ಪ್ರಿಯ ಸಖಿ,
ಯಾವುದೇ ಕೆಲಸಕ್ಕಾಗಲಿ ದೇವರು ನಮಗೆ ಯಾವಾಗ ಸಹಾಯ ಮಾಡುತ್ತಾನೆ? ನಾವು ಮನಃಪೂರ್ತಿ ಪ್ರಯತ್ನಿಸಿದಾಗ ಮಾತ್ರ ತಾನೇ? ಸುಮ್ಮನೆ ಕುಳಿತು ಎಲ್ಲಾ ತನ್ನಿಂದ ತಾನೇ ಆಗಲಿ ಎಂದರೆ ಇಲ್ಲಿ ಯಾವುದೇ ಚಮತ್ಕಾರವೂ ಆಗುವುದಿಲ್ಲ ಅಲ್ಲವೇ? ಕವಿ ವಿ.ಜಿ. ಭಟ್ಟರು ತಮ್ಮ ಪ್ರಯತ್ನ ಎಂಬ ಕವನದಲ್ಲಿ
ಪ್ರಯತ್ನ ಮಾಡಿರು
ಪ್ರಸಾದ ಬೇಡಿರು
ಆಗಬೇಡ ಆಲಸೀ
ಸಮರ್ಪಣದಲೇ
ಯತ್ನಿಸುತ್ತಿದ್ದರೆ
ಪರಮಾತ್ಮನಿಗೂ ಖುಷಿ
ಎಂದಿದ್ದಾರೆ. ನಮ್ಮ ಎಲ್ಲ ಕೆಲಸಕ್ಕೂ ದೇವರ ಸಹಾಯವನ್ನು ಸದಾ ಬೇಡುತ್ತಿರುತ್ತೇವೆ. ‘ದೇವರು ಬಯಸಿದರೆ ಯಾವ ಕೆಲಸವಾದರೂ ಆಗುತ್ತದೆ ಬಯಸದಿದ್ದರೆ ಯಾವ ಕೆಲಸವೂ ಆಗುವುದಿಲ್ಲ ಬಿಡು’ ಎಂದು ಸುಮ್ಮನೆ ಕುಳಿತರೆ, ಪ್ರಯತ್ನಕ್ಕೆ ಬೆಲೆಯೇ ಇಲ್ಲವೇ? ನಾವು ಇನಿತೂ ಪ್ರಯತ್ನ ಪಡದೆ ತಟಸ್ಥರಾಗಿ ಕುಳಿತರೆ ಕೆಲಸ ಆಗುವುದಾದರೂ ಹೇಗೆ?
ಸಖಿ ನನಗೊಂದು ಮಕ್ಕಳ ನೀತಿ ಕತೆ ನೆನಪಾಗುತ್ತಿದೆ. ಐದಾರು ಬಾರಿ ಪರೀಕ್ಷೆಯಲ್ಲಿ ಫೇಲಾದ ಸೋಮಾರಿ ಹುಡುಗನೊಬ್ಬ ನಿಶ್ಚಲ ಮನದಿಂದ ಭಗವಂತನನ್ನು ಪ್ರಾರ್ಥಿಸಿ ತಾನು ಪಾಸಾಗುವಂತೆ ವರ ಪಡೆದ. ಹೇಗೂ ದೇವರು ಪಾಸು ಮಾಡಿಸುವೆನೆಂದಿದ್ದಾನೆ ಎಂದುಕೊಂಡು ಪರೀಕ್ಷೆಗೂ ಹೋಗದೇ ಮನೆಯಲ್ಲೇ ಕುಳಿತು ಫೇಲಾದ! ಮತ್ತೆ ದೇವರನ್ನು ಪ್ರಾರ್ಥಿಸಿ, ಸಿಟ್ಟಿನಿಂದ ತನ್ನನ್ನು ಫೇಲು ಮಾಡಿದ್ದಕ್ಕೆ ಕಾರಣ ಕೇಳಿದಾಗ ದೇವರು ನಗುತ್ತಾ “ನಾನೇನೋ ಪಾಸು ಮಾಡಿಸಲು ಒಪ್ಪಿದ್ದೆ, ಆದರೆ ನೀನು ಪರೀಕ್ಷೆಯಲ್ಲಿ ಬರೆಯುವ ‘ಪ್ರಯತ್ನ’ವನ್ನೇ ಮಾಡದಿದ್ದರೆ ನಾನು ಹೇಗೆ ನಿನ್ನನ್ನು ಪಾಸು ಮಾಡಿಸಲಿ? ಎಂದು ಕೇಳಿದ.
ಈ ಪುಟ್ಟ ಕಥೆಯಲ್ಲಿ ಮನುಷ್ಯ ಪ್ರಯತ್ನದ ಹಿರಿಮೆಯ ಎಂಥಾ ನೀತಿ ಅಡಗಿದೆಯಲ್ಲವೇ ಸಖಿ?
ಕವಿ ಷೇಕ್‍ಸ್ಪಿಯರ್ “How ever for a man goes, he must start from his own door” ಒಬ್ಬ ವ್ಯಕ್ತಿ ಎಷ್ಟೇ ದೂರ ಹೋಗಲಿ ಅವನು ತನ್ನ ಬಾಗಿಲಿನಿಂದಲೇ ನಡೆಯಲು ಪ್ರಾರಂಭಿಸಬೇಕು ಎನ್ನುತ್ತಾನೆ. ಎಂಥಾ ಅರ್ಥಪೂರ್ಣ ಮಾತಲ್ಲವೇ!
ನಮ್ಮ ಹೊಟ್ಟೆ ತುಂಬಿಸಲು ನಮ್ಮ ಕೈಗಳಂದಲೇ ತಿನ್ನಲು ಭಗವಂತ ಕೈಗಳನ್ನು ನೀಡಿರುವಾಗ ಅವನೇ ಬಂದು ತಿನ್ನಿಸಲೆಂದು ಕಾಯುವುದು ಮೂರ್ಖತನವಲ್ಲವೇ? ಪ್ರಯತ್ನದ ನಂತರದ ತೀರ್ಪು ಹೇಗೂ ಇರಬಹುದು. ಆದರೆ ಪ್ರಯತ್ನವಂತೂ ಬೇಕೆ ಬೇಕಲ್ಲವೇ? ಮನಃಪೂರ್ವಕ ಪ್ರಯತ್ನ ನೀಡುವ ಖುಷಿ ಇನ್ನಾವುದು ನೀಡುತ್ತದೆ? ಅದಕ್ಕೆಂದೇ ವಿನೋಬಾ ಬಾವೆಯವರು ‘ಪ್ರಾಪ್ತಿಗಿಂತಲೂ ಪ್ರಯತ್ನದ ಆನಂದ ಹೆಚ್ಚಿನದು’ ಎಂದಿದ್ದಾರೆ. ನಿಜವಲ್ಲವೇ ಸಖಿ?
*****