ಯಾವ ಹಾಡನು ನಾ ಹಾಡಲಿ?
ನನ್ನ ಮುದ್ದು ಮುದ್ದಿನ ರನ್ನ ಮೋಹನ ||ಪಲ್ಲ॥
ನಿನ್ನ ಸುಂದರ ವದನಾರವಿಂದ
ನನ್ನ ಜೀವನ ಭ್ರಮರಕೆ ಮಕರಂದ ||೧||
ನಿನ್ನ ಹೊಳೆಯುವ ಕಳೆಯುಳ್ಳ ಕಣ್ಣು
ನನ್ನ ತನುವೆಂಬ ತರುತಳ್ತ ತನಿವಣ್ಣು ||೨||
ನಿನ್ನ ಸಂಪಿಗೆ ಹೂವಿನ ಮೂಗು
ನನ್ನ ಸಂತೋಷಕೆ ಬಲು ಮೆರಗು ||೩||
ನಿನ್ನ ತುಂಬಿದ ಮೋಹೆಕ ಗಲ್ಲ
ನನ್ನ ಪ್ರೀತಿಯ ತಿನಿಸಾದ ಬೆಲ್ ||೪||
ನಿನ್ನ ಮೃದುವಾದ ಚೆಂದ ಮುಂಗುರುಳು
ನನ್ನ ಆನಂದ ರನ್ನದ ಹರಳು ||೫||
ನಿನ್ನ ಬಳುಕುವ ಬಂಧುರ ಬೆರಳು
ನನ್ನ ಮನದಾಸೆಯ ಒಳತಿರಳು ||೬||
ನಿನ್ನ ಕೈಬೆರಳ ಬಂಗಾರದುಂಗುರ
ನನ್ನ ಬಾಳ ಬೆಳಕಿನ ಭವ್ಯ ಸಿಂಗಾರ ||೭||
ನಿನ್ನ ಕಾಲಲ್ಲಿ ಉಲಿಯುವ ಗೆಜ್ಜೆ
ನನ್ನ ಮುಂದಣ ಜೀವನಕೆ ಹಿರಿಹೆಜ್ಜೆ ||೮||
ಇನ್ನು ಏನೆಂದು ಹೊಗಳಲಿ ನಾನು?
ಚೆನ್ನ ಶಬ್ದ ಸಾಕಾದಾವೇನು? ||೯||
ಇದು ತಾಯಿಯ ತುಂಬಿದ ಕರುಳು
ಅದೆ ಕಾವ್ಯಕು ಮಾಡಿತು ಮರುಳು ||೧೦||
ನೀನೆ ನನ್ನ ಭಾಗ್ಯದ ಗೋವಿಂದ
ನೀನೆ ನನ್ನನುದ್ಧರಿಸೋ ಮುಕುಂದ ||೧೧||
*****
ಬೆಂಗಳೂರು : ೧೯೪೪

















