೧
ಯಾವ ಹೂವ ಕರುಳ ಕಂಡರಮಮ ಮಧುವೆ ನಷ್ಟವು!
ಜೀವಭೃಂಗ ಬಳಸಿ ಬಳಲಿ ಭ್ರಮಿಸುತಿದೆ ಭ್ರಮಿಷ್ಠವು!
೨
ಹೂವ ತರುವ ಜೀವ ಹುಲ್ಲ ಹೊರುವ ಒಳ್ಳೆ ಹೊತ್ತಿದು!
ದೇವನೆಂಬ ಕಾವ ಪುರುಷ ಕೊಟ್ಟ ವಿಷದ ತುತ್ತಿದು!
೩
ತಾಯಿಯಿತ್ತ ನಂಜ ನುಂಗಿ ಬದುಕಿದವನ ಹೆಸರನು
ಬಾಯಿಯಿಂದ ಉಸಿರುವವನೆ ಕುಡಿ ಈ ಕಹಿ ಎಸರನು!
೪
ನನ್ನ ನಿನ್ನ ಮಾನಧನ-ಗುರುವಿಗು ದೇಶಭ್ರಷ್ಟತೆ!
ಇನ್ನೊರೆಪುದೆ? ನನ್ನ ಸ್ಥಾನಭ್ರಷ್ಟತೆಗು ಕನಿಷ್ಟತೆ!
೫
ಪುಣ್ಯದ ಪರ್ಜನ್ಯದಿಂದ ಪಾಪಕುಂಭ ತುಂಬಿತು!
ಗಣ್ಯನಲಾ ಪುಣ್ಯಶಾಲಿ!- ವಾಪ ಪಾಪಿ ನಂಬಿತು!
೬
ಪಾಪಕುಂಭ ತುಂಬಿ ತುಳುಕೆ ಪುಣ್ಯ ಹೊರಗೆ ಹರಿಯಿತು!
ಶಾಪ ಬೇಕೆ? ಕೋಪವೇಕೆ? ತಾಪದೆ ಬಗೆ ಹರಿಯಿತು!
*****








