ಯಾಕೆ ತಾಯಿ ಮುಲುಗುತಿರುವಿ
ಕರುಳ ಬಳ್ಳಿಗಳ ಕತ್ತರಿಸಿ ಚಿಲ್ಲಾಪಿಲ್ಲಿಯಾಗಿಸುತ
ನೀನೇ ನುಂಗಿ ನೀರು ಕುಡಿದರೆ ಹೇಗೆ?
ಸುನಾಮಿ ಜಲಪ್ರಳಯದಲಿ ಅವಿತು
ದೈತ್ಯಾಕಾರದಲಿ ಬಂದು
ಕೈಯಾರೆ ಕೊಚ್ಚಿ ಕೊಚ್ಚಿ ಸದೆಬಡೆದು
ಸದ್ದಡಗಿಸುತಿರುವೆಯಲ್ಲ!
ಇನ್ನೂ ಸಾಕಾಗಲಿಲ್ಲವೆ ತಾಯಿ
ಮತ್ತೆ ಮತ್ತೆ ಗರ್ಜಿಸಿ
ಭೂಕಂಪಿಸುತ ಬುಸುಗುಡುತಿರುವಿ
ಕ್ಷಣ ಮಾತ್ರದಲಿ ನೆಲದಡಿಗೆ ಸೇರಿದ
ನಿನ್ನ ಮಕ್ಕಳ ಆಕ್ರಂದನ ಕೇಳುತಿರುವಿಯಾ
ಯಾಕೆ ಜನನಿ ನಿನ್ನೆದೆ ಕಲ್ಲಾಯಿತು
ಕಿವಿ ಕಿವುಡಾಯಿತು!
ಯುದ್ಧ ಭಯೋತ್ಪಾದನೆಗೆ ಕುಮ್ಮಕ್ಕು
ಕೊಡುವ ರಾಕ್ಷಸ ರಾಜಕೀಯ
ಮಕ್ಕಳ ಕಂಡು ಕೆಂಡವಾದೆಯಾ
ವಿಜ್ಞಾನದೊತ್ತಡಕೆ ಪರಿಸರ ಹಾನಿಗೆ
ಎದೆ ಭಾರವಾಯಿತೆ
ಕಣ್ತುಂಬ ಕೆಂಡದುಂಡೆ ಮೈತುಂಬಾ
ಬೆಂಕಿ ಹೊತ್ತು ತತ್ತರಿಸದಿರು ತಾಯಿ
ಅವರವರ ಕರ್ಮಫಲ ಎನದಿರು ಮತ್ತೆ!
ನೀನೇ ಹಡೆದ ನೂರಾರು ಮಕ್ಕಳಿವರು
ಮುದ್ದಿಸಿ ಸಾಕಿ ಸಲುಹಿ ಆಕಾಶದೆತ್ತರಕೆ ಬೆಳೆಸಿದೆ
ಆದರೊಬ್ಬನೂ ಹತ್ತಿರವಿಲ್ಲ ನಿನ್ನ ಕರುಳಿಗೆ
ಸ್ವಾರ್ಥಿ ಮಕ್ಕಳ ಸಹವಾಸ ಸಾಕಾಯಿತೆ
ಮತ್ತೆ ಮತ್ತೆ ಆಚೆಗೆ ದಬ್ಬುತಲೇ ಇರುವೆ
ಹುಲುಮಾನವರ ಹೆತ್ತಿದ್ದಕ್ಕೆ ಹೊತ್ತಿದ್ದಕ್ಕೆ
ಪಶ್ಚಾತ್ತಾಪ ಪಡುತಿರುವೆಯಾ ತಾಯಿ,
ನಿನ್ನ ಉಡಿ ಸ್ಮಶಾನ ಮಾಡದಿರು
ಕ್ಷಮಿಸು ಜಗಜ್ಜನನಿ ಬಹುರೂಪಿಣಿ.
*****
ಪುಸ್ತಕ: ಇರುವಿಕೆ