ಅಳಿಯನಿಗೆ ಮನೆಯಳಿಯ ಮಾಡಿಕೊಂಡಿದ್ದರು ; ಮಗಳಿಗೆ ಮನೆಯಾಗೇ ಇಟ್ಟುಕೊಂಡಿದ್ದರು. ಅಳಿಯ ದನಕರುಗಳನ್ನು ಕಾಯಬೇಕು. ಮನೆಯಲ್ಲಿ ತಂಗುಳಬಂಗುಳ ಉಣ್ಣಬೇಕು – ಈ ರೀತಿ ವ್ಯವಸ್ಥೆಮಾಡಿದ್ದರು. ಅಳಿಯನೆಂದರೆ ದನಕಾಯುವ ಹುಡುಗ ಅಂತ ನಿಷ್ಕಾಳಜಿ ಮಾಡುತ್ತಿದ್ದರು.
“ನನ್ನ ಹಣೇಬರಹದಾಗ ಇಷ್ಟೇ ಬರೆದಾದ. ಅದಕ್ಕ್ಯಾಕ ಚಿಂತಿ ಮಾಡಬೇಕು” ಎಂದು ವಿಚಾರಮಾಡಿ ದಿನಾಲು ಕೆಲಸಮಾಡುತ್ತ ಇದ್ದನು. ಒಂದುದಿನ ಹೊಲದಾಗ ಎತ್ತುಬಿಟ್ಟಿದ್ದ. ಧಾರೆ ಮಳೆ ಸುರೀಲಿಕ್ಕ ಹತ್ತಿತು. ಆ ಸಮಯದಾಗ ನೀರಿನ ಬಿಂದಿಗೆಯೊಳಗಿನ ನೀರೆಲ್ಲ ಚೆಲ್ಲಿ ಅದರಲ್ಲಿ ಅಂಗಿ, ಧೋತರ ತುರುಕಿದನು. ತಾನು ಬರಿಯ ಚಡ್ಡಿಯಮೇಲೆ ನಿಂತನು. ಬಿಂದಿಗೆ ಬೋರಲು ಹಾಕಿದ- ಹಾಂಗೇ ತಾಸು ಗಟ್ಟಲೆ ನಿಂತನು. ಮಳೆ ಹೊಡೆದು ಹೊಡೆದು ಬಹಳ ಹೊತ್ತಿನ ಮೇಲೆ ನಿಂತು ಬಿಟ್ಟಿತು. ಛಕ್ಕನೆ ಬಿಸಿಲುಬಿತ್ತು. ಉಟ್ಟುಕೊಂಡು ತೊಟ್ಟುಕೊಂಡು ನಿಂತನು. ಅಲ್ಲಿಗೆ ಒಬ್ಬ ಗೋಸಾವಿ ಮೈತೋಯಿಸಿಕೊಂಡು ಬಂದನು. “ನಾನು ಇಷ್ಟು ತೋಯಿಸಿಕೂಂಡೀನು. ಈ ಮನುಷ್ಯ ಏನೂ ತೋಯಿಸಿಕೊಂಡಿಲ್ಲ. ಇದರಾಗೇನಿದೆ ಚಮತ್ಕಾರ” ಎಂದುಕೊಂಡನು. “ಯಾಕಪ್ಪ ನಿನ್ನ ಮೈಮ್ಯಾಗ ಮಳೆ ಬಿದ್ದೀಲ್ಲೇನು” ಎಂದು ಕೇಳಿದನು.
“ನಂದು ನನಗೇ ಗೊತ್ತು. ನಿಂದು ನಿನಗೇ ಗೊತ್ತು. ನನಗ ಇದರ ಅರ್ಥಹೇಳು ಅಂದರ, ನಿನ್ನ ಹಂತ್ಯಾಕಿದ್ದ ಮಂತ್ರ ತಂತ್ರ ಹೇಳಿದೆರ ನಾ ನನ್ನ ಹಿಕಮತಿ ಹೇಳತೀನಿ” ಎಂದು ನುಡಿದನು ಅಳಿಯ-
ತನ್ನ ಪರಿಸ್ಥಿತಿಯನ್ನೆಲ್ಲ ಅಳಿಯ ಹೇಳಿದನು. “ಹೂತ್ತರಳಿ ದನಕಾಯಲು ಅತ್ತ ಮಾವ ಕಳಿಸತಾರ. ಅತ್ತಿ ಮಾವ ಹೇಣತಿ ಯಾರೂ ಸೇರೂದಿಲ್ಲ. ಈ ಪರಿಸ್ಥಿತಿ ಹೋಗೂ ಸಲುವಾಗಿ ಒಂದು ಉಪಾಯ ಹೇಳು” ಎಂದು ಗೋಸಾವಿಗೆ ಕೇಳಿಕೊಂಡನು. ಗೋಸಾವಿ ಅಲ್ಲೇಬಿದ್ದ ಏಳು ಹರಳು ಆರಿಸಿಕೊಂಡನು.
“ಒಂದು ಹರಳು ಒಗೆದು ಅಲ್ಲೇ ಚಿಟಕಾಸಿ ಕೂಡು, ಅಂದರ ಅಲ್ಲೇ ನೆಲಕ್ಕ ಹತ್ತಂಡಿ ಆಗಿ ಚಿಟಕಾಸಿಕೊಂಡು ಬಿಡತಾದ. ಅತ್ತಿ ಮಾವ ಮಲಕೊಂಡ ಜಾಗಾದಿಂದ ಏಳಬಾರದು – ಎರಡು ಹರಳು ಒಗೆದರೆ – ಯಾರೂ ಅವರೀಗಿ ಎಬ್ಬಿಸಲಿಕ್ಕೆ ಸಾಧ್ಯವಿಲ್ಲ. ಹೀಂಗ ಏಳು ಹರಳು ಉಪಯೋಗಿಸುವುದರಾಗ ಅತ್ತಿ ಮಾವ ಹಾದೀ ಮ್ಯಾಲ ಬರತಾರ” ಎಂದು ಹೇಳಿ, ಅಳಿಯನ ಹಿಕಮತ್ತಿಯ ಬಗ್ಗೆ ಕೇಳುತ್ತಾನೆ.
“ಗುಂಡರಗಿಯೊಳಗೆ ಅರಿವೆ ತುರುಕಿ ಬಿಂದಿಗೆ ಬೋರಲ ಹಾಕಿದ್ದರಿಂದ ಮಳಿ ಹತ್ತಲಿಲ್ಲ.”
ಅಳಿಯ ಮನೆಗೆ ಬಂದು ಬಂಕಿನಲ್ಲಿ ಮಲಗಿಕೊಂಡನು”. ಬಾಗಿಲಲ್ಲಿ ಬಂದು ಅತ್ತೆ ಮಾವ ಮಲಗಿದಲ್ಲೆ ಮಲಗಲಿ ಎಂದು ಸೈ ಎಂದನು. ಬಾಗಿಲಿಗೆ ಬಂದು ಬಾಗಿಲು ತೆರೆಯಿರಿ ಅನ್ನುತ್ತಾನೆ. ಅವರು ನೆಲಕ್ಕೆ ಮೆತ್ತಿಕೊಂಡವರು ಮೇಲೆ ಏಳಲೊಲ್ಲರಾದರು. “ತೊರೆಯ ಆಚೆಗೆ ಜಾಣಿಹಾಳ. ಅವಳೀಗಿ ಕೇಳಿ ಬರ್ರಿ” ಎಂದು ಮಂದೀಗಿ ಕಳಿಸ್ತಾರ. ಜಾಣಿ ನಡುನೀರೊಳಗಿಂದ ಹಾಯ್ದು ಬರುವಾಗ ಇಂವ ನಿಂತಲ್ಲಿ – ನಿಂತು – ನೀರಾಗ ನಿಂತಕ್ಕಿ ನಿಂತಾಂಗೇ ಇರಲಿ ಎಂದು ಗಟ್ಟಿಯಾಗಿ ಹೇಳುತ್ತಲೇ ಹರಳ ಒಗೆಯುತ್ತಾನೆ.
ಜಾಣಿ ಇವನಿಗೆ ಅಂಗಲಾಚಿ ಬೇಡುತ್ತಾಳೆ – “ನನಗೆ ಬಿಡುಗಡೆ ಮಾಡಿದರೆ ನಿನಗ ಬೇಡಿದ್ದು ಕೊಡುತ್ತೀನಿ.”
ನಡೆ ಅಂದಕೂಡಲೇ ನೀರೂಳಗಿಂದ ಜಾಣಿ ಪಾರಾಗಿ ಮುಂದೆ ಮುಂದೆ ಬಂದಳು. ಬಂದು ಅತ್ತೆ ಮಾವಂದಿರಿಗೆ ಬುದ್ಧಿ ಹೇಳಿದಳು –
“ನಿಮ್ಮ ಅಳಿಯನಿಗೆ ಈ ರೀತಿ ಕಾಡಬೇಡಿರಿ. ಇಲ್ಲ ಅಂದರೆ ನೀವು ನೆಲದ ಮ್ಯಾಗಿಂದ ಏಳಲಿಕ್ಕೆ ಸಾಧ್ಯವೇ ಇಲ್ಲ” ಎಂದು ಗಟ್ಟಿಯಾಗಿ ಹೇಳುತ್ತಾಳೆ.
“ನಾವು ಹಿಂಥಾ ಕೆಲಸ ಇನ್ನೆಂದೂ ಮಾಡೂದಿಲ್ಲ” ಎಂದು ಗಲ್ಲಗಲ್ಲ ಬಡಕೊಳ್ಳುತ್ತಾರೆ. ಏಳಬೇಕೆನ್ನುತ್ತಾರೆ, ಏಳುವದಾಗಲಿಲ್ಲ. ಆಗ ಅಳಿಯ “ನಡೆ” ಅಂದ ಕೂಡಲೇ ಗಪ್ಪನೆ ಎದ್ದು ಕುಳಿತರು.
ಅಂದಿನಿಂದ ಅಳಿಯದೇವರ ಸತ್ಕಾರ ನಡೆಯಲು ಆರಂಭವಾಯಿತು.
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು