ಪವಿತ್ರವಾದ ಗಂಗಾನದಿಯ ತೀರದಲ್ಲಿ ಪುಣ್ಯವಾದ ಒಂದು ಆಶ್ರಮವುಂಟು. ಅಲ್ಲಿ ಜಪ, ವ್ರತ, ಉಪವಾಸ, ಯೋಗ ಮೊದಲಾದವುಗಳನ್ನು ಮಾಡುವ ತಪಸ್ವಿಗಳು ಉಂಟು. ಅವರ ಯಜಮಾನನಾಗಿ ಯಾಜ್ಞವಲ್ಕ್ಯ ಎಂಬ ಕುಲಪತಿಯುಂಟು. (ಕುಲಪತಿಯೆಂದರೆ ಸಾವಿರಾರು ಜನ ಶಿಷ್ಯರಿಗೆ ಅನ್ನ ಬಟ್ಟೆಗಳನ್ನು ಕೊಟ್ಟು ಕಾಪಾಡುತ್ತ ವಿದ್ಯೆಯನ್ನು ಹೇಳುವ ಗುರುವು.) ಒಂದು ದಿನ ಆತನು ಗಂಗಾನದಿಯಲ್ಲಿ ಸ್ನಾನ ಮಾಡಿಕೊಂಡು ಬರುವಾಗ ಆಕಾಶದಿಂದ, ಹದ್ದು ಹಿಡಿತವು ತಪ್ಪಿ, ಒಂದು ಇಲಿಯ ಮರಿಯು ಆತನ ಕೈಗೆ ಬಿತ್ತು. ಅದನ್ನು ಕಂಡು, ಮರುಕಗೊಂಡು, ಅದನ್ನು ಒ೦ದು ಆಲದೆಲೆಯ ದೊನ್ನೆಯಲ್ಲಿಟ್ಟು ತಾನು ಮತ್ತೆ ಸ್ನಾನಾದಿಗಳನ್ನು ಮಾಡಿಕೊಂಡು ಬಂದು ಅದನ್ನು ತನ್ನ ತಪೋಬಲದಿಂದ ಕನ್ಯಕೆಯನ್ನು ಮಾಡಿ ತನ್ನ ಆಶ್ರಮಕ್ಕೆ ಕರೆದು ತಂದನು. ಅಲ್ಲಿ ಆ ಹುಡುಗಿಯು ಲಾಲನ ಪಾಲನಗಳಿಂದ ಬೆಳೆದು ಹನ್ನೆರಡು ವರ್ಷದವಳಾದಳು.
ಹೀಗೆ ಅವಳು ಮದುವೆಯಾಗುವ ವಯಸ್ಸನ್ನು ಪಡೆಯಲು. ಯಾಜ್ಞವಲ್ಕ್ಯನ ಹೆಂಡತಿಯು ಇವಳಿಗೆ ಮದುವೆ ಮಾಡುವುದಿಲ್ಲವೆ? ಎಂದು ಕೇಳಿದಳು. ಆತನು ಹೇಳಿದನು: “ನೀನು ಹೇಳಿದುದು ಒಳ್ಳೆಯದಾಯಿತು. ಹೌದು ಶಾಸ್ತ್ರವೂ ಹೇಳುತ್ತದೆಯಷ್ಟೆ?
ನಾರಿಯರ ಭೋಗಿಪರು ಸೋಮ ಗಂಧರ್ವಾಗ್ನಿಗಳು ಮೊದಲು ॥
ದೋಷಮಿಲ್ಲದರಲ್ಲಿ ಮಾನುಷರು ಭೋಗಿಪರು ಆಮೇಲೆ ॥ ೩೨ ॥
* ಸೋಮನಿತ್ತನು ಶೌಚವನು ಗಂಧರನು ಮುದ್ದು ಮಾತನ್ನು ॥
ಪಾವಕನು ಸರ್ವಮೇಧ್ಯತೆಯನದರಿಂದವರುಕಲ್ಮಷರು ॥ ೩೩ ॥
ಮೈನೆರೆಯದಿರೆ ಗೌರಿ, ನೆರೆದವಳು ರೋಹಿಣೀ॥
ಮೈಯರಳದಿರೆ ಕನ್ನೆ ಕುಚ ಹೀನೆನಗ್ನಿಕೆಯು ॥ ೩೪ ॥
ಮೈಯರಳೆ ಸೋಮನವಳನು ಭೋಗಿಪನು ತಾನು ॥
ಮೊಲೆದೋರೆ ಗಂಧರ್ವ ಮೈನೆರೆಯೆ ಪಾನಕನು ॥
ಅದರಿಂದೆ ಮೈನೆರವ ಮೊದಲೆ ಸರಿ ಮದುವೆಯು ॥ ೩೫ ॥
* ಸೋಮನು ಹೆಂಗುಸರಿಗೆ ಯಾವಾಗಲೂ ಮಡಿಯಾಗಿರುವಿಕೆಯನ್ನು ಕೊಟ್ಟನು. ಗಂಧರ್ವನು ಚೆನ್ನಾಗಿ ಮಾತನಾಡುವುದನ್ನು ಕೊಟ್ಟನು. ಅಗ್ನಿಯು ಅವರು ಯಾವಾಗಲೂ ಏನು ಮಾಡಿದರೂ ಶುದ್ಧವಾಗಿರುವಂತೆ ವರವನ್ನು ಕೊಟ್ಟನು. ಅದರಿಂದ ಅವರು ಯಾವಾಗಲೂ ಕಲ್ಮಷವಿಲ್ಲದವರು.
ಅಲ್ಲದೆ, ತಂದೆಯ ಮನೆಯಲ್ಲಿ ಹೆಣ್ಣು ವಿವಾಹವಾಗದೆಯೇ ಇದ್ದು ಮೈನೆರೆಯುವುದು ಶಾಸ್ತ್ರಕಾರರಿಗೆ ಸಮ್ಮತವಲ್ಲ. ಅದರಿಂದ, ಇವಳನ್ನು ಕುಲಧನಗಳಿಂದ ಸಮನಾದ ವರನಿಗೆ ಕೊಟ್ಟು ಮದುವೆ ಮಾಡುವೆನು. ಹೆಣ್ಣನ್ನು ಕೊಡುವಾಗ ಕುಲ, ಶೀಲ, ಬಂಧುಗಳು, ವಿದ್ಯಾ, ಧನ, ದೇಹ, ವಯಸ್ಸು ಎಂಬ ಏಳನ್ನೂ ಕುರಿತು ವಿಚಾರಮಾಡಬೇಕು. ಅದರಿಂದ ಅವಳು ಒಪ್ಪಿದರೆ ಭಗವಂತನಾದ ಆದಿತ್ಯನನ್ನು ಕರೆದು ಆತನಿಗೆ ಇವಳನ್ನು ಕೊಡುವೆನು.” ಎಂದನು
ಅವಳು ಒಪ್ಪಲು, ಮುನೀಂದ್ರನು ಸೂರ್ಯನನ್ನು ಕರೆದನು. ಆತನು ಬಂದು “ಭಗವಂತನೆ, ನಾನು ಏನುಮಾಡಬೇಕು ಅಪ್ಪಣೆಯಾಗಲಿ.” ಎಂದನು. ಮುನಿಂದ್ರನು “ಅಯ್ಯಾ, ಈ ಹುಡುಗಿಯು ನನ್ನ ಮಗಳು. ಇವಳನ್ನು ಮದುವೆಯಾಗು” ಎಂದು ಆ ಕನ್ಯಕೆಯನ್ನು ಕರೆದು “ಇವನನ್ನು ಮದುವೆಯಾಗು” ಎಂದನು. ಅವಳು “ತಾತ, ಈತನು ಸುಡುವನು. ನಾನು ಸಹಿಸಲಾರೆ, ಬೇರೆ ಯಾರನ್ನಾದರೂ ವರಿಸುವೆನು” ಎಂದಳು.
ಆ ಮಾತನ್ನು ಕೇಳಿ: ಮುನಿಯು “ಸೂರ್ಯದೇವ, ನಿನಗಿಂತ ಬಲವಾದವರು ಯಾರು?” ಎಂದು ಕೇಳಲು, ಆತನ್ನು “ನನಗಿಂತ ಮೇಘನು ಬಲವಂತನು. ನನ್ನನ್ನು ಅವನು ಮುಚ್ಚಿ ಬಿಡುವನು.” ಎಂದನು. ಅದನ್ನು ಕೇಳಿ ಮುನಿಯು ಅವನನ್ನು ಬರಮಾಡಿದನು. ಕನ್ಯೆಯು ಅವನನ್ನು ನೋಡಿ, “ತಾತ, ಇವನು ಬಲು ಕಪ್ಪು. ಯಾವಾಗಲೂ ನೀರಿನಿಂದ ನೆನೆದಿರುವನು. ನನ್ನನ್ನು ಇನ್ನು ಯಾರಿಗಾದರೂ ಕೊಡು?” ಎಂದಳು.
ಮುನಿಯು “ಎಲೈ ಮೇಘದೇವ, ನಿನಗಿಂತ ಬಲವಾದವರು ಯಾರು?” ಎಂದು ಕೇಳಲು, ಮೇಘನು, “ಭಗವನ್, ನನಗಿಂತ ವಾಯುವು ಬಲವಂತನು. ಆತನು ಊದಿದರೆ ನಾನು ಹಾರಿ ಹೋಗುವೆನು?” ಎಂದನು. ಆಗ ಆತನು ವಾಯುವನ್ನು ಕರೆದನು. ಆತನು ಬರಲು, ಆ ಕನ್ಯೆಯು “ತಾತ, ಇವನು ನಿಂತಲ್ಲಿ ನಿಲ್ಲದ ಚಪಲನು. ನನ್ನನ್ನು ಇನ್ನು ಯಾರಿಗಾದರೂ ಕೊಡು” ಎಂದಳು.
ಮುನೀಂದ್ರನು “ಎಲೈ ವಾಯುವೆ, ನಿನಗಿಂತ ಬಲಿಷ್ಠರು ಯಾರು?” ಎಂದು ಕೇಳಲು, ಆತನು “ಭಗವನ್, ಪರ್ವತನು ನನಗಿಂತ ಬಲಶಾಲಿಯು. ನಾನು ಎಲ್ಲರನ್ನೂ ಅಲ್ಲಾಡಿಸುವೆನಾದರೂ ಪರ್ವತವನ್ನು ಅಲ್ಲಾಡಿಸಲಾರೆನು” ಎಂದನು. ಆತನು ಪರ್ವತನನ್ನು ಕರೆದನು. ಆತನನ್ನು ಕಂಡು ಆ ಕನ್ಯೆಯು “ತಾತ, ಈತನು ಬಹು ಕಠಿನನು. ಇದ್ದಲ್ಲಿ ಇದ್ದು ಬಿಡುವನು. ನನ್ನನ್ನು ಇನ್ನು ಯಾರಿಗಾದರೂ ಕೊಡು”? ಎಂದಳು.
ಆಗ ಮುನಿಯು “ಎಲೈ ಪರ್ವತರಾಜ, ನಿನಗಿಂತ ಯಾರು ಬಲಶಾಲಿಗಳು” ಎನ್ನಲು, ಆತನು, ಭಗವನ್, ನನಗಿಂತ ಇಲಿಗಳು ಬಲಶಾಲಿಗಳು. ನನ್ನ ದೇಹವನ್ನು ತತಾ ತೂತು ಮಾಡಿ ಬಿಡುತ್ತಾರೆ.” ಎನ್ನಲು, ಅತನು ಮೂಷಿಕವನ್ನು ಕರೆದನು. ಅವನನ್ನು ಕ೦ಡು ಆ ಕನ್ಯೆಗೆ ಬಹಳ ಸಂತೋಷನಾಗಿ “ತಾತ, ನನ್ನನ್ನೂ ಮೂಷಿಕವಾಗಿಯೇ ಮಾಡಿ ಈತನಿಗೆ ಕೊಡು. ಈತನೊಡನೆ ಸುಖವಾಗಿರುವೆನು” ಎಂದಳು.
ಆ ಮುನೀಂದ್ರನು ತನ್ನ ತಪೋಬಲದಿಂದ ಆ ಕನ್ಯೆಯನ್ನು ಮತ್ತೆ ಇಲಿಯನ್ನೇ ಮಾಡಿ ಇಲಿಗೆ ಕೊಟ್ಟು ಮದುವೆ ಮಾಡಿದನು. ಅದರಿಂದ “ತನ್ನ ಜಾತಿಯ ಮೀರಲಳವೆ?” ಎಂದೆನು ಎಂದು ಹೇಳಿದನು.
ರಕ್ತಾಕ್ಷನ ಮಾತನು ಕೇಳದೆ ಗೂಗೆಗಳು ತಮ್ಮ ವಂಶಕ್ಕೆ ವಂಶವೇ ಅವನಿಂದ ಹಾಳಾಗುವುದನ್ನು ತಿಳಿಯದೆ ಸ್ಥಿರಜೀವಿಯನ್ನು ತಮ್ಮ ದುರ್ಗಕ್ಕೆ ಕರೆದುಕೊಂಡು ಹೋದರು. ಹಾಗೆ ಕರೆದು ಕೊಂಡು ಹೋಗುವಾಗ ಸ್ಥಿರಜೀವಿಯು ತನ್ನೊಳಗೆ ತಾನೇ ನಗುತ್ತ “ಕೊಂದುಬಿಡಿ ಎಂದು ಹೇಳಿದ ಮಂತ್ರಿಯೊಬ್ಬನೇ ಹಿತವಾದಿಯು. ಆತನೊಬ್ಬನೇ ನೀತಿಶಾಸ್ತ್ರವನ್ನು ಬಲ್ಲವನು. ಯಾವಾಗ ಇವರು ಆತನ ಮಾತನ್ನು ಕೇಳಲಿಲ್ಲನೋ, ಆಗಲೇ ಇವರಿಗೆ ಬೇಕಾದಷ್ಟು ಅನರ್ಥವಾಗಿ (ತನಗೆ ಬೇಕಾದುದು ಅರ್ಥ ಅಲ್ಲದ್ದು ಅನರ್ಥ) ಹೋಯಿತು.” ಎಂದುಕೊಂಡಿತು.
ದುರ್ಗದ್ವಾರಕ್ಕೆ ಬಂದಾಗ ಅರಿಮರ್ದನನು “ಎಲೈ, ಈ ಸ್ಥಿರಜೀವಿಯನ್ನು ಆತನು ಬೇಕೆಂದ ಕಡೆ ಇರಿಸಿ” ಎಂದನು. ಸ್ಥಿರಜೀವಿಯು “ನಾನು ಈಗ ಸಿಕ್ಕಿ ಹಾಕಿಕೊಳ್ಳಬಾರದು. ಇವರಿಗೆ ಅನುಮಾನವು ಬರದಂತೆ ನಡೆದುಕೊಳ್ಳಬೇಕು” ಎಂದಾಲೋಚಿಸಿ “ದೇವ, ತಾವು ಹೇಳುವುದು ಸರಿಯೇ ಆದರೂ ನಾನೂ ನೀತಿಶಾಸ್ತ್ರವನ್ನು ಬಲ್ಲವನು. ನಾನು ಸ್ವಾಮಿ ಪಾದಗಳಲ್ಲಿ ಎಷ್ಟು ಭಕ್ತನಾಗಿದ್ದರೂ, ನಾನು ಎಷ್ಟೇ ನಿಷ್ಕಲ್ಮಷನಾಗಿದ್ದರೂ, ನಾನು ಕುಲದಿಂದ ತಮಗೆ ಅಹಿತನು, ಅವರಿಂದ ನನನ್ನು ದುರ್ಗ ಮಧ್ಯದಲ್ಲಿ ಇಡಬಾರದು. ನಾನು ದುರ್ಗದ ಬಾಗಿಲಲ್ಲಿ ಇರಲು ತಕ್ಕವನು. ದಿನವೂ ಇಲ್ಲಿಯೇ ತಮ್ಮ ಪಾದದರ್ಶನವನ್ನು ಮಾಡುತ್ತಾ ನನ್ನ ಸೇವೆಯನ್ನು ಮಾಡುತ್ತಾ ಸಲ್ಲಿಸುವೆನು” ಎಂದು ಅರಿಕೆ ಮಾಡಿದನು. ಅರಿಮರ್ದನನೂ ಹಾಗೆಯೇ ಆಗಲೆಂದು ಆ ಮಾತನ್ನು ಅಂಗೀಕರಿಸಿದನು. ಉಲೂಕಪತಿಯ ಸೇವಕರು ಆತನಿಗೆ ದಿನ ದಿನವೂ ಬೇಕಾದ ಹಾಗೆ ಆಹಾರವನ್ನು ತಂದು ಕೊಡುತ್ತಿದ್ದರು. ಕೆಲವು ದಿನಗಳಲ್ಲಿಯೇ ಸ್ಥಿರಜೀವಿಯು ಚೆನ್ನಾಗಿ ಮೈ ಕೈ ಕೂಡಿಕೊಂಡು ನವಿಲಿನಂತಾಯಿತು.
ಅದನ್ನು ಕಂಡು ರಕ್ತಾಕ್ಷನು ಮಂತ್ರಿಗಳನ್ನೂ ರಾಜನನ್ನೂ ಕುರಿತು ನೀವೇನೇ ಹೇಳಿ. ನೀವೆಲ್ಲರೂ ಮೂರ್ಖರು. ಕೇಳಿಲ್ಲವೆ?
ಪ್ರಥಮ ಮೂರ್ಖನು ನಾನು | *ಉತ್ತರನು ಹಿಡಿದವನು ॥
ಮೂರ್ಖನೀ ನೃಪ ಸಚಿವ | ರೆಲ್ಲ ಮೂರ್ಖ ಮಂಡಲವು ॥ ೩೬॥
(*ಉತ್ತರ = ಎರಡನೆಯವನು)
ಮಂತ್ರಿಗಳು ಅದೇನೆಂದು ಕೇಳಲು, ರಕ್ತಾಕ್ಷನು ಹೇಳಿದನು:-
*****
ಮೂರ್ಖ ಮಂಡಲದ ಕಥೆ ಓದಿ