Home / ಕವನ / ಕವಿತೆ / ಕರ್ನಾಟಕ ಕ೦ದ (ಕುಮಾರ ರಾಮ)

ಕರ್ನಾಟಕ ಕ೦ದ (ಕುಮಾರ ರಾಮ)

ಹರಲೀಯ ಕೊಡಲಾರೆ |
ಕರನಾಟ ಕಂದಽಗ ||ಪ||

ಹರಲೀಯ ಕೊಡಲಾರೆ, ಕರನಾಟ ಕಂದಗ
ವರಬೊಲ್ಲ ತಂದ ಕೊಮರಾಗ | ಹ | ರಣದಾಗ
ತುರಕರ ಗೆದ್ದ ವೀರಾಗ | ಹ | ೧

ಕಥೆಯ ಕೇಳಿರಿ ಜನರೆ, ಮತಿಯಿಟ್ಟು ತೂಗುತಲಿ
ಸುತಗ ಮನಸಿಟ್ಟ ಕಳಲಯುಗದ | ಮಲತಾಯಿ
ಬತವ ಹಾಡೇವ ನಿಜಗತೆಯ || ೨

ಹಿರಿಯರಸಿ ಹರಿಯಾಲಿ, ಕಿರಿಯರಸಿ ರತ್ನಾಲಿ
ಅರಸ ಕಂಪಿಲ ರಾಯನಿಗೆ | ಕೊಮರಾಮ
ಆರಸ ಮಗನಾದ ಹೆಸರಾತು || ೩

ಅರಮನೆ ಕೊಮರಾಮ, ಮರೆಯೂವ ರೂಪೇನ
ಅರಸಿ ರತ್ನಾಲಿ ಮನಸೋತ | ಮನದಾಗ
ಮರಗ್ಯಾಳ ರಾಮ ದೊರೆಯದಕ || ೪

ಅರಸ ಕಂಪಿಲರಾಯ, ಸರಸ ಬ್ಯಾಟಿಗೆ ಹೋದ
ಅರಸಿ ರತ್ನಾಲಿ ಮನಿಯಾಗ | ಮೋಹಿಸಿದ
ಎರಕ ಕೊಮರಾಮ ಎದಿಯಾಗ || ೫

ಅಂಗಳದ ಬೈಲಾಗ, ಜಂಗಿ ಚಂಡಿನ ಆಟ
ದಂಗ ಬಡಿಸ್ಯಾನ ಕೊಮರಾಮ | ರತ್ನಾಲಿ
ಕಂಗೆಟ್ಟು ಸೋತು ನೋಡ್ಯಾಳ || ೬

ಮೇಲ ಮಾಳಿಗಿ ಮ್ಯಾಲ, ನೀಳ ದಿಟ್ಟಿಯ ಬಿಟ್ಟು
ಹೋಳಿಯಾಡ್ಯಾಳ ಮೈಮರೆತು | ರತ್ನಾಲಿ
ಸೀಳಿ ಕೊಮರಾಮ ಎದೆಹೊಕ್ಕು || ೭

ಸಮಯ ಕಾಯುವ ಕಳ್ಳ, ತಮವ ದೊರಕಿಸಿದ್ಹಾಂಗ
ಕೊಮರಾಮ ಜೆಂಡ ಆಡುದಕ | ವುಟಿವುಟಿದು
ಚಮಕಿಸಿ ಚೆಂಡು ಒಳಮನಿಗೆ || ೮

ಚೆಂಡು ಬೀಳುತ ನೋಡಿ, ಚೆಂಡಿ ರತ್ನಾಲಿ ಮುಚ್ಚಿ
ಲಂಡಾಗಿ ಚೆಂಡ ಕೊಡಲಿಲ್ಲ | ರಾಮನಿಗೆ
ಚೆಂಡ ತರಲಾಕ ಕಳಿಸ್ಯಾರ || ೯

ರತ್ನಾಲಿ ಹಡದವ್ವ, ಚಿತ್ತರದ ಕೊಡಚೆಂಡ
ಕತ್ತಲಾಗೂದ ಆಡುದಕ | ಅರಮನೆಯ
ಹೆತ್ತಾಯಿ ಹಾದಿ ನೋಡ್ಯಾಳ || ೧೦

ಕಂಡು ರಾಮನ ರೂಪ, ಚೆಂಡಿ ರತ್ನಾಲಿ ಸೋತು
ಹಿಂಡೊ ಕೊಮರಾಮ ಕಾಮೂಟೊ | ಕೂಡಾಡಿ
ಉಂಡು ಹಿಂಗೀಸೊ ಮನತಾಪೊ || ೧೧

ಕಾಮನೀ ಕೊಮರಾಮ, ಕಾಮಿಸಿದೆ ನಾನೋಡಿ
ಕಾಮಾಟ ಕೂಡಿ ನೀನಾಡೊ | ಮನದೊರೆಯೆ
ಪ್ರೇಮ ನಿನ ಮ್ಯಾಲೆ ಕೈಮುಗಿದೆ || ೧೨

ತಾಯೆ,! ತಂದೆಯ ಸತಿಯೆ, ನಾಯಿ ಮಾಡುವ ಕೆಲಸ
ಮಾಯೆ ನಿನಗ್ಯಾಕ ನನಮ್ಯಾಲೆ | ಹಡದವ್ವ
ಹೇಯ ಇಲ್ಲೇನ ನಿನಗೇಟ || ೧೩

ಕಾಯಕಾಮನ ಗುಡಿಯೊ, ಹೇಯಮಾಡಲು ಬೇಡ
ತಾಯೆಂಬ ನುಡಿಯು ಬೇಡೆನಗೊ | ಕೊಮರಾಮ
ಬಾಯೆನಗ ಕಾಮ ಕೈಕೊಟ್ಟ || ೧೪

ಹೇಸಿ ಕೈಬಿಡ ತಾಯಿ, ಸೋಸಿ ನೋಡೀ ಮಾತ
ಮೂಸಿ ಹೊಲಸುಂಬು ಮನಸೇನ | ಕೊಮರಾಮ
ಹೇಸಿ ಕೈಕೊಸರಿ ಹೊರಹೋದ || ೧೫

ಅರಸ ಹೋದವ ಬರಲಿ, ಹರಲೀಯ ನಾ ಕೊಡುವೆ
ಅರಚಣಕ ರಾಮ ತಲೆಹೊಡಿಸಿ | ಹಾಕಿಸುವ
ಹರಕೆ ನಾ ಹೊತ್ತೆ ದೇವರಿಗೆ || ೧೬

ಕುಣಕಾಲಿ ರತ್ನಾಳಿ, ಕುಣಸಿಟ್ಟು ಮನಗ್ಯಾಳೊ
ಎಣಿಸುವರ್ಯಾರು ಹೆಣ್ಣೆದೆಯ | ಹೆಣ್ಮುಂದ
ಕುಣದಾಡಿ ಹೋದ ಮಾದೇವ || ೧೭

ತಣಿದು ಬ್ಯಾಟಿಯನಾಡಿ, ದಣಿದು ಕಂಪಿಲರಾಯ
ಮನೆಹೊಕ್ಕು ಕಂಡ ಗಜಬಿಜಿಯ | ರತ್ನಾಲಿ
ಕೆಣಕಿ ನುಡಿಸಿದರು ಸುಮ್ಮಿರಲು || ೧೮

ಮನದ ಮೋಹದ ಗಿಣಿಯೆ, ಗಣಿಸದಲೆ ಮಾತಾಡ
ಮನನೊಂದ ಕಾರಣವ ನನಗ್ಹೇಳ | ರತ್ನಾಲಿ
ಚಣದಾಗ ಹೊಡೆವೆ ಹಣಕರನ || ೧೯

ನಮಿಸಿದೆನು ಕೇಳದಲೆ, ಕೊಮರಾಮ ಕೈಹಿಡಿದ
ಧುಮಕೀಯ ಮಾಡಿ ಕಾಮಿಸಿದ | ರಕ್ಕಸನ
ಗಮನಿಸ್ದೆ ಕರೆಸಿ ತಲೆಹೊಡಿಸು || ೨೦

ಕಾದ ಕಂಪಿಲರಾಯ, ಭೇದವೇನರಿಯದಲೆ
ಛೇದಿಸಲು ಸಿರವ ಹೇಳಿಸಿದ | ಮಗರಾಮ
ಸಾದು ಶಿವನೆಂದು ತಲೆಗೊಟ್ಟ || ೨೧

ಹರಲೀಯ ರತ್ನಾಲಿ, ಹೊರಿಸಿ ಮಂಚಕ ಮಲಗಿ
ಹರಿಯಾಲಿ ಅತ್ತು ಬೋರಾಡಿ | ಕೂಗ್ಯಾಳೊ
ವರ ಮಂತ್ರಿ ಬೈಚು ತಿಳಿಹೇಳಿ || ೨೨

ಹರಲೀಯ ಕೊಡಲಾರೆ, ಕರನಾಟ ಕಂದಗ
ವರ ಬೊಲ್ಲ ತಂದ ಕೊಮರಾಗ | ರಣದಾಗ
ತುರುಕರ ಗೆದ್ದ ವೀರಗ || ೨೩
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...