Home / ಕವನ / ಕವಿತೆ / ಅಂತರ‍್ಯಾಮಿಯ ಒಂದು ಸೋಗಿನ ದರ‍್ಶನ

ಅಂತರ‍್ಯಾಮಿಯ ಒಂದು ಸೋಗಿನ ದರ‍್ಶನ

೧
ಬೆಳುಬೆಳಗಾಯಿತು, ಎಳಬೆಳಕಾಡಿತು
ದೇವನ ಹಳ್ಳಿಯ ನೆಲ ನಲಿದಿತ್ತು.
ಆತ್ಮೋಲ್ಲಾಸದ ಮಧುರಾಲಾಪದ
ತೊಟ್ಟಿಲ ಮಗುವೊಲು ಜಗವುಲಿದಿತ್ತು.

ಆಗಸ ಮಾನಸಸರದೊಳು ಮಿಂದೊಲು
ತಣ್ಣನೆ ತೆಳುಗಾಳಿಯು ಬೀಸಿತ್ತು;
ಎದುರಿನ ಹೊಲದೊಳು ಹೊಂಗೆಯ ತುರುಗಲು
ಬೆಳಕಿನ ತುಂತುರುಗಳ ಹನಿಸಿತ್ತು.

ಆವುದೊ ಹಾಡಿಗೆ ಅಭಿನಯಿಸುವ ತೆರ
ಅರಳಿಯು ಏಲೆಗೈಯಾಡಿಸುತಿತ್ತು;
ಮುಗಿಲಿಳೆ ಕೂಡುವ ತಾಣದಿ ಬೆಟ್ಟವು
ಮುಗಿಲಿಗಿಂತಲೂ ಹಗುರಾಗಿತ್ತು.

ಏತಕು ಅಂಟದೆ ತನ್ನಾರಾಮದಿ
ಹದುಳದಿ ನೆಮ್ಮದಿಯೊಳು ಮನವಿತ್ತು.
ದೇವನಹಳ್ಳಿಯ ದಿನವಿಂತಿತ್ತು,
ದೇವರಿಗಾಡುಂಬೊಲದಂತಿತ್ತು.

೨
ಇಂತಾ ದಿನವಿರೆ ಬಿನದಕೆ ಮೀಸಲು,
ನನ್ನ ಮನಂ ಪಟವಿಳಿಸಿದ ಓಡೊಲು ;
ಅವಧಾನವ ಕೆಡಿಸುವರಾರಿಂತು
ನನ್ನನೆ ದುರುದುರು ದಿಟ್ಟಿಸುತಿಂತು?

ಇತ್ತೆಡೆಯೊಮ್ಮೆಗೆ ಅತ್ತೆಡೆಯೊಮ್ಮೆಗೆ
ಸುಳಿ ಸುಳಿದಾಡುತ ಚಣಚಣ ನಿಂತು
ನನ್ನೆ ದುರೆನ್ನನೆ “ಕೌತುಕವಿದ ನೋ-
ಡೆ”ನ್ನುವ ತೆರ ನಿಟ್ಟಿಸುತಿದೆ ಜಂತು!

ಕೊಂಕಿದ ಕೋಡಿನ ಮುರುಟಿದ ಮುಸುಡಿನ
ಹಳ್ಳದ ಮೂಗಿನ ಬಿರಿಹೊಳ್ಳೆಗಳ,
ಬಾಳೆಯ ಮೋತೆಯ ಗಾತ್ರದ ಕಿವಿಗಳ
ಮೃಗವಿದಿಗೋ ಗುಡ್ಡೆಯ ಕಣ್ಣುಗಳ!

“ಬಲ್ಲೆ ನಾ ನಿನ್ನ, ನೀನೋ ನನ್ನನು
ಗುರುತಿಸಲಾಗದೆ ಭ್ರಮೆಯಿಂದಿರುವೆ.
ಇದುವೇ ಬಿನದಂ–ಅಹಹಾ!” ಎಂಬೊಲು
ನಗಲಾಗದೆ ನಗುತಿತ್ತೇನೊರೆವೆ.

“ನೋಡಣ್ಣಾ, ನೋಡಣ್ಣಾ” ಎಂದಿದ
ಬಳಕೆಯ ಹೆಸರೊಳೆ ಕರೆಯಿತು ಹಸುಳೆ.
“ಎಳಮನಸಿನ ಮಗು-ಬಲ್ಲುದೆ? ನೀನೋ?”
ಎನ್ನುವ ತೆರನದು ನೋಡಿತು ಮಗುಳೆ.

೩
ಇಂತಾ ಮೃಗವೇಷನು ಬಿನದಿಸುತಿರೆ
ವೇಷವನಾಂತವನಾರೆಂದಾನಿರೆ,
ಸೂಟಿಯೊಳಾ ಸೋಗಿನ ಒಳಹೊಕ್ಕು
ನಿಜವರಿತೋಹೋ ಎಂದೆನು ನಕ್ಕು-

“ಬಲ್ಲೆ ಬಲ್ಲೆ ಈ ನಗೆಯಾಟವ, ಬಾ,
ಮೊಗವಾಡವ ಕಳೆ–ಏನಿದು ಹುಚ್ಚು;
ಇನ್ನೀ ವಂಚಿಸುವಾಟವು ಸಾಗದು,
ಬಿನದ ಸಾಕಣ್ಣ, ಯಾರಿಗೆ ಮೆಚ್ಚು?”

ಇಂತೀ ತೆರ ನಾ ಸದರದಿ ನುಡಿಯಲು
ದೌಡೋಡಿತು ಮೃಗ ಬಲು ನಾಚಿದವೊಲು-
ಮರುಚಣವೆಲ್ಲವು ನಿತ್ಯದೊಲಾಯ್ತು,
ದೂರ ಒಂದೆಮ್ಮೆ ಮೇಯುತಲಿತ್ತು !

೪
ದೇವನಹಳ್ಳಿಯೊಳಾ ಒಂದರೆಚಣ
ಮಾಯೆ ತೆರೆದು ದರ‍್ಶನವಿತ್ತವನಂ
ಅಂದಿಂದೆಲ್ಲಾ ರೂಪದ ಮರೆಯೊಳು
ಹುಡುಕುತ ಹಂಬಲಿಸಿದೆ ನನ್ನ ಮನಂ.
*****

Tagged:

Leave a Reply

Your email address will not be published. Required fields are marked *

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...