ಒಬ್ಬ ಭಿಕ್ಷು, ಗುರುಗಳನ್ನು ಕೇಳಿದ-
“ನನ್ನ ತಂದೆ ತಾಯಿ ನನಗೆ ಜನ್ಮ ಕೊಡುವ ಮೊದಲು ನನ್ನ ಕಣ್ಣು, ಕಿವಿ, ಮೂಗು ಎಲ್ಲಿ ಇತ್ತು?” ಎಂದು
“ಅವು ಸ್ವಸ್ಥಾನದಲ್ಲಿದ್ದವು” ಎಂದರು ಗುರುಗಳು.
“ಹಾಗೆಂದರೇನು? ಗುರುಗಳೇ!” ಎಂದ ಭಿಕ್ಷು.
“ನಿನ್ನ ಕಣ್ಣಿನ ಬೆಳಕು ಸೂರ್ಯನಲ್ಲಿ ಅಡಗಿತ್ತು”.
“ನಿನ್ನ ಮೂಗು ಬಿರಿದ ಹೂಗಳ ಚೈತ್ರವನದಲ್ಲಿತ್ತು. ನಿನ್ನ ಕಿವಿ ನಾದಲೀಲೆಯ ಲಹರಿಯ ಸಾಗರದಲ್ಲಿತ್ತು.”- ಎಂದರು.
“ಈಗ ನನ್ನ ಕಣ್ಣಿನಲ್ಲಿ ಸೂರ್ಯ, ನನ್ನ ಮೂಗಿನಲ್ಲಿ ಚೈತ್ರವನದ ಸುಗಂಧ, ನನ್ನ ಕಿವಿಯಲ್ಲಿ ಸಾಗರದ ನಾದ ಲೀಲೆ ಇದೆಯೇ?”-ಎಂದು ಕೇಳಿದ ಭಿಕ್ಕು.
ನೀನು ಝುನ್ ಜೀರ್ಣಿಸಿಕೊಂಡಾಗ ಎಲ್ಲವೂ ನಿನ್ನದಾಗುವುದು. ನಿನ್ನ ಬರಿದಾದ ಕಣ್ಣಲ್ಲಿ ಸೂರ್ಯ ಚಂದ್ರರು, ನಿನ್ನ ಬರಿದಾದ ಮೂಗಿನ ಹೊಳ್ಳೆಯಲ್ಲಿ ಚೈತ್ರವನದ ಸುಗಂಧವು, ನಿನ್ನ ಕಿವಿಯಲ್ಲಿ ಸಾಗರದ ನಾದಲೀಲೆ ತೋರುವುದು”-ಎಂದರು ಗುರುಗಳು.
ಭಿಕ್ಷು ನೇರ ವಿಹಾರದೊಳಗೆ ಹೋಗಿ ಝುನ್ ಧ್ಯಾನದಲ್ಲಿ ಒಂದಾದ.
*****








