೧
ಸ೦ಜೆಯಾಯಿತು; ರಾಗವಾಗಸವನಾವರಿಸಿ
ರ೦ಜಿಸಿದ ತೆರದಲ್ಲಿ, ನನ್ನೆದೆಯಲಿ
ಅನುರಾಗವಿಡಿದಿಹುದು ತಿಳಿಯಲಾರೆಯ ನೀನು?
ಮನವು ತವಕಿಸುತಿಹುದು ಬರಲಾರೆಯ?
೨
ನಿಮಿಷಗಳು ನಿಮಿಷಗಳು ಕಾಲನಾಳದೊಳಿಳಿದು,
ಸಮವಾಗಿ ಸರಿಯುತಿವೆ ನಿನ್ನ ಸೇರುವೆಯು
ಸಮನಿಸದೆ ಸಮಯವದು ಶೂನ್ಯತೆಯನಾನವುದು
ಪ್ರೇಮಕನಿತಾದರೂ ತಾಳ್ಮೆಯಿಹುದೇ?
೩
ಕಾಳಿಂದಿ ಸವಿಸರದಿ ಸಂಜೆಗಾಯನವನ್ನು
ಹೇಳುತ್ತ, ಹೊತ್ತನ್ನು ವ್ಯರ್ಥವಾಗಿ
ಹಾಳು ಮಾಡದೆ, ಮೆಲ್ಲ ಮೆಲ್ಲನೇ ಹರಿಯುವಳು
ಹೇಳು- ನೀನೇಕಿ೦ತು ಕಾಲಗಳೆವೆ?
೪
ಕೆಲವು ಸುಮಗಳ ಕೋದು ಸರವ ಸುರಿದಿಹೆನಿಂದು
ಗೆಲವಿನೊಲವಿನ ಕಾಣ್ಕೆಯಿದನು ನೀನು
ಕೊಳ್ಳು ಬೇಗನೆ ಬ೦ದು; ಇಲ್ಲದಿರಲಾ ಮಾಲೆ
ಕಳೆಗುಂದಿ ಕೊರಕೊರಗಿ ಸೊರಗದೇನು?
೫
ನಿನ್ನ ನಲ್ಗೊಳಲಿನಾ ‘ಗೀತೆ’ ಯನ್ನಾಲಿಸಲು
ನನ್ನ ಈ ಕಿವಿಯಿ೦ದು ತವಕಿಸುವುದು
ನಯನ ಮೋಹನ ದೇಹ ಶೋಭೆಯನು ದಿಟ್ಟಿಸಲು,
ಬಯಸುವುವು ಕಣ್ಣುಗಳು ಬರಲಾರೆಯಾ?
೬
ಬಗೆಯ ನಲ್ಮೆಯ ನಿಧಿಯೆ! ನನ್ನ ಬಾಳಿನ ಬೆಳಕೆ!
ಸೊಗದ ಸನ್ಮೂರ್ತಿಯೇ! ಬಾರೆಯೇನು?
ಹೇ ಪವಿತ್ರ ಪ್ರೇಮಮಯನೆ! ಕರುಣಾಳುವೇ!
ತಾಪವನು ತಿಳಿಯೆಯಾ ಹೆಂಗರುಳಿನ!
೭
ಹೇ ನಲ್ಲ! ನೀನಾವ ತಾಣದೊಳಗಿದ್ದರೂ,
ನನ್ನೆದೆಯು ನಿನ್ನೆದೆಯೊಳೈಕ್ಯವಾಗಿಹುದು
ಬೇಡುವೆನು- ನಿನ್ನ ವಿಮಲ ಪ್ರೇಮ ನನ್ನಲ್ಲಿ
ಕೂಡಿರಲಿ. ನಿನಗಿದೋ ಪ್ರೇಮಾಂಜಲಿ!
*****
೧೯೩೪








