[“ಗೀತಾಂಜಲಿ”ಯೊಳಗಿನ “ಏಇ ಕರೆಛೊಭಾಲೊ ನಿರೂರಾ” ಎಂಬ ಗೀತದ ಕನ್ನಡ ರೂಪವಿದು. ಜೀವನದಲ್ಲಿ ಮರ್ಮಕ್ಕೆ ಉಂಟಾಗುವ ಆಘಾತವೂ ಪರಮಾತ್ಮನ ಆಶೀರ್ವಾದವೆಂದೇ ಇಲ್ಲಿ ಹೇಳಲಾಗಿದೆ.]
೧
ಅಂತು ಒಳಿತನು ನನ್ನ ಬಾಳ್ವೆಯಲಿ ಪಳಗಿಸಿದೆ
ಎಲ ಎಲಾ ನಿಷ್ಠುರಾ!
ಇಂತು ಹೃದಯವ ತೀವ್ರಜ್ವಾಲೆಯಲಿ ಬೆಳಗಿಸಿದೆ
ಎಲ ಎಲಾ ನಿಷ್ಠುರಾ!
೨
ಸೋಂಕದಿರೆ ಬೆಂಕಿ, ಧೂಪದ ಗಂಧ ಬಂದೀತೆ
ಎಲ ಎಲಾ ನಿಷ್ಠುರಾ!
ಕೊಂಕುತಿರೆ ದೀಪವದು, ಬೆಳಕು ಬಲು ಸಂದೀತೆ
ಎಲ ಎಲಾ ನಿಷ್ಠುರಾ!
೩
ಮಮಚಿತ್ತ ಕಳೆಗೆಟ್ಟು ಚೇತರಿಸದಿರುವಾಗ
ಎಲ ಎಲಾ ನಿಷ್ಠುರಾ!
ಅಮಮ ಆಘಾತವಿದೆ ತವ ಸ್ಪರ್ಶ – ವರವಾಗಿ
ಎಲ ಎಲಾ ನಿಷ್ಠುರಾ!
೪
ಮೋಹಾಂಧಕಾರದಲಿ ಕಣ್ಗೆ ನೀನಿಲ್ಲಾಯ್ತು
ಎಲ ಎಲಾ ನಿಷ್ಠುರಾ!
ಆಹ ವಜ್ರಾಗ್ನಿಯಲಿ ಬಾಳುವೆಗೆ ಬೆಳಕಾಯ್ತು
ಎಲ ಎಲಾ ನಿಷ್ಠುರಾ!
*****





