
ಒಂದು ಮುತ್ತು- ಮತ್ತೆ ಬಾರೆನು.
ಒಂದು ಮುತ್ತು- ಮತ್ತೆ ಹೋರೆನು.
ಹಿಂದುಮುಂದಿನ ಬೇಗೆಯೆಲ್ಲಾ
ನಂದೆ, ಒಂದೇ ಮುತ್ತು, ನಲ್ಲೆ!
ಅಯ್ಯೊ, ಅರಿಯದೆ, ಒಲುಮೆಯೊಗೆದು,
ಕಯ್ಯ ಹಿಡಿದರಿಗೆರಡ ಬಗೆದು,
ತಡೆದು, ತಡೆಯದೆ, ನಾಚಿ, ಹೆಣಗಿ,
ಕಡೆಗೆ ಸೋತೆವು ನಾವು, ನಲ್ಲೆ.
ಒಲಿದುದಾಯಿತು, ನಲಿದುದಾಯಿತು,
ನೊಂದುದಾಯಿತು, ಬೆಂದುದಾಯಿತು.
ಇಲ್ಲೇ ನರಕವ ಕಂಡುದಾಯಿತು;
ಎಲ್ಲ ಆಯಿತು ನಮಗೆ, ನಲ್ಲೆ.
ಒಲಿಯದಿದ್ದೆವೆ ಅಚ್ಚುಮೆಚ್ಚು,
ಒಲಿಯದಿದ್ದೆವೆ ಹುಚ್ಚು ಹುಚ್ಚು,
ಕಾಣದಿದ್ದೆವೆ, ತೊರೆಯದಿದ್ದೆವೆ.
ಇಲ್ಲ ಈ ಎದೆಬಿರಿವು, ನಲ್ಲೆ!
ಗೆಲ್ಲು ನೀನೇ ಧರ್ಮ; ಮಾಸದೆ
ನಿಲ್ಲು, ಛಲವಿನ್ನೇನು ಮಾನವೆ;
ಕೆಟ್ಟೆವೇ, ನಾವೆದೆಗೆ ನೆಟ್ಟೆವೆ
ಸತ್ತೆ ಸಾಯುವ ಕೊರಗ, ನಲ್ಲೆ!
ಒಂದೆ ಮುತ್ತು-ಮತ್ತೆ ಬೇಡೆನು.
ಒಂದೆ ಮುತ್ತು-ಮತ್ತೆ ಕಾಡೆನು.
ಬಾರೆ, ನನ್ನೆದೆಯಳಲನೆಲ್ಲಾ
ಹೀರಿ ಕಳುಹೆ, ನನ್ನ ನಲ್ಲೆ!
*****
BURNS : Ae fond kiss














