Home / ಕವನ / ಕವಿತೆ / ಬುದ್ಧಮೂರ್‍ತಿಯ ಅಮೃತಸ್ಮಿತ

ಬುದ್ಧಮೂರ್‍ತಿಯ ಅಮೃತಸ್ಮಿತ

ಉದಯಾಸ್ತಗಳ ಜನ್ಮ ಮರಣ ಚಕ್ರದ ಬಾಧೆ
ಇದಕಿಲ್ಲ; ಕುಂದಮೀರಿದೆ; ಗ್ರಹಣ ಹತ್ತದಿದ-
ಕೆಂದಿಗೂ; ಬೇರೆ ಫಲದಾಸೆಯಿದನೊಣಗಿಸದು;
ಅಜ್ಞಾನ ಮುಗ್ಧ ಮಾಧುರ್‍ಯ ಮಧುವಲ್ಲ; ಹೊಸ
ಹರೆಯ ಹುಮ್ಮಸದ ಹುಸಿಬಿಸಿಲುಗುದುರೆಯ ಬಾಯ
ಬುರುಗು ಬೆಳಕಲ್ಲ; ಇದು ಹೊಳೆಯ ದಾಟಿದಮೇಲೆ
ಹೊರಳಿ ನೋಡದ ಮಿಂಡ ಪುಂಡ ಬಗೆಯಲ್ಲ; ಮರು-
ರುಳಿನಲಿ ಮಣ್ಣ ಮುದ್ದಿಡಲು ಬಹ ದಿಗ್ಭ್ರಾಂತ
ನಕ್ಷತ್ರಗಳ ಹುಚ್ಚು ಹೊಳಪಲ್ಲ; ಬುದ್ದಮೂ-
ರ್‍ತಿಯ ಅಮರಹಾಸ-ಶ್ರೀ ಬುದ್ಧದೇವನ ದುಃಖ
ಹಿಮಗಿರಿಯ ಶಿಖರದಲಿ ತಪಮಿದ್ದ ಶಾಂತಿ ತ-
ನ್ನಸಮ ಧ್ಯಾನದ ಗವಿಯ ಗಹನದಲಿ ಗುರುತಿಸಿದ
ಚೆನ್ನ ಕನಸಿನ ಬಿಂಬ. ಆನಂದ ಕಲ್ಪವೃಕ್ಷಕ್ಕೆ ಬಂ-
ದೊಂದೆ ಹೂ. ಮನೆಮನೆಯ ಪ್ರತಿ ಮನುಜ ಮನಮನದೆ
ಪೂಜಿಸುತ್ತಿಹುದಿದರ ಪೂಜ್ಯ ಪಾರ್ಥಿವ ಪ್ರತಿಮೆ-
ಮೇಗಿಲ್ಲದೀ ನಗೆಯ ಬಣ್ಣ ಮೀರಿದೆ ಮಹಿಮೆ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...