
೧
ಇಳೆಯಿದೆ ನಿನ್ನಯ ಕೊಳಲಿದೆ
ಗೆಳೆಯನೆ ನೀ ಬೆಳೆವ ಕಳೆಯ ಕೊಳಲನ್ನಿನ್ನು
ಘಳಿಲನೆ ತಳೆದೂದುತ್ತಲೆ,
ಕಳೆಗೊಳಿಸೈ ಇಳೆಯ ಮಕ್ಕಳನು ಮತ್ತೊಮ್ಮೆ!
೨
ಎಸಕದ ನಿನ್ನಾ ಕೊಳಲಿನ
ಹೆಸರಿನ ಹೂಬಿಸಿಲಿನಿಂದ ಹಸನಿಸು ಮುಖವ!
ಹೊಸಹೊಸದಿಹ ಕೊಳಲೊಳಗಿನ
ನಸು ಬಿಳೆ ಬೆಲ್ದಿಂಗಳಿಂದ ರಸನೆಯ ಹಸಿಸೋ!
೩
ಇನಿಇನಿದಾದ ನಿನಾದದ
ನನೆನಗೆಯಿಂದೊಪ್ಪುತಿರುವ ಕೊಳಲೊಳಗಿಂದ
ದನಿಗೈಯುತ ಗೈಯುತ್ತಲೆ
ಹಣಿಸುತ ಹರ್ಷವನು, – ತಣಿಸು ತನುಮನಗಳನು!
೪
ಅಚ್ಚರಿಯ ಕೊಳಲ ಕೃಷ್ಣನೆ
ಬಿಚ್ಚಿಟ್ಟಿಹ ಜಗದ ಅಂತರಂಗದ ರಂಗ!
ಹೆಚ್ಚಿನ ಕೊಳಲಿನ ಹಾಡಿನ
ಅಚ್ಚನ್ನೇ ಹಾಕು ನಮ್ಮ ಕೆಚ್ಚೆದೆಯಲ್ಲಿ!
೫
ಬಾರಿಸುತ ಬಾರಿಸುತ್ತಲೆ
ಪ್ರೇರಣೆಯಂ ಪ್ರೇರಿಸುತ್ತ ಪ್ರೇರೇಪಿಸು ಭೋ!
ಪ್ರೇರಕನೇ ತಾರಕನೇ
ನಾರಾಯಣ ನಿನ್ನ ನರನ ನೆನಪಿಗೆ ತಂದು!
*****

















