ್ಫಿಂಗ್‌ನಂತಹ ಸಾಹಸಕ್ಕೂ ಇಳಿಯುತ್ತಾರೆ. ಸರೋವರಗಳನ್ನು ಪಿಕ್ನಿಕ್ ತಾಣವನ್ನಾಗಿಸುವುದು ಫ್ರೆಂಚರ ವೈಶಿಷ್ಟ್ಯ. ಬೇಸಿಗೆ ಬಂತೆಂದರೆ ಸರೋವರದ ದಂಡೆಯಲ್ಲಿ, ಗುಪ್ತಾಂಗವನ್ನು ಮಾತ್ರ ಮುಚ್ಚಿ ಮುಕ್ತವಾಗಿ ಲಿಂಗಭೇದವಿಲ್ಲದೆ ಸೂರ್ಯಸ್ನಾನ ಮಾಡುತ್ತಾರೆ. ರಜಾದಿನಗಳಲ್ಲಿ ಶಯನಕ್ಕೆ, ಅಡುಗೆಗೆ, ಮತ್ತು ಟಾಯ್ಲಯೆಟ್ಟಿಗೆ ವ್ಯವಸ್ಥೆಯಿರುವ, ಫ್ರಿಜ್‌ಸಜ್ಜಿತ ಕ್ಯಾರವಾನ್‌ಗಳಲ್ಲಿ ಸಮುದ್ರದಂಡೆಗೋ, ಪರ್ವತಪ್ರದೇಶಕ್ಕೋ ಪ್ರವಾಸ ಹೋಗುತ್ತಾರೆ. ಹಾಗೆ ಪ್ರವಾಸ ಹೋಗುವವರ ಕ್ಯಾರವಾನಿನ ಟಾಪಿನಲ್ಲಿ ಎರಡು ಸೈಕಲ್ಲುಗಳಿರುತ್ತವೆ. ಪ್ರವಾಸ ಕಾಲದಲ್ಲಿ ವ್ಯಾಯಾಮ ಮಾಡಲು! ಫ್ರಾನ್ಸಿನಲ್ಲಿ ಏರೋಬೆಕ್ರ್ಸ್ ಮತ್ತು ಜಿಮಾನಸ್ಟಿಕ್ ಶಾಲೆಗಳಿಗೆ ಬಿಡುವೆಂಬುದೇ ಇರುವುದಿಲ್ಲ. ವೃದ್ಧಾಪ್ಯವನ್ನು ಮುಂದೂಡುವ ಎಲ್ಲಾ ತಂತ್ರಗಳಿಗೆ ಅವರು ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಯೋಗಾಸನ ಮತ್ತು ಪ್ರಾಣಾಯಾಮ ಅಂತಹಾ ಒಂದು ತಂತ್ರ ಎಂದು ನಾನು ಹೇಳಿದಾಗ ನನಗೆ ಕೆಲವು ಶಿಷ್ಯರು ದೊರೆತದ್ದು ಹೀಗಾಗಿ. ಭಾರತದಿಂದ ಫ್ರಾನ್ಸಿಗೆ ಯಾರಾದರೂ ಯೋಗಾಸನ ಪಟುಗಳು ಹೋಗಿ, ಅಲ್ಲಿ ನೆಲೆನಿಂತು, ಯೋಗಾಸನ ತರಗತಿ ನಡೆಸಿದರೆ ಕೆಲವೇ ವರ್ಷಗಳಲ್ಲಿ ಅವರು ಕೋಟ್ಯಧಿಪತಿಗಳಾಗುವುದು ಗ್ಯಾರಂಟಿ!
ಕೇರೆ ಮತ್ತು ನಾಗರಹಾವು : ಫ್ರಾನ್ಸಿನಲ್ಲಿ ಗಂಡು ಹೆಣ್ಣಿನ ದೈಹಿಕ ಸಂಬಂಧ ಬಹಳ ಬೇಗ ಆರಂಭವಾಗುತ್ತದೆ. ಹದಿಹರೆಯದವರು ಯಾವ ಎಗ್ಗೂ ಇಲ್ಲದೆ ಜನನಿಬಿಡ ಬೀದಿಗಳಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ಗಾಢಚುಂಬನದಲ್ಲಿ ಮೈಮರೆಯುವ ದೃಶ್ಯ ಫ್ರಾನ್ಸಿನಲ್ಲಿ ತೀರಾ ಸಾಮಾನ್ಯವಾದುದು. ಪ್ಯಾರಿಸ್, ತುಲೋರ್ಸ್ ಮತ್ತು ಮಾಂಪಿಲಿಯೇದಂತಹಾ ಮಹಾನಗರಗಳಲ್ಲಿ ಹೀಗೆ ಮೈಮರೆಯುವವರ ಸಂಖ್ಯೆ ಅಧಿಕ. ಫಿಜೆಯಾಕ್, ಮಜಾಮೆ, ಕ್ಯಾಸ್ತಲ್‌ನೂದರಿಯಂತಹಾ ಪುಟ್ಟ ಪಟ್ಟಣಗಳಲ್ಲಿ ಅಂತಹಾ ಒಂದು ದೃಶ್ಯವೂ ನನ್ನ ಕಣ್ಣಿಗೆ ಬಿದ್ದಿರಲಿಲ್ಲ. ಪ್ಯಾರಿಸ್ಸಿನಲ್ಲಿ ಪುಟ್‌ಪಾತಿಗೆ ತಾಗಿಕೊಂಡೇ ರೆಸ್ಟುರಾಗಳಿರುತ್ತವೆ. ನಾಲ್ಕೈದು ಮಂದಿ ಯುವಕರ ಗುಂಪು ಒಂದು ಟೇಬಲ್‌ನ ಸುತ್ತ ಕೂತು ಆರಾಮವಾಗಿ ಬೀರು ಹೀರುತ್ತಿರುತ್ತಾರೆ. ಅವರಲ್ಲೊಬ್ಬನ ತೊಡೆಯ ಮೇಲೆ ಹೆಣ್ಣೊಬ್ಬಳು ಕೂತು ಪ್ರಣಯಚೇಷ್ಟೆ ಆರಂಭಿಸುತ್ತಾಳೆ. ಅಂತಹಾ ದೃಶ್ಯಗಳನ್ನು ಆರಂಭದಲ್ಲಿ ನಾವು ನಿಬ್ಬೆರಗಾಗಿ ನೋಡುತ್ತಿದ್ದೆವು. ಆದರೆ ಬೀರು ಹೀರುವ ಇತರ ಮಂದಿಗಳು ಅವರಿಬ್ಬರನ್ನು ನೋಡದೆ ತಮ್ಮ ಪಾಡಿಗೆ ತಾವು ಹಾಯಾಗಿರುತ್ತಾರೆ. ನಮ್ಮ ಅತಿಥೇಯರೊಡನೆ ನಾವು ಫ್ರಾನ್ಸ್ ಸುತ್ತುತ್ತಿದ್ದಾಗ ಗಂಡುಹೆಣ್ಣಿನ ಪ್ರಣಯ ಚೇಷ್ಟೆ ಕಣ್ಣಿಗೆ ಬಿದ್ದಾಗಲೆಲ್ಲಾ ಅವರಿಗೆ ಮುಜುಗರವಾಗುತ್ತಿತ್ತು. ಆದರೆ ಅವರೇನೂ ಮಾಡುವಂತಿರಲಿಲ್ಲ. ಎಷ್ಟಾದರೂ ತಮ್ಮ ಹರೆಯದಲ್ಲಿ ಇಂತಹದ್ದನ್ನೆಲ್ಲಾ ಅವರೂ ಸಾಕಷ್ಟು ಮಾಡಿದವರೇ ತಾನೆ!
ಫ್ರಾನ್ಸಿನ ವಸಾಹತಾಗಿದ್ದ ಆಲ್ಜೀರಿಯಾದಿಂದ ಫ್ರಾನ್ಸಿಗೆ ವಲಸೆ ಬಂದ ಕರಿಯ ಅಲ್ಜೀರಿಯನ್ನರನ್ನು ಪ್ರವಾಸದುದ್ದಕ್ಕೂ ನಾನು ಸಾಕಷ್ಟು ಕಂಡಿದ್ದೇನೆ. ಆಫ್ರಿಕಾದ ಬಹುತೇಕ ರಾಷ್ಟ್ರಗಳಲ್ಲಿ ಕ್ಷಾಮ ಅಥವಾ ಅಂತರ್ಯುದ್ಧ ನಿತ್ಯದ ಗೋಳು. ಆದುದರಿಂದ ಆಫ್ರಿಕನನರು ನಿಧಾನವಾಗಿ ತಮ್ಮ ದೇಶ ಬಿಡುತ್ತಿದ್ದಾರೆ. ಅಂತಹಾ ಕರಿಯರಲ್ಲಿ ಹೆಚ್ಚಿನವರು ಯುರೋಪಿನಲ್ಲಿ, ಅದರಲ್ಲೂ ಮುಖ್ಯವಾಗಿ ಫ್ರಾನ್ಸ್ ಮತ್ತು ಸ್ಪೈನ್‌ಗಳಲ್ಲಿ ತಳವೂರುತ್ತಿದ್ದಾರೆ. ದೂರದ ವೆಸ್ಟಿಂಡೀರ್ಸ್‌ನಿಂದಲೂ ಫ್ರಾನ್ಸಿಗೆ ಬಂದು ನೆಲೆನಿಂತವರು ಸಾಕಷ್ಟಿದ್ದಾರೆ. ಬಿಳಿಯ ಗಂಡಸರಿಗೆ ಈ ಕರಿಯರ ಬಗ್ಗೆ ಒಳ್ಳೆಯ ಭಾವನೆಯೇನೂ ಇಲ್ಲ. ಆದರೆ ಉಕ್ಕಿನ ಸ್ನಾಯುಗಳು, ಕಡೆದಿರಿಸಿದ ಕೃಷ್ಣಶಿಲಾಮೂರ್ತಿಗಳಂತಿರುವ, ಪೌರುಷದ ಪ್ರತೀಕಗಳಾಗಿರುವ ಕರಿ ಗಂಡಸರನ್ನು ಸಾಕಷ್ಟು ಮಹಿಳೆಯರು ಇಷ್ಟಪಡುತ್ತಾರೆ. ಪ್ಯಾರಿಸ್ಸಿನಲ್ಲಿ ಕರಿ ಗಂಡು ಬಿಳಿ ಹೆಣ್ಣು ಜೋಡಿಗಳು ಎಲ್ಲಿ ಬೇಕೆಂದರಲ್ಲಿ ನಮಗೆ ಕಾಣಸಿಗುತ್ತಿದ್ದವು. ಒಂದು ದಿನ ಸೋಬೋನ್‌ನ ಯುನಿವರ್ಸಿಟಿಯ ಎದುರಿನಿಂದ ಹಾದುಹೋಗುವಾಗ, ಕರಿಯನೊಬ್ಬ ಅಪ್ಸರೆಯಂತಿರುವ ಬಿಳಿ ಹೆಣ್ಣೊಬ್ಬಳೊಡನೆ ಲಲ್ಲೆಯಾಡುತ್ತಿದ್ದುದನ್ನು ನೋಡಿ ‘ನಿಮ್ಮಮಿಬ್ಬರದೊಂದು ಫೋಟೋ ಹೊಡಿಯಲಾ’ ಎಂದು ಕೇಳಿದೆ. ತಕ್ಷಣ ಆ ಬಿಳಿ ಹೆಣ್ಣನ್ನು ತನ್ನ ತೋಳುಗಳಲ್ಲಿ ಬಂಧಿಸಿದ ಆ ಕರಿಯ ನಗುತ್ತಾ ‘ಈಗ ಹೊಡಿ’ ಎಂದು ಫೋಸು ಕೊಟ್ಟ. ಮಾಂಪಿಲಿಯೇ ಮಹಾನಗರದಲ್ಲಿ ನಾವಿಳಿದುಕೊಂಡಿದ್ದ ಹೋಟೇಲಿನ ಎದುರುಗಡೆ ಕಂಬಗಳ ಮರೆಯಲ್ಲಿ, ಪರಸ್ಪರ ಅಪ್ಪಿಕೊಂಡು ಮುದ್ದಾಡುವ ಬಿಳಿ ಹೆಣ್ಣು ಮತ್ತು ಕರಿ ಗಂಡನ್ನು ಕಂಡಿದ್ದೆ. ಅಂತಹ ಜೋಡಿಗಳನ್ನು ಕಂಡಾಗ, ಶಿಶಿಲದ ಕಪಿಲಾ ನದಿ ದಂಡೆಯಲ್ಲಿ ಸಾಕಷ್ಟು ಬಾರಿ ಕಂಡಿದ್ದ ಕೇರೆ ನಾಗರ ಮಿಥುನ ಜೋಡಿಗಳ ನೆನಪಾಗುತ್ತಿತ್ತು.
ಭಾರತದಲ್ಲಿ ಸಾಮಾನ್ಯವಾಗಿ, ಒಮ್ಮೆ ಮದುವೆಯಾದರೆ ಮುಗಿಯಿತು. ಸಾಯುವವರೆಗೂ ಪತಿ ಪತ್ನಿ ಹೇಗೋ ಸಂಸಾರದ ರಥ ಎಳೆಯುತ್ತಿರುತ್ತಾರೆ. ಫ್ರಾನ್ಸಿನಲ್ಲಿ ಮದುವೆಗೆ ಯಾವ ಮಹತ್ವವೂ ಇಲ್ಲ. ಕೆಲಸ ಸಿಕ್ಕಾಗ ಮಕ್ಕಳು ಹೆತ್ತವರಿಂದ ಪ್ರತ್ಯೇಕವಾಗಿ ಬದುಕುತ್ತಾರೆ. ನಿರೋದ್ಯೋಗಿಗಳಾದರೂ ಸಾಕಷ್ಟು ನಿರುದ್ಯೋಗ ಭತ್ಯೆ ಸಿಗುವುದರಿಂದ ಆರಾಮವಾಗಿ ಸ್ವತಂತ್ರ ಜೀವನ ಸಾಗಿಸಲು ಅಡ್ಡಿಯೇನಿಲ್ಲ. ಹಾಗಾಗಿ ತಮಗಿಷ್ಟ ಬಂದವರ ಜತೆ ಯಾವುದೇ ಸಾಮಾಜಿಕ ಅಥವಾ ಕಾನೂನಿನ ಆತಂಕಗಳಿಲ್ಲದೆ ಅವರು ಜೀವನ ಸಾಗಿಸುತ್ತಾರೆ. ಜೋಡಿ ಹಳೆಯದಾಗಿ ಥ್ರಿಲ್ ಕಡಿಮೆಯಾದರೆ, ಹೊಸ ಸಂಗಾತಿಯನ್ನು ಆಯ್ದುಕೊಳ್ಳುತ್ತಾರೆ. ಮದುವೆಯಾದರೆ ಗಂಡ ಹೆಂಡತಿ ಅನಿಸಿಕೊಂಡು ಭಾವನಾತ್ಮಕ ಸಂಬಂಧ ಬೆಳೆಯುತ್ತದೆ. ಅಲ್ಲದೆ ಡೈವೋರ್ಸ್ ಮಾಡಿಕೊಳ್ಳುವಾಗ ಕಾನೂನಿಗನುಗುಣವಾಗಿ ನಡೆದುಕೊಳ್ಳಬೇಕಾಗುತ್ತದೆ. ಆದುದರಿಂದ ಪ್ರಾಯ ಇರುವಾಗ ಗಂಡು ಹೆಣ್ಣು ಒಟ್ಟಿಗೆ ಇರುತ್ತಾರೆ! ಬೇಡವೆಂದಾಗ ‘ಪ್ರತ್ಯೇಕವಾಗುತ್ತಾರೆ ‘ ಒಟ್ಟಿಗೆ ಇರುವಾಗ ಮಕ್ಕಳಾಗಿ ಬಿಟ್ಟರೆ ಮದುವೆಯಾಗುವವರೂ ಇರುತ್ತಾರೆ. ಆದರೆ ಸಾಧಾರಣವಾಗಿ, ಸುಲಭವಾಗಿ ಫ್ರೆಂಚ ಮದುವೆಯ ಬಂಧನದಲ್ಲಿ ಸಿಕ್ಕಿ ಬೀಳುವುದಿಲ್ಲ. ಜವಾಬ್ದಾರಿಯಿಲ್ಲದೆ ಪುಕ್ಕಟೆಯಾಗಿ ಸುಖವನ್ನು ಸೂರೆಗೊಳ್ಳಲು ಸಾಧ್ಯವಿರುವಾಗ, ಮದುವೆಯ ಅನಗತ್ಯ ತಲೆಬಿಸಿ ಯಾರಿಗೆ ತಾನೇ ಬೇಕು?
ಫ್ರೆಂಚರ ಮದುವೆಗಳು ಹೇಗಿರುತ್ತವೆ ಎಂದು ನೋಡುವ ಆಸೆ ನನಗಿತ್ತು. ಆದರೆ ಫ್ರಾನ್ಸಿನಲ್ಲಿ ನಾನಿದ್ದಷ್ಟು ಕಾಲ ನನಗೆ ಆ ಯೋಗ ಕೂಡಿಬಂದಿರಲಿಲ್ಲ. ಮಾರ್ಸೆಲನ ಅಕ್ಕನ ಮಗಳ ಮದುವೆ ನೋಡಬಹುದಿತ್ತು. ಆದರೆ ನಿಗದಿತ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಮಾಡಲು ಒಪ್ಪದ ಶಿಸ್ತು ಫ್ರೆಂಚರದು. ಹಾಗಾಗಿ ಇದ್ದ ಒಂದು ಅವಕಾಶವೂ ತಪ್ಪಿಹೋಗಿತ್ತು. ಫ್ರಾನ್ಸ್‌ನಲ್ಲಿ ನಾನಿದ್ದದ್ದು ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ. ದಕಿಣ ಕನ್ನಡಲ್ಲಾದರೋ ಅದು ಅತ್ಯಧಿಕ ಮದುವೆಗಳು ನಡೆಯುವ ಕಾಲ. ನಮ್ಮಲ್ಲಿ ಬಹುತೇಕರ ಅತ್ಯಮೂಲ್ಯ ರಜಾ ದಿನಗಳು, ಮದುವೆಗೆ ಹಾಜರಾಗುವುದರಲ್ಲೇ ಕಳೆದುಹೋಗುತ್ತದೆ.
ಸಾಹಿತ್ಯ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದಮ್ಮಯ್ಯ ಗುಡ್ಡೆ ಹಾಕಿದರೂ ಬಾರದ ಜನ ಒಂದು ಮದುವೆ ಇದ್ದರೆ, ತಮ್ಮ ಎಡರು ತೊಡರುಗಳನ್ನೆಲ್ಲಾ ಬದಿಗೊತ್ತಿ, ಎಷ್ಟು ದೂರವಾದರೂ ಹೋಗಿ ಬಿಡುತ್ತಾರೆ. ನೂಕು ನುಗ್ಗಲಿನಲ್ಲಿ ಬೆವರಿಳಿಸಿಕೊಂಡು ಸಿಕ್ಕಿದ್ದನ್ನು ತಿಂದು, ಸಿಕ್ಕಿದ್ದಕ್ಕೆ ಹತ್ತಿ ಮನೆಗೆ ಬರುವಷ್ಟರಲ್ಲಿ ಅವರು ಸೋತು ಸುಣ್ಣವಾಗಿರುತ್ತಾರೆ. ‘ಈ ಮದುವೆಗಳಿಗೆ ಇನ್ನು ಹೋಗುವುದೇ ಇಲ್ಲಪ್ಪಾ’ ಎಂದು ಆಗ ಅವರು ಹೇಳಿದರೂ ಅದು ಕೇವಲ ಪ್ರಸವ ವೈರಾಗ್ಯ! ಇನ್ನೊಂದು ಮದುವೆಯ ಆಮಂತ್ರಣ ಅಂಚೆಯಲ್ಲಿ ಬಂದರೂ ಸಾಕು, ಎಲ್ಲಾ ಕಾರ್ಯಕ್ರಮಗಳನ್ನು ಬದಿಗಿಟ್ಟು ಏದುಸಿರು ಬಿಟ್ಟು ಓಡುತ್ತಾರೆ. ‘ಇವತ್ತು ನಾಲ್ಕು ಮದುವೆಗಳಿಗೆ ಹೋಗಿ ಬಂದೆ, ಇವತ್ತು ಆರು ಮದುವೆಗಳಿಗೆ ಹಾಜರಾದೆ’ ಎಂದು ಕೊಚ್ಚಿಕೊಳ್ಳುವ ದಾಖಲೆ ವೀರರಿಗಂತೂ ನಮ್ಮಲ್ಲಿ ಕೊರತೆಯಿಲ್ಲ. ಹಾಗೆ ನೋಡಿದರೆ ಪೂಜೆ, ಉಪನಯನ, ಮದುವೆ, ಬೋಜ, ಗೃಹಪ್ರವೇಶ ಎಂದು ಆಯುಷ್ಯಪೂರ್ತಿ ಓಡಾಡಿಕೊಂಡೇ ಇರುವ ಮಂದಿಗಳು ನಮ್ಮ ಸುತ್ತಮುತ್ತ ಅದೆಷ್ಟಿಲ್ಲ! ಸಂಪತ್ತಿದ್ದರೂ ತಮ್ಮ ಹೆಸರು ಒಂದಷ್ಟು ದಿನವಾದರೂ ಉಳಿಯುವಂತಹ ಒಂದು ಒಳ್ಳೆಯ ಕಾರ್ಯ ಮಾಡಲಾಗದವರು ಎಷ್ಟೂ ಕಾಣಸಿಗುತ್ತಾರೆ. ಹೋಗಲಿ, ಕೊನೆಯ ಪಕ್ಷ ದೇಶ ಸುತ್ತಿಯಾದರೂ ಜೀವನ ಸಾರ್ಥಕ ಮಾಡಿಕೊಳ್ಳೋಣ ಎಂದು ಭಾವಿಸುವವರು ಅದೆಷ್ಟು ಮಂದಿ ದೊರೆತಾರು?
ಫ್ರೆಂಚರು ಮಾತ್ರ ಈ ವಿಷಯದಲ್ಲಿ ಭಾರತೀಯರಿಗಿಂತ ಪೂರ್ಣವಾಗಿ ಭಿನ್ನ. ತೀರಾ ಅನಿವಾರ್ಯವೆಂದಾಗ ಅವರು ಮದುವೆಯಾಗುತ್ತಾರೆ. ಎಂಬತ್ತು ಶೇಕಡಾ ಮಂದಿ ರೆಜಿಸ್ಟರ್ ಮದುವೆಯದಾರೆ ಉಳಿದವರು ಚರ್ಚುಗಳಲ್ಲಿ ಮದುವೆಯಾಗುತ್ತಾರೆ. ಮದುವೆ ಎನ್ನುವುದು ಒಂದು ಸರಳ ಮತ್ತು ಆತ್ಮೀಯ ಕಾರ್ಯಕ್ರಮವಾಗಿರುತ್ತದೆ. ಹುಟ್ಟುಹಬ್ಬವನ್ನು ಮಾತ್ರ ಇವರು ಅದ್ದೂರಿಯಾಗಿಯೇ ಆಚರಿಸುತ್ತಾರೆ. ಆಗಲೂ ಅತಿಥಿಗಳ ಸಂಖ್ಯೆ 50 ದಾಟಿರುವುದಿಲ್ಲ! ಸತ್ತರೆ ಇಗರ್ಚಿಯ ಸಮೀಪದ ಸ್ಮಶಾನದಲ್ಲಿ ಹೂತು ಬರುತ್ತಾರೆ. ಅಲ್ಲಿಗೆ ಮುಗಿಯಿತು ಜೀವದ ಪಯಣ! ಸತ್ತವರ ಸಂಪತ್ತೇನಾಗುತ್ತದೆ? ಅದನ್ನೇನು ಮಾಡಬೇಕೆಂಬುದನ್ನು ವೀಲುನಾಮೆಯಲ್ಲಿ ಬರೆಸಿಡುತ್ತಾರೆ. ಸ್ವಲ್ಪ ಭಾಗ ಮಕ್ಕಳಿಗೆ, ಸ್ವಲ್ಪ ಭಾಗ ಸಂಗಾತಿಗೆ, ಸ್ವಲ್ಪ ಭಾಗ ಸಮಾಜಸೇವೆಗೆ (ವೃದ್ಧಾಶ್ರಮ, ಅನಾಥಾಶ್ರಮ ಇತ್ಯಾದಿಗಳಿಗೆ) ಮತ್ತೆ ಸ್ವಲ್ಪ ಭಾಗ ದೇಶದ ಖಜಾನೆಗೆ ಸಂದಾಯವಾಗಬಹುದು. ಫ್ರೆಂಚರು ತುಂಬಾ ಹಣ ಕೂಡಿಟ್ಟು ಸಾಯುವ ಸ್ವಭಾವದವರಲ್ಲ. ಹಣವಿದ್ದವರು ದೇಶ ವಿದೇಶ ಸುತ್ತುತ್ತಾರೆ. ಜೀವನದ ಎಲ್ಲ ಸುಖಗಳನ್ನು ಸೂರೆಗೊಳ್ಳುತ್ತಾರೆ. ಹಾಗಾಗಿ ಸಾಯುವಾಗ ತುಂಬಾ ಹಣ ಉಳಿದಿರುವುದಿಲ್ಲ. ಆದರೆ ಸಂಪತ್ತಿನಿಂದ ಸಂತೋಷಪಡುವ ಎಲ್ಲಾ ಮಾರ್ಗಗಳು ಅವರಿಗೆ ತಿಳಿದಿರುತ್ತವೆ.
ಫ್ರೆಂಚರ ಪುಸ್ತಕ ಪ್ರೀತಿ ಅಸಾಧಾರಣವಾದುದು. ಫ್ರಾನ್ಸಿನಲ್ಲಿ ವಿಕ್ಟರ್ ಹ್ಯೂಗೋನ ಪುಸ್ತಕಗಳಿಲ್ಲದ ಮನೆ ಕಾಣಸಿಕ್ಕರೆ ಅದೊಂದು ವಿಸ್ಮಯವೇ! ನಾನು ಭೇಟಿ ನೀಡಿದ ಮನೆಗಳಲ್ಲಿ ಕಡಿಮೆಯೆಂದರೂ ಸರಾಸರಿ ಐದು ಕಪಾಟು ಭರ್ತಿ ಪುಸ್ತಕಗಳನ್ನು ನಾನು ಗಮನಿಸಿದ್ದೇನೆ. ಕ್ಯಾಸ್ತಲ್‌ನೂದರಿಯ ಡಾ| ರಾವತನ ಮನೆ ಒಂದು ಗ್ರಂಥ ಭಂಡಾರದಂತೆಯೇ ಇದೆ. ‘ಕಷ್ಟಪಟ್ಟು ಗಳಿಸಿ ಸುಖಪಡು, ಸಾಹಸಿಗನಾಗಿರು, ದೇಶಸುತ್ತಿ ಕೋಶ ಓದಿ ಜ್ಞಾನಿಯಾಗು.’ ಇದು ಫ್ರೆಂಚರ ಜೀವನ ತತ್ವ. ತತ್ವವೆಂದರೆ ಕೇವಲ ಆದರ್ಶವಲ್ಲ. ಜೀವನದಲ್ಲಿ ಅನುಷ್ಠಾನಕ್ಕೆ ತಂದಿರುವ ತತ್ವ. ಆದುದರಿಂದಲೇ ಫ್ರಾನ್ಸು ಒಂದು ಬಲಾಢ್ಯ ರಾಷ್ಟ್ರವಾಗಿ ಈಗ ರೂಪುಗೊಂಡಿರುವುದು.
ಸಾರೇ ಜಹಾಂಸೆ ಅಚ್ಚಾ
ನಮ್ಮ ದೇಶದಲ್ಲಿ ಸರಿಪಡಿಸಲಾಗದಷ್ಟು ನ್ಯೂನತೆಗಳಿವೆ. ಆದರೆ ವಿದೇಶೀಯರೆದುರು ಅವನ್ನೆಲ್ಲಾ ಹೇಳಿ ನಮ್ಮ ದೇಶವನ್ನು ಹಳಿಯುವ ಮಂದಿಗಳು ತಪ್ಪು ಮಾಡುತ್ತಾರೆ. ‘ಸ್ವಧರ್ಮೇ ನಿಧನಂ ಶ್ರೇಯಃ’ ಎಂಬ ಭಗವದ್ಗೀತೆಯ ಸಾಲುಗಳನ್ನು ‘ಯಾವ ದೇಶವೂ ನಿನ್ನ ದೇಶದಂತಿರಲು ಸಾಧ್ಯವಿಲ್ಲ’ ಎಂದು ವಿದೇಶ ಯಾತ್ರೆಯ ಸಂದರ್ಭದಲ್ಲಿ ಅರ್ಥೈಸಿಕೊಳ್ಳಬೇಕು. ‘ದೂರಾ ದೇಶಕೆ ಹೋದಾ ಸಮಯದಿ ತನ್ನಯ ನಾಡನು ನೆನೆನೆನೆದುಬ್ಬದ ಮಾನವನಿದ್ದರೆ ಲೋಕದಲಿ, ತಾವಿಲ್ಲವನಿಗೆ ನಾಕದಲಿ’ ಎಂಬ ಕುವೆಂಪು ವಾಣಿ ಫ್ರಾನ್ಸ್ ಪ್ರವಾಸದುದ್ದಕ್ಕೂ ನನ್ನನ್ನು ಎಚ್ಚರಿಸುತ್ತಲೇ ಇತ್ತು.
ಭಾರತದ ಪ್ರಥಮ ವ್ಯೋಮಯಾನಿ ರಾಕೇಶ್ ಶರ್ಮಾ, ಆಗಿನ ಪ್ರಧಾನಿ ಇಂದಿರಾಗಾಂಧಿಯೊಡನೆ ನಡೆಸಿದ ಬಾಹ್ಯಾಕಾಶ ಸಂಭಾಷಣೆಯನ್ನು ನಾನು ಕೇಳಿದ್ದೆ. ಬಡ, ಹಿಂದುಳಿದ ಭಾರತದ ಒಬ್ಬ ವ್ಯಕ್ತಿ ಪ್ರಪ್ರಥಮ ಬಾರಿಗೆ ಬಾಹ್ಯಾಕಾಶದಲ್ಲಿದ್ದಾನೆ ! ನಮ್ಮ ದೇಶದ ಹೆಮ್ಮೆಯ ಕ್ಷಣಗಳಲ್ಲಿ ಅದೊಂದು. ಭಾರತದ ಪ್ರಧಾನಿ ಆತನೊಡನೆ ಸಂಭಾಷಿಸುತ್ತಿರುವುದನ್ನು ರೇಡಿಯೋ, ದೂರದರ್ಶನಗಳು ಬಿತ್ತರಿಸುತ್ತಿವೆ. ನಾನು ರೇಡಿಯೋಕ್ಕೆ ಕಿವಿಗೊಟ್ಟು ಕಾತರದಿಂದ ಆಲಿಸುತ್ತಿದ್ದೆ. ಆರಂಭಿಕ ಮಾತುಕತೆಗಳಾದ ಬಳಿಕ ಇಂದಿರಾ ಕೇಳಿದ್ದುತ ‘ಶರ್ಮಾಜೀ! ಅಲ್ಲಿಂದ ಭಾರತ ಹೇಗೆ ಕಾಣಿಸುತ್ತಿದೆ?’ ಶರ್ಮಾ ಉತ್ತರಿಸಿದ್ದು ಒಂದೇ ವಾಕ್ಯದಲ್ಲಿ; ‘ಸಾರೇ ಜಹಾಂಸೆ ಅಚ್ಚಾ’ ಆಗ ಕೇಳಿಸಿದ್ದು ಇಂದಿರಾಗಾಂಧಿಯ ಹೆಮ್ಮೆಯ ನಗು. ಇಂದಿರಾ ತನ್ನ ಕಾವಲುಗಾರರ ಗುಂಡುಗಳಿಗೆ ಬಲಿಯಾದಾಗ ಈ ಸಂಭಾಷಣೆಯನ್ನು ಆಕಾಶವಾಣಿ ಮತ್ತೆ ಬಿತ್ತರಿಸಿತ್ತು. ನಾನೆಂದೂ ಮರೆಯಲಾರದ ಸಾಲುಗಳವು. ಭಾರತದ ಬಗ್ಗೆ ಫ್ರೆಂಚರು ಕೇಳಿದ ಅನೇಕ ಸೂಕ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ, ನನಗೆ ಸ್ಫೂರ್ತಿ ನೀಡುತ್ತಿದ್ದುದೇ ಈ ಸಂಭಾಷಣೆ!
ಪುನರ್ಜನ್ಮ ಉಂಟಾ ? : ವಿದೇಶೀ ಪ್ರವಾಸಿಗರನ್ನು ಇಷ್ಟ ಪಡುವ ಫ್ರೆಂಚರಲ್ಲಿ ಭಾರತ ಸಂದರ್ಶಿಸಿದ ಕೆಲವರನ್ನು ನಾನು ಭೇಟಿಯಾಗಿದ್ದೇನೆ. ಉತ್ತರ ಭಾರತಕ್ಕೆ ಬಂದವರು ದೆಹಲಿ ಆಗ್ರಾ, ನೇಪಾಳ ಮತ್ತು ದಕಿಣ ಭಾರತಕ್ಕೆ ಬಂದವರು, ಕೇರಳ (ಕೋವಳಂ}, ಪಾಂಡಿಚ್ಚೇರಿ, ಚೆನ್ನೈ ಮತ್ತು ಶ್ರೀಲಂಕಾ ನೋಡಿ ಹೋಗಿದ್ದಾರೆ. ಉಳಿದ ಪ್ರದೇಶಗಳನ್ನು ನೋಡಿದವರು ಬಹಳ ಕಡಿಮೆ. ನೇಪಾಳ ಮತ್ತು ಶ್ರೀಲಂಕಾಗಳನ್ನು ಭಾರತದ ಭೂಭಾಗಗಳೆಂದು ತಿಳಿದುಕೊಂಡಿರುವ ಫ್ರೆಂಚರ ಸಂಖ್ಯೆ ಕಡಿಮೆ ಏನಿಲ್ಲ. ಕೆಲವರು ಅತಿ ಜಿಜ್ಞಾಸುಗಳು ರಾಜಸ್ಥಾನ, ಕಾಶಿ, ಪ್ರಯಾಗಗಳಿಗೆ ಭೇಟಿ ಕೊಟ್ಟವರೂ ಇದ್ದಾರೆ. ಕಾಶಿಗೆ ಭೇಟಿ ಕೊಟ್ಟು ಸ್ವಲ್ಪ ಸಂಸ್ಕೃತ ಕಲಿತಿದ್ದ ಒಬ್ಬಾತ ನನಗೆ ತುಲೋಸ್ ಕಾನೇರೆನ್ಸ್‌ನಲ್ಲಿ ಗಂಟುಬಿದ್ದ.
ಅವನ ಹೆಸರು ಜುವಾನ್ ಸ್ಪೆಲ್ಲ್. ಸ್ಥಿತಪ್ರಜ್ಞನ ಲಕಣದ ಬಗ್ಗೆ ಆತ ಭಗವದ್ಗೀತೆಯ ಶ್ಲೋಕವೊಂದನ್ನು ತಪ್ಪು ತಪ್ಪಾಗಿ ಹೇಳಿದ. ಸಿದ್ಧಿವನದಲ್ಲಿ ಆರು ವರ್ಷಗಳ ಕಾಲ ಜಿನರಾಜ ಶಾಸ್ತ್ರಿಗಳಿಂದ ಗೀತೆ ಕೇಳಿದ್ದ ನಾನು ಅದನ್ನು ‘ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ ವೀತರಾಗ ಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ ‘ ಎಂದು ಸರಿಪಡಿಸಿದೆ. ‘ಅದರ ಅರ್ಥವನೊನಮ್ಮೆ ಹೇಳಿಬಿಡು ಮಾರಾಯ. ಅದೊಂದು ಬ್ಯೂಟಿಫುಲ್ ಶ್ಲೋಕ’ ಎಂದವನು ದುಂಬಾಲು ಬಿದ್ದ. ನಾನಾಗ ‘ಸ್ಥಿತಪ್ರಜ್ಞ ಅಂದರೆ ಸಂತುಲಿತ ಚಿತ್ತದವನು ಎಂದರ್ಥ. ಆತ ದುಃಖ ಬಂದಾಗ ಉದ್ವಿಗ್ನನಾಗುವುದಿಲ್ಲ. ಸುಖ ಬಂದಾಗ ಹಿಗ್ಗುವುದೂ ಇಲ್ಲ. ಬಯಕೆ೧, ಹೆದರಿಕೆ ಮತ್ತು ಕೋಪದ ಸಂದರ್ಭಗಳಲ್ಲಿ ಆತನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದೆ. ಅವನಿಗೆ ನನ್ನ ವಿವರಣೆ ಖುಷಿ ಕೊಟ್ಟಿತು. ‘ಸದ್ಯದಲ್ಲೇ ಭಾರತಕ್ಕೆ ಬರಲಿದ್ದೇನೆ. ವೇದಗಳ ಬಗ್ಗೆ ನನಗೆ ನಿನ್ನಲ್ಲಿ ಚರ್ಚಿಸಲಿಕ್ಕಿದೆ’ ಎಂದ. ನನಗೆ ಗಾಬರಿ ಯಾದರೂ ಅದನ್ನು ತೋರ್ಪಡಿಸದೆ’ ಮಹಾರಾಯಾ, ವೇದಗಳನ್ನು ನಾನು ಓದಿಲ್ಲ. ನಿನಗೆ ವೇದ ವಿಶಾರದರ ಪರಿಚಯ ಬೇಕಿದ್ದರೆ ಮಾಡಿಸಿಕೊಡುತ್ತೇನೆ’ ಎಂದು ಅವನಿಂದ ಪಾರಾದೆ.
ಆದರೆ ಅವನು ಮತ್ತೆ ವಿದಾಯ ಸತ್ಕಾರದಂದು ತುಲೋಸಿನಲ್ಲಿ ನನಗೆ ಗಂಟು ಬಿದ್ದ. ‘ಭಗವದ್ಗೀತೆಯಲ್ಲಿ ನಿನ್ನ ಕೃಷ್ಣ ಹೇಳಿದ ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂಬ ಕರ್ಮತತ್ವದಲ್ಲಿ ನಿನಗೆ ನಂಬಿಕೆ ಇದೆಯಾ?’ ಎಂದು ಕೇಳಿದ. ‘ಕರ್ಮತತ್ವದ ಪ್ರಕಾರ ಪ್ರತಿಯೊಂದು ಕರ್ಮಕ್ಕೂ ಫಲ ಇದ್ದೇ ಇದೆ. ಆದರೆ ಆ ಫಲವನ್ನು ಆಶಿಸಿ ಕರ್ಮವನ್ನು ಮಾಡಕೂಡದು ಅಷ್ಟೆ. ಈ ರೀತಿಯ ಕರ್ಮಫಲ ನಿರಾಸಕ್ತಿಯಿಂದ ತೊಂದರೆ ಏನಿಲ್ಲ. ಫಲಾಸಕ್ತಿ ಇಲ್ಲದೆ ಕರ್ಮ ಮಾಡಿದರೆ ನಾವು ಜೀವನದಲ್ಲಿ ಜಿಗುಪ್ಸೆ ತಾಳುವುದಿಲ್ಲ. ನಿರಾಶಾವಾದಿಗಳಾಗಲೂ ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಕರ್ಮತತ್ವವನ್ನು ಒಪ್ಪಿಕೊಳ್ಳಬಹುದು. ಆದರೆ ನಮ್ಮ ಸೋಲು ಗೆಲುವುಗಳಿಗೆ ನಮ್ಮ ಕರ್ಮವೇ ಕಾರಣ ಎನ್ನುವ ನಂಬಿಕೆ ನನಗಿಲ್ಲ’ ಎಂದೆ.
‘ಹಾಗಾದರೆ ನೀನು ಜಾತಸ್ಯ… ಜಾತಸ್ಯ…. ಅಂತೇನೋ ಇದೆಯಲ್ಲಾ… ಅಂದರೆ ನಿನಗೆ ಪುನರ್ಜನ್ಮದಲ್ಲಿ ನಂಬಿಕೆಯಿಲ್ಲವೇ?’ ಎಂದು ಆತ ತಡವರಿಸಿದ. ಈವರೆಗಿನ ಅವನ ಪ್ರಶ್ನೆಗಳೆಲ್ಲವೂ ಭಗವದ್ಗೀತೆಯ ಎರಡನೇ ಅಧ್ಯಾಯವಾದ ಸಾಂಖ್ಯಯೋಗಕ್ಕೆ ಸಂಬಂಧಿಸಿದವುಗಳು. ಈ ಅಧ್ಯಾಯದ ಬಹುತೇಕ ಶ್ಲೋಕಗಳು ನನಗೆ ಕಂಠಸ್ಥ. ಹಾಗಾಗಿ ಅವನನ್ನು ಸರಿಪಡಿಸಲು ಮತ್ತು ಅವನ ಪ್ರಶ್ನೆಗೆ ಉತ್ತರಿಸಲು ನನಗೆ ಕಷ್ಟವೇನಾಗಲಿಲ್ಲ. ‘ನೀನು ಹೇಳಿದ್ದು ಜಾತಸ್ಯ ಹಿ ಧ್ರುವೋ ಮೃತ್ಯುಃಧ್ರ್ರುವಂ ಜನ್ಮ ಮೃತಸ್ಯ ಚ ಎಂಬ ಶ್ಲೋಕ ಮಹಾರಾಯ. ಅದರರ್ಥ ‘ಹುಟ್ಟಿದವನಿಗೆ ಸಾವು ಮತ್ತು ಸತ್ತವನಿಗೆ ಹುಟ್ಟು ತಪ್ಪಿದ್ದಲ್ಲ ಎಂದು. ನನಗೆ ಪುನರ್ಜನ್ಮದಲ್ಲಿ ಖಂಡಿತಾ ನಂಬಿಕೆಯಿಲ್ಲ. ಹುಟ್ಟಿದವ ಸತ್ತಲ್ಲಿಗೆ ಮುಗಿಯಿತು ಕತೆ. ಏನಾದರೂ ಸಾಧಿಸಬೇಕೆಂದಿದ್ದರೆ ಸಾಯುವ ಮೊದಲು ಸಾಧಿಸಬೇಕು’ ಅಂದೆ.
‘ಹಾಗಾದರೆ ನೀನು ಹಿಂದು ಅಲ್ಲವೇ?’ ಎಂದು ಅವನು ಮತ್ತೊಂದು ಪ್ರಶ್ನೆ ಎಸೆದ. ‘ಮಹಾರಾಯಾ, ಸಿಂಧೂ ನದಿ ದಂಡೆಯಲ್ಲಿ ಭಾರತದ ಆರಂಭದ ನಾಗರಿಕತೆ ಅರಳಿದ್ದು. ಸಿಂಧೂ ಬಯಲಿನ ನಿವಾಸಿಗಳು ‘ಸ’ ಕಾರ ಬಾರದವರ ಬಾಯಲ್ಲಿ ಹಿಂದೂಗಳಾದರು ಎಂದು ಒಂದು ವಾದವಿದೆ. ಹಿಂದೂಗಳಲ್ಲಿ ಕರ್ಮಸಿದ್ಧಿಂತವನ್ನು ಒಪ್ಪದ, ಪುನರ್ಜನ್ಮದಲ್ಲಿ ನಂಬಿಕೆ ಇಲ್ಲದ ಅದೆಷ್ಟೋ ಮಂದಿ ಇದ್ದಾರೆ. ಹಿಂದೂಯಿಸಂ ಅನ್ನುವುದು ಒಂದು ಜೀವನ ವಿಧಾನ. ಅನೇಕತೆಯೇ ಅದರ ಮೂಲ. ಹಾಗಾಗಿ ಯಾವ ನಂಬಿಕೆಯವರೂ ಹಿಂದೂಗಳಾಗಬಹುದು. ಏಕದೇವೋಪಾಸನೆ, ಏಕಗ್ರಂಥಾರಾಧನೆ, ಏಕವಿಶ್ವಾಸ ಇಲ್ಲದ, ಒಳ್ಳೆಯದ್ದೆಲ್ಲವನ್ನೂ ತನ್ನದಾಗಿಸಿಕೊಳ್ಳುವ ಹಿಂದೂಯಿಸಂನಲ್ಲಿ ನಾಸ್ತಿಕತೆಗೆ ಆಸ್ತಿಕತೆಯಷ್ಟೇ ಗೌರವವಿದೆ’ ಅಂದೆ.
ಅವನು ಮತ್ತೂ ಸುಮ್ಮನಾಗಲಿಲ್ಲ. ‘ಹಾಗಾದರೆ ನೀನು ಅವೈದಿಕನೋ? ಅವೈದಿಕರಿಗೆ ಪುನರ್ಜನ್ಮದಲ್ಲಿ ನಂಬಿಕೆ ಇಲ್ಲವೆಂದು ಕೇಳಿದ್ದೇನೆ’ ಅಂದ. ‘ನಿನ್ನದು ತಪ್ಪು ತಿಳಿವಳಿಕೆ. ವೇದ ಪ್ರಮಾಣವನ್ನು ಒಪ್ಪದ ಜನಪದರಲ್ಲೂ ಪುನರ್ಜನ್ಮದ ನಂಬಿಕೆ ಇತ್ತು. ಇದು ಕೇವಲ ನಂಬಿಕೆಯ ಪ್ರಶ್ನೆ ಅಷ್ಟೇ. ಈ ನಂಬಿಕೆ ಇಲ್ಲದೆಯೂ ಮನುಷ್ಯರಾಗಿ ಬಾಳಲು ತೊಂದರೆಯೇನಿಲ್ಲ. ಪುನರ್ಜನ್ಮದಲ್ಲಿ ನಂಬಿಕೆಯಿರುವವರೆಲ್ಲಾ ಮನುಷ್ಯರನ್ನು ಮನುಷ್ಯರಂತೆ ಕಾಣಬೇಕೆಂದೇನೂ ಇಲ್ಲ. ಇಷ್ಟಕ್ಕೂ ನಿನ್ನ ಮತ ಯಾವುದು?’ ಎಂದು ಕೇಳಿದೆ. ‘ದೇವರ ಮತ್ತು ಧರ್ಮದ ಹೆಸರಲ್ಲಿ ಈ ದೇಶದಲ್ಲಿ ರಾಜರುಗಳು ಮತ್ತು ಪುರೋಹಿತರುಗಳು ಜನಸಾಮಾನ್ಯರನ್ನು ಹುರಿದು ಮುಕ್ಕಿದರು. ಆಗ ಸಂಭವಿಸಿತು ಫ್ರಾನ್ಸಿನ ಮಹಾಕ್ರಾಂತಿ. ಆ ಬಳಿಕ ಈ ದೇಶದಲ್ಲಿ ಮತಧರ್ಮಗಳ ಬಗ್ಗೆ ವಿಶ್ವಾಸವೇ ಉಳಿದಿಲ್ಲ’ ಎಂದ. ‘ನಮ್ಮಲ್ಲೂ ಹಾಗೇ ಮಾರಾಯ. ರಾಜರುಗಳು ಮತ್ತು ಪುರೋಹಿತರುಗಳು ಒಂದಾಗಿ ಏನೆಲ್ಲಾ ಅನಾಹುತ ಮಾಡಿಬಿಟ್ಟರು. ಜನಸಾಮಾನ್ಯರಿಗೆ ಜ್ಞಾನದ ಹಕ್ಕನ್ನೇ ನಿರಾಕರಿಸಿದರು. ಆದರೆ ನಿಮ್ಮಲ್ಲಿ ನಡೆದಂತಹಾ ಕ್ರಾಂತಿ ನಮ್ಮಲ್ಲಿ ನಡೆಯಲಿಲ್ಲ. ಅಷ್ಟೇ ವ್ಯತ್ಯಾಸ’ ಎಂದೆ. ಆಗವನು ‘ದೇವರು ಮತ್ತು ಧರ್ಮ ಮಾನವನ ಬದುಕನ್ನು ಹಸನುಗೊಳಿಸುವಂತಾಗಬೇಕು. ಸ್ವಾರ್ಥಿಗಳು ಅವೆರಡನ್ನೂ ಶೋಷಣೆಯ ಪರಿಕರಗಳಾಗಿ ಬಳಸುತ್ತಾರೆ. ಅದಕ್ಕೇ ನಾನು ಚರ್ಚಿಗೆ ಹೋಗುತ್ತಿಲ್ಲ. ಈ ಮತಧರ್ಮಗಳಿರುವುದು ಮನುಷ್ಯರಿಗಾಗಿಯೇ, ಹೊರತು ನಾವಿರುವುದು ಅದಕ್ಕಾಗಿ ಅಲ್ಲವಲ್ಲಾ?’ ಎಂದು ನನ್ನನ್ನೇ ಪ್ರಶ್ನಿಸಿದ. ಅವನ ಈ ನಿಲುವನ್ನು ನಾನು ಬಹುವಾಗಿ ಮೆಚ್ಚಿಕೊಂಡೆ.
ಆರ್ಯನೋ, ದ್ರಾವಿಡನೋ ? ಮಾಂಪಿಲಿಯೇ ಮಹಾನಗರದಲ್ಲಿ ನನ್ನ ಅತಿಥೇಯ ನಾಗಿದ್ದ ಮಕ್ಕಳ ತಜ್ಞ, ಎಪ್ಪತ್ತೆಂಟರ ಹರೆಯದ ಡಾ| ಜುವಾನ್ ನನ್ನ ಪರಿಚಯವಾದ ತಕ್ಷಣ ಕೇಳಿದ ಮೊದಲ ಪ್ರಶ್ನೆ: ‘ನೀನು ಆರ್ಯನೋ, ದ್ರಾವಿಡನೋ?’
ಭಾರತದ ಇತಿಹಾಸವನ್ನು ಚೆನ್ನಾಗಿ ಓದಿಕೊಂಡಿರುವವರು ಮಾತ್ರ ಕೇಳಬಹುದಾದ ಪ್ರಶ್ನೆಯಿದು! ಸಾವರಿಸಿಕೊಂಡು ನಾನೆಂದೆತ ‘ಆರ್ಯ ದ್ರಾವಿಡ ಎಂಬ ಪ್ರಭೇದ ಈಗ ಇಲ್ಲ. ದ್ರಾವಿಡರು ಭಾರತದ ಮೂಲನಿವಾಸಿಗಳೆಂದೂ, ಆರ್ಯರು ಮಧ್ಯ ಏಶ್ಯಾದಿಂದ ಬಂದವರೆಂದೂ ಇತಿಹಾಸದಲ್ಲಿ ಹೇಳಲಾಗುತ್ತದೆ. ಆರಂಭದಲ್ಲಿ ಆರ್ಯರು ದ್ರಾವಿಡರನ್ನು ದೂರವೇ ಇಟ್ಟರೂ, ಕಾಲಕ್ರಮೇಣ ಅವರ ನಡುವೆ ವೈವಾಹಿಕ ಸಂಬಂಧ ಬೆಳೆದು ಅಂತರ ಮಾಯವಾಯಿತು. ಅಂದಿನಿಂದ ನಮ್ಮದು ಮಿಶ್ರ ಸಂಸ್ಕೃತಿ. ನಮ್ಮದು ಎಂದೇನು? ಜನಾಂಗೀಯ ಮಿಶ್ರಣ ಯಾವ ದೇಶದಲ್ಲಿ ಆಗಿಲ್ಲ? ಆದುದರಿಂದ “ನಾನು ನೂರು ಶೇಕಡಾದಷ್ಟು ಇದೇ ಮೂಲದವನು” ಎಂದು ಯಾರೂ ಹೇಳುವಂತಿಲ್ಲ.’
ಅವನು ತಲೆದೂಗುತ್ತಾ ‘ಸಿಂಧೂ ನದಿ ಕಣಿವೆಯ ಸಂಸ್ಕೃತಿಯ ಬಗ್ಗೆ ಕೇಳಿದ್ದೇನೆ. ಅದು ಆರ್ಯರದ್ದೋ, ದ್ರಾವಿಡರದ್ದೋ?’ ಎಂದು ಇನ್ನೊಂದು ಪ್ರಶ್ನೆ ಎಸೆದ. ‘ಅದು ಆರ್ಯರು ಭಾರತಕ್ಕೆ ಬರುವುದಕ್ಕೆ ಮುಂಚೆಯೇ ಇದ್ದ ಸಂಸ್ಕೃತಿ. ಅದನ್ನು ದ್ರಾವಿಡ ಸಂಸ್ಕೃತಿ ಎಂದು ಬಹುತೇಕರು ಭಾವಿಸುತ್ತಾರೆ. ಬಹಳ ಪುರಾತನ ಸಂಸ್ಕೃತಿಯದು. ಹಾಗಾಗಿ ಅದರ ಬಗ್ಗೆ ಸಾಕಷ್ಟು ವಿವಾದಗಳಿವೆ’ ಎಂದೆ.
ಆತ ತಲೆಕೊಡವಿಕೊಂಡು ‘ಜಾತಿ ಪದ್ಧತಿ ಯಾವಾಗ ನಿಮ್ಮಲ್ಲಿ ಆರಂಭವಾಯಿತು?’ ಎಂದು ಮತ್ತೊಂದು ಬಾಣ ಬಿಟ್ಟ. ಆರ್ಯರು ಬಂದ ಬಳಿಕ ನಮ್ಮಲ್ಲಿ ವರ್ಣವ್ಯವಸ್ಥೆ ಆರಂಭವಾಯಿತು. ಸಮಾಜ ನಾಲ್ಕು ವರ್ಣಗಳಾಗಿ ವಿಂಗಡಿಸಲ್ಪಟ್ಟಿತು. ವರ್ಣಗಳು ಮತ್ತಷ್ಟು ವಿಘಟನೆ ಹೊಂದಿ ಜಾತಿಗಳಾದವು. ವೃತ್ತಿಯಿಂದ ಜಾತಿಯನ್ನು ನಿರ್ಣಯಿಸುತ್ತಿದ್ದ ಕಾಲವೊಂದಿತ್ತು. ಈಗ ಯಾವುದೇ ವೃತ್ತಿಯನ್ನು ಯಾವುದೇ ಜಾತಿಯವರು ಮಾಡುವುದಕ್ಕೆ ಅಡ್ಡಿ ಏನೂ ಇಲ್ಲ. ಅಂದರೆ ಭಾರತದಲ್ಲಿ ಜಾತಿವ್ಯವಸ್ಥೆಗೆ ಈಗ ಮೂಲಾಧಾರವೇ ಇಲ್ಲವಾಗಿದೆ. ಆದರೂ ಹುಟ್ಟಿನಿಂದ ಜಾತಿಯನ್ನು ನಿರ್ಧರಿಸುವ ರೂಢಿ ಈಗಲೂ ಭಾರತದಲ್ಲಿದೆ’ ಎಂದೆ.
‘ನೀನು ಜಾತಿವ್ಯವಸ್ಥೆಯನ್ನು ಒಪ್ಪುತ್ತೀಯಾ?’ ಡಾ| ಜುವಾನ್‌ನ ಬತ್ತಳಿಕೆಯಲ್ಲಿ ಪ್ರಶ್ನೆಗಳಿಗೆ ಬರಗಾಲವಿರಲಿಲ್ಲ. ನಾನದಕ್ಕೆ ‘ನಮ್ಮಲ್ಲಿ ಒಂಬತ್ತನೇ ಶತಮಾನ ದಲ್ಲಿ ಒಬ್ಬ ಕವಿಯಿದ್ದ. ಅವನ ಹೆಸರು ಪಂಪ. ಅವನು ‘ಮನುಜಕುಲಂ ತಾನೊಂದೆ ವಲ’ ಎಂದಿದ್ದಾನೆ. ನನಗೆ ಅತ್ಯಂತ ಪ್ರಿಯವಾದ ಮಾತಿದು. ಮಾನವರೆಲ್ಲರೂ ಒಂದೇ ಜಾತಿ ಎಂಬ ನಂಬಿಕೆಯವನು ನಾನು. ನಾನು ಜಾತಿವ್ಯವಸ್ಥೆಯನ್ನು ಒಪ್ಪುವುದಿಲ್ಲ ‘ ಎಂದು ಉತ್ತರಿಸಿದೆ.
‘ಹಾಗಾದರೆ ನಿಮ್ಮಲ್ಲಿ ಜಾತ್ಯತೀತ ವಿವಾಹಗಳಿಗೆ ಆಸ್ಪದವಿದೆಯೇ?’ ಡಾ|ಜುವಾನನ ಈ ಪ್ರಶ್ನೆಗೆ ಸಾಕಷ್ಟು ಉದಾಹರಣೆಗಳನ್ನು ನೀಡಿದೆ. ‘ಓಹೋ! ಧಾರಾಳವಾಗಿ. ನಮ್ಮ ದೇಶದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಮೂಲತಃ ಓರ್ವ ಹಿಂದೂ. ಅವರು ಮದುವೆಯಾದದ್ದು ಓರ್ವ ಪಾರ್ಸಿಯನ್ನು. ಅವರ ಮಗ ರಾಜೀವ ಗಾಂಧಿ ಮದುವೆಯಾದದ್ದು ಒಬ್ಬಾಕೆ ಇತಾಲಿಯನ್ ಹೆಣ್ಣನ್ನು. ನಮ್ಮ ದೇಶದ ಸಂಧಾನ ರೂಪಿಸಿದವರಲ್ಲಿ ಒಬ್ಬರಾದ ಡಾ| ಅಂಬೇಡ್ಕರ್ ದಲಿತರು. ಅವರು ಓರ್ವ ಬ್ರಾಹ್ಮಣ ಸ್ತ್ರೀಯನ್ನು ವಿವಾಹವಾಗಿದ್ದರು. ಪುರಾತನ ಭಾರತದಲ್ಲಿ ಮದುವೆಗೆ ಜಾತಿ ಅಡ್ಡಿಯಾಗಿರಲಿಲ್ಲ. ನನ್ನ ರಾಜ್ಯದ ಡಾ| ಶಿವರಾಮ ಕಾರಂತರು, ನಿರಂಜನರು, ಅನಂತಮೂರ್ತಿಯವರು ದೊಡ್ಡ ಬರಹಗಾರರು. ಅವರೆಲ್ಲಾ ಅನ್ಯಜಾತಿ ಹೆಣ್ಣುಗಳನ್ನು ವಿವಾಹವಾದವರು. ಮೂಲತಃ ಓರ್ವ ಹಿಂದುವಾದ ನಾನು ಕ್ಯಾಥಲಿಕ್ಕಳನ್ನು ಮದುವೆಯಾಗಿರುವೆ. ಇಂತಹಾ ಲಕಗಟ್ಟಲೆ ಉದಾಹರಣೆಗಳು ಭಾರತದಲ್ಲಿವೆ’ ಎಂದೆ.
‘ಹಾಗಾದರೆ ನಿನ್ನ ಮಕ್ಕಳ ಜಾತಿ ಧರ್ಮ ಯಾವುದು?’ ಆತನಿಂದ ಸಿಡಿಗುಂಡಿನಂತೆ ಪ್ರಶ್ನೆ ಬಂತು. ‘ಮಾನವ ಧರ್ಮ ನಾನೆಂದೆ; ‘ನೀನು ಜೆ.ಎಸ್. ಮಿಲ್ಲನನ್ನು ಓದಿರಬಹುದು. ಇಂಗ್ಲೆಂಡಿನ ಈ ಚಿಂತಕ ಧರ್ಮದ ಬಗ್ಗೆ ಒಂದು ಕೃತಿ ರಚಿಸಿದ್ದಾನೆ. ಅದರಲ್ಲಿ ಈಗ ಅಸ್ತಿತ್ವದಲ್ಲಿರುವ ಎಲ್ಲಾ ಮತಧರ್ಮಗಳು ಜಡತ್ವವನ್ನು ಬೋಧಿಸುತ್ತವೆ. ಪುರೋಹಿತರುಗಳು ತಮಗೆ ಬೇಕಾದಂತೆ ಮತಧರ್ಮಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಪುರೋಹಿತರುಗಳಿಗೆ ಮಹತ್ವವಿಲ್ಲದ, ಯಾವುದೇ ಒಂದು ಗ್ರಂಥವನ್ನು ಮಾತ್ರವೇ ಆಧರಿಸದ, ಪರೋಪಕಾರವೇ ಜೀವನ ಧ್ಯೇಯ ಎಂದು ಸಾರುವ, ಮನುಷ್ಯರನೆನಲ್ಲಾ ಸಮಾನವಾಗಿ ಕಾಣುವ ಒಂದು ವ್ಯವಸ್ಥೆಯನ್ನು ಆತ ‘ಮಾನವ ಧರ್ಮ’ ಎಂದು ಕರೆದಿದ್ದಾನೆ. ನಮ್ಮಲ್ಲಿ ಕುವೆಂಪು ಎಂಬೊಬ್ಬ ಮಹಾಕವಿ ಇದ್ದರು. ಅವರು ಇದನ್ನು ‘ಮನುಜಮತ’ ಎಂದು ಕರೆದರು. ನನ್ನ ಮಕ್ಕಳಿಗೆ ಇಷ್ಟವಿದ್ದರೆ ಯಾವುದೇ ಮತವನ್ನು ಒಪ್ಪಿಕೊಳ್ಳುವ ಸ್ವಾತಂತ್ರ್ಯವಿದೆ. ಕಷ್ಟವಾದರೆ,ನನ್ನ ಹಾಗೆ ಮನುಷ್ಯ ಮಾತ್ರನಾಗಿ ಬಾಳುವ ಹಕ್ಕು ಇದೆ.’
ಈಗವನು ಖುಷಿಯಿಂದ ನಕ್ಕ. ‘ಸರಿಯಾಗಿ ಹೇಳಿದೆ. ಆದರೆ ನೀವು ಗಾಂಧೀಜಿಯನ್ನು ಕೊಂದದ್ದು ಯಾಕೆ?’ ಎಂಬ ಪ್ರಶ್ನೆಯಿಂದ ಆತ ನನ್ನನ್ನು ಕಂಗೆಡಿಸಿಬಿಟ್ಟ. ನಾನದಕ್ಕೆ ಸ್ವಲ್ಪ ಯೋಚಿಸಿ ‘ಫ್ರಾನ್ಸ್‌ನ ಮಹಾನ್ ವ್ಯಕ್ಷ್ತಿಯ ಯಾರು?’ ಎಂದು ಕೇಳಿದೆ.
‘ನೆಪೋಲಿಯನ್ ‘
‘ನೆಪೋಲಿಯನನ್ನನ್ನು ಫ್ರೆಂಚರೆಲ್ಲರೂ ಇಷ್ಟಪಡ್ತಾರಾ?’
‘ಇಲ್ಲ’
‘ಯಾಕಿಲ್ಲ?’
‘ಇಷ್ಟ ಅನ್ನುವುದು ವ್ಯಕ್ಷ್ತಿನಿಷ್ಠವಾದುದು. ಎಲ್ಲರೂ ಇಷ್ಟಪಡುವ ವ್ಯಕ್ಷ್ತಿ ಎಲ್ಲೂ ಇರಲು ಸಾಧ್ಯವಿಲ್ಲ ಅಲ್ಲವೇ?’
‘ಗಾಂಧೀಜಿಯ ವಿಷಯದಲ್ಲೂ ಹಾಗೆಯೇ. ಅವರ ಚಿಂತನಾವಿಧಾನ ಕೆಲವರಿಗೆ ಒಪ್ಪಿಗೆಯಾಗಲಿಲ್ಲ. ಅಂಥವರಲ್ಲಿ ಕೆಲವರು ದುಸ್ಸಾಹಸಕ್ಕೆ ಇಳಿದುಬಿಟ್ಟರು. ಅಮೇರಿಕಾದ ಕೆನಡಿಯನ್ನು ಯಾಕೆ ಕೊಲ್ಲಬೇಕಿತ್ತು? ಅಬ್ರಹಾಂ ಲಿಂಕನ್‌ನನ್ನು ನಿರ್ದಯ ವಾಗಿ ಕೊಂದರಲ್ಲಾ? ಏಸುವನ್ನು ಯಾಕೆ ಶಿಲುಬೆಗೇರಿಸಬೇಕಿತ್ತು ? ಹಾಗೇ ಇದು’ ಅಂದೆ.
ಅವನು ಅಸಮ್ಮತಿಯಿಂದ ತಲೆಯಲ್ಲಾಡಿಸಿದ. ‘ಆದರೂ ಗಾಂಧೀಜಿಯನ್ನು ಕೊಂದದ್ದು ತಪ್ಪು. ಅಂಥವರು ಈಗಲೂ ನಮ್ಮ ಮಧ್ಯೆ ಇರಬೇಕಾಗಿತ್ತು’ ಎಂದ.
‘ಹೌದು ಮಹಾರಾಯಾ. ನನಗೆ ಎಷ್ಟೋ ಬಾರಿ ಹಾಗೆ ಅನಿಸಿದ್ದುಂಟು’ ಎಂದು ಅವನ ಮಾತಿಗೆ ನಾನು ಸಹಮತಿ ಸೂಚಿಸಿದೆ.
ಯಾವುದು ಶ್ರೀಮಂತಿಕೆ ?
‘ನೀನು ಇದು ಎಷ್ಟನೇ ಬಾರಿ ಯುರೋಪಿಗೆ ಬರುತ್ತಿರುವುದು ?’ ಎಂದು ನನ್ನಲ್ಲಿ ಕೇಳಿದ್ದು ಫ್ರಾನ್ಸಿನ ಪುಟ್ಟ ಪಟ್ಟಣ ಕ್ಯಾಸ್ತಲ್‌ನೂದರಿಯಲ್ಲಿ ನನ್ನ ಅತಿಥೇಯನಾಗಿದ್ದ ಸರ್ಜನ್ ಡಾ| ರಾವತ್. ಆತನ ಇಬ್ಬರು ಹೆಣ್ಮಕ್ಕಳು ಇಂಗ್ಲೀಷನ್ನು ಅರ್ಥಮಾಡಿಕೊಳ್ಳ ಬಲ್ಲವರು. ಅವನ ಹೆಂಡತಿಗೆ ಮತ್ತು ಮಗನಿಗೆ ಒಂದಿನಿತೂ ಇಂಗ್ಲೀಷ್ ಬಾರದು. ನನ್ನ ಮಾತುಗಳನ್ನು ರಾವತನ ಹೆಣ್ಮಕ್ಕಳು ಫ್ರೆಂಚಿಗೆ ಅನುವಾದಿಸಿ ತಾಯಿಗೆ ಮತ್ತು ತಮ್ಮನಿಗೆ ಅರ್ಥಮಾಡಿಸುತ್ತಿದ್ದರು.
‘ಯುರೋಪಿಗೆ ಬರುತ್ತಿರುವುದು ಇದು ಮೊದಲ ಬಾರಿ. ಯುರೋಪಿಗೆ ಎಂದಲ್ಲ. ಭಾರತದ ಗಡಿದಾಟಿ ಹೊರಗೆ ನಾನು ಬರುತ್ತಿರುವುದು ಇದೇ ಮೊದಲು’ ಎಂದೆ.
ಅವನಿಗೆ ಆಶ್ಚರ್ಯವಾಯಿತು.’ನೀನು ಪ್ರೊಫೆಸರು ಅಂತೀಯಾ? ನೀನು ಒಬ್ಬ ಅಧ್ಯಾಪಕನಾಗಿದ್ದು ಬೇರೆ ಬೇರೆ ದೇಶ ನೋಡದಿದ್ದರೆ ನಿನನ ವಿದ್ಯಾರ್ಥಿಗಳಿಗೆ ಏನನ್ನು ಹೇಳಿಕೊಡಲು ನಿನಗೆ ಸಾಧ್ಯವಾಗುತ್ತದೆ?’ ಎಂದವನು ಮರುಪ್ರಶ್ನೆ ಎಸೆದ.
ನನ್ನ ಕಣ್ಮುಂದೆ ನಮ್ಮ ಶಿಕ್ಷಣ ವ್ಯವಸ್ಥೆಯ ಗೋಜಲುಗಳು ಹಾದು ಹೋದವು. ಕೊಠಡಿಗಳು, ಗ್ರಂಥಾಲಯ, ಲ್ಯಾಬು, ಪೀಠೋಪಕರಣ, ಪಾಠೋಪಕರಣ, ಆಟದ ಬಯಲು, ಅಧ್ಯಾಪಕರು ಯಾವುದೂ ಅಗತ್ಯಕ್ಕೆ ಬೇಕಾದಷ್ಟು ಇಲ್ಲದ ವಿದ್ಯಾಲಯಗಳು. ಬದುಕನ್ನು ರೂಪಿಸಲಾಗದ ಪಠ್ಯಕ್ರಮ. ಉರುಹೊಡೆಯುವುದರಲ್ಲಿ ಯಾರು ಜಾಣರು ಎಂದು ನಿರ್ಧರಿಸುವ ಪರೀಕ್ಷಾ ನೀತಿ. ಹೊಸ ಯೋಚನೆಗಳಿಗೆ ಮತ್ತು ಅವಿಷ್ಕಾರಗಳಿಗೆ ಆಸ್ಪದವನ್ನೇ ನೀಡದ ವಿವಿಧ ಹಿತಾಸಕ್ತಿಗಳು! ಇವನ್ನೆಲ್ಲಾ ಅವನಿಗೆ ನಾನು ಹೇಳಲಾಗುತ್ತದೆಯೇ ? ಹಾಗಾಗಿ ನಾನೆಂದೆ: ‘ನನಗೆ ಮಾಧ್ಯಮಗಳ ಮೂಲಕ ಏನು ಹೊಸತು ಸಿಗುತ್ತದೋ, ಅದನ್ನು ವಿದ್ಯಾರ್ಥಿಗಳಿಗೆ ಹೇಳುತ್ತೇನೆ. ಪರೀಕ್ಷೆಯ ದೃಷ್ಟಿಯಿಂದ ಈಗ ನಾನು ಹೇಳುವುದು ಅಗತ್ಯಕ್ಕಿಂತ ಹೆಚ್ಚೇ ಆಗುತ್ತದೆ. ಆದರೂ ಶಿಕ್ಷಣ ಎಂದರೆ ಸರ್ವಾಂಗೀಣ ವಿಕಸನವೆಂದು ಆದಷ್ಟು ಹೇಳಿಕೊಡುತ್ತಿದ್ದೇನೆ’
‘ಅಂದರೆ ನಿನಗೆ ವಿದೇಶ ಪ್ರಯಾಣ ಇಷ್ಟವಿಲ್ಲ ಎಂದು ಅರ್ಥವೇ?’ ರಾವತ್‌ನ ಪತ್ನಿ ಡೇನಿ ತನ್ನ ಹಿರಿಮಗಳು ಡೆಲ್‌ಫೈನ್‌ಳ ಮೂಲಕ ಪ್ರಶ್ನೆ ಹಾಕಿದಳು. ಅದಕ್ಕೆ ನಾನೆಂದೆ: ‘ಇಷ್ಟವೇನೋ ಇದೆ. ಆದರೆ ಬರಿಯ ತಿಂಗಳ ಸಂಬಳವನ್ನೇ ನೆಚ್ಚಿಕೊಂಡು ಬದುಕುವ ನನ್ನಂಥ ಅಧ್ಯಾಪಕರಿಗೆ, ವಿದೇಶ ಪ್ರವಾಸ ಮಾಡುವುದು ಸಾಧ್ಯವಾಗುವ ಮಾತಲ್ಲ. ನಮ್ಮಲ್ಲಿ ಸರಕಾರಿ ನೌಕರರಿಗೆ ಪ್ರವಾಸ ಹೋಗುವ ಸವಲತ್ತಿದೆ. ಅಧ್ಯಾಪಕರಿಗೆ ಅದೂ ಇಲ್ಲ.’
‘ಛೆ! ಬಡಪಾಯಿ. ಹಾಗಾದರೆ ಈಗ ರೋಟರಿ ಕಾರ್ಯಕ್ರಮದನ್ವಯ ಇಲ್ಲಿಗೆ ಬಂದಿರುವ ನಿನಗೆ ಫ್ರಾನ್ಸ್ ಬಿಟ್ಟರೆ ಬೇರಾವ ದೇಶವನ್ನೂ ನೋಡಲು ಸಾಧ್ಯವಾಗುವುದಿಲ್ಲ ಅನ್ನು.’ ರಾವತ್ ವಿಷಾದಪೂರ್ವಕ ದನಿಯಲ್ಲಿ ಹೇಳಿದ.
‘ಛೆ! ಛೆ! ಇಲ್ಲ. ಫ್ರಾನ್ಸ್ ಕಾರ್ಯಕ್ಷ್ರಮ ಮುಗಿದ ಮೇಲೆ ಯುರೋಪಿನ ಇನ್ನೂ ಏಳು ರಾಷ್ಟ್ರಗಳನ್ನು ನೋಡಲಿದ್ದೇನೆ’ ಹೆಮ್ಮೆಯಿಂದ ನಾನೆಂದೆ.
‘ಅದಕ್ಕೆ ಹಣದ ವ್ಯವಸ್ಥೆಗೇನು ಮಾಡಿದ್ದೀಯಾ?’ ರಾವತ್‌ನ ಹದಿನಾರು ವರ್ಷದ ಮಗಳು, ಆರಡಿ ಎತ್ತರದ ಪೆರೈನ್ ಕೇಳಿದಳು. ‘ಎರಡು ಲಕ್ಷ ಸಾಲ ಮಾಡಿದ್ದೇನೆ. ಅವಕಾಶಗಳು ಬಂದಾಗ ಬಿಡಬಾರದಲ್ವಾ? ಅದೇನೂ ದೊಡ್ಡದಲ್ಲ. ಅಮೇರಿಕಾನೇ ಸಾಲದಲ್ಲಿದೆ. ಇನ್ನು ನನ್ನಂತಹ ಹುಲುಮಾನವ ಒಂದು ಒಳ್ಳೆಯ ಉದ್ದೇಶಕ್ಕೆ ಸಾಲ ಮಾಡಿದರೇನಂತೆ?’ ಎಂದೆ.
‘ಅದು ಹೌದು. ಅಂತೂ ಭಾರತೀಯರೆಲ್ಲರೂ ಬಡವರೇ ಅನ್ನು!’ ಅಮೇರಿಕೆಯ ಸಿರಿವಂತಿಕೆಯನ್ನು ಸಾಕಷ್ಟು ಬಾರಿ ಕಂಡುಂಡು ಬಂದಿದ್ದ ರಾವತ್ ತೀರ್ಪು ನೀಡಿದ.
‘ಛೆ! ಛೆ! ಹಾಗೇನಿಲ್ಲ. ವಿಶ್ವದ ಅತಿ ಶ್ರೀಮಂತರ ಸಾಲಲ್ಲಿ ಭಾರತದ ಟಾಟಾ, ಬಿರ್ಲಾ, ಹಿಂದುಜಾಗಳು ಸ್ಥಾನ ಪಡೆದಿದ್ದಾರೆ. ಭಾರತದಿಂದ ಲಂಡನ್ನಿಗೆ ಬಂದು ಉದ್ದಿಮೆ ಸ್ಥಾಪಿಸಿರುವ ಸ್ವರಾಜ್‌ಪಾಲ್ ಬ್ರಿಟನ್ನಿನ ಅತ್ಯಂತ ಶ್ರೀಮಂತರ ಸಾಲಿಗೆ ಸೇರಿದ್ದಾನೆ. ಭಾರತದ ವಾರ್ಷಿಕ ವರಮಾನ ಕಡಿಮೆಯೇನಲ್ಲ. ಜನಸಂಖ್ಯೆಯನ್ನು ನಿಯಂತ್ರಿಸಿ, ಸಂಪತ್ತನ್ನು ಸಮಾನವಾಗಿ ಹಂಚಲು ಸಾಧ್ಯವಾಗಿಬಿಟ್ಟರೆ, ಭಾರತವು ಫ್ರಾನ್ಸಿಗಿಂತ ಅಭಿವೃದ್ಧಿ ಪಥದಲ್ಲಿ ಅದೆಷ್ಟೋ ಮುಂದಕ್ಕೆ ಹೋಗಿಬಿಡುತ್ತದೆ’ ಎಂದೆ.
‘ಸಾಧ್ಯವಾಗಿ ಬಿಟ್ಟರೆ ಅಂದಿಯಲ್ಲಾ? ಇನ್ನೂ ಯಾಕೆ ಸಾಧ್ಯವಾಗಿಲ್ಲ?’ ರಾವತ್ ಸುಲಭದಲ್ಲಿ ನನ್ನನ್ನು ಬಿಡುವಂತೆ ಕಾಣಲಿಲ್ಲ. ಅವನದು ಸಹಜ ಕುತೂಹಲ. ಅದನ್ನು ತಣಿಸಲು ನಾನೆಂದೆತ ‘ಜನಸಂಖ್ಯೆಯನ್ನು ಹತೋಟಿಯಲ್ಲಿಡಬೇಕಾದರೆ, ಕುಟುಂಬ ಯೋಜನೆಯನ್ನು ಕಡ್ಡಾಯ ಮಾಡಬೇಕು. ನಮ್ಮದು ಜನತಾಂತ್ರಿಕ ವ್ಯವಸ್ಥೆ. ಹಾಗಾಗಿ ಕುಟುಂಬ ಯೋಜನೆಯನ್ನು ಬಲಾತ್ಕಾರವಾಗಿ ಹೇರುವಂತಿಲ್ಲ. ನಿನಗೆ ಗೊತ್ತೇನು? ಕುಟುಂಬ ಯೋಜನೆಯನ್ನು ಅಧಿಕೃತ ಸರ್ಕಾರೀ ಕಾರ್ಯಕ್ರಮವನ್ನಾಗಿಸಿದ ವಿಶ್ವದ ಮೊದಲ ರಾಷ್ಟ್ರ ನಮ್ಮದು. ಇತ್ತೀಚೆಗೆ ಜನರಿಗೆ ಸಣ್ಣ ಕುಟುಂಬದ ಮಹತ್ವದ ಅರಿವಾಗುತ್ತಿದೆ. ಒಂದಲ್ಲ ಒಂದು ದಿನ ನಾವು ಖಂಡಿತವಾಗಿಯೂ ಜನಸಂಖ್ಯೆಯನ್ನು ನಿಯಂತ್ರಿಸುತ್ತೇವೆ!’
‘ಸಂಪತ್ತನ್ನು ಸಮಾನವಾಗಿ ಹಂಚಲು ಸಾಧ್ಯವಾದೀತೆಂದು ನೀನು ಭಾವಿಸುತ್ತೀಯಾ?’
‘ಅದು ಕಷ್ಟವೇ. ಅದಕ್ಕಾಗಿ ಮಹಾಕ್ರಾಂತಿಯೊಂದು ನಡೆದ ನಿನ್ನ ದೇಶದಲ್ಲೇ ಆರ್ಥಿಕ ಸಮಾನತೆ ಸಾಧಿಸಲು ಆಗಿಲ್ಲ. ಆದರೆ ಜನರ ನಡುವಣ ಅಂತರವನ್ನು ಕಡಿಮೆ ಮಾಡಲು ಸಾಧ್ಯವಿದೆ. ಪ್ರಜಾಪ್ರಭುತ್ವ ಸಾರ್ಥಕವಾಗುವುದು ಆಗಲೇ ಅಲ್ಲವೇ?’ ಎಂದು ಅವನಿಗೇ ಮರುಪ್ರಶ್ನೆ ಹಾಕಿದಾಗ ಅವನು ತಲೆದೂಗಿದ.
ಈಗ ನಾನು ಮಾತು ಮುಂದುವರೆಸಿದೆ. ‘ಆದರೆ ಸಾಂಸ್ಕೃತಿಕವಾಗಿ ನಾವು ತುಂಬಾ ಶ್ರೀಮಂತರು. ಭಾರತದಲ್ಲಿರುವ ಕಲಾ ಪ್ರಕಾರಗಳನ್ನು ನೀನು ಬಂದೇ ನೋಡಬೇಕು. ಭಾರತದಲ್ಲಿ ಭಾಷೆ, ಡ್ರೆಸ್ಸು, ತಿಂಡಿ, ಹವಾಮಾನ, ಆಚರಣೆ ಎಲ್ಲದರಲ್ಲೂ ಅದೆಷ್ಟೊಂದು ವೈವಿಧ್ಯ! ಅಷ್ಟು ವೈವಿಧ್ಯ ನಿನಗೆ ವಿಶ್ವದ ಬೇರೆ ಯಾವ ರಾಷ್ಟ್ರದಲ್ಲೂ ಕಾಣಸಿಗಲಾರದು. ನೀನು ನನ್ನ ಯಕ್ಷಗಾನದ ಫೋಟೋ ನೋಡಿದ್ದೀಯಲ್ಲಾ? ಸಾವಿರಾರು ಜನ ರಾತ್ರಿಯಿಡೀ ನಿದ್ದೆಗೆಟ್ಟು ನೋಡುವ ಬೇರೊಂದು ಕಲಾಪ್ರಕಾರವನ್ನು ಹೆಸರಿಸಲು ಸಾಧ್ಯವಾ ನೋಡು.?’
‘ಹೌದು ನನಗೆ ಯಾವತ್ತಿನಿಂದಲೂ ಭಾರತಕ್ಕೆ ಹೋಗಬೇಕೆಂಬ ಬಯಕ್ಷೆ. ನಿಮ್ಮ ಫ್ಯಾಮಿಲಿ ಲೈಫ್ ನಮಗೆಲ್ಲಾ ಆದರ್ಶ ಎಂದ ಡಾ|ರಾವತ್.
‘ನಮ್ಮಲ್ಲಿ ಫ್ರೀ ಸೆಕ್ಸ್ ಇಲ್ಲದಿರುವುದೇ ಅದಕ್ಕೆ ಕಾರಣ. ಪ್ರೀತಿ, ಪ್ರೇಮಗಳು ನಮ್ಮಲ್ಲಿ ಯಾವತ್ತೂ ನವಿರಾದ ಭಾವನೆಗಳು. ಮದುವೆಯೊಂದು ಪವಿತ್ರ ಕಾರ್ಯ. ನಮ್ಮಲ್ಲಿ ಹಿರಿಯರನ್ನು ಕಿರಿಯರು, ಗುರುಗಳನ್ನು ವಿದ್ಯಾರ್ಥಿಗಳು, ಗಂಡನನ್ನು ಹೆಂಡತಿ ಗೌರವಿಸುತ್ತಾರೆ. ಹೇಳು, ಆರ್ಥಿಕ ಶ್ರೀಮಂತಿಕೆಗಿಂತ ಸಾಂಸ್ಕೃತಿಕ ಶ್ರೀಮಂತಿಕೆ ಮಹತ್ವದ್ದು ಎಂದು ನಿನಗೆ ಅನ್ನಿಸೋದಿಲ್ವೆ?’
‘ಹೌದು ಮಹಾರಾಯ! ನನ್ನೆರಡು ಹೆಣ್ಮಕ್ಕಳನ್ನು ಸರಿಯಾದ ವರ ನೋಡಿ ಮದುವೆ ಮಾಡಿಕೊಡಬೇಕೆಂದು ಕನಸು ಕಾಣುತ್ತಿದ್ದೇನೆ. ಯಾವಾಗ ಆ ಕನಸು ಒಡೆದುಬಿಡುತ್ತದೆಯೋ ಎಂಬ ಭಯ ನನಗೆ. ಸುಖ ಅನ್ನೋದು ಹಣದಲ್ಲೇ ಇಲ್ಲ. ನೀನನ್ನೋದು ನಿಜ’ ಎಂದು ಡೇನಿ ಗಂಡನಿಗೆ ಆತುಕೊಂಡು ನುಡಿದಳು.
ಇಂಗ್ಲೀಷ್ ಮತ್ತು ಕ್ರಿಕೆಟ್ಟು
‘ನಿನಗೆ ಇಂಗ್ಲೀಷ್ ಗೊತ್ತಿದೆಯಲ್ಲಾ? ಅದು ಹೇಗೆ?’ ಹೀಗೆಂದು ನನ್ನನ್ನು ಪ್ರಶ್ನಿಸಿದವ ಕ್ಯಾಸ್ತಲ್‌ನೂದರಿಯ ಡಾ|ರಾವತ್. ಆಗಾಗ ಅಮೇರಿಕಾಕ್ಕೆ ಹೋಗಿ ಬರುತ್ತಿದ್ದ ಡಾ|ರಾವತ್‌ನ ಇಂಗ್ಲೀಷು ಚೆನ್ನಾಗಿಯೇ ಇತ್ತು.
ನಾನದಕ್ಕೆ ‘ನಾನು ಇಂಗ್ಲೀಷ್ ಮಾಧ್ಯಮದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದವ. ಹಾಗಾಗಿ ತಕ್ಕಮಟ್ಟಿಗೆ ಇಂಗ್ಲೀಷ್ ಬರುತ್ತದೆ’ ಎಂದೆ.
‘ಅದ್ಯಾಕೆ? ನಿನ್ನ ದೇಶದ್ದೇ ಆದ ಭಾಷೆಗಳಿಲ್ಲವೆ?’
‘ಅಯ್ಯಯೋ ಸಾಕಷ್ಟಿವೆ. ಸಂವಿಧಾನವೇ ಒಪ್ಪಿಕೊಂಡ ಹದಿನೆಂಟು ಭಾಷೆಗಳು. ಅದರ ಜತೆಗೆ ಲೆಕ್ಕ ಹಾಕಿದರೆ ಸಾವಿರಾರು ಭಾಷೆಗಳು ಬೇರೆಯೇ ಇವೆ.’
‘ಹಾಗಿದ್ದೂ ಇಂಗ್ಲೀಷನ್ನು ಶಿಕಣ ಮಾಧ್ಯಮ ಮಾಡಿಕೊಂಡದ್ದು ಯಾಕೆ?’ ಡಾ|ರಾವತ್‌ನ ಈ ಪ್ರಶ್ನೆ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿತು. ಇಂಗ್ಲೀಷ್ ಅಂತಾರಾಷ್ಟ್ರೀಯ ಭಾಷೆ ಎಂಬ ನನ್ನ ಭ್ರಮೆ ಪ್ಯಾರಿಸ್ಸಿನ ನೆಲಕ್ಕೆ ಕಾಲಿಟ್ಟಂದೇ ಕರಗಿಹೋಗಿತ್ತು. ಡಿ ಗಾಲೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉನ್ನತ ತನಿಖಾಧಿಕಾರಿಗೇ ಇಂಗ್ಲೀಷ್ ಬರುತ್ತಿರಲಿಲ್ಲ. ತುಲೋಸಿನಲ್ಲಿ ಹಂಬರ್ಗ್ ಹೇಗೋ ಹೇಗೋ ಇತರರ ಸಹಾಯದಿಂದ ನಮ್ಮೊಡನೆ ಸಂವಹನ ಸಾಧಿಸಿದ್ದ. ತುಲೋಸಿನ ಜಾರ್ಜ್, ಆಲಿಪ್‌ಯ ಮನು, ಫಿಜೆಯಾಕಿನ ಮಾರ್ಸೆಲ್, ಕ್ಯಾಸ್ತಲ್ ನೂದರಿಯ ಡೇನಿ ಮೊದಲಾದವರೊಡನೆ ಸಂಭಾಷಿಸುವಾಗ ಅಂತಾರಾಷ್ಟ್ರೀಯ ಸಾರ್ವತ್ರಿಕ ಭಾಷೆಯಾದ ಕೈ ಸನ್ನೆಗೆ ಶರಣು ಹೋಗಬೇಕಾದ ಪರಿಸ್ಥತಿ ನನಗೆ ಒದಗಿತ್ತು.
ಮಾತೃಭಾಷೆಯೇ ಶಿಕಣ ಮಾಧ್ಯಮವಾಗಿರಬೇಕು ಎಂದು ದೃಢವಾಗಿ ನಂಬಿದವನು ನಾನು. ಆದರೆ ನಮ್ಮ ಸರಕಾರದ ಭಾಷಾ ನೀತಿ, ಸರಕಾರೀ ಶಾಲೆಗಳ ಅವ್ಯವಸ್ಥೆ, ಜಾಗತೀಕರಣದ ಪ್ರಕ್ರಿಯೆ ಮತ್ತು ಕಂಪ್ಯೂಟರು ಪಡೆದುಕೊಳ್ಳುತ್ತಿರುವ ಮಹತ್ವದಿಂದಾಗಿ, ನಾಳೆ ನನ್ನ ಮಕ್ಕಳು ನನ್ನನ್ನು, ‘ಅಪ್ಪ ಇಂಗ್ಲೀಷಿನಲ್ಲಿ ಓದಿಸದೆ ನಮ್ಮ ಭವಿಷ್ಯವನ್ನೇ ಹಾಳು ಮಾಡಿಬಿಟ್ಟ’ ಎಂದುಕೊಳ್ಳಬಾರದಲ್ಲಾ ? ಅದಕ್ಕಾಗಿ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೇ ಹಾಕಿದ್ದೆ. ‘ಕಷ್ಟವಾದರೆ ಹೇಳಿ ಮಕ್ಕಳೇ. ನಿಮಗೆ ಕನ್ನಡ ಮಾಧ್ಯಮ ಇಷ್ಟವಾದರೆ ಅದಕ್ಕೇ ಸೇರಿಸುತ್ತೇನೆ.’ ಎಂಬ ಸ್ವಾತಂತ್ರ್ಯವನ್ನೂ ನೀಡಿದ್ದೇನೆ. ಈಗ ರಾವತ್ ಮಾಧ್ಯಮದ ಪ್ರಶ್ನೆ ಎತ್ತಿದ್ದಾನೆ. ಅವನಿಗೊಂಡು ಉತ್ತರವನ್ನು ನಾನು ನೀಡಲೇಬೇಕು.
‘ನಮ್ಮನ್ನು ಇಂಗ್ಲೀಷರು ಆಳುವಾಗ ಮಾಧ್ಯಮ ಇಂಗ್ಲೀಷಾಯಿತು. ಅದು ಹಾಗೆಯೇ ಮುಂದುವರಿದುಕೊಂಡು ಬಂದಿದೆ.’
‘ಸರಿ ಮಾರಾಯಾ. ಅವರ ಆಳ್ವಿಕೆ ಕಾಲದಲ್ಲೇನೋ ಹಾಗಾಯ್ತು. ಆದರೆ ನೀವು ಸ್ವಾತಂತ್ರ್ಯಗಳಿಸಿ ಐವತ್ತು ವರ್ಷಗಳಾದವು ಎಂದು ಹೇಳುತ್ತಿ. ಇನ್ನೂ ಕೂಡಾ ನಿಮ್ಮದೇ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿಸಲು ನಿಮಗೆ ಯಾಕೆ ಸಾಧ್ಯವಾಗಿಲ್ಲ?’
ಈ ಫ್ರೆಂಚರೇ ಹೀಗೆ. ಅನಿಸಿದ್ದನ್ನು ನೇರವಾಗಿ ಹೇಳಿಬಿಡುವ ಸ್ವಭಾವದವರು. ಯಾವುದನ್ನೂ ಮುಚ್ಚಿಟ್ಟುಕೊಂಡು ಕೊರಗುವವರಲ್ಲ. ಬೇರೆಯವರಿಗೆ ತೊಂದರೆ ಕೊಡುವವರೂ ಅಲ್ಲ. ಅವರಲ್ಲಿ ಸಂಶಯವೊಂದು ಉದ್ಭವವಾದರೆ ಅದು ಪೂರ್ತಿಯಾಗಿ ಪರಿಹಾರವಾಗುವವರೆಗೆ ಬಿಡುವವರೂ ಅಲ್ಲ.
ನಾನೆಂದೆ: ‘ಈ ಬಗ್ಗೆ ಗಂಭೀರ ಚಿಂತನೆಗಳಾಗುತ್ತಿವೆ. ಆದರೆ ನಮ್ಮ ದೇಶದ ಶ್ರೀಮಂತರಿಗೆ ಮತ್ತು ಮಧ್ಯಮ ವರ್ಗೀಯರಿಗೆ ಇಂಗ್ಲೀಷ್ ಅಂದರೆ ಈಗಲೂ ಮೋಹ. ಅಲ್ಲದೇ ನಮ್ಮ ಸೈನ್ಸ್, ಇಕನಾಮಿಕ್ಸ್, ಮೆಡಿಕಲ್ ಮತ್ತು ಇಂಜಿನಿಯರಿಂಗ್, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್ ಎಲ್ಲವೂ ಇಂಗ್ಲೀಷಿನಲ್ಲೇ ಇವೆ. ಅನೇಕ ಭಾಷೆಗಳಿರುವ ನಮ್ಮ ದೇಶದಲ್ಲಿ ಇಂಗ್ಲೀಷ್ ಒಂದು ಲಿಂಕ್ ಲ್ಯಾಂಗ್ವೇಜಾಗಿ ಕೆಲಸ ಮಾಡುತ್ತಿದೆ. ಈಗ ನಿನ್ನಲ್ಲಿ ನನಗೆ ಮಾತಾಡಲು ಸಾಧ್ಯವಾಗಿರುವುದು ಕೂಡಾ ಇಂಗ್ಲೀಷಿನಿಂದಾಗಿಯೇ ಅಲ್ಲವೆ?’
ರಾವತ್ ನಕ್ಕ. ‘ನಾನು ಹೇಳಿದ್ದು ನಿನಗೆ ಅರ್ಥವಾಗಲಿಲ್ಲ ಮಾರಾಯ. ಇಂಗ್ಲೀಷನ್ನು ಕಲಿಯೋದೇ ಬೇರೆ, ಇಂಗ್ಲೀಷಿನಲ್ಲಿ ಕಲಿಯೋದೇ ಬೇರೆ. ಆಸಕ್ತಿ ಮತ್ತು ಸಮಯವಿದ್ದರೆ ಇಂಗ್ಲೀಷನ್ನು ಮಾತ್ರವಲ್ಲದ ಫ್ರೆಂಚ್, ಜರ್ಮನ್, ಸ್ಪಾನಿಷ್ ಹೀಗೆ ಏನನ್ನು ಬೇಕಾದರೂ ಕಲಿಯಿರಿ. ಆದರೆ ನಿಮ್ಮ ದೇಶದ ಇತಿಹಾಸ, ನಿಮ್ಮ ಸಮಾಜ, ನಿಮ್ಮ ಅರ್ಥವ್ಯವಸ್ಥೆ, ನಿಮ್ಮ ಕಾನೂನುಗಳನ್ನು ನಿಮ್ಮ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವುದು ಸುಲಭವೋ, ಇಂಗ್ಲೀಷಿನಲ್ಲೋ? ಇವುಗಳ ಜತೆ ಸೈನ್ಸ್, ಮೆಡಿಕಲ್, ಎಂಜಿನಿಯರಿಂಗ್‌ನ್ನು ನಿಮ್ಮದೇ ಭಾಷೆಯಲ್ಲಿ ಚೆನ್ನಾಗಿ ಅರ್ಥಮಾಡಿಕೊಂಡು ಅತ್ಯಂತ ಸುಲಭವಾಗಿ ಯಾಕೆ ಕಲಿಯಬಾರದು? ಈಗಿನದ್ದು ಏನಿದ್ದರೂ ಉರುಹೊಡೆದ ಜ್ಞಾನ ತಾನೆ?’
‘ಕಲಿಯಬಹುದು. ಆದರೆ ಮೆಡಿಸಿನ್ ಮತ್ತು ಎಂಜಿನಿಯರಿಂಗ್ ಬಗ್ಗೆ ಭಾರತೀಯ ಭಾಷೆಗಳಲ್ಲಿ ಸಾಕಷ್ಟು ಪುಸ್ತಕ ರಚನೆಯಾಗಿಲ್ಲ. ಕನ್ನಡದಲ್ಲಿ ಕಂಪ್ಯೂಟರ್ ಸಾಫ್ಟ್‌ವೇರನ್ನು ಸಾಕಷ್ಟು ಅಭಿವೃದ್ಧಿ ಪಡಿಸಿಲ್ಲ. ಅಲ್ಲದೆ ಸರಕಾರವೂ ಕೂಡಾ ಮಾಧ್ಯಮದ ಬಗ್ಗೆ ಸರಿಯಾದ ನೀತಿಯೊಂದನ್ನು ರೂಪಿಸಿಲ್ಲ. ಇರುವ ನೀತಿಯೂ ಅನುಷ್ಠಾನದಲ್ಲಿಲ್ಲ’ ಎಂದೆ.
‘ನೀನು ಎಲ್ಲವನ್ನೂ ಇಲ್ಲ ಎನ್ನುತ್ತೀಯೆ! ಇವನ್ನು ಮಾಡಬೇಕಾದವರು ಯಾರು? ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ನಿನ್ನ ಬೆಂಗಳೂರು ಇಲ್ಲಿಯೂ ಪ್ರಸಿದ್ಧಿ. ಹಾಗಿದ್ದೂ ನಿಮ್ಮದೇ ಭಾಷೆಯಲ್ಲಿ ಇವೆಲ್ಲವನ್ನು ಮಾಡಿಕೊಂಡಿಲ್ಲವೆಂದರೆ ಹೇಗೆ? ನಿಮ್ಮ ದೇಶದಲ್ಲಿರುವ ಅಷ್ಟೊಂದು ಮಂದಿ ಡಾಕ್ಟರು, ಎಂಜಿನಿಯರು, ಸೈಂಟಿಸ್ಟುಗಳಿಗೆ ತಾವು ಕಲಿತದ್ದನ್ನು ತಮ್ಮ ಭಾಷೆಗಳಲ್ಲಿ ಬೇರೆಯವರಿಗೆ ನೀಡಲು ಯಾಕೆ ಸಾಧ್ಯವಾಗುತ್ತಿಲ್ಲ?’
ಯಾಕೆಂದು ನಾನು ಹೇಳುವುದಾದರೂ ಹೇಗೆ? ಕನ್ನಡವನ್ನೇ ಮನೆಯಲ್ಲಿ ಮಾತಾಡುವ ಮಂದಿಗಳು ಉನ್ನತ ಶಿಕಣ ಪಡೆದು ವೈದ್ಯರೋ, ಎಂಜಿನಿಯರೋ ಆದರೆ ಸಭೆ ಸಮಾರಂಭಗಳಲ್ಲಿ ‘ನನಗೆ ಕನ್ನಡ ಚೆನ್ನಾಗಿ ಬರುವುದಿಲ್ಲ ಕಮಿಸಿ’ ಎಂದೋ, ‘ನಾನು ಇಂಗ್ಲೀಷಿನಲ್ಲೇ ಮಾತಾಡುತ್ತೇನೆ’ ಎಂದೋ ಹೇಳುತ್ತಾರೆ. ನಾವು ಕಲಿತ ವಿಷಯವನ್ನು ನಮ್ಮ ಭಾಷೆಯಲ್ಲಿ ಹೇಳಲು ಸಾಧ್ಯವಾಗದಿದ್ದರೆ ನಮ್ಮ ವಿದ್ಯೆಗೆ ಏನು ಅರ್ಥವಿರಲು ಸಾಧ್ಯ? ಪ್ರದರ್ಶನ, ಒಣಪ್ರತಿಷ್ಠೆ, ಮೇಲರಿಮೆಗಳು ಕನ್ನಡಕ್ಕೆ ಅದೆಷ್ಟು ಹಾನಿ ಮಾಡಿವೆ? ಹಾಗಂತ ನಾನು ರಾವತ್‌ನಲ್ಲಿ ಹೇಳಲಾಗದೆ ಸುಮ್ಮನೆ ಕುಳಿತೆ.
ನನ್ನ ಮೌನವನ್ನು ನೋಡಿ ರಾವತನೆಂದ : ‘ಯುರೋಪಿನ ಎಲ್ಲಾ ದೇಶಗಳಲ್ಲಿ ಅಲ್ಲಿನ ದೇಶಭಾಷೆಯೇ ಶಿಕ್ಷಣ ಮಾಧ್ಯಮವಾಗಿರುತ್ತದೆ. ಅದರೊಂದಿಗೆ ಯುರೋಪಿನ ಯಾವುದಾದರೊಂದು ಭಾಷೆಯನ್ನು ಕೂಡಾ ನಾವು ಕಲಿಯುತ್ತೇವೆ. ನಿಮ್ಮ ಜಪಾನು ಮತ್ತು ಚೀನಾ ಅಷ್ಟು ಪ್ರಗತಿ ಸಾಧಿಸಲು ಸಾಧ್ಯವಾದದ್ದು ದೇಶೀಯ ಭಾಷೆಯನ್ನೇ ಶಿಕ್ಷಣ ಮಾಧ್ಯಮ ಮಾಡಿಕೊಂಡದ್ದರಿಂದ. ತಮ್ಮ ಸ್ವಂತ ಭಾಷೆಯಲ್ಲಿ ವಿಜ್ಞಾನ, ಮಾನವಿಕ, ವಾಣಿಜ್ಯ ಶಾಸ್ತ್ರಗಳನ್ನು ರೂಪಿಸಿಕೊಳ್ಳುವುದೇ ನಿಜವಾದ ಸ್ವಾವಲಂಬನೆ. ನೀವು ಇಂಗ್ಲೀಷಿನ ಮೋಹದಿಂದ ನಿಮ್ಮೆಲ್ಲ ಭಾಷೆಗಳನ್ನು ಕೊಲ್ಲುತ್ತಿದ್ದೀರಿ. ಒಂದು ಭಾಷೆಯೊಂದಿಗೆ ಒಂದು ಸಂಸ್ಕೃತಿ ನಿರ್ನಾಮ ಹೊಂದುತ್ತದೆ. ಎಂದಿನವರೆಗೆ ನಿಮಗೆ ಎಲ್ಲಾ ಜ್ಞಾನಾಂಗಗಳನ್ನು ನಿಮ್ಮ ಸ್ವಂತ ಭಾಷೆಯಲ್ಲಿ ಕಲಿಯಲು ಸಾಧ್ಯವಾಗುವುದಿಲ್ಲವೋ, ಅಲ್ಲಿಯವರೆಗೆ ನಿಮ್ಮ ಸಾಂಸ್ಕೃತಿಕ ದಾಸ್ಯ ತಪ್ಪಿದ್ದಲ್ಲ. ಅನ್ಯ ಭಾಷೆಯನ್ನು ಕಲಿಯಿರಿ. ಆದರೆ ನಿಮ್ಮ ಭಾಷೆಯೇ ಶಿಕ್ಷಣ ಮಾಧ್ಯಮವಾಗಿರಬೇಕು. ಅದು ಹೊರತು ನಿಮ್ಮ ಸ್ವಾತಂತ್ರ್ಯ ಅರ್ಥಹೀನ.’
ರಾವತನ ಮಾತುಗಳಿಗೆ ನಾನು ಪಡಿನುಡಿಯಲಿಲ್ಲ. ಆದರೆ ಈಗಿನ ಅವ್ಯವಸ್ಥೆಯನ್ನು ಸರಿಪಡಿಸಲು ಹೇಗೆ ಸಾಧ್ಯ? ನಾನು ಚಿಂತೆಯಲ್ಲೇ ಮುಳುಗಿರುವಾಗ ರಾವತ್ ಗಂಭೀರ ದನಿಯಲ್ಲಿ, ನನ್ನ ದೃಷ್ಟಿಗೆ ದೃಷ್ಟಿ ಬೆರೆಸಿ ಕೇಳಿದ: ‘ಒಂದು ವೇಳೆ ಇಂಗ್ಲೀಷರ ಬದಲು ಫ್ರೆಂಚರೋ, ಜರ್ಮನರೋ ನಿಮ್ಮನ್ನು ಅಷ್ಟು ವರ್ಷಗಳವರೆಗೆ ಆಳಿರುತ್ತಿದ್ದರೆ, ಇಂಗ್ಲೀಷಿನ ಬದಲು ನಿಮ್ಮ ಶಿಕಣ ಮಾಧ್ಯಮ ಫ್ರೆಂಚೋ, ಜರ್ಮನೋ ಆಗಿಬಿಡುತ್ತಿತ್ತು ಅಲ್ಲವೇ?’
ಹೌದಲ್ಲವೆ?
***
ಕ್ಯಾಸ್ತ್ರದಲ್ಲಿ ಒಂದು ಮಧ್ಯಾಹ್ನದೂಟ ನನಗೆ ನೀಡಿದ ಬೆರ್ನಾರ್ಡಿನ್ ಒಬ್ಬ ರಸ್ತೆ ಕಂಟ್ರಾಕ್ಟರ್. ಊಟದ ಬಳಿಕ ಅವನ ಕೊಳದಲ್ಲಿ ಈಜಿ, ಅವನೊಡನೆ ಟೆನಿಸ್ ಆಡುವಾಗ ಆತ ಕೇಳಿದ.
‘ನಿನ್ನ ಇಷ್ಟದ ಕ್ರೀಡೆ ಯಾವುದು?’
ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗ ತಂಡದ ಹನ್ನೊಂದು ಮಂದಿಯಲ್ಲಿ ಒಬ್ಬನಾಗಿ ಹಲವು ಮ್ಯಾಚ್ ಸೋತು, ಕೆಲವನ್ನು ಗೆದ್ದುಕೊಟ್ಟಿದ್ದ ನಾನು ಗೆಲವಿನ ಧ್ವನಿಯಲ್ಲಿ ಹೇಳಿದೆ: ‘ಕ್ರಿಕೆಟ್ಟ್’
‘ಕ್ರಿಕೆಟ್ಟ್ ?’ ಬೆರ್ನಾರ್ಡಿನ್ನನ ಮುಖದಲ್ಲಿ ಎಷ್ಟೊಂದು ತಿರಸ್ಕಾರ ತುಂಬಿತ್ತೆಂದರೆ ನನಗದನ್ನು ಈಗಲೂ ಮರೆಯಲು ಸಾಧ್ಯವಾಗಿಲ್ಲ.
‘ನಿನ್ನ ಈ ಕ್ರಿಕೆಟ್ಟನ್ನು ಎಷ್ಟು ದೇಶಗಳು ಆಡುತ್ತವೆ’
ನಾನೀಗ ಕುಗ್ಗಿ ಹೋದೆ: ‘ಹತ್ತು ಮಾತ್ರ.’
‘ವಿಶ್ವದಲ್ಲಿ ಒಟ್ಟು ಎಷ್ಟು ದೇಶಗಳಿವೆ?’
‘ಇನ್ನೂರಕ್ಕೂ ಹೆಚ್ಚು’
‘ಇದು ಮೂಲತಃ ಯಾವ ದೇಶದ ಆಟ?’
ನಾನೀಗ ರಕಣಾ ವ್ಯೂಹ ಸಿದ್ಧಪಡಿಸಿಕೊಂಡೆ. ‘ಬ್ರಿಟನಿನ್ನದು. ಹಾಗೆ ನೋಡಿದರೆ ಈ ಟೆನಿಸ್ ಕೂಡಾ ನಿಮ್ಮದೇನಲ್ಲವಲ್ಲಾ?’
ಬೆರ್ನಾರ್ಡಿನ್ ನಕ್ಕ. ‘ಒಪ್ಪಿಕೊಂಡೆ. ಆದರೆ ಇನ್ನೂರಕ್ಕೂ ಹೆಚ್ಚು ದೇಶಗಳ ಪೈಕಿ ಕೇವಲ ಹತ್ತು ದೇಶಗಳು ಆಡುವ ಒಂದು ಕ್ರೀಡೆಗೆ ನಿನ್ನಂತಹವರೂ ಅಷ್ಟೊಂದು ಮಹತ್ವ ನೀಡುವುದೇ? ನಿಮ್ಮ ಕ್ರಿಕೆಟ್ಟು ಟೆಸ್ಟುಗಳ ಬಗ್ಗೆ ಕೇಳಿದ್ದೇನೆ. ಐದು ದಿನ ಆಡಿಯೂ ರಿಸಲ್ಟು ಬಾರದೆ ಇದ್ದರೆ ಅದೂ ಒಂದು ಕ್ರೀಡೆಯೇ? ನಿನ್ನ ದೇಶದ ಹೆಚ್ಚಿನ ಮಂದಿಗೆ ಅದರದ್ದೇ ಹುಚ್ಚು. ನಿಮ್ಮನ್ನು ಆಳುವವರಿಗೆ ಅದರಿಂದ ಹಣಮಾಡುವ ಹುಚ್ಚು. ಹೇಳು ಕ್ರಿಕೆಟ್ಟಿಗಾಗಿ ನೀವು ಎಷ್ಟು ದಿನ, ಎಷ್ಟು ಪ್ರತಿಭೆ, ಎಷ್ಟು ಮಾನವಶಕ್ತಿ ಮತ್ತು ಎಷ್ಟು ವಿದ್ಯುತ್ ಪೋಲು ಮಾಡುತ್ತೀರಿ?’
ನಾನೀಗ ನಿರುತ್ತರನಾದೆತ ‘ ಹೌದು. ನಿನ್ನ ಮಾತು ಸತ್ಯ.’
ಬೆರ್ನಾರ್ಡಿನ್ ಮುಂದುವರಿಸಿದ: ‘ಅಷ್ಟೇ ಅಲ್ಲ ಮಾರಾಯ. ನೀವು ಕ್ರಿಕೆಟ್ಟಿನಷ್ಟೇ ಪ್ರೋತ್ಸಾಹ ಬೇರೆ ಕ್ರೀಡೆಗಳಿಗೂ ಕೊಡುತ್ತಿದ್ದರೆ ಅದಾದರೂ ಆಗುತ್ತಿತ್ತು. ನಿಮ್ಮಲ್ಲಿ ಬೇರೆ ಯಾವ ಕ್ರೀಡೆಗೂ ಪ್ರೋತ್ಸಾಹವೇ ಇಲ್ಲವಲ್ಲಾ? ಮತ್ತೆ ಒಲಿಂಪಿಕ್ಸ್‌ನಲ್ಲಿ ನಿಮ್ಮ ಮಾನ ಹರಾಜಾಗದೆ ಇರುತ್ತದೆಯೇ? ಕಳೆದ ಬಾರಿ ಟೆನ್ನಿಸ್‌ನಲ್ಲಿ ನಿಮಗೊಂದು ಕಂಚಾದರೂ ಬಂತು. ಕ್ರಿಕೆಟ್ಟಿನಿಂದ?’ ನಾನು ಹೌದೆಂಬಂತೆ ತಲೆಯಾಡಿಸಿದೆ.
ಬೆರ್ನಾರ್ಡಿನ್ ನಗುತ್ತಲೇ ಚುಚ್ಚಿದ: ‘ನಿಮ್ಮನ್ನು ಶಾಶ್ವತ ಗುಲಾಮರನ್ನಾಗಿರುವ ಎರಡು ಸಾಧನಗಳನ್ನು ನಿಮಗೆ ಬ್ರಿಟಿಷರು ಬಿಟ್ಟು ಹೋಗಿದ್ದಾರೆ. ಒಂದು ಇಂಗ್ಲೀಷು, ಇನ್ನೊಂದು ಕ್ರಿಕೆಟ್ಟು. ಇವೆರಡೂ ಇರುವವರೆಗೆ ನಿಮ್ಮ ದೇಶದಲ್ಲಿ ಬೇರೆ ಭಾಷೆ ಮತ್ತು ಬೇರೆ ಕ್ರೀಡೆ ಅಭಿವೃದ್ಧಿ ಹೊಂದಲು ಸಾಧ್ಯವೇ ಇಲ್ಲ. ಒಬ್ಬ ಫ್ರೆಂಚನಾಗಿ ನಾನಿದನ್ನು ಹೇಳುತ್ತಿಲ್ಲ. ಭಾರತೀಯನಾಗಿ ನೀನೇ ಯೋಚಿಸು. ನಿಮ್ಮದೇ ಭಾಷೆಯನ್ನು ಇಂಗ್ಲೀಷಿನ ಹಂತಕ್ಕೆ ಮತ್ತು ನಿಮ್ಮದೇ ಕ್ರೀಡೆಯನ್ನು ಕ್ರಿಕೆಟ್ಟಿನ ಹಂತಕ್ಕೆ ಎತ್ತಲು ನಿಮಗೆ ಯಾಕೆ ಸಾಧ್ಯವಾಗಿಲ್ಲ? ಇದು ಗುಲಾಮಗಿರಿಯಲ್ಲದೆ ಇನ್ನೇನು? ನಿಜ ಹೇಳು. ನಿನ್ನ ದೇಶದ ಸ್ವಾತಂತ್ರ್ಯಕ್ಕೆ ಅರ್ಥ ಇದೆಯೇ?’
ಇದೆಯೆ?
ಈ ಪರಿಯ ಸೊಬಗು
ನಾನು ರೋಟರಿಯ ಅತಿಥಿಯಾಗಿ ಫ್ರಾನ್ಸ್‌ಗೆ ಹೋದುದರಿಂದ, ನನ್ನ ಅತಿಥೇಯರಿಗೆಂದು ಕೆಲವು ಉಡುಗೊರೆ ಕೊಂಡುಹೋಗಿದ್ದೆ. ಆದರೆ ನನ್ನದು ಅಂತಿಮ ಕ್ಷಣದ ಸೇರ್ಪಡೆಯಾದುದರಿಂದ ಉಡುಗೊರೆಗಳನ್ನು ಆರಿಸುವುದಕ್ಕೆ ವ್ಯವಧಾನವಿರಲಿಲ್ಲ. ಆಗ ತೊಡಿಕಾನ ರಾಮಕೃಷ್ಣರು ತಮ್ಮ ಪರವಾಗಿ ಫ್ರೆಂಚರಿಗೆ ಉಡುಗೊರೆ ನೀಡಲು ಯಕ್ಷ್ಷಗಾನದ ಆರು ಮುಖವಾಡಗಳನ್ನು ಕೊಟ್ಟರು. ಅವನ್ನು ಆರು ಮಂದಿ ಅತಿಥೇಯರಿಗೆ ಕೊಟ್ಟೆ. ಫ್ರೆಂಚರು ಕಲಾರಾಧಕರು. ಯಕ್ಷ್ಷಗಾನದ ಬಗೆಗಿನ ಅವರ ನೂರಾರು ಸಂದೇಹಗಳನ್ನು ತಣಿಸುವುದೇ ನನಗೆ ಒಂದು ದೊಡ್ಡ ಸವಾಲಾಯಿತು. ಒಂದೆರಡು ಕಡೆ ಯಕ್ಷ್ಷಗಾನ ಕುಣಿದು ತೋರಿಸಬೇಕಾದ ಸಂದರ್ಭ ಕೂಡಾ ಒದಗಿತು. ‘ಇದೊಂದು ಅದ್ಭುತ ಕಲೆ. ಇದನ್ನು ನೋಡಲಿಕ್ಕಾದರೂ ಭಾರತಕ್ಕೆ ಬರುತ್ತೇವೆ’ ಎಂದು ಕೆಲವರು ನನ್ನಲ್ಲಿ ಹೇಳಿದ್ದುಂಟು. ನನಗಾಗ ಯಕ್ಷ್ಷಗಾನವೆಂದರೆ ಮೂಗು ಮುರಿಯುತ್ತಿರುವ ನಮ್ಮ ಯುವಜನತೆಯ ನೆನಪಾಗುತ್ತಿತ್ತು. ದೀಪದ ಅಡಿಯಲ್ಲಿ ಸದಾ ಕತ್ತಲೆಯೆ!
ಫ್ರಾನ್ಸಿಗೆ ಒಯ್ಯಲು ಸಾಕಷ್ಟು ರಾಖಿಗಳನ್ನು ಕೊಟ್ಟದ್ದು ಕಟ್ಟೆಕಾರ್ ಅಬ್ದುಲ್ಲ. ರಾಖಿಯ ಮಹತ್ವ ತಿಳಿಸಿ ಕಟ್ಟಿದಾಗ ಆದ್ರ್ರರಾದ ಫ್ರೆಂಚರ ಸಂಖ್ಯೆ ಅದೆಷ್ಟು! ಫ್ರಾನ್ಸಿಗೆ ಒಯ್ಯಲು ಭಾರತದ ತ್ರಿವರ್ಣ ಧ್ವಜಗಳನ್ನು ಕೊಟ್ಟದ್ದು ವಿಶ್ವಾಸ್ ಸೂರಯ್ಯ. ರಾಷ್ಟ್ರವೊಂದರ ಸಾರ್ವಭೌಮತೆ ಮತ್ತು ಪ್ರತಿಷಷ್ಠೆಯ ಸಂಕೇತವಾದ ಧ್ವಜವನ್ನು ಕೊಟ್ಟಾಗ ಯಾರಿಗೆ ತಾನೇ ಸಂತೋಷವಾಗುವುದಿಲ್ಲ? ಫ್ರೆಂಚ್ ಮಹಿಳೆಯರಿಗೆ ಬಿಂದಿ ನೀಡಿದಾಗ ಅದನ್ನು ಹಣೆಗಿಟ್ಟು ‘ನಾನು ಚಂದ ಕಾಣುತ್ತೀನಾ?’ ಎಂದು ಕೇಳಿದವರ ಸಂಖ್ಯೆ ಅದೆಷ್ಟು!
ನಮ್ಮ ತಂಡದ ಎಲೈನ್ ಫ್ರಾನ್ಸಿಗೆ ಹೋಗುವಾಗ ಏಳೆಂಟು ಸೀರೆ ಕೊಂಡುಹೋಗಿದ್ದಳು. ಸಮಾರಂಭದ ಸಂದರ್ಭಗಳಲ್ಲಿ ಅದನ್ನು ಫ್ರೆಂಚ್ ಮಹಿಳೆಯರಿಗೆ ಉಡಿಸಿ, ವಾತಾವರಣವನ್ನೇ ಬದಲಾಯಿಸಿ ಬಿಡುತ್ತಿದ್ದಳು. ಹೆಚ್ಚಾಗಿ ಅವಳು ಸೀರೆಯನ್ನೇ ಉಡುತ್ತಿದ್ದುದರಿಂದ, ಫ್ರಾನ್ಸಿನಲ್ಲಿ ನಾವು ಹೋದಲ್ಲೆಲ್ಲಾ ಎಲ್ಲರ ಗಮನವನ್ನು ಮೊದಲಿಗೆ ಸೆಳೆಯುತ್ತಿದ್ದವಳು ಅವಳೇ. ಕೊನೆಗೆ ಅವಳ ಸೀರೆಗೆ ಅದೆಷ್ಟು ಫ್ರೆಂಚ್ ಮಹಿಳೆಯರು ಗಂಟುಬಿದ್ದರೆಂದರೆ ಭಾರತಕ್ಕೆ ವಾಪಾಸಾಗುವಾಗ ಅವಳಲ್ಲಿ ಸೀರೆಯೇ ಉಳಿದಿರಲಿಲ್ಲ. ಬರಿಯ ಚೂಡಿದಾರ್‌ನಲ್ಲಿ ಅವಳು ಬರಬೇಕಾಯಿತು.
ರೋಟರಿ ಸಮಾರಂಭಗಳಲ್ಲಿ ನಾವು ಟೈ ಕಟ್ಟಿ ಕೋಟು ಹಾಕಿ ಪಾಶ್ಚಾತ್ಯರನ್ನು ಅನುಕರಿಸುವಾಗ ನನಗೆ ಕಸಿವಿಸಿಯಾಗುತ್ತಿತ್ತು. ನಾವು ಹೋಗುತ್ತಿರುವುದು ಸಾಂಸ್ಕೃತಿಕ ವಿನಿಮಯಕ್ಕೆ. ಹಾಗಾಗಿ ನಮ್ಮ ದೇಶದ ಉಡುಪಿನಲ್ಲೇ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳಬೇಕೆನ್ನುವುದು ನನ್ನ ಅಭಿಪ್ರಾಯವಾಗಿತ್ತು. ಹೆಚ್ಚಾಗಿ ನಾನು ಕುರ್ತಾ ಪೈಜಾಮಗಳಲ್ಲಿ ಸಭೆಗಳಿಗೆ ಹಾಜರಾಗುತ್ತಿದ್ದೆ. ಉಳಿದ ಸಂದರ್ಭಗಳಲ್ಲಿ ಚಳಿಯಿಂದ ರಕಣೆಗಾಗಿ ನಾನು ಟೈ ಕಟ್ಟಿ, ಕೋಟು ಹಾಕಿಕೊಳ್ಳುತ್ತಿದ್ದೆನೇ ಹೊರತು ಅದು ನನ್ನ ಉಡುಪು ಎಂದು ನನಗೆ ಯಾವತ್ತೂ ಅನಿಸಿರಲಿಲ್ಲ.
ತುಲೋಸಿನ ಬೀಳ್ಕೂಡುಗೆ ಸಮಾರಂಭದಂದು ನಾನುಟ್ಟದ್ದು ಪಂಚೆ ಮತ್ತು ತೊಟ್ಟದ್ದು ಬಿಳಿಜುಬ್ಬ. ಹೆಗಲಿಗೆ ಹಸಿರು ಶಾಲೊಂದನ್ನು ಹಾಕಿಕೊಂಡಿದ್ದೆ. ನನ್ನ ಪಂಚೆ ಜುಬ್ಬ ಎಲ್ಲರ ಗಮನ ಸೆಳೆಯಿತು. ಮ್ಯಾಗಿಯಂತೂ ‘ನೀನು ತುಂಬಾ ಭವ್ಯವಾಗಿ ಕಾಣುತ್ತೀಯ’ ಇದು ನಿನ್ನ ರಾಷ್ಟ್ರೀಯ ಡ್ರೆಸ್ಸೇ?’ ಎಂದು ಪ್ರಶ್ನಿಸಿದಳು. ‘ದಕಿಣ ಭಾರತದಲ್ಲಿ ಇದೇ ಪ್ರಧಾನ ಡ್ರೆಸ್ಸು. ಮೊನ್ನೆ ಮೊನ್ನೆವರೆಗೂ ನಮ್ಮ ಪ್ರಧಾನಿಯಾಗಿದ್ದ ದೇವೇಗೌಡರು ನನ್ನ ರಾಜ್ಯದವರು. ಅವರು ಹೀಗೇ ಡ್ರೆಸ್ಸು ಮಾಡೋದು. ಇದೇ ತರದ ಡ್ರೆಸ್ಸಲ್ಲಿ ಅವರು ಆಫ್ರಿಕಾ, ಅಮೇರಿಕಾ, ಯುರೋಪು ಎಲ್ಲಾ ಸುತ್ತಿಬಿಟ್ಟರು ಗೊತ್ತಾ?’ ಎಂದೆ. ಅದಕ್ಕೆ ಮ್ಯಾಗಿ ನಗುತ್ತಾ ‘ಅದೇನು ಮಹಾ? ನಿನ್ನ ಗಾಂಧಿ ತುಂಡು ಬಟ್ಟೆಯಲ್ಲಿ ಇಂಗ್ಲೆಂಡಿಗೆ ಹೋಗಿ ಬರಲಿಲ್ಲವೆ?’ ಎಂದು ನನ್ನನ್ನೇ ಕೇಳಿದಳು.
ಮೂವತ್ತೈದು ದಿನಗಳಲ್ಲಿ ಎಷ್ಟೊಂದು ಅನುಭವಗಳು! ಎಂತೆಂತಹಾ ವ್ಯಕ್ತಿಗಳ ಸಹವಾಸ! ಪರದೇಶಿಯಾಗಿ ಫ್ರಾನ್ಸಿಗೆ ಬಂದ ನನ್ನನ್ನು ನನ್ನ ಅತಿಥೇಯರೆಲ್ಲರೂ ಚೆನ್ನಾಗಿಯೇ ನಡೆಸಿಕೊಂಡಿದ್ದರು, ನೆಂಟನನ್ನು ನಡೆಸಿಕೊಂಡ ಹಾಗೆ. ನಮ್ಮಿಂದ ಯಾವುದೇ ಪ್ರಯೋಜನವಿಲ್ಲದಿದ್ದರೂ ಅದೆಷ್ಟು ಮಂದಿ ನಮ್ಮ ಫ್ರಾನ್ಸ್ ಸಂದರ್ಶನದ ಯಶಸ್ಸಿಗೆ ದುಡಿದಿದ್ದರು! ಈ ಫ್ರೆಂಚರು ನಮ್ಮ ಭಾಷೆ, ಆಹಾರ ಕ್ರಮ, ನಡವಳಿಕೆಗಳಿಗೆ ಒಗ್ಗಿಕೊಳ್ಳಲು ಯತ್ನಿಸಿದ್ದರು. ತಮ್ಮ ಅಮೂಲ್ಯ ಸಮಯವನ್ನು ನಮಗಾಗಿ ಮೀಸಲಿಟ್ಟಿದ್ದರು. ನನಗೆ ಉಡುಗೊರೆಯಾಗಿ ಸಿಕ್ಕಿದ್ದ ಪುಸ್ತಕಗಳನ್ನು ಮಿಷೇಲ್ ವಿಮಾನ ಮೂಲಕ ತನ್ನ ಖರ್ಚಲ್ಲಿ ಭಾರತಕ್ಕೆ ಕಳುಹಿಸಲು ಒಪ್ಪಿ ನನ್ನ ದೊಡ್ಡ ತಲೆನೋವನ್ನು ನೀಗಿಸಿದ್ದ. ಇಂತಹಾ ಮಂದಿಗಳ ಬಗ್ಗೆ ಒಳ್ಳೆಯದನ್ನು ಮಾತ್ರ ಹೇಳಲು ಸಾಧ್ಯ.
ನನ್ನ ಭುಜದ ಮೇಲೆ ಬಲವಾದ ಕೈಯೊಂದು ಬಿತ್ತು. ಆಗ ನಾನು ವಾಸ್ತವಕ್ಕೆ ಬಂದೆ. ಮಿಷೇಲ್ ನಗುತ್ತಾ ನಿಂತಿದ್ದ. .ವಿಮಾನ ತಡವಾಗುತ್ತದೆಂದು ಗೊತ್ತಾದ ಬಳಿಕ ನಿನ್ನ ತಂಡದವರೊಡನೆ ಇಷ್ಟು ಹೊತ್ತು ಹರಟೆ ಹೊಡೆದುಬಿಟ್ಟೆ. ‘ಓ! ಸುಮಾರು ನಲ್ವತ್ತೈದು ನಿಮಿಷಗಳು! ನಿನಗೆ ಬೇಸರವಾಗಲಿಲ್ಲವಲ್ಲಾ? ಅಂದ ಹಾಗೆ ಫ್ರೆಂಚರ ಬಗ್ಗೆ ನಿನ್ನ ಅಭಿಪ್ರಾಯವೇನೆಂದು ಹೇಳಲೇ ಇಲ್ಲ ನೀನು’ ಎಂದ. ನಾನದಕ್ಕೆ ‘ಏನು ಹೇಳೋದು ಮಾರಾಯಾ. ಇಲ್ಲಿದ್ದ ಐದು ವಾರ ನನ್ನನ್ನು ಪರದೇಶಿಯಂತೆ ನೀವ್ಯಾರೂ ಕಾಣಲೇ ಇಲ್ಲ. ಆದರೆ ಅಷ್ಟು ಮಾತ್ರಕ್ಕೆ ಫ್ರೆಂಚರೆಲ್ಲಾ ಒಳ್ಳೆಯವರು ಎನ್ನುವ ತೀರ್ಮಾನಕ್ಕೆ ಬರಲಾಗುವುದಿಲ್ಲವಲ್ಲಾ ? ದೇಶ ಯಾವುದಾದರೇನು? ಮನುಷ್ಯರಲ್ಲಿ ಒಳ್ಳೆಯತನವೂ ಇರುತ್ತದೆ, ಕೆಟ್ಟತನವೂ ಇರುತ್ತದೆ. ಆದುದರಿಂದ ಫ್ರೆಂಚರು ‘ಹೀಗೇ’ ಎಂದು ಖಚಿತವಾಗಿ ಹೇಳಲು ನನ್ನಿಂದಾಗದು’ ಎಂದೆ.
ಆಗವನು ಮಂದಸ್ಮಿತನಾಗಿ ‘ಬಹಳ ಬುದ್ಧಿವಂತಿಕೆಯ ಮಾತಾಡಿದ್ದಿ. ಆದರೆ ಭಾರತವನ್ನು ನೋಡದ ನನ್ನಲ್ಲಿ ಭಾರತೀಯರ ಬಗ್ಗೆ ಏನೇನೋ ತಪ್ಪು ಕಲ್ಪನೆಗಳಿದ್ದವು. ಅವನ್ನೆಲ್ಲಾ ನೀನು ಹೋಗಲಾಡಿಸಿದ್ದಿ. ನಿಜ ಹೇಳಬೇಕೆಂದರೆ ನೀನೊಬ್ಬ ಭಾರತೀಯ ಅಂತ ನನಗನಿನಸಲೇ ಇಲ್ಲ. ಎಲ್ಲೋ ನನ್ನ ತಮ್ಮನ ಹಾಗೆ, ನನ್ನೊಬ್ಬ ಆತ್ಮೀಯ ಸ್ನೇಹಿತನ ಹಾಗೆ ಆಗಿಬಿಟ್ಟೆ. ಲೋರಾ ಕೂಡಾ ನಿನ್ನನ್ನು ಇಷ್ಟಪಟ್ಟ. ಅಪರಿಚಿತರ ಕೈಗೆ ಹೋಗದ ಅವ ನಿನ್ನೊಡನೆ ಹೇಗೆ ಬಂದ? ಹೇಗೆ ಫೋಟೋಕ್ಕೆ ಫೋಸ್ ಕೊಟ್ಟ ನೋಡು! ಮಿಷಿಲ್ ನಿನ್ನನ್ನು ತುಂಬಾ ಹಚ್ಚಿಕೊಂಡಳು’ ಅಂದ. ನಾನವನ ಎರಡೂ ಕೈಗಳನ್ನು ಹಿಡಿದುಕೊಂಡು ‘ಒಳ್ಳೆಯವರಿಗೆ ಇತರರು ಒಳ್ಳೆಯವರಂತೆ ಕಾಣಿಸುತ್ತಾರೆ. ಎಲ್ಲಾ ದೇಶಗಳಲ್ಲಿರುವಂತೆ ಭಾರತದಲ್ಲಿ ಒಳ್ಳೆಯವರೂ ಇದ್ದಾರೆ; ಕೆಟ್ಟವರೂ ಇದ್ದಾರೆ. ಒಳ್ಳೆಯವರಲ್ಲೂ ಕೆಟ್ಟತನವಿದೆ. ಕೆಟ್ಟವರಲ್ಲೂ ಒಳ್ಳೆಯತನವಿದೆ. ಮನುಷ್ಯನದು ಎಷ್ಟಾದರೂ ಸಂಕೀರ್ಣ ಸ್ವಭಾವವಲ್ಲವೇ? ನೀನಿದನ್ನು ಭಾರತಕ್ಕೆ ಬಂದೇ ಕಾಣಬೇಕು?’ ಎಂದೆ. ಮಿಷೇಲ್ ಹೊರಡಲು ಸಿದ್ಧನಾದಾಗ ಜುವಾನ್ ಬುಯೋ ನನ್ನ ಬಳಿಗೆ ಬಂದು ನಮ್ಮೆಲ್ಲರನ್ನೂ ಆತ್ಮೀಯವಾಗಿ ಆಲಿಂಗಿಸಿಕೊಂಡ. ಮಿಷೇಲ್ ಮತ್ತು ಜುವಾನ್ ಬುಯೋ ನಮಗೆ ವಿದಾಯ ಹೇಳಿ ಹೊರಟಾಗ ಅವರ ಕಣ್ಣಂಚಿನಲ್ಲಿ ನೀರು ಕಾಣಿಸಿಕೊಂಡಿತು. ಈ ಫ್ರಾನ್ಸಿನಲ್ಲಿ ಅದೆಷ್ಟು ಜುವಾನ್‌ಗಳು! ಆ ಭಾವನಾತ್ಮಕ ಕಣಗಳಲ್ಲಿ ನಾನು ಇನ್ನೊಮ್ಮೆ ಇಲ್ಲಿಗೆ ಬರಲು ಸಾಧ್ಯವೇ ಇಲ್ಲ ಎಂಬ ಭಾವನೆಯೂ ಸೇರಿ ನಾನು ಆದ್ರ್ರನಾದೆ.
ಅಷ್ಟು ಹೊತ್ತಿಗೆ ನಮ್ಮ ವಿಮಾನ ಹಾರಾಟಕ್ಕೆ ಸಿದ್ಧಗೊಂಡ ಪ್ರಕಟಣೆ ಬಂತು. ನಮ್ಮ ಸಹಪ್ರಯಾಣಿಕರೆಂದರೆ ಲಂಡನನ್ನು ನೋಡಲು ಹೊರಟ ಶಾಲಾ ಮಕ್ಕಳು ಮತ್ತು ಅವರ ಶಿಕ್ಷಕರು. ಯುರೋಪಿನೊಳಗೆ ಯುರೋಪಿಯನ್ನರಿಗೆ ಪಾಸ್‌ಪೋರ್ಟು ಮತ್ತು ವೀಸಾ ಬೇಕಿಲ್ಲದ ಕಾರಣ ಹಣವುಳ್ಳವರು ಯಾವಾಗ ಬೇಕಾದರೂ ತಮಗಿಷ್ಟಬಂದಲ್ಲಿಗೆ ಹಾರಿಬರಬಹುದು. ಆ ಮಕ್ಕಳೊಡನೆ ನಾವೂ ಒಂದಾಗಿ ವಿಮಾನ ಏರಿದಾಗ ಗಂಟೆ ಮೂರು ದಾಟಿತ್ತು. ನಮ್ಮ ಲಗ್ಗೇಜುಗಳು ವಿಮಾನಗರ್ಭದಲ್ಲಿ ಪವಡಿಸಿ ಅದಾಗಲೇ ಎರಡು ಗಂಟೆಗಳು ಕಳೆದಿದ್ದವು. ಐದು ವಾರ ನಮ್ಮನ್ನು ಸಾಕಿ ಸಲಹಿದ ಆ ಅದ್ಭುತ ದೇಶವನ್ನು ಬಿಟ್ಟು, ನೂರು ವರ್ಷ ನಮ್ಮನ್ನು ಆಳಿದವರ ದೇಶಕ್ಕೆ ಹಾರುವಾಗ ನಮ್ಮಲ್ಲಿ ವಿಶೇಷ ಆತಂಕಗಳಿರಲಿಲ್ಲ. ಏಕೆಂದರೆ ಇದು ನಮ್ಮ ಎರಡನೇ ವಿದೇಶ ಪ್ರಯಾಣ!
*****