ಪ್ರೀತಿಯೆ ಬಾರೇ ದೂತಿಯೆ ಬಾರೇ
‘ಪ್ರೀತಿಯ ದೂತಿ’ಯ ಜ್ಯೋತಿಯ ತಾರೆ
ಬಾರೇ ಬಾರೇ ತೋರೇ ತೋರೇ
ಜೀವದ ಗೆಳತಿಯ ಪ್ರೀತಿಯ ಧಾರೆ!
ಈ ಹೃದಯದ ಆಲ್ಹಾದಿನಿಯೆಲ್ಲಿ?
ಈ ಜೀವನ-ಸಂಜೀವಿನಿಯೆಲ್ಲಿ?
ನನ್ನಾ ಗೆಳತಿಯ ಬಳಿಯಿಂದಲಿ ಬಹ
ಗಾಳಿಯೆ ಬಾ ತಂಗಾಳಿಯೆ ಬಾರೆ!
ಪ್ರೇಮಪವಿತ್ರೆಯು ಹೃದಯಸುಮಿತ್ರೆಯು
ಇರುವಳೆ ಎಲ್ಲಿರುವಳು ಹೇಗೇನೆ?
ಇದ್ದರೆ ಬರುವಳೆ ಬಂದರೆ ಇರುವಳೆ
ನನ್ನ ಸುಮಿತ್ರೆಯು ಅಗಿಯೆ ತಾನೆ?
ಆಕೆಯು ಬಂದರೆ ಬಾಳುವೆಗೊಳಿತು!
ಬೆಳೆವುದು ನಲುಮೆಯ ಬಳ್ಳಿಯ ಬಲಿತು!
*****








