ಹುಡುಗನೊಬ್ಬನು ತನಗೊಂದು ಹೆಣ್ಣು ಗಟ್ಟಿಮಾಡಲು ತಂದೆಗೆ ಹೇಳಿದನು. ತಂದೆ ಹೆಣ್ಣು ನೋಡತೊಡಗಿದನು. ಹೆಣ್ಣಿನವರಿಗೆ ಅವನು ಹೇಳಿದ ಮಾತು ಒಂದೇ ಆಗಿತ್ತು. ತನ್ನ ಮಗನು ಹೆಂಡತಿಗೆ ಪಾಪಾಸಿನಿಂದ ಪಂಚವೀಸ ಏಟು ಹೊಡೆಯುವವನಿದ್ದಾನೆ. ಆ ಮಾತು ಕೇಳಿ ಯಾರೂ ಹೆಣ್ಣು ಕೊಡಲು ಒಪ್ಪಲಿಲ್ಲ. ಹಳ್ಳದಕೆರೆಯಾಯ್ತು, ಮತ್ತೊಂದು ಊರಾಯ್ತು ; ಮಗುದೊಂದು ಊರಾಯಿತು. ಮೂರು ಊರು ತಿರುವಿಹಾಕಿದರೂ ಹೆಣ್ಣು ಗಟ್ಟಿಯಾಗಲಿಲ್ಲ.
ಚಿನ್ನದ ಕೆರೆಗೆ ಹೋಗಿ ಕೇಳಿದರು. ಆ ಹುಡುಗೆ ಪಾಪಾಸಿನಿಂದ ಏಟು ತಿನ್ನಲು ಸಿದ್ಧಳಾದಳು. ಲಗ್ನ ಮಾಡಿದರು. ಮದುವೆಕಾಲಕ್ಕೆ ಬಾಸಿಂಗ ಕಟ್ಟಿಕೊಂಡು ನಿಂತಾಗಲೇ . “ಸೆರಗು ತೆಗೆ ನಾ ಹೊಡೀತಿನಿ” ಎಂದು ಮದುಮಗ ಗಡಿಬಿಡಿ ಮಾಡಹತ್ತಿದನು. ಹುಡುಗಿ ಬಹಳ ಚುರುಕು ಇದ್ದಳು. ಹೇಳಿದಳು . “ಇನ್ನೂ ನಾವು ಮದಿವೆ ಹಂದರದಲ್ಲಿದ್ದೇವೆ. ಈಗ ನಾವು ಶಿವಪಾರ್ವತಿ ಇದ್ದಂತೆ ಇದ್ದೇವೆ. ನಾಳೆ ಹೊಡೆಯುವಿರಂತೆ” ಎಂದು ಹೇಳಿದಳು.
ಮರುದಿನ ದೇವಕಾರ್ಯಕ್ಕೆ ಹೋಗುವುದಿದೆ. ಇಂದು ಹೊಡೆಯುವುದು ಬೇಡ ಎಂದಳು. ನಾಲ್ಕನೇ ದಿನವೂ ಹೇಳಿದಳು. ಅರಿಸಿನ ಮೈಯಲ್ಲಿದ್ದೇವೆ, ಏಟು ಕೊಡುವುದು ಬೇಡ. ಶೋಭಾನ ದಿನವೆಂದು ಐದನೆಯ ದಿನವೂ ದಾಟಿತು. ಮದುಮಗಳಿಗೆ ಉಡಿಯಕ್ಕಿ ಹೊಯ್ದರು. ಆಕೆಯನ್ನು ಗಂಡನ ಮನೆಗೆ ಕಳಿಸಿದರು.
ಗಂಡನ ಮನೆ ಮುಟ್ಟಿದ ಕೂಡಲೇ ಗಂಡಸು ಪಾಪಾಸು ತಕ್ಕೊಂಡು ಹೊಡೆಯಲು ಎದ್ದನು. ಆಗ ಹುಡುಗಿ ಕೇಳಿದಳು. “ಈ ಮದುವೆಯನ್ನು ನೀನು ಮಾಡಿದೆಯೋ. ನಿಮ್ಮಪ್ಪ ಮಾಡಿದನೋ?”
“ನಮ್ಮಪ್ಪ ಮಾಡಿದ್ದಾನೆ.”
“ಅಹುದೇ? ನಿನ್ನಿಂದ ನಾನು ಪೆಟ್ಟು ತಿನ್ನಲಾರೆ. ನೀನು ರೊಕ್ಕಗಳಿಸಿಕೊಂಡು ಬಾ. ಆವಾಗ ನಿನ್ನ ಕೈಯಿಂದ ತಪ್ಪದೆ ಏಟು ತಿನ್ನುತ್ತೇನೆ” ಎಂದು ಹೇಳಿದಳು.
ಅಪ್ಪನ ಕಡೆಯಿಂದ ನೂರು ರೂಪಾಯಿ ಇಸಗೊಂಡು ಮಗ ಹೊರಟನು. ಅಟ್ಟ ಅಟ್ಟ ಅರಣ್ಯದಲ್ಲಿ ಹೊರಟಾಗ ಹಾದಿಯಲ್ಲಿ ಒಂದು ಕಳ್ಳನ ಮನೆ ಹತ್ತಿತು. ಆ ಮನೆಯಲ್ಲಿ ಕಳ್ಳನ ತಾಯಿ ಮುದುಕಿ ಕಾವಲಿದ್ದಳು. ಆ ಮುದುಕಿಗೆ ಆತನು ರಾತ್ರಿಯ ಮಟ್ಟಿಗೆ ಇರಲು ಜಾಗಾ ಕೇಳಿದನು. ಆಕೆ ಸಮ್ಮತಿಸಲು ಊಟಮಾಡಿ
ಆತನು ಮಲಗಿಕೊಂಡನು.
ಆತನಿಗೆ ನಿದ್ದೆ ಹತ್ತಿದಾಗ ಮನೆಯ ಕಾವಲಿನ ಮುದುಕಿ ಒಂದು ಬಂಗಾರದ ಬಟ್ಟಲು ತಂದು ಅವನ ಅಂಗಿಯ ಕಿಸೆಯಲ್ಲಿ ಬಚ್ಚಿಟ್ಟಳು. ಮರುದಿನ ಮುಂಜಾನೆ – ಈತನು ಬಂಗಾರ ಬಟ್ಟಲು ತಗೊಂಡು ಹೊರಟಿದ್ದಾನೆ ಎಂದು ಮುದುಕಿ ಬೊಬ್ಬಿಟ್ಟಳು. ಸಾಕಷ್ಟು ಮಂದಿ ನೆರೆಯಿತು. ಆ ಹುಡುಗನು ಹೇಳಿದನು.
“ನಾನಂತೂ ಮುಂದಿನೂರಿಗೆ ಹೊರಟಿದ್ದೇನೆ. ಈ ಮನೆಯೊಳಗಿನದೇನೂ ತೆಗೆದುಕೊಂಡಿಲ್ಲ. ನಾನು ಏನನ್ನೂ ನೋಡಿಲ್ಲ.”
ಆದರೆ ಆತನ ಅಂಗಿಯ ಕಿಸೆಯಲ್ಲಿ ಬಟ್ಟಲು ಸಿಕ್ಕಿತು. `ನೀನಿಲ್ಲೀ ಕುಳಿತುಕೋ’ ಎನ್ನಲು, ಆತನು ನಿರಾಶನಾಗಿ ಕುಳಿತುಕೊಂಡನು. ಕಳ್ಳನ ಮನೆಯಲ್ಲೇ ಅವನಿಗೆ ಒಳಿತಾಗಿ ವ್ಯವಸ್ಥೆ ಮಾಡಿದರು.
ಆ ಸಮಾಚಾರವನ್ನು ಕೇಳಿ ಆತನ ಹೆಂಡತಿಯು ಗಂಡಸರ ವೇಷ ತೊಟ್ಟಳು. ಹೊತ್ತು ಮುಳುಗುವ ಸಮಯ ಆಗಿತ್ತು. ಅದೇ ವೇಷದಲ್ಲಿ ಕಳ್ಳನ ಮನೆಗೆ ಹೋದಳು. ಅಲ್ಲಿ ಗಂಡನು ಕುದುರೆಗೆ ನೀರು ಕುಡಿಸುತ್ತ ನಿಂತಿದ್ದನು. ಅಂದು ರಾತ್ರಿ ಅಲ್ಲೇ ಉಳಿದಳು.
ಮುದುಕಿ ಮತ್ತೆ ಬಂಗಾರದ ಬಟ್ಟಲು ತಂದು ಈಕೆಯ ಮಡಿಲಲ್ಲಿ ಇಟ್ಟಳು. ಈಕೆ ಡುಕ್ಕು ಹೊಡೆದು ಮಲಗಿದ್ದಳು. ಆ ಬಂಗಾರದ ಬಟ್ಟಲು ಒಯ್ದು, ತಿರುಗಿ ಮುದುಕಿಯ ಬುಟ್ಟಿಯಲ್ಲಿ ಒಯ್ದಿಟ್ಟಳು. ಬೆಳಗಾಯಿತು. ಮುದುಕಿ ಮತ್ತೆ ಬಂಗಾರದ ಬಟ್ಟಲು ಹೋಯ್ತು ಎಂದು ಕೂಗಾಡಿದಳು. ಜನ ಕೂಡಿತು. ವಸತಿ ಮಾಡಿದವನ ಅಂಗಿ ಚುಂಗುಗಳಲ್ಲಿ ಹುಡುಕಿದರು. ಎಲ್ಲಿಯೂ ಸಿಗಲಿಲ್ಲ ಬಂಗಾರದ ಬಟ್ಟಲು ಕೊನೆಯಲ್ಲಿ ಬುಟ್ಟಿಯಲ್ಲಿಯೇ ಸಿಕ್ಕಿತು.
“ಏ ಮುದುಕೀ, ನಿಮ್ಮ ಮನೆಯಲ್ಲೇ ಅದೆಯಲ್ಲ ಬಟ್ಟಲು” ಎಂದು ಜನರೆಲ್ಲ ಮುದುಕಿಗೆ ಛೀ ಥೂ ಅಂದರು. ಮುದುಕಿಗೆ ಹೊಡೆದು ಹೊರದೂಡಿಯೇ ಬಿಟ್ಟರು.
ಗಂಡಸು ವೇಷದಲ್ಲಿದ್ದ ಆ ಹೆಣ್ಣುಗಳು ಪೂರ್ತಿಯಾಗಿ ಮನೆಯನ್ನು ಗೆದ್ದು ಬಿಟ್ಟಳು. “ನನ್ನ ಕುದುರೆಗೆ ನೀರು ಕುಡಿಸಿಕೊಂಡು ಬಾ. ನಿನಗೊಂದು ರೂಪಾಯಿ ಕೊಡುತ್ತೇನೆ” ಎಂದು ಹೇಳಿದಳು. “ಕುದುರೆ ಒರೆಸಿದರೆ ಒಂದು ರೂಪಾಯಿ, ಹಾಸಿದರೆ ಒಂದು ರೂಪಾಯಿ, ತನ್ನ ಕೈ ಕಾಲು ಒತ್ತಿದರೆ ಒಂದು ರೂಪಾಯಿ, ಕುದುರೆಯ ಕಾಲಕಸವನ್ನು ಬಳದರೆ ಒಂದು ರೂಪಾಯಿ” ಎಂದು ಹೇಳಿ, ಗಂಡನ ಕೈಯಿಂದ ಕೆಲಸ ಮಾಡಿಸಿಕೊಂಡಳು. ಹೀಗೆ ಪ್ರತಿಯೊಂದು ಕೆಲಸಕ್ಕೆ ಒಂದೊಂದು ರೂಪಾಯಿ ಕೊಡುತ್ತ ಬಂದಳು.
ಎಂಟು ದಿನಗಳಲ್ಲಿ ಅವನು ನೂರು ರೂಪಾಯಿ ಗಳಿಸಿಬಿಟ್ಟನು.
ಎರಡು ಕುದುರೆಗಳ ಮೇಲೆ ಕಳ್ಳನ ಮನೆಯೊಳಗಿನ ಸಂಪತ್ತನ್ನೆಲ್ಲ ಹೇರಿಸಿ, ಹೆಣ್ಣುಮಗಳು ಮುಂದೆ ಮುಂದೆ ಹೋದಳು. ಗಂಡ ಮಾತ್ರ ಹಿಂದಿನಿಂದ ಹೋದನು.
ಹೆಂಡತಿ ಹೇಳಿದಂತೆ ಈಗ ನೂರು ರೂಪಾಯಿ ಗಳಿಸಿ ತಂದಿದ್ದಾನೆ. ಹೆಂಡತಿಗೆ ಪಾಪಾಸಿನಿಂದ ಹೊಡೆಯಲು ಮುಂದೆ ಬಂದಿದ್ದಾನೆ – “ನೂರಾರು ರೂಪಾಯಿ ತಂದಿರುವೆ. ಸೆರಗು ತೆಗೆ ಹೊಡೆಯುತ್ತೇನೆ” ಎಂದು ಒತ್ತಾಯ ಮಾಡಹತ್ತಿದನು.
“ಯಾವ ರೀತಿ ಗಳಿಸಿಕೊಂಡು ಬಂದಿರುವಿ ಮೊದಲು ಹೇಳು. ಆಮೇಲೆ ನಿನ್ನ ಕೈಯಿಂದ ಹೊಡಿಸಿಕೊಳ್ಳಲು ನಾನು ಸಿದ್ಧಳಾಗಿದ್ದೇನೆ” ಎಂದು ಹೆಂಡತಿ ನುಡಿದಳು.
ಗಂಡನು ನಿರುತ್ತರನಾಗಿ ನಿಂತನು.
“ನೀನು ಕುದುರೆ ಒರೆಸಿದಿ, ಒಂದು ರೂಪಾಯಿ ಗಳಿಸಿದಿ. ಅದರ ಲದ್ದಿ ತೆಗೆದಿ. ಯಾರದೋ ಕೈಕಾಲು ಒತ್ತಿದಿ. ಇಷ್ಟೆಲ್ಲ ಮಾಡಿ ನೂರು ರೂಪಾಯಿ ತಂದಿರುವಿ” ಎಂದು ಹೆಂಡತಿ ಹೇಳಿಕೊಟ್ಟಾಗ ಗಂಡನು ಗಾಬರಿಗೊಂಡು ಕುಳಿತನು. ಪಾಪಾಸಿನಿಂದ ಹೊಡೆಯುವ ಹವ್ಯಾಸವನ್ನು ಬಿಟ್ಟುಕೊಟ್ಟನು.
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು