ಒಂದೂರಿನಲ್ಲಿ ಇಬ್ಬರು ಅಣ್ಣತಮ್ಮಂದಿರಿದ್ದರು. ಅವರವರ ಹೆಂಡಿರು ಬಂದಿದ್ದರು. ಅಣ್ಣನಿಗೆ ಮಕ್ಕಳಾಗಿರಲಿಲ್ಲ. ತಮ್ಮನಿಗೆ ಸಾಕಷ್ಟು ಮಕ್ಕಳಾಗಿದ್ದರು. ನೆಗೆಣ್ಣಿಯರಲ್ಲಿ ಕೂಡಿನಡೆಯಲಿಲ್ಲವೆಂದು ಅವರಿಬ್ಬರೂ ಆಸ್ತಿಯನ್ನು ಹಂಚಿಕೊಂಡು ಬೇರೆಯಾದರು.
ದೇಶಕ್ಕೇ ಬರಗಾಲ ಬಂತು ಒಮ್ಮೆ. ಆವಾಗ ಜನರು ಹೊಟ್ಟೆಗಿಲ್ಲದೆ ಕುಸುಬೆಯನ್ನು ಸಹ ಕೊಂಡು ತಿಂದರು. ಒಂದುದಿನ ಬೆಳಗು ಮುಂಜಾನೆ ತಮ್ಮನು ಅಣ್ಣನ ಮನೆಗೆ ಬಂದು – “ಅಣ್ಣಾ, ಕೈಗಡವಾಗಿ ಒಂದು ಸೊಲಗಿ ಜೋಳಕೊಡು. ಕೊಟ್ಟರೆ ನಾನು ನಟ್ಟುಕಡಿಯಲು ಹೊಲಕ್ಕೆ ಹೋಗುವೆನು” ಎಂದನು.
ಅಣ್ಣನು ಸರಸರನೆ ಹೋದವನೇ ಗಾದಮೆತ್ತಿಗೆಯನ್ನು ತೆಗೆದು ಒಂದು ಸೊಲಗಿ ಜೋಳವನ್ನು ತೆಗೆದು ತಮ್ಮನ ಉಡಿಯಲ್ಲಿ ಬರುಕಿದನು. ತಮ್ಮನು ಆ ಜೋಳತಂದು ಹೆಂಡತಿಗೊಪ್ಪಿಸಿ ತಾನು ಹೊಲಕ್ಕೆ ಹೋದನು.
ತಮ್ಮನ ಹೆಂಡತಿ ನುಚ್ಚು ಕುದಿಸಬೇಕೆಂದು ಒಲೆಹೊತ್ತಿಸಿ, ನೀರು ಎಸರಿಟ್ಟು ಜೋಳ ತೆಗೆದುಕೊಂಡು ಬೀಸುಕಲ್ಲಿನ ಬಳಿಗೆ ಹೋದಳು, ಜೋಳ ಒಡೆಯಲಿಕ್ಕೆ.
ನೆರೆಯಲ್ಲಿಯೇ ಇದ್ದ ನೆಗೆಣ್ಣಿಯು ಬೆಂಕಿಗೆಂದು ಮೈದುನನ ಮನೆಗೆ ಹೋದಾಗ, ಮರದಲ್ಲಿದ್ದ ಜೋಳವನ್ನು ಗುರುತಿಸುತ್ತಾಳೆ. ಹೊಟ್ಟೆಕಿಚ್ಚು ಭುಗಿಲ್ಲೆಂದು ಉರಿದೇಳುತ್ತದೆ. ಒಲೆಯಮೇಲಿನ ಎಸರಿನಲ್ಲಿ ಹಿಡಿಗಲ್ಲು ಒಗೆದುಬಿಡದೆ, ಬೀಸಿದ ಹಿಟ್ಟಿನಲ್ಲಿ ಬೂದಿಮಣ್ಣು ಕಲೆಸುತ್ತಾಳೆ. ಅಷ್ಟು ಸಾಕಾಗದೆ ಮೊರದೊಳಗಿನ ಜೋಳವನ್ನು ತನ್ನುಡಿಯಲ್ಲಿ ಹಾಕಿಕೊಂಡು ಮನೆಗೆ ಹೋದಳು.
ತಮ್ಮನ ಹೆಂಡತಿಯು ತನ್ನ ಎಂಟುಜನ ಮಕ್ಕಳನ್ನು ಕರಕೊಂಡು ತವರು ಮನೆಗೆ ಹೋಗಿ ಅಣ್ಣನ ಕಾಣದಿರಲು ಅತ್ತಿಗೆಗೆ ಕೇಳುವಳು – “ಕೈಗಡವಾಗಿ ಒಂದು ಸೇರು ಜೋಳಕೊಡು”. ಅದಕ್ಕೆ ಅತ್ತಿಗೆ ಸ್ಪಷ್ಟವಾಗಿ ಹೇಳಿದ್ದೇನೆಂದರೆ – “ನಮ್ಮಲ್ಲಿ ಸೇರುಜೋಳವೂ ಇಲ್ಲ; ಹೇರುಜೋಳವೂ ಇಲ್ಲ.”
“ಹಾಗಾದರೆ ಈ ಎಲ್ಲ ಮಕ್ಕಳ ಕೈಯಲ್ಲಿ ತುತ್ತುರೊಟ್ಟಿಯನ್ನಾದರೂ ಕೊಡು” ಎಂದು ವಿನಯಿಸಿದಳು.
“ತುತ್ತುರೊಟ್ಟಿ ಕೇಳಲಿಕ್ಕೆ ಭಿಕ್ಷೆಗೆ ಬಂದಿರುವೆಯಾ?” ಎಂಬ ಉತ್ತರವನ್ನು ಪಡೆದು, ಅಷ್ಟೆಲ್ಲ ಮಕ್ಕಳನ್ನು ಕರೆದುಕೊಂಡು ಅಳುತ್ತ ಕರೆಯುತ್ತ ತನ್ನ ಮನೆಗೆ ಹೋದಳು.
ಅವರಲ್ಲಿದ್ದ ಬೆಲೆಯ ವಸ್ತುವೆಂದರೆ ಆಕೆಯ ಕೊರಳಲ್ಲಿದ್ದ ತಾಳಿ ಅಂದರೆ ಮಂಗಳ ಸೂತ್ರ ಅದನ್ನು ತೆಗೆದುಕೊಂಡು ತಮ್ಮನ ಹೆಂಡತಿ ಅಂಗಡಿಗೆ ಹೋದಳು. ಅಂಗಡಿಯವನಿಗೆ ಅದ್ನ ಅಕ್ಕಿಯನ್ನೂ ದುಡ್ಡಿನ ವಿಷವನ್ನೂ ಕೊಡಬೇಕೆಂದು ಕೇಳಿದಳು.
“ಅದ್ನ ಅಕ್ಕಿ ಯಾರಿಗೆ, ದುಡ್ಡಿನ ವಿಷ ಯಾತಕ್ಕೆ” ಎಂದು ಅಂಗಡಿಯವನು ಕೇಳಲು, “ಅದ್ನ ಅಕ್ಕಿ ಮಕ್ಕಳಿಗೆ, ದುಡ್ಡಿನ ವಿಷ ಹೆಗ್ಗಣಕೆ” ಎಂದು ಸುಳ್ಳು ಹೇಳಿದಳು.
ಅಂಗಡಿಯಿಂದ ಅಕ್ಕಿಯನ್ನು ತಂದು ಅದು ಕುದಿಯುತ್ತಿರುವಾಗಲೇ ಅದರಲ್ಲಿ ಆ ದುಡ್ಡಿನ ವಿಷವನ್ನು ಸುರಿದಳು. ಮರು ಕ್ಷಣದಲ್ಲಿಯೇ ಅನ್ನವು ಸಿದ್ಧವಾಯಿತು.
ಎಂಟುಜನ ಮಕ್ಕಳಲ್ಲಿ ನೀಲವ್ವ-ನಿಂಬೆವ್ವನಿಗಾಗಿ ಒಂದೆಡೆ, ಗಂಗವ್ವ-ಗೌರವ್ವನಿಗಾಗಿ ಒಂದೆಡೆ ಬಡಿಸಿದಳು. ಭೀಮಣ್ಣ-ಕಾಮಣ್ಣ ಇವರಿಗೊಂದು, ರಾಮಣ್ಣ-ಲಕ್ಷುಮಣ್ಣ ಇವರಿಗೊಂದು ಎಡೆ ಸಿದ್ಧವಾದವು. ಗಂಡಹೆಂಡಿರ ನಡುವೆ ಒಂದೆಡೆ ಬಡಿಸಲಾಯಿತು. ಎಲ್ಲರದೂ ಊಟವಾಯಿತು. ಇನ್ನು ಮಲಗಿಕೊಳ್ಳುವುದು.
ತನ್ನ ಬಲಕ್ಕೆ ನೀಲವ್ವ – ನಿಂಬೆವ್ವರನ್ನು, ಎಡಕ್ಕೆ ಗಂಗವ್ವ – ಗೌರವ್ವರನ್ನು ಮಲಗಿಸಿದಳು. ರಾಮಣ್ಣ – ಲಕ್ಷುಮಣ್ಣರನ್ನು ಗಂಡನ ಬಲಕ್ಕೆ, ಭೀಮಣ್ಣ – ಕಾಮಣ್ಣರನ್ನು ಗಂಡನ ಎಡಕ್ಕೆ ಮಲಗಿಸಿದಳು. ತಮಗಾಗಿ ನಟ್ಟುನಡುವೆ ಹಾಸಿದಳು.
ಮಲಗುವ ಮುಂಚೆ ತಲೆಬಾಗಿಲ ಬಳಿಗೆಹೋಗಿ ಮನದಲ್ಲಿ ಅಂದುಕೊಂಡಳು – “ಅಕ್ಕರೆಯ ಅಣ್ಣನು ಮಲ್ಲಾಡದೇಶಕ್ಕೆ ಹೋಗಿದ್ದಾನೆ. ದಿಕ್ಕುಗೇಡಿ ಈ ಬರ ನಮ್ಮ ಮಕ್ಕಳ ಸಲುವಾಗಿಯೇ ಬಂದಿತೆ ? ರಾಜ್ಯಕ್ಕೆ ಹೊರತಾದ ಈ ಬರ ನಮ್ಮ ರಾಯರ ಸಲುವಾಗಿಯೇ ಬಂದಿತೆ ?”
ಮಲ್ಲಾಡಕ್ಕೆ ಹೋದ ಅಣ್ಣನು ಮರಳಿ ಬಂದವನೇ ತಾಯಿಗೆ ಕೇಳುತ್ತಾನೆ-
“ಅವ್ವಾ, ತಂಗೆಮ್ಮನ ಸುದ್ದಿಯೇನು ?” ತಾಯಿ ಹೇಳುತ್ತಾಳೆ – “ಮೊನ್ನೆ ಬಂದಿದ್ದಳಪ್ಪ, ಸೇರು ಜೋಳ ಬೇಡಿದಳು.” “ಸೇರು ಜೋಳ ಬೇಡಿದರೆ ಹೇರುಜೋಳ ಕೊಡಬೇಕಾಗಿತ್ತು ತಂಗಿಗೆ. ಮಕ್ಕಳ ಗಿತ್ತಿ, ಬಡವಿ, ಕೊಡಲಿಲ್ಲವೇಕೆ ?” ಎಂದವನೇ ಎತ್ತಿನಮೇಲೆ ಹೇರುಜೋಳ ತೆಗೆದುಕೊಂಡು ತಂಗಿಯ ಊರಿಗೆ ಹೊರಟನು.
ಊರಮುಂದಿನ ಬಾವಿಗೆ ನೀರಿಗಾಗಿ ಬಂದ ಹೆಣ್ಣು ಮಕ್ಕಳನ್ನು ಕುರಿತು – ಅವ್ವಗಳಿರಾ, ನಮ್ಮ ತಂಗೆಮ್ಮ ಚೆನ್ನಾಗಿರುವಳೇ” ಎಂದು ಕೇಳಲು, “ಆಕೆಯ ಸುದ್ದಿ ಕೇಳಿಲ್ಲ. ಆಕೆಯಮನೆಗೂ ಹೋಗಿಲ್ಲಪ್ಪ” ಎಂಬ ಉತ್ತರ ಬಂದಿತು. ಎತ್ತು ಹೊಡಕೊಂಡು ನೇರವಾಗಿ ತಂಗಿಯಮನೆಗೆ ಹೋದನು.
ಇದೇನು ? ಹೊತ್ತು ಹೊರಟು ಇಷ್ಟು ಹೊತ್ತಾದರೂ ತಂಗಿಯ ಸುಳಿವೇ ತೋರಲಿಲ್ಲ. ಬೆಳಗಾಗಿ ಇಷ್ಟು ಹೊತ್ತಾದರೂ ಬೀಗನ ಸುಳಿವೇ ಕಾಣಲಿಲ್ಲ. ಬಿಸಿಲು ಬಿದ್ದು ಇಷ್ಟು ಹೊತ್ತಾದರೂ ಮಕ್ಕಳ ಉಲಿವೇ ಕಂಡುಬರಲಿಲ್ಲ. ಸಂಶಯವೇ ಬಂತು. ಮುಚ್ಚಿದ ಬಾಗಿಲು ತೆರೆದುನೋಡಿದರೆ ಹತ್ತುಹೆಣ ಮಲಗಿವೆ ಸಾಲಾಗಿ! ಅದನ್ನು ಕಂಡ ತಂಗೆಮ್ಮನ ಅಣ್ಣನು, ಹತ್ತರಕೂಡ ಹನ್ನೊಂದಾಗಲೆಂದು ಹೊಟ್ಟೆಯಲ್ಲಿ ಚೂರಿತಿವಿದುಕೊಂಡು ಸತ್ತುಬಿದ್ದನು.
ಮುಂದಿನ ಕೆಲಸ ಏನುಳಿಯಿತಿನ್ನು ? ಅಂತ್ಯವಿಧಿ ಒಂದೇ. ನೀಲವ್ವ – ನಿಂಬೆವ್ವರನ್ನು ನಿಂಬೆಯ ಬನದಲ್ಲಿ, ಗಂಗವ್ವ – ಗೌರವ್ವರನ್ನು ಬಾಳೆಯ ಬನದಲ್ಲಿ ಇಟ್ಟರು. ತೆಂಗಿನ ಬನದಲ್ಲಿ ರಾಮಲಕ್ಷ್ಮಣರನ್ನು, ಪೇರಲಬನದಲ್ಲಿ ಭೀಮ – ಕಾಮರನ್ನು ಇಟ್ಟರು. ಗಂಡಹೆಂಡಿರನ್ನು ಶಿವನ ಪಾದದಲ್ಲಿ ಹಾಗೂ ಅಕ್ಕರೆಯ ಅಣ್ಣನನ್ನು ತಂಗಿಯ ಪಾದದಲ್ಲಿ ಇಟ್ಟರು.
ಹೊಟ್ಟೆಗಿಲ್ಲವೆಂದು ವಿಷ ತಿಂದು ಸತ್ತರೂ ಹಿಂದಿನವರು ಅವರ ಹೆಣಗಳನ್ನೆಲ್ಲ ಒಂದೊಂದು ಬನದಲ್ಲಿ ಹುಗಿದು ತಣಿಸಿದರು. ಹೆಚ್ಚಿನ ಸಹಾನುಭೂತಿ ಏನು ಬೇಕು?
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು