Home / ಕವನ / ಕವಿತೆ / ಮನದನ್ನೆ

ಮನದನ್ನೆ

ಮಾನಾಪಮಾನವನು ತೊರೆದು ಬಂದೆನು ನಲ್ಲೆ
ಏನಾದರೇನೆನಗೆ ನೀನೆ ಗತಿ ನಾ ಬಲ್ಲೆ

ನೀನೊಲಿದು ಮುದ ಬೀರೆ, ನಿನ್ನ ನಗೆ ಮೊಗದೋರೆ,
ನಾನಹುದು ನಿನ್ನ ಬಗೆ ಮುಗಿಲೊಳಿಹ ಧೃವತಾರೆ.

ಎನ್ನಂತರಂಗದಲಿ ನೀನೆ ನರ್ತಿಸುತಿರುವೆ
ನಿನ್ನ ಪ್ರತಿಬಿಂಬ ನಾನಂತೆ ವರ್ತುಸುತಿರುವೆ

ನನಗೆಲ್ಲಿ ಅಸ್ತಿತ್ವ! ನಿನ್ನೊಳಿದ ಒಳಸತ್ವ
ಮಿನುಗಿಲ್ಲಿ ಮೈಗೊಂಡು ನಿಂತಿರುವ ಮಹತತ್ತ್ವ

ನೀನು ರೂಪಿಸಿದಂತೆ ನಾನು ವ್ಯಾಪಿಸುತಿಹೆನು
ಭಾನು ಬೀರುವ ಬೆಳಕ ನಾ ಹೋಲುತಿಹೆನು

ನೀನೆನ್ನ ಸಂಜೀವಿ ನಾ ಬರಿಯ ಮೃತ ಜೀವಿ
ನಿನ್ನೆದೆಯ ಕನಸಿನಲಿ ಅಲೆಯುತಿಹ ಅನುಭಾವಿ

ನಿನ್ನ ಕಲ್ಪನೆ ಕುದುರಿ ಕೆತ್ತಿರುವ ಮೂರ್ತಿನಾ
ನಿನ್ನ ಜೀವನದೊಡನೆ ಸಾಗಿ ಬಹ ಕೀರ್ತಿ ನಾ

ನೀನಿಲ್ಲದಿರೆ ನಾನು ಕುರುಡು ಕಣ್ಣಿನ ಭಾನು
ನೀನೆಲ್ಲಿ ನಾನಲ್ಲಿ ತುಂಬಿ ತುಳುಕುವ ಜೇನು

ಕುರುಡು ಪ್ರೇಮಕೆ ಎನ್ನ ನೀನೆ ಎರಡೂ ಕಣ್ಣು
ಬರಡು ಜೀವನಲತೆಗೆ ಫಲಿಸಿ ಬಹ ಹಣ್ಣು

ಹೆಣ್ಣಲ್ಲ ನೀನು ಬರಿ ಎನ್ನ ಪ್ರೀತಿಯ ದೂತಿ
ಪುಣ್ಯವೆನ್ನಯದೀಗ ಫಲಿಸಿರುವ ಹೊಸ ರೀತಿ
* * *

ಯಾವ ಮಾತಿನಿಂದ ನಿನ್ನ ಭಾವ ತಿಳಿಯಲಿ!
ಯಾವ ಕೃತಿಯನೆಸಗಿ ನಿನ್ನ ಹೇವ ಬೆಳೆಸಲಿ!

ಎಂತು ಎನ್ನ ಅಂತರಂಗವನ್ನು ತಿಳಿಸಲಿ!
ಚಿಂತೆಯೊಂದೆ ಹೇಗೆ ನಿನ್ನ ಪ್ರೀತಿ ಗಳಿಸಲಿ!
* * *

ದೇವ ತೋರು ಕರುಣೆ ಬೀರು ದಿಕ್ಕುಗಾಣದಾಗಿಹೆ
ನೋವನಿತ್ತು ಕಾವ ಬಗೆಯನಿಂತು ಅರಿಯದಾಗಿಹೆ

ಪ್ರೇಮವನ್ನೆ ಬಸಿರೊಳಿರಿಸಿ ಪ್ರೇಮವನ್ನೆ ಉಸಿರುವಂತೆ
ಪ್ರೇಮಪುತ್ಥಳಿಯ ಮಾಡು ಪ್ರೇಮ ಜೀವ ಉದಿಸಿದಂತೆ
* * *

ನಿನ್ನ ಮನಸೆ ನನ್ನ ಮನಸು ನಿನಗೆ ವಿಜಯವಾಗಲೀ
ಎನ್ನಹಂಕಾರವಳಿದು ನಿನ್ನ ತನವ ಪಡೆಯಲಿ.
*****

Tagged:

Leave a Reply

Your email address will not be published. Required fields are marked *

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...