Home / ಕವನ / ಕವಿತೆ / ಹಿಂದಿನ ದಿನಗಳು

ಹಿಂದಿನ ದಿನಗಳು

ಹಳೆಯ ಹಿಂದಿನ ದಿನಗಳೆಂದರೆ
ಮನಕೆ ಹಬ್ಬದ ಊಟವು;
ನೆನಪು ಬಂದರೆ, ಕನಸಿನಂತೆಯೆ
ಕಾಣುವುದು ಹಳೆ ನೋಟವು.

ನಾನು ಸಣ್ಣವ, ನನ್ನ ತಂಗಿಯು
ಇನ್ನು ಚಿಕ್ಕವಳಿದ್ದಳು;
ಅಂದಿನಾ ದಿನಗಳಲಿ ಆಕೆಗೆ
ಯಾರು ಹೋಲದೆ ಇದ್ದರು.

ಅವಳ ಮುದ್ದಿನ ಮೊಗವು ಚೆಂದವು
ತಾನೆ ಅರಳಿದ ಹೂವದು,
ಬಾಳ ಬಿಸಿಲಿನ ತಾಪವಿಲ್ಲದ
ತಾಯ ನೆರಳಿನ ಹೂವದು.

ಆಕೆ, ನಾನೂ, ನೆರೆಯ ಕಾಮೂ,
ಅಲ್ಲಿ-ಇಲ್ಲಿಯ ಮಕ್ಕಳು
ತೋಟದಲಿ ಸುಳಿದಾಡುತ್ತಿದ್ದೆವು
ಬರುವ ವರೆಗೂ ಕತ್ತಲು.

ಗೇರ ಹಣ್ಣಿನ ಮರದ ಬುಡದಲಿ
ಹಿಗ್ಗಿ ಹಾರುತಲಿದ್ದೆವು;
ಹಕ್ಕಿ ಕೊರಕಿದ ಹಣ್ಣಿಗೂ ಸಹ
ನಾವು ಕೋರುತಲಿದ್ದೆವು !

ಹಕ್ಕಿಯಂತೆಯೆ ಹಾರಿ, ಹಣ್ಣನು
ತಿನ್ನು ವಾಸೆಯು ಮನದಲಿ;
ಇಣಚಿಯಂತೆಯೆ ಹಣಕಿ, ಮರವನು
ಹತ್ತುವಾಸೆಯು ಕ್ಷಣದಲಿ.

ಹೊಳೆಯ ದಂಡೆಯ ಮರಳಿನಲಿ ನಾವ್
ಆಟಪಾಟವ ಹೂಡಲು,
ನೀರಿನಂಚಿಗೆ ಮೀನು-ಮರಿಗಳು
ಸುಳಿದು ಬಿಸಿಲಲಿ ಹೊಳೆಯಲು …

ಮೀನಿನಂತೆಯೆ ಮಿಂಚಿ ನೀರಲಿ
ಈಜುವಾಸೆಯು ಮನಕದು;
ಈಜಿ ಮುಂದಕೆ ದೂರ ಹೋಗುವ
ಕಡಲ ಕಾಣುವ ಕನಸದು.

ಮನೆಯ ಮುಂದಿನ ಗುಡ್ಡ ದೊಡ್ಡದು.
ಅದರ ತುದಿಯನು ಮುಟ್ಟಲು,
ಏನು ಹರುಷವೊ ಏನು ಸರಸವೊ
ನಾವು ಕೈಗಳ ತಟ್ಟಲು!

ಕಡಲ ಮೇಲಿನ ಹಡಗ ತೋರಲು
ಮನಸಿಗೊಂದೇ ಆಸೆಯು-
ದೂರ ದೇಶಕ್ಕೆ ಹೋಗಿ ಮರಳುವ
ಕನಸಿನಲ್ಲಿ ಪಿಪಾಸೆಯು.

ಹಳೆಯ ಹಿಂದಿನ ಚಂದ ದಿನಗಳು
ಇಂದಿಗವು ಕನಸಾದವು;
ಚಿಕ್ಕತನದಲಿ ಚೊಕ್ಕ ಕನಸವು
ಇಂದು ಮಸಮಸಕಾದವು !
*****

Tagged:

Leave a Reply

Your email address will not be published. Required fields are marked *

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...