
ಬೇಡ ಬಿಡು ನಾವಲೆವುದಿನ್ನು,
ಇರುಳಲ್ಲಿ ಮರೆತು ಹೊತ್ತನ್ನು.
ಆದರೂ, ಮೊದಲಂತೆ ಒಲಿದೆ ಇಹೆನಲ್ಲಾ,
ತಿಂಗಳೂ ಬೆಳಗುತಿಹುದಲ್ಲಾ!
ತನ್ನೊರೆಯ ಸಮೆಯುವುದು ಖಡ್ಗ,
ತನ್ನೆದೆಯ ತೇಯುವುದು ಜೀವ-
ಹೃದಯ ಬಲುದಣಿದಿಹುದು, ಉಸಿರಾಡಬೇಕು,
ಒಲುಮೆಗೂ ಬಿಡುವು ಬೇಕು.
ಇರುಳೇಕೆ ಒಲಿಯುವುದಕಲ್ಲಾ?
ಮರಳುವುದೆ ಬೇಗ ಬೆಳಗೆಲ್ಲಾ!
ಕಲ್ಲೆದೆಯೆ, ಬೇಡ ಬಿಡು ನಾವಲೆವುದಿನ್ನು
ತಿಂಗಳಿನ ಬೆಳಕಿನಲ್ಲಿನ್ನು.
*****
BYRON : We’ll go no more A Roving














