ಗ್ಲಾಸಿನ ಪೆಟ್ಟಿಗೆಯೊಳಗೆ ಮೈ ತುಂಬಾ
ಬ್ಯಾಂಡೇಜ್ ಮಾಡಿಕೊಂಡು ಬಿದ್ದಿರೋ ನೂರಾರು
ಇಜಿಪ್ಶಿಯನ್ ಮಮ್ಮಿಗಳು (British Museum London)
ಮ್ಯೂಸಿಯಂದೊಳಗಿಂದ ಹೊರಬೀಳಲು
Q ಹಚ್ಚಿವೆಯೆಂದು ನನ್ನೊಂದಿಗೆ ಉಸುರಿದವು.
ಕೆಲವೊಂದು ವೃದ್ಧ ಮಮ್ಮಿಗಳು
ಅದೆಲ್ಲಿ ತೊಂದರೆ
ಹೊರಗಡೆ ಚಳಿ – ಹಿಮ ತರಾತುರಿ ಜೀವನ
ಇದೆಲ್ಲ ನಮಗೆ ಒಗ್ಗದು: ಇಲ್ಲಿಯೇ ನಮಗೆ ಬೆಚ್ಚಗಿದೆ
ನಿಮ್ಮಂಥವರ ಟಿಕೆಟ್ ಹಣದಿಂದ
ಬೆಚ್ಚಗೆ ಚಾ ಕುಡಿದು ನಿಮ್ಮೊಂದಿಗೆ ನಮ್ಮ
ಅಷ್ಟಷ್ಟು ಪರಿಚಯ ತೋರಿಸಿ ಹೀಗೇ
ಇನ್ನೂ ನೂರಾರು ವರ್ಷ ಕಳೆಯುತ್ತ ಹೋಗುತ್ತೇವೆ
ಎಂದು ನಗುತ್ತವೆ.
Mrs. Guttiನೋಡಿ ನಾವು ಯಾವತ್ತೂ
ನಮ್ಮ ಅಜ್ಜ- ಮುತ್ತಜ್ಜ- ಅಜ್ಜಿಯರೊಂದಿಗೆ
ಇಲ್ಲೇ ಇರುತ್ತೇವೆ
ಮಲಗಿರುವ ಚಿಕ್ಕ ಮಮ್ಮಿಗಳು
ಹೇಳುತ್ತಲೇ ಇದ್ದಂತೆ –
ಎರಡು ವರ್ಷದ ಬ್ಯಾಂಡೇಜ್ ಬೇಬಿಯೊಂದು
ಆಂಟಿ ನಿಮಗೆ ಅಜ್ಜ ಅಜ್ಜಿ ಬಿಟ್ಟಿರಲಿಕ್ಕೆ
ಬೇಜಾರಾಗೋದಿಲ್ಲವೆ? ಎಂದು ಕೇಳಿ
ನನ್ನ ಭಾವನೆಗಳಿಗೆ ಲಗ್ಗೆ ಹಾಕಿತು.
ಅರಿಯದೇ ನನ್ನ ಕಣ್ಣಂಚಿನಲ್ಲಿ ನೀರು ಬಂದಾಗ
ಬ್ಯಾಂಡೇಜ್ ಬೇಬಿಯ ಮೇಲೆ ಕೈಯಾಡಿಸಿ
ನಿನ್ನಂತೆಯೇ ನನಗೂ ಅಜ್ಜಾ- ಅಜ್ಜಿ ಬೇಕು
ಎಂದು ಮುಂದೆ ಸರಿಯುತ್ತಿದ್ದಂತೆಯೇ –
ಡಬಲ್ ಟ್ರಿಬಲ್ ಬ್ಯಾಂಡೇಜಿನ
ಗೂಂಡಾ ಮಮ್ಮಿ ಎದುರಾಯ್ತು
ಅದೇನೋ ನಿಮ್ಮಕಡೆಗೆ ಜೀವ ಹೋದರೆ
ಬೇಗ ಮಣ್ಣಿಗೋ – ಬೆಂಕಿಗೋ ಕೊಟ್ಟುಬಿಡ್ತಾರಂತೆ
ಹೌದಾ ?
ನಾವು ನೋಡಿ ನಮ್ಮ ಪರಿಚಯದ
ತಲೆ ಪಟ್ಟಿಕಟ್ಟಿಕೊಂಡು ದಿನಾಲೂ
ಸಾವಿರಾರು ಜನರನ್ನು ಮಾತಾಡಿಸ್ತೀವಿ
ನಾವು ಜೀವಂತ ಇಜಿಪ್ತದ ಪರೋಹಗಳು
ಆದರೆ ನೀವು …?
ನನ್ನ ಕೆಣಕಲೆತ್ನಿಸಿದಾಗ ತಪ್ಪಿಸಿಕೊಂಡು
ಮುಂದೆ ಹೋದೆ.
ಆದರೆ ಆಶಾವಾದಿ ಬತೇಹನ್ ವಿಜ್ಞಾನ
ಯುಗದ ಭವಿಷ್ಯತೆಯಲ್ಲಿ ಮೈಮರೆತಿದ್ದ.
ಅವನಿಗೆ ತೊಂದರೆಯಾಗದಂತೆ ಪರಿಚಯಿಸಿಕೊಳ್ಳಲು
(ತಲೆಪಟ್ಟಿ ಆಥವಾ ಪರಿಚಯ ಪತ್ರ)
ನಾ ಹತ್ತಿರ ನಿಂತಿದ್ದೆ.
ವಿಜ್ಞಾನಿಗಳೇನಾದರೂ ನಮ್ಮಲ್ಲಿ ಇಂದಿಲ್ಲಿ ನಾಳೆಯಾದರೂ
ಜೀವ ತುಂಬಿದರೆ,
ನಾವೂ ನಿಮ್ಮ ತಲೆಪಟ್ಟಿ ಆಥವಾ
ಸಮಾಧಿ ನೋಡಲು ಬರುತ್ತೇವೆ.
ಈವರೆಗೆ ನೀವು, ನಿಮ್ಮ ಅಜ್ಜಂದಿರೆಲ್ಲ
ನಮ್ಮನ್ನು ನೋಡಿ ಮಾತಾಡಿಸಿ
ಕ್ಷೇಮ ಸಮಾಚಾರ ವಿಚಾರಿಸಿದ್ದಕ್ಕೆ ಧನ್ಯವಾದಗಳು.
ಎಂದು ನನ್ನ ಕಿವಿಯಲ್ಲಿ
ಬತೇಹನ್ ಎಚ್ಚರಗೊಂಡು ಉಸುರಿದಾಗ
ನಾನು ಹೆದರಿ ಬೆವೆತು ಕಂಗಾಲಾಗಿ ಕಂಪಿಸಿ
You are most welcome my friend
ಎಂದು ಹೇಳಿ ಚಕ್ಕನೆ ಹಿಂದೆ ಸರಿದೆ.
(British Museum ದೊಳಗೆ ನೂರಾರು ಮಮ್ಮಿಗಳು ಬಿದ್ದುಕೊಂಡಿವೆ. ಅವುಗಳಿಗೆ ಆಕಸ್ಮಿಕ ಜೀವ ಬಂದರೆ (ಈ ವಿಜ್ಞಾನ ಯುಗದಲ್ಲಿ) ಹೇಗಿರಬಹುದು ವಾತಾವರಣ ಅನಿಸಿತು. ಆ ಅನಿಸಿಕೆಯೇ ಈ ಒಂದು ಕವನ)
*****