ಗ್ರೀಕರ ಪುರಾಣದೊಳು ದೇವೇಂದ್ರ ಜ್ಯುಪಿತರನು
ಪಾತಕವ ಗೈದ ತನ್ನಣುಗನಿಗೆ ಈ ತೆರದ
ಯಾತನೆಯ ವಿಧಿಸಿದ್ದನೇವೇಳ್ವೆ-ನಾಲಗೆಗೆ
ಸೋಕುವೊಲು ಜೋಲುತಿರೆ ತನಿರಸದ ಹಣ್ಜೊಂಪೆ,
ಇವನ ಹಸಿವಿವನನೇ ತಿನ್ನುತಿದೆ; ಬಳಿಯೊಳೇ
ಜುಳಜುಳನೆ ತುಂತುರನು ಸಿಂಪಿಸುತ ಹರಿಯುತಿರೆ
ತಿಳಿವೊನಲು, ಪ್ರಾಣವನೆ ಹೀರುತಿದೆ ನೀರಡಿಕೆ;-
ಇವು ನಿಲುಕಿ ನಿಲುಕದೊಲು ಶಾಪ ಕಟ್ಟಿದೆ ಇವನ.
ಅಂದಿನೀ ಕತೆಪಾಡೆ ದಿಟಮಾಗೆ, ಭಾರತವೆ,
ಆವ ಪಾತಕಕಾಗಿ ನಿನ್ನ ಮಕ್ಕಳನಿಂತು
ಹೇವವಿಲ್ಲದ ಹೀನದೀನತೆಯ ಶಾಪದೊಳು
ಬಂಧಿಸಿಹೆ ನಿನ್ನ ವಿಪುಳೈಶ್ವರ್ಯವೆರವಾಗೆ?
ಶುಷ್ಕಾತ್ಮರಾತ್ರಾರಂಗರಾವೆಮ್ಮ ನೋಡು;
ಕಾರ್ಪಣ್ಯಶಾಪವನು ತೆಗೆದು ಋದ್ಧಿಯನು ನೀಡು.
*****








