ಉರುಳಿರುವ ತಾರೆಗಳಿಗಳುತ ನಿಲ್ಲುವರುಂಟೆ?
ಮೂಡಿರಲು ಮೂಡಲಲಿ ಉದಯದರಳಿನ ಕಂಪು
ಕಳೆದ ಕಾಲದ ತಂಟೆ
ಇಂದೇಕೆ? – ಹೊಸ ತಂಪು
ಹೃದಯದೊಳಗರಳಿರಲು, ಕಂಪು ಸವಿವುದಬಿಟ್ಟು
ಅಳಿದ ಕನಸುಗಳನ್ನು-ಸತ್ವವಿಲ್ಲದ ಹೊಟ್ಟು
ಅದು ಎಂಬುದನೆ
ನೀ ನಂಬದೆಯೆ
ಮೊಗೆಮೊಗೆದು
ಮೇಲೆಸೆದು
ಆನಂದ ಪಡಲೆಂದು
ಚಿಂತಿಸುತ ನೀನಿಂದು
ಎಲ್ಲ ಮಣ್ಗೂಡಿಸಿಹೆ
-ಕಾಲ ಸಾಗುತ್ತಲಿದೆ!
ಕಾಲಜೇಡನು ನೇದ ಬಲೆಯು ಜೀವದ ಗೋರಿ
ಅದರ ಗರ್ಭದಲಿಹುದು ಮತ್ತೆ ಹಿಂತಿರುಗುವುದೆ?
ನಿನ್ನ ಕೊಚ್ಚೆಯ ಮೋರಿ
ಅಲ್ಲಿ ಮುತ್ತರಸುವುದೆ?
ಅಂತಾದರೂ ಇಂದು ಪ್ರೇಮದೆದೆ ಬಳ್ಳಿಯಲಿ
ನಿನ್ನ ಜೀವನವರಳೀ, ಹೃದಯದಾನಂದದುಲಿ
ಹೊರಹೊಮ್ಮುತಿರೆ
ಸುಖ ನಿನ್ನುಸಿರೆ
ಆಗುತಿರೆ
ಅದನೆ ನೆರೆ
ಮರೆತು ಕಳೆದುದ ನೆನೆದು
ದುಗುಡದೊಳಗಿಳಿದಿಳಿದು
ಎಲ್ಲ ಮಣ್ಗೂಡಿಸಿಹೆ
-ಕಾಲ ಸಾಗುತ್ತಲಿದೆ!
*****