ಆವನೀ ಉನ್ಮತ್ತ-ಈ ಸರಿಯ ಹೊತ್ತಿನೊಳು
ಕೊಳಲ ಬಾರಿಸಿ ಮಧುರ ರಾಗವನು ರಚಿಪನಿಂತೆ?
ಕರಿಮುಗಿಲ ಬಲೆಯೊಳಗೆ ಪೆರೆ ಸಿಲುಕಿ ನೋಯುತಿದೆ
ಗಾಳಿ ಬಾನಲೆಯುತಿದೆ ಪಾಳೆಯದ ಭೂತದಂತೆ.
ಈಗಿತ್ತ ಆಗತ್ತ ಕಿವಿಯಾಚೆ ದೂರತ್ತ
ಮುಗಿಲ ಮರೆ ಜೊನ್ನದಿಂ ಬೂದಾದ ರಜನಿಪಥದಿ
ತರಳ ಮುರಲೀನಾದವಿದನೆಲರು ಒಯ್ಯತಿದೆ
ಬಾಲಕೃಷ್ಣನ ತೃಣಾವರ್‍ತನಂದೊಯ್ದ ತೆರದಿ.
ಏನು ಚೋದ್ಯವಿದವ್ವ-ತಾಮಸಿಯ ಕಾಳೆದೆಯೊ-
ಳನುರಾಗವುದಿಸಿದೊರು ತಿಂಗಳಿನ ಬೆಳಕಿದಾಯ್ತು!
ಎಲರ ನಡೆ ಹಗುರಾಯ್ತು, ಬನದ ಬಗೆ ಬೇರಾಯ್ತು,
ಆಸೆ ಮುಗಿದೆನ್ನೆದೆಗು ಭಾವದಾವೇಗವಾಯ್ತು!
ಆವನೀ ಮಾಯಾವಿ-ಇಂತು ಸಮರಾತ್ರಿಯೊಳು
ಕೊಳಲ ಬಾರಿಸುತಿರುಳ ಮೌನತೆಯ ವ್ಯಥಿಪನಿಂತೆ-
ಬೆಳಕಿರುಳ ಮುದ್ದಿಸಿದೆ, ಜಗ ಸೊಗದಿ ನಿದ್ದಿಸಿದೆ,
ಗಾಳಿ ಬಾಂದೊಟ್ಟಿಲೊಳು ಪವಡಿಸಿದೆ ಹಸುಳೆಯಂತೆ!
*****








