ನಾವು ಸಮಾಜದಲ್ಲಿ ಎರಡು ರೀತಿಯ ಜನರನ್ನು ಕಾಣುತ್ತೇವೆ. ಕಾಲದ ಜೊತೆಗೆ ಅದರ ಸರಿಸಮನಾಗಿ, ಕೆಲವೊಮ್ಮೆ ಕಾಲನಿಗಿಂತಾ ಮುಂದೂ ನಡೆಯುತ್ತಾ ಕಾಲನ ಎಲ್ಲಾ ಬದಲಾವಣೆಗಳಿಗೆ ಒಗ್ಗಿಕೊಂಡು ವೇಗವಾಗಿ ಸಾಗುವ ಚುರುಕಿನವರು ಒಂದು ಗುಂಪಿನವರಾದರೆ, ಯಾವುದು ಏನೇ ಆಗಲಿ ತಟಸ್ಥವಾಗಿ, ಕಾಲನೊಂದಿಗೆ ಬದಲಾವಣೆಗೆ ಸ್ಪಂದಿಸದೆ, ತನಗೆ ಬೇಕಾದ್ದನ್ನು ಮಾತ್ರ ಬದಲಿಸಿಕೊಂಡು, ಒಂದು ರೀತಿಯಲ್ಲಿ ಕಾಲನ ಗತಿಗಿಂತಾ ತುಂಬಾ ಹಿಂದೆಯೇ ಉಳಿದುಬಿಡುವ ಸೋಮಾರಿಗಳು ಇನ್ನೊಂದು ಗುಂಪಿನವರು. ಇವರಿಬ್ಬರಲ್ಲಿ ನಿಜವಾಗಿಯೂ ನಮಗೆ ಉಪಯುಕ್ತರು ಯಾರು? ಅನುಪಯುಕ್ತರು ಯಾರು? ಒಂದು ರೀತಿಯಲ್ಲಿ ಇಬ್ಬರೂ ಅನುಪಯುಕ್ತರು! ಇನ್ನೊಂದು ರೀತಿಯಲ್ಲಿ ಇಬ್ಬರೂ ಉಪಯುಕ್ತರು. ಸೋಮಾರಿಯೂ ಸಮಾಜಕ್ಕೆ ಹೇಗೆ ಉಪಯುಕ್ತ ಎನ್ನುವುದನ್ನು ಕವಿ ಎಚ್. ಎಸ್. ಬಿಳಿಗಿರಿ ಯವರು ತಮ್ಮ ಕವನದಲ್ಲಿ ಸೊಗಸಾಗಿ ವರ್ಣಿಸಿದ್ದಾರೆ.
ಪಾದರಸವು ದಿಟ, ಚುರುಕ ತವರೂರು!
ಏನುಪಯೋಗವೋ? ಬಿದ್ದರೆ ಚೂರು!
ಬೆಣ್ಣೆಯು ಜಗೆದೊಳು ಮೊದ್ದಿನ ಮುದ್ದೆ
ನೆಲಕ್ಕೆ ಬಿದ್ದರೂ ಒಡೆವುದೇ ಪೆದ್ದೆ?
ಇನ್ನೇತಕೆ ಬರಿ ಚರ್ಚೆಯು ಸಾಕು
ಓಡುವಿಳೆಗೆ ಸೋಮಾರಿಯೇ ಬ್ರೇಕು!
ಎನ್ನುತ್ತಾರೆ. ಮೇಲುನೋಟಕ್ಕೆ ತಮಾಷೆಯಾಗಿ ಕಂಡರೂ ಆಳಕ್ಕಿಳಿದು ವಿವೇಚಿಸಿದಾಗ ಅದರಲ್ಲೊಂದು ತತ್ವ ಅಡಗಿರುವುದು ಕಾಣುತ್ತದೆ. ಚುರುಕಿನವರು ಕಾಲನ ಜೊತೆಗೆ ಓಡುವ ಅವಸರದಲ್ಲಿ ಸರಿ-ತಪ್ಪುಗಳ ವಿವೇಚನೆಯಿಲ್ಲದೆ ನಡೆದು ಪಾದರಸವು ಬಿದ್ದಾಗ ಚೂರಾಗುವಂತೆ ವ್ಯಕ್ತಿತ್ವವನ್ನು ಚೂರಾಗಿಸಿಕೊಂಡು ಹುಡಿಯಾಗಿ ಹೋಗುತ್ತಾರೆ. ಅದೇ ಸೋಮಾರಿಗಳು ಬೆಣ್ಣೆಯಂತೆ ಕೆಳಗೆ ಬಿದ್ದರೂ ಒಡೆಯುವುದಿಲ್ಲ! ಅವರ ಸೋಮಾರಿತನದಿಂದ ತಮ್ಮ ವ್ಯಕ್ತಿತ್ವಕ್ಕೆ ಎಂದೂ ಧಕ್ಕೆಯಾಗುವುದಕ್ಕೆ ಬಿಡುವುದಿಲ್ಲ. ಹೀಗೇ ಲಂಗುಲಗಾಮಿಲ್ಲದೇ ಓಡುವ ಹುಚ್ಚು ಕುದುರೆಯೆಂಬ ಇಳೆಗೆ ಸೋಮಾರಿಗಳು ಬ್ರೇಕ್ ಹಾಕುತ್ತಾರೆ ಎನ್ನುತ್ತಾರೆ ಕವಿ.
ಪ್ರಿಯ ಸಖಿ, ನಿನಗೆ ಆಮೆ ಮತ್ತು ಮೊಲದ ಕಥೆ ನೆನಪಾಗುತ್ತಿದೆಯೇ? ನಮ್ಮ ಹಿರಿಯರೇ ಹೇಳಿಲ್ಲವೇ ಆತುರಗಾರನಿಗೆ ಬುದ್ಧಿ ಮಟ್ಟ ಎಂದು. ಆದರೆ ಎಲ್ಲಾ ಸಮಯದಲ್ಲೂ ಸೋಮಾರಿ ಇದೇ ರೀತಿ ಉಪಯುಕ್ತನಾಗಬೇಕಾದರೆ ಅವನು ತಕ್ಕ ಸಮಯದಲ್ಲಿ, ತಕ್ಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸದಾ ಸೋಮಾರಿಯಾಗಿ ನಿಂತಲ್ಲೇ ನಿಂತು ಬಿಟ್ಟರೆ, ಕಾಲ ಇವನನ್ನು ಬಿಟ್ಟು ಮುಂದೆ ಸಾಗುತ್ತದೆ. ಸರಿ-ತಪ್ಪುಗಳನ್ನು ವಿವೇಚಿಸಿ ಸರಿಯಾದ ಸಮಯಕ್ಕೆ ನಿರ್ಧಾರಗಳನ್ನು ತೆಗೆದುಕೊಂಡು ನಡೆಯುವವನೇ ಸದಾ ಗೆಲ್ಲುವವನು. ವಿವೇಕವಿಲ್ಲದೇ ಹುಚ್ಚಾಗಿ ಕಾಲನೊಂದಿಗೆ ಓಡುವವನೂ ಸೋಲುತ್ತಾನೆ, ಹಾಗೇ ಕಾಲನೊಂದಿಗೆ ಸ್ಪಂದಿಸದೇ ನಿಂತಲ್ಲೇ ನಿಲ್ಲುವವನೂ ಸೋಲುತ್ತಾನೆ. ಇವೆರಡರ ಮಧ್ಯದ ರೇಖೆಯಲ್ಲೇ ವಿವೇಚನೆ ಮೂಡಿ ಬರುತ್ತದೆ. ಅದನ್ನೇ ನಾವು ಕಂಡುಕೊಳ್ಳಬೇಕಿರುವುದು. ಅಲ್ಲವೇ ಸಖಿ?
*****