ಕೆಂಪು ತಾವರೆಯ ಮಾದಕ ಕಂಪಿಗೆ
ಕಂಪಿಸಿದೆ ಈ ಮನ
ಹೂವಿನ ಮಾಯೆಗೆ ಹೋಳಾಗಿದ ಎದೆ
ಕನಸಿಗೆ ಕರೆದಿದೆ ದಿನಾ!
ಗಾಳಿಗೆ ತಲೆದೂಗಾಡುವ ಹೂವಿಗೆ
ತಾರೆಗು ಇಲ್ಲದ ಮೆರಗು
ಅರಬಿರಿದಾ ಆ ಕೆಂಪು ದಳಗಳಿಗೆ
ಅಪ್ಸರೆ ಕೆನ್ನೆಯ ಬೆಳಗು
ಕೊಳದಲ್ಲಿದು ಕೊಯ್ಯಲು ಬಾರದು
ನೀರಿನ ನಡುವಿನ ಹೂವು
ಕಾಲು ಹೂಳುವುದು ಕೆಸರಿನ ತಳದಲಿ
ಕೈಗೆ ನಿಲುಕದ ನೋವು
ನೀರಿನ ಆಳಕೆ ಕೆಸರಿನ ಗಾಳಕೆ
ಬಲಿಯಾಗದೆ ಹೂ ಪಡೆದು
ತೋಳಲಿ ತಬ್ಬಿ, ಮೈ ಮನ ಉಬ್ಬಿ
ಹಿಗ್ಗುವ ಕನಸೋ ಬರಿದು!
*****
ಪುಸ್ತಕ: ನಿನಗಾಗೇ ಈ ಹಾಡುಗಳು