“ಬಾರದಿರು ನಾನೂರು ಗೋವುಗಳು ಸಂಖ್ಯೆಯಲಿ
ನಾಲ್ಕುಸಾವಿರವಾಗಿ ನಲಿದಾಡುತಿರುವನಕ”
ಎಂಬ ಗುರುವಾಣಿಯನು ನಿನ್ನ ತಲೆಯಲಿಹೊತ್ತು
ಏಕೆಂದು ಏನೆಂದು ಮರುಮಾತನಾಡದೆಯೆ
ಧೇನುಗಳ ಮುಂಕೊಂಡು ಹಿಂದುಮುಂದಿಲ್ಲದೆಯೆ
ಗುರು ದೈವ ಸಮವೆಂದು ಅವನ ಒತ್ತಾಸೆಯಲಿ
ಅಚಲ ಶ್ರದ್ಧೆಯನಿಟ್ಟು ಸತ್ಯಕಾಮನು ಆಗಿ
ಪೂರ್ಣ ಸತ್ಯವನರಿದ ಹಿರಿದುಸಾಧಕ ನೀನು
ನಿನ್ನಬ್ಬೆ ಜಾಬಾಲೆ ಸಾಮಾನ್ಯದವಳಲ್ಲ
ನಿನ್ನ ಹೊತ್ತದರಿಂದ ಆಯ್ತವಳ ಗರ್ಭಶುಚಿ
ಸತ್ಯಕಾಮನು ಮೊದಲು ಸತ್ಯನಾಗಿರಬೇಕು
ಎಂದು ನುಡಿಯದೆ ನಡೆದು ತೋರಿಸಿದ ಋಷಿವರ್ಯ
ಖುಷಿಮೂಲ ಅರಸುವದು ಹೊಲ್ಲವೆನುವದು ಇದಕೆ
ಸತ್ಯವನ್ನುಂಡುಣಿಸಿದವ ನೀನು ಹೀನನೇ?
*****








